ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಎಂಟ್ರಿ ಕೊಟ್ಟಿರೋ ಹೊಸ ಸ್ನೇಹಾ, ಕಂಠಿಗೆ ಜೋಡಿಯಾಗ್ತಾಳಾ? ಈ ಬಗ್ಗೆ ಸ್ನೇಹಾ ಪಾತ್ರಧಾರಿ ಅಪೂರ್ವ ನಾಗರಾಜ್ ಹೇಳಿದ್ದೇನು?
ಪುಟ್ಟಕ್ಕನ ಮಕ್ಕಳು ಹಳೆಯ ಸ್ನೇಹಾ ಸತ್ತಿದ್ದಾಳೆ. ಹೊಸ ಸ್ನೇಹಳ ಎಂಟ್ರಿ ಆಗಿ ಕೆಲವು ದಿನಗಳು ಆಗಿವೆ. ಆದರೆ ಹಳೆದ ಸ್ನೇಹಾ ಸತ್ತಿದ್ದನ್ನು ಸ್ವೀಕರಿಸದ ವೀಕ್ಷಕರು, ಯಾವುದೇ ಕಾರಣಕ್ಕೂ ಈ ಹೊಸ ಸ್ನೇಹಾ ಕಂಠಿಗೆ ಜೋಡಿಯಾಗಬಾರದು ಎನ್ನುತ್ತಿದ್ದಾರೆ. ಮತ್ತೆಕೆಲವರು ಆ ಸ್ನೇಹಾಳ ಹೃದಯ ಈ ಸ್ನೇಹಾಳಲ್ಲಿ ಇದೆ. ಈ ಸ್ನೇಹಾನೂ ತುಂಬಾ ಒಳ್ಳೆಯವಳು. ಇವಳು ಕಂಠಿಗೆ ಜೋಡಿಯಾಗಿ ಬರಲಿ ಎಂದು ಹಾರೈಸುತ್ತಿದ್ದಾರೆ. ಸದ್ಯ ಸೀರಿಯಲ್‌ನಲ್ಲಿ ಈ ಸ್ನೇಹಾಳನ್ನು ಕಂಡರೆ ಕಂಠಿ ಉರ ಉರ ಎನ್ನುತ್ತಿದ್ದಾನೆ. ಆದರೆ ಕಂಠಿ ಸಾಹೇಬ್ರೇ ಎನ್ನುತ್ತಲೇ ಸ್ನೇಹಾ ಅವನ ಆರೈಕೆ ಮಾಡುತ್ತಿದ್ದಾಳೆ. ಅವಳ ಮನಸ್ಸಿನಲ್ಲಿ ಇದುವರೆಗೂ ಕಂಠಿಯ ಬಗ್ಗೆ ಪ್ರೇಮದ ಭಾವನೆ ಇಲ್ಲ. ಆದರೆ ಅಕ್ಕ ಎಂದೇ ಅಂದುಕೊಂಡಿದ್ದ ಸ್ನೇಹಾಳ ಗಂಡನ ಈ ಸ್ಥಿತಿಯನ್ನು ಅವಳಿಗೆ ನೋಡಲು ಆಗುತ್ತಿಲ್ಲ ಅಷ್ಟೇ. ಆದರೆ ಹೃದಯ ಯಾವಾಗ ಅಲ್ಲಿಂದ ಇಲ್ಲಿ ಶಿಫ್ಟ್ ಆಯಿತೋ, ಜೊತೆಗೆ ಹೆಸರು ಕೂಡ ಒಂದೇ ಇದ್ಯೋ ಅದೇ ಕಾರಣಕ್ಕೆ ಕಂಠಿ ಮತ್ತು ಸ್ನೇಹಾ ಲವ್‌ಸ್ಟೋರಿ ಪಕ್ಕಾ ಎನ್ನುವುದೇ ಹೆಚ್ಚಿನ ವೀಕ್ಷಕರ ಮಾತು.
