
ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವ ನಟ ಕಮಲ್ ಹಾಸನ್ (Kamal Haasan) ಅವರಿಗೆ ಕನ್ನಡ ಪುಸ್ತಕ ನೀಡಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದ ಕನ್ನಡತಿ ರಂಜನಿ ರಾಘವನ್ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದ ಫೋಟೋ ಬಗ್ಗೆ ಕ್ಲಾರಿಟಿ ನೀಡಿದ್ದಾರೆ. ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ಕನ್ನಡಿಗರ ವಿರೋಧ ಕಟ್ಟಿಕೊಂಡಿರುವ ಕಮಲ್ ಹಾಸನ್ ಗೆ ಪುಸ್ತಕ ನೀಡಿದ್ದು ಏಕೆ, ಅದ್ರ ಹಿಂದಿನ ಉದ್ದೇಶವೇನು ಎಂಬುದನ್ನು ಸ್ಪಷ್ಟಪಡಿಸುವ ಪ್ರಯತ್ನವನ್ನು ರಂಜನಿ ರಾಘವನ್ (Ranjani Raghavan )ಮಾಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಂಡ ರಂಜನಿ, ಟ್ರೋಲರ್ ಬಾಯಿ ಮುಚ್ಚಿಸುವ ಪ್ರಯತ್ನ ನಡೆಸಿದ್ದಾರೆ.
ಎರಡು ದಿನಗಳ ಹಿಂದೆ ರಂಜನಿ ರಾಘವನ್ ತಮ್ಮ ಇನ್ಸ್ಟಾ ಖಾತೆಯಲ್ಲಿ, ಕಮಲ್ ಹಾಸನ್ ಜೊತೆಗಿರುವ ಫೋಟೋ ಹಂಚಿಕೊಂಡಿದ್ದರು. ಕಮಲ್ ಹಾಸನ್ ಗೆ ಕನ್ನಡ ಪುಸ್ತಕ ಅಂತ ಶೀರ್ಷಿಕೆ ಕೂಡ ಹಾಕಿದ್ದರು. ಅನೇಕರು ರಂಜನಿ ಕೆಲ್ಸವನ್ನು ಮೆಚ್ಚಿಕೊಂಡಿದ್ರೂ ಮತ್ತೆ ಕೆಲವರು ಇದು ಪ್ರಚಾರಕ್ಕಾಗಿ ಅಂತ ವಾದ ಮಂಡಿಸಿದ್ದರು. ಈಗ ಮತ್ತೊಂದು ವಿಡಿಯೋ ಹಂಚಿಕೊಂಡಿರುವ ರಂಜನಿ ರಾಘವನ್, ಎಲ್ಲದಕ್ಕೂ ಉತ್ತರ ನೀಡಿದ್ದಾರೆ.
ರಂಜನಿ ರಾಘವನ್ ಪುಸ್ತಕ ನೀಡಿದ್ದು ಏಕೆ? : ರಂಜನಿ ರಾಘವನ್ ಸದ್ಯ ಸಿನಿಮಾ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ. ಡಿ ಡಿ ಢಿಕ್ಕಿ ಸಿನಿಮಾಕ್ಕೆ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾ ಪ್ರಮೋಷನ್ ಹಿನ್ನಲೆಯಲ್ಲಿ ರಂಜನಿ ರಾಘವನ್, ಕಮಲ್ ಹಾಸನ್ ಅವರನ್ನು ಭೇಟಿಯಾಗಿದ್ರು. ಆ ಸಂದರ್ಭದಲ್ಲಿ ತೆಗೆದ ಫೋಟೋ ಇದು ಎಂಬುದನ್ನು ರಂಜನಿ ಹೇಳಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಕನ್ನಡಿಗರೊಬ್ಬರು