ಲಕ್ಷಣ ಧಾರಾವಾಹಿಯಲ್ಲಿ ಶ್ವೇತಾ ಬೀದಿಗೆ ಬಿದ್ದಿದ್ದಾಳೆ. ತನ್ನನ್ನು ಸಾಕಿ ಬೆಳೆಸಿದ ಸಾಕುತಂದೆಯನ್ನೇ ಆಸ್ತಿಗಾಗಿ ಕೊಲೆ ಮಾಡಿಸಲು ಹೊರಟ ಅವಳ ಬಣ್ಣ ಬಯಲಾಗಿದೆ. ಇದೀಗ ತನ್ನ ರಿಯಲ್ ಅಪ್ಪನ ಜೊತೆ ಸ್ವಂತಮನೆಗೆ ಹೊರಟಿರುವ ಶ್ವೇತಾ ಲೈಫ್ ಇನ್ಮೇಲೆ ಹೇಗೆ? ಸದ್ಯಕ್ಕಂತೂ ಅವಳದು ಮೈ ಪರಚಿಕೊಳ್ಳೋ ಸ್ಥಿತಿ.
ಯಾರು ಏನೇ ಸರ್ಕಸ್ ಮಾಡಿದರೂ ಕೊನೆಗೆ ಉಳಿಯೋದು ಒಳ್ಳೆತನವೇ ಅನ್ನೋ ಮೆಸೇಜ್ (Message)ಅನ್ನು ತನ್ನ ಸೀರಿಯಲ್ ನ ಮುಖ್ಯಪಾತ್ರಗಳ ಮೂಲಕ ಹೇಳೋಕೆ ಹೊರಟಿರೋದು 'ಲಕ್ಷಣ'(Lakshana) ಸೀರಿಯಲ್. ಇದರಲ್ಲೀಗ ನಮ್ಮ ಸರಿ ಸಂಪತ್ತು, ಐಶ್ವರ್ಯ ಎಲ್ಲ ಯಾವಾಗ ಬೇಕಿದ್ರೂ ಕೈತಪ್ಪಬಹುದು, ಎಂಥಾ ಸ್ಥಿತಿವಂತರಾದ್ರೂ ರಾತ್ರಿ ಕಳೆದು ಬೆಳಗಾಗೋದ್ರೊಳಗೆ ಬೀದಿಗೆ ಬೀಳಬಹುದು ಅನ್ನೋ ಸಂದೇಶ ನೀಡ್ತಿದ್ದಾರೆ. ಸದ್ಯಕ್ಕೀಗ ಹಾಗೆ ಬೀದಿಗೆ ಬಿದ್ದಿರೋಳು ಶ್ವೇತಾ(Shvetha). ಒಂದು ಕಾಲದಲ್ಲಿ ಕೋಟ್ಯಧಿಪತಿ ತಂದೆಯ ಏಕಮಾತ್ರ ಮಗಳಾಗಿ ಸಂಪತ್ತಿನ ಮದ ತಲೆಗೇರಿಸಿಕೊಂಡು ಮೆರೆಯುತ್ತಿದ್ದವಳು ಶ್ವೇತಾ. ಇದೀಗ ತನ್ನ ದುರಾಸೆಯಿಂದ ಮನೆಯಿಂದ ಆಚೆ ತಳ್ಳಿಸಿಕೊಂಡು ಬೀದಿಗೆ ಬಿದ್ದಿದ್ದಾಳೆ. ಅವಳನ್ನು ಹೆತ್ತತಂದೆ ತನ್ನ ಕೆಳ ಮಧ್ಯಮವರ್ಗದ ಮನೆಗೆ ಅವಳನ್ನು ಕರೆದುಕೊಂಡು ಹೊರಟಿದ್ದಾರೆ. ಅಲ್ಲಿ ಶ್ವೇತಾ ಲೈಫು(life) ಹೇಗಿರಬಹುದು, ಅಲ್ಲಾದರೂ ಅವಳ ಸೊಕ್ಕು ಇಳಿಯಬಹುದಾ? ಅನ್ನೋ ಪ್ರಶ್ನೆಯನ್ನು ಈ ಸೀರಿಯಲ್ ಸದ್ಯಕ್ಕೆ ಪ್ರೇಕ್ಷಕರ ಮುಂದಿಟ್ಟಿದೆ. ಸದ್ಯಕ್ಕಂತೂ ಶ್ವೇತಾ ತನ್ನೆಲ್ಲ ಬಂಡವಾಳ ಬಯಲಾಗಿದ್ದರೂ ಮತ್ತೆ ನಕ್ಷತ್ರಾಗೆ ಧಮಕಿ ಹಾಕ್ತಾಳೆ. ನೀನು ಮತ್ತೆ ಅನಾಥೆ ಆಗ್ತೀಯಾ, ನಾನು ನಿನ್ನ ಅಪ್ಪ ಅಮ್ಮಂಗೆ ಕೆಟ್ಟದ್ದು ಮಾಡ್ತೀನಿ ಅಂತೆಲ್ಲ ಬಡಬಡಿಸ್ತಾಳೆ. ನಕ್ಷತ್ರಾ ಇದಕ್ಕೆಲ್ಲ ಸೊಪ್ಪು ಹಾಕದಿದ್ರೂ ಶ್ವೇತಾಳ ಕ್ರಿಮಿನಲ್ ಮೈಂಡ್ ಏನಾದ್ರೂ ಕಿತಾಪತಿ ಮಾಡದೇ ಸುಮ್ಮನಿರಲ್ಲ ಅನ್ನೋದಂತೂ ಸತ್ಯ. ಮುಂದೇನಾಗುತ್ತೋ ಗೊತ್ತಿಲ್ಲ.
ಲಕ್ಷಣಾ ಸೀರಿಯಲ್‌ನ ನಾಯಕಿ ನಕ್ಷತ್ರಾ (Nakshatra). ಶ್ರೀಮಂತರ ಮಗಳಾಗಿ ಹುಟ್ಟಿದ್ರೂ ಕೆಳ ಮಧ್ಯಮ ವರ್ಗದ ಮನೆಯಲ್ಲಿ ಜೀವನ ಸಾಗಿಸಬೇಕಾಗಿರೋದು ಅವಳ ವಿಧಿಯಾಗಿತ್ತು. ನೀನು ನನ್ನ ಮಗಳೇ ಅಲ್ಲ, ನಿನ್ನ ಕಪ್ಪು ಮೈಬಣ್ಣ ನಮ್ಮ ಮನೆತನದಲ್ಲವೇ ಅಲ್ಲ ಎಂದು ಅಪ್ಪನಿಂದಲೇ ಹೀಗಳೆಸಿಕೊಳ್ಳುತ್ತಾ ಇದ್ದವಳು. ಹೊಟೇಲ್‌ನಲ್ಲಿ ಸಹಾಯಕಿಯಾಗಿ ಕೆಲಸ ಮಾಡ್ತಾ, ಹೊಟ್ಟೆಪಾಡಿಗೆ ಕೈಲಾದ ಕೆಲಸ ಮಾಡ್ಕೊಂಡಿದ್ದ ನಕ್ಷತ್ರಾ ಬೆಸ್ಟ್ ಫ್ರೆಂಡ್ ಭೂಪತಿ (Bhupathi). ಅವನನ್ನು ನಕ್ಷತ್ರಾ ಒಳಗಿನಿಂದಲೇ ಇಷ್ಟಪಟ್ಟರೂ ಎಲ್ಲೂ ಹೇಳಿಕೊಂಡವಳಲ್ಲ. ಶ್ವೇತಾ ಹುಟ್ಟಿದ್ದು ಕೆಳಮಧ್ಯಮ ವರ್ಗದಲ್ಲಾದರೂ ಅವಳು ಬೆಳೆದದ್ದಲ್ಲ ಶ್ರೀಮಂತೆಯಾಗಿ, ಶ್ರೀಮಂತ ದಂಪತಿ ಮಗಳಾಗಿ. ಶ್ರೀಮಂತಿಕೆಯ ಕೊಬ್ಬಿನಿಂದ ಬೀಗುತ್ತಿದ್ದ ಅವಳಿಗೆ ಒಂದು ಹಂತದಲ್ಲಿ ವಿಧಿಯೇ ಪಾಠ ಕಲಿಸಲು ನಿರ್ಧರಿಸಿತ್ತೋ ಏನೋ, ಒಂದು ಹಂತದಲ್ಲಿ ಈ ಇಬ್ಬರೂ ಮಕ್ಕಳೂ ಹುಟ್ಟಿದಾಗ ಡಾಕ್ಟರ್(Doctor) ಅಚಾತುರ್ಯದಿಂದ ಅದಲುಬದಲಾದ ವಿಷಯ ರಿವೀಲ್ ಆಗುತ್ತೆ. ಆ ಒಂದೇ ಕ್ಷಣದಲ್ಲಿ ನಕ್ಷತ್ರಾ ಶ್ರೀಮಂತೆಯಾಗಿ ಚಂದ್ರಶೇಖರ್(Chandrashekar) ಸಾಮ್ರಾಜ್ಯಕ್ಕೆ ಒಡತಿಯಾಗಿ ಬದಲಾಗ್ತಾಳೆ. ಶ್ವೇತಾ ಕೆಳಮಧ್ಯಮ ವರ್ಗದವಳಾಗಿ ಬಿಡ್ತಾಳೆ. ಶ್ವೇತಾ ಜೊತೆ ನಡೆಯಬೇಕಿದ್ದ ಮದುವೆ ಮಂಟಪದಲ್ಲೇ ಅದಲು ಬದಲಾಗುತ್ತೆ. ಶ್ರೀಮಂತ ಹುಡುಗ ಭೂಪತಿ ನಕ್ಷತ್ರಾ ಗಂಡನಾಗ್ತಾನೆ.
Jothe Jotheyali : ಅನು ಸಿರಿಮನೆಯೇ ಈಗ ರಾಜನಂದಿನಿ, ವಾವ್, ಎಂಥಾ ಆ್ಯಕ್ಟಿಂಗ್!
ಒಂದು ಕಡೆ ನಕ್ಷತ್ರಾ ಭೂಪತಿ ಸಂಬಂಧ ಹಾಳಾಗುವಂತೆ ಶ್ವೇತಾ ಮೇಲಿಂದ ಮೇಲೆ ಪ್ಲಾನ್ ಮಾಡ್ತಾಳೆ. ಆದರೆ ನಕ್ಷತ್ರಾ ಒಳ್ಳೆತನದಿಂದ ಅವೆಲ್ಲ ವರ್ಕೌಟ್(workout) ಆಗಲ್ಲ. ಇದೀಗ ಶ್ವೇತಾ ತನ್ನ ತಂದೆಯನ್ನೇ ಆಸ್ತಿಗಾಗಿ ಕೊಲೆ (Murder) ಮಾಡಲು ಸುಪಾರಿ ಕೊಟ್ಟಿದ್ದಳು. ಎರಡು ಸಲ ಚಂದ್ರಶೇಖರ್ ಕೊಲೆ ಮಾಡುವ ಪ್ಲಾನ್ ಫೇಲ್ ಆಗುತ್ತೆ. ನಕ್ಷತ್ರಾ ದೆಸೆಯಿಂದ ಸುಪಾರಿ ಹಂತಕನೂ ಬದಲಾಗ್ತಾನೆ. ಚಂದ್ರಶೇಖರ್‌ಗೆ ಸತ್ಯ ತಿಳಿಸ್ತಾನೆ. ಇದೀಗ ಈ ವಿಷಯ ತಿಳಿದ ಶ್ವೇತಾಳನ್ನು ಚಂದ್ರಶೇಖರ್ ಮನೆಯಿಂದ ಹೊರ ಹಾಕ್ತಿದ್ದಾರೆ. ಅವಳ ಸ್ವಂತ ತಂದೆ ಮಗಳನ್ನು ಮನೆಗೆ ಕರೆದುಕೊಂಡು ಹೊರಟಿದ್ದಾರೆ. ಒಂದು ಕಾಲದಲ್ಲಿ ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಿದ್ದ ಶ್ವೇತಾ ಇದೀಗ ಆಟೋ (Auto) ಹತ್ತೋ ಹಾಗಾಗಿದೆ. ಹತ್ತಿಪ್ಪತ್ತು ರುಪಾಯಿಗೂ ಆಟೋದವರ ಜೊತೆಗೆ ಅವಳ ತಂದೆ ಚೌಕಾಸಿ ಮಾಡೋದನ್ನು ಅಸಹಾಯಕವಾಗಿ ನೋಡುತ್ತಾ ನಿಲ್ಲಬೇಕಾಗಿದೆ.
Colors Kannadaದಲ್ಲಿ ಹೊಸ ಸೀರಿಯಲ್ ಒಲವಿನ ನಿಲ್ದಾಣ, ಕನ್ನಡತಿ ಮುಗಿಯುತ್ತಾ?
ಮುಂದೆ ಮಧ್ಯಮ ವರ್ಗದ ಬದುಕಿನ ಮೂಲಕ ಶ್ವೇತಾ ಜೀವನ ಪಾಠ ಕಲೀತಾಳಾ, ತನ್ನ ಕೆಟ್ಟತನಗಳಿಂದಲೇ ಕುಸಿಯುತ್ತಾ ಹೋದ ಅವಳು ಒಳ್ಳೆಯವಳಾಗಿ ಬದಲಾಗ್ತಾಳಾ ಅನ್ನೋ ಕುತೂಹಲ ಒಂದು ಕಡೆಯಾದರೆ ನಕ್ಷತ್ರಾ ಭೂಪತಿ ಸಂಬಂಧ ರೊಮ್ಯಾಂಟಿಕ್ ಆಗ್ತಾ ಹೋಗುತ್ತಾ, ಶಕುಂತಳಾ ದೇವಿಯ ವಿಶ್ವಾಸಕ್ಕೆ ನಕ್ಷತ್ರಾ ಪಾತ್ರ ಆಗ್ತಾಳಾ ಅನ್ನೋ ಕುತೂಹಲ ಇನ್ನೊಂದು ಕಡೆ.
ಈ ಸೀರಿಯಲ್ ನಲ್ಲಿ ನಕ್ಷತ್ರಾ ಪಾತ್ರದಲ್ಲಿ ವಿಜಯಲಕ್ಷ್ಮೀ(Vijayalakshmi), ಶ್ವೇತಾ ಪಾತ್ರದಲ್ಲಿ ಸುಕೃತಾ ನಾಗ್ (Sukrutha Nag), ಭೂಪತಿಯಾಗಿ ಜಗನ್ನಾಥ್ ಚಂದ್ರಶೇಖರ್(Jagannath Chandrashekar) ನಟಿಸುತ್ತಿದ್ದಾರೆ. ಕಲರ್ಸ್ ಕನ್ನಡದಲ್ಲಿ ಈ ಸೀರಿಯಲ್ ಪ್ರಸಾರವಾಗುತ್ತಿದೆ.