ಹಾಗಿದ್ರೆ ಈ ಹೊಸ ಸ್ನೇಹಾ ಮತ್ತು ಕಂಠಿಗೆ ಲವ್ ಆಗತ್ತಾ? ಇಬ್ಬರ ಮದ್ವೆಯಾಗುತ್ತಾ? ಕಂಠಿಗೆ ಈ ಸ್ನೇಹಾಳ ಮೇಲೆ ಪ್ರೀತಿ ಹುಟ್ಟತ್ತಾ? ಎನ್ನುವ ಪ್ರಶ್ನೆಗಳಿಗೆ ಉತ್ತರ ಸೀರಿಯಲ್ ನೋಡಿಯೇ ತಿಳಿಯಬೇಕು. ಅದಕ್ಕೂ ಮೊದಲು ಸ್ನೇಹಾ ಪಾತ್ರಧಾರಿ ಅಪೂರ್ವ ನಾಗರಾಜ್ ಅವರು 'ಪಂಚಮಿ ಟಾಕ್ಸ್' ಯುಟ್ಯೂಬ್ ಚಾನೆಲ್ ಜೊತೆ ಮಾತನಾಡಿದ್ದು, ಕೆಲವೊಂದು ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅವರು ಹೇಳಿದ್ದು ಏನೆಂದರೆ, ಹಲವು ವೀಕ್ಷಕರು ಈ ಹೊಸ ಸ್ನೇಹಾ, ಹಳೆಯ ಸ್ನೇಹಾಳಿಗೆ ರೀಪ್ಲೇಸ್‌ಮೆಂಟ್ ಎಂದು ಅಂದುಕೊಂಡಿದ್ದಾರೆ. ಅದು ಖಂಡಿತಾ ಅಲ್ಲ. ಸತ್ತೋಗಿರುವ ಸ್ನೇಹಾ ಧೈರ್ಯವಂತೆ, ನನ್ನ ಪಾತ್ರ ತುಂಬಾ ಭಯ, ಸಂಕೋಚದ್ದು. ಈ ಸ್ನೇಹಾಳಿಗೆ ಅಪ್ಪ ಬಿಟ್ಟರೆ ಬೇರೆ ಜಗತ್ತು ಗೊತ್ತಿಲ್ಲ. ಎರಡೂ ಸ್ನೇಹಾ ಕ್ಯಾರೆಕ್ಟರ್‍ಗೆ ತುಂಬಾ ವ್ಯತ್ಯಾಸ ಇದೆ. ಈ ಹೊಸ ಸ್ನೇಹಾಳಿಗೆ ಯಾರ ಬಳಿಯೂ ಮಾತನಾಡಲು ಭಯ. ಯಾರು ಏನು ಮಾಡಿಬಿಡ್ತಾರೋ ಎನ್ನುವ ಹೆದರಿಕೆಯಲ್ಲಿಯೇ ಅವಳು ಇರುವಂಥ ಕ್ಯಾರೆಕ್ಟರ್ ಎಂದಿದ್ದಾರೆ.
ಸಂಜನಾ ಇದ್ದೋಳು ಸ್ನೇಹಾ ಆಗಿ ಬದಲಾಗಿದ್ದು ಹೇಗೆ? ವಿಡಿಯೋ ಶೇರ್ ಮಾಡಿ ಮಾಹಿತಿ ನೀಡಿದ ನಟಿ...
ಹಾಗಿದ್ರೆ ಕಂಠಿಯ ಬಾಳಲ್ಲಿ ಈ ಸ್ನೇಹಾ ಬರ್ತಾಳಾ ಎನ್ನುವ ಪ್ರಶ್ನೆಗೆ ಸಹಜವಾಗಿಯೇ ನಟಿ ಏನೂ ಉತ್ತರ ಕೊಟ್ಟಿಲ್ಲ. ಅದು ನನಗೇ ಗೊತ್ತಿಲ್ಲ ಎಂದು ನುಣುಚಿಕೊಂಡರು. ಇದೇ ಸೀರಿಯಲ್ ಗುಟ್ಟಾಗಿರುವ ಕಾರಣ, ಅದನ್ನು ನಟರು ಹೇಳುವುದೂ ಇಲ್ಲ. ಆದ್ದರಿಂದ ಇದುವರೆಗೆ, ಕಂಠಿ ಮತ್ತು ಸ್ನೇಹಾಳ ನಡುವೆ ಪ್ರೀತಿಯ turn ತೆಗೆದುಕೊಳ್ಳಲಿಲ್ಲ. ಮುಂದೇನಾಗುತ್ತೋ ನನಗೇ ಗೊತ್ತಿಲ್ಲ, ನಾನು ಹೇಗೆ ಹೇಳಲಿ ಎನ್ನುವ ಮೂಲಕ ಜಾಣ ಉತ್ತರ ಕೊಟ್ಟಿದ್ದಾರೆ.
ಇನ್ನು ನಟಿಯ ಕುರಿತು ಹೇಳುವುದಾದರೆ, ಅಪೂರ್ವ ನಾಗರಾಜ್ ಅವರು ಭರತನಾಟ್ಯ ಕಲಾವಿದೆ. ರಂಗಭೂಮಿ ಕಲಾವಿದೆಯಾಗಿಯೂ ಆರು ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ. ಸಾಕಷ್ಟು ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ಕ್ಲೌನ್ಸ್ ರೆವರಿ ಎಂಬ ತಮ್ಮದೇ ಸ್ವಂತ ಥಿಯೇಟರ್ ಕಂಪೆನಿಯನ್ನೂ ಹೊಂದಿದ್ದಾರೆ. ಆದರೆ ಇಂಥ ಸೀರಿಯಲ್‌ನಲ್ಲಿ ನಟನೆ ಮಾಡುತ್ತಿರುವುದು ಇದೇ ಮೊದಲು, ಕ್ಯಾಮೆರಾ ಫೇಸ್ ