
ಇತ್ತೀಚಿನ ದಿನಗಳಲ್ಲಿ ಕನ್ನಡಕ್ಕೆ ಡಬ್ ಆಗುವ ತೆಲುಗು ಹಾಡುಗಳನ್ನು ಕೇಳಿ ಹಲವರು ತಮಾಷೆ ಅಥವಾ ಗೇಲಿ ಮಾಡುವುದು ಕಂಡುಬರುತ್ತದೆ. ಆದರೆ ಇದರ ನಡುವೆಯೇ, ಕನ್ನಡ ಭಾಷೆಯ ಸೌಂದರ್ಯವನ್ನು ಮನಸಾರೆ ಕೊಂಡಾಡಿರುವ ತೆಲುಗು ಭಾಷಿಕರೊಬ್ಬರ ( (yes_pinky_just_venky ಖಾತೆಯ ಒಳಕೆದಾರ) ಮಾತುಗಳು ಇದೀಗ ಗಮನ ಸೆಳೆಯುತ್ತಿವೆ. ಎಂಟು ವರ್ಷಗಳ ಹಿಂದೆ ಕನ್ನಡದ ಒಂದೇ ಒಂದು ಪದವೂ ಗೊತ್ತಿಲ್ಲದೆ ಬೆಂಗಳೂರಿಗೆ ಬಂದಿದ್ದ ಅವರು, ಕೇವಲ ಒಂದು ಕನ್ನಡ ಹಾಡಿನ ಮೇಲಿನ ಪ್ರೀತಿಯಿಂದ ಇಡೀ ಭಾಷೆಯನ್ನೇ ನಿರರ್ಗಳವಾಗಿ ಕಲಿತಿರುವ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ತಮ್ಮ ಅನುಭವವನ್ನು ತೆರೆದಿಟ್ಟಿರುವ ಅವರು, ‘‘ಕನ್ನಡಕ್ಕೆ ಡಬ್ ಆದ ತೆಲುಗು ಹಾಡುಗಳನ್ನು ಕೇಳಿ ಕೇಳಿ ನೀವು ಗೇಲಿ ಮಾಡುತ್ತಿದ್ದೀರಿ. ಆದರೆ ಕನ್ನಡ ನಿಜಕ್ಕೂ ತುಂಬಾ ಸುಂದರವಾದ ಭಾಷೆ. ಸುಮಾರು ಎಂಟು ವರ್ಷಗಳ ಹಿಂದೆ ನಾನು ಬೆಂಗಳೂರಿಗೆ ಬಂದಾಗ ನನಗೆ ಕನ್ನಡದ ಬಗ್ಗೆ ಏನೇನೂ ತಿಳಿದಿರಲಿಲ್ಲ. ಆಗ ನನ್ನ ಜೀವನದಲ್ಲಿ ಮೊದಲ ಬಾರಿಗೆ ಸರ್ಕಾರಿ ಹಿ.ಪ್ರಾ. ಶಾಲೆ, ಕಾಸರಗೋಡು ಸಿನಿಮಾದ ಹಾಡೊಂದನ್ನು ಕೇಳಿದೆ’’ ಎಂದು ತಿಳಿಸಿದ್ದಾರೆ.
ಚಿತ್ರದ ಎರಡು ಹಾಡುಗಳ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿರುವ ಅವರು, ‘‘ಆ ಸಿನಿಮಾದಲ್ಲಿ ‘ಅರೆರೆ ಅವಳ ನಗುವ ನೋಡಿ ಮರೆತೆ ಜಗವ’ ಎಂಬ ಹಾಡಿದೆ. ಅದು ಎಷ್ಟು ಸುಂದರವಾಗಿದೆ ಎಂದರೆ, ಆ ಹಾಡಿನ ಅರ್ಥವನ್ನು ತಿಳಿದುಕೊಳ್ಳಲೇಬೇಕು ಎಂಬ ಆಸೆಯಿಂದಲೇ ನಾನು ಕನ್ನಡವನ್ನು ಕಲಿತೆ. ಭಾಷೆ ಕಲಿತು ಹಾಡಿನ ಪ್ರತಿಯೊಂದು ಸಾಲನ್ನೂ (ಲೈನ್ ಬೈ ಲೈನ್) ಅರ್ಥಮಾಡಿಕೊಂಡೆ’’ ಎಂದಿದ್ದಾರೆ. ಅಷ್ಟೇ ಅಲ್ಲದೆ, ಅದೇ ಸಿನಿಮಾದಲ್ಲಿರುವ ‘ಪ್ರವೀಣ ದಡ್ಡ ದಡ್ಡ’ ಎಂಬ ಮತ್ತೊಂದು ಹಾಡು ಕೂಡ ಭಾರಿ ಫನ್ನಿಯಾಗಿ, ಮನರಂಜನಾತ್ಮಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಶ್ಲಾಘಿಸಿರುವ ಅವರು, ‘‘ನನ್ನ ಮಾತನ್ನು ಕೇಳಿ, ಯೂಟ್ಯೂಬ್‌ಗೆ ಹೋಗಿ ಈ ಎರಡೂ ಹಾಡುಗಳನ್ನು ಸರ್ಚ್ ಮಾಡಿ ಕೇಳಿ ನೋಡಿ. ನೀವು ಖಂಡಿತವಾಗಿಯೂ ತುಂಬಾ ಎಂಜಾಯ್ ಮಾಡುತ್ತೀರಿ. ಕನ್ನಡ ಭಾಷೆಯಲ್ಲಿರುವ ನಿಜವಾದ ಸೌಂದರ್ಯ ನಿಮಗೆ ತಿಳಿಯಬೇಕಾದರೆ ಇಂತಹ ಹಾಡುಗಳನ್ನು ಕೇಳಬೇಕು. ಕನ್ನಡ ಎಂಬುದು ಅಷ್ಟಾಗಿ ಗುರುತಿಸಲ್ಪಡದ ಒಂದು ಅಮೂಲ್ಯ ರತ್ನ (ಅಂಡರ್-ರೇಟೆಡ್ ಜೆಮ್)’’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘‘ಅಂದು ಹಾಡಿನ ಅರ್ಥ ತಿಳಿಯಲು ಕನ್ನಡ ಕಲಿತ ನಾನು ಇಂದು ಬಹಳ ಸರಾಗವಾಗಿ ಕನ್ನಡ ಮಾತನಾಡುತ್ತಿದ್ದೇನೆ ಮತ್ತು ಈ ಭಾಷೆಯನ್ನು ತುಂಬಾ ಆನಂದಿಸಿದ್ದೇನೆ. ನನ್ನ ಮಾತು ಕೇಳಿ ಆ ಹಾಡುಗಳನ್ನು ಒಮ್ಮೆ ಕೇಳಿ’’ ಎಂದು ಅವರು ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ, ಸಿನಿಮಾ ಹಾಗೂ ಸಂಗೀತವು ಒಂದು ಭಾಷೆಯ ಮೇಲಿನ ಪ್ರೀತಿಯನ್ನು ಹೇಗೆ ಬೆಳೆಸಬಲ್ಲದು ಎಂಬುದಕ್ಕೆ ಇವರ ಈ ಅನುಭವ ಉತ್ತಮ ನಿದರ್ಶನವಾಗಿದೆ.
ಗಮನಾರ್ಹ ಸಂಗತಿಯೆಂದರೆ, ಇವರು ಉಲ್ಲೇಖಿಸಿರುವ ‘ಸರ್ಕಾರಿ ಹಿ.ಪ್ರಾ. ಶಾಲೆ, ಕಾಸರಗೋಡು’ ಚಿತ್ರವು 2018ರಲ್ಲಿ ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ತೆರೆಕಂಡು ಭರ್ಜರಿ ಯಶಸ್ಸು ಕಂಡಿದ್ದಲ್ಲದೆ, ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿತ್ತು. ವಾಸುಕಿ ವೈಭವ್ ಸಂಗೀತ ನೀಡಿದ್ದ ಈ ಚಿತ್ರದ ಹಾಡುಗಳು ಕನ್ನಡಿಗರನ್ನು ಮಾತ್ರವಲ್ಲದೆ ಪರಭಾಷಿಕರನ್ನೂ ಮೋಡಿ ಮಾಡಿರುವುದು ವಿಶೇಷ. ಡಬ್ಬಿಂಗ್ ಹಾಡುಗಳ ಸಾಹಿತ್ಯದ ಕಾರಣದಿಂದ ಕನ್ನಡ ಹಾಡುಗಳ ಬಗ್ಗೆ ತಪ್ಪು ಕಲ್ಪನೆ ಹೊಂದಿರುವವರಿಗೆ, ಮೂಲ ಕನ್ನಡ ಗೀತೆಗಳ ಸೊಗಡನ್ನು ಪರಿಚಯಿಸುವ ನಿಟ್ಟಿನಲ್ಲಿ ಇವರ ಮಾತುಗಳು ಗಮನ ಸೆಳೆದಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.