ಕಮಲ್ ಹಾಸನ್ ಭೇಟಿ ಮಾಡೋದು ಕಷ್ಟದ ಕೆಲಸ. ಕನ್ನಡಿಗರನ್ನು ಭೇಟಿಯಾಗಿ ಕನ್ನಡ ಪುಸ್ತಕ ಪಡೆಯುವ ಸ್ಥಿತಿಯಲ್ಲಿ ಸದ್ಯ ಕಮಲ್ ಹಾಸನ್ ಇದ್ದಂತೆ ಕಾಣ್ತಿಲ್ಲ. ನಾನು ಕಮಲ್ ಹಾಸನ್ ಅವರ ಕನ್ನಡದ ವಿವಾದ ಆದ್ಮೇಲೆ ಅವರನ್ನು ಭೇಟಿಯಾಗಿಲ್ಲ. ನಾಲ್ಕು ತಿಂಗಳ ಹಿಂದೆಯೇ ಅವರನ್ನು ಭೇಟಿಯಾಗಿದ್ದೆ ಎಂದು ರಂಜನಿ ಸ್ಪಷ್ಟನೆ ನೀಡಿದ್ದಾರೆ. ಡಿ ಡಿ ಢಿಕ್ಕಿ ಪ್ರಮೋಷನ್ ನಡೆಸುವ ಪ್ಲಾನ್ ನಲ್ಲಿ ಕಮಲ್ ಹಾಸನ್ ಭೇಟಿಯಾಗಿದ್ವಿ. ಸಿನಿಮಾ ಪೋಸ್ಟರ್ ಹಿಡಿದು ಫೋಟೋ ನೀಡಿದ್ರು. ಅದನ್ನು ಬಳಸಿಕೊಂಡು ಟೀಸರ್ ಬಿಡುಗಡೆ ಮಾಡ್ಬೇಕು ಅನ್ನೋದು ನಮ್ಮ ಪ್ಲಾನ್ ಆಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಇದು ಸಾಧ್ಯವಿಲ್ಲ. ಕನ್ನಡ ವಿರೋಧಿ ಸ್ಟೇಟ್ ಮೆಂಟ್ ಕೊಟ್ಟು, ಕ್ಷಮೆ ಕೇಳಲ್ಲ ಎನ್ನುವ ಧೋರಣೆಯನ್ನು ನಾವು ಬೆಂಬಲಿಸೋದಿಲ್ಲ. ಹಾಗಾಗಿ ಸಿನಿಮಾ ಪ್ರಮೋಷನ್ ರದ್ದು ಮಾಡ್ತಿದ್ದೇವೆ ಎಂದ ರಂಜನಿ, ಆ ಭೇಟಿಯಲ್ಲೇ ಕೊನೆಯಲ್ಲಿ ತೆಗೆದ ಫೋಟೋ ಇದು ಎಂದಿದ್ದಾರೆ.
ನಾನು ಬರೆದ ಪುಸ್ತಕ ಎನ್ನುವ ಹೆಮ್ಮೆಯಲ್ಲಿ ಅವರಿಗೆ ಪುಸ್ತಕ ನೀಡಿದ್ದೆ. ಆಗ ಒಂದು ಫೋಟೋ ಕ್ಲಿಕ್ಕಿಸಿದ್ವಿ. ಅದನ್ನೇ ನಾನು ಈಗ ಹಾಕಿದ್ದೇನೆ. ಈ ಫೋಟೋ ಮೂಲಕ ಅವರ ಹೇಳಿಕೆಯನ್ನು ವಿರೋಧಿಸ್ತೇನೆ ಎನ್ನುವುದು ನನ್ನ ಉದ್ದೇಶವಾಗಿತ್ತು. ಆದ್ರೆ ಅನೇಕರು ಇದ್ರ ಬಗ್ಗೆ ತಪ್ಪು ತಿಳಿದಿದ್ದರು ಎಂದು ರಂಜನಿ ಹೇಳಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ ರಂಜನಿ, ಮಾತನಾಡುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದ್ರೆ ತಮಿಳಿನಿಂದ ಕನ್ನಡ ಹುಟ್ಟಿಕೊಂಡಿದ್ದು ಎಂಬುದನ್ನು ನಂಬಲು ಸಾಧ್ಯವಿಲ್ಲ ಎಂದು ರಂಜನಿ ರಾಘವನ್ ಹೇಳಿದ್ದಾರೆ. ಕನ್ನಡತಿ ಸೀರಿಯಲ್ ನಂತ್ರ ರಂಜನಿ ರಾಘವನ್ ಕೆಲ ಸಿನಿಮಾ ನಟಿಸಿದ್ದರು. ಈಗ ಅವರೇ ನಿರ್ದೇಶನಕ್ಕೆ ಇಳಿದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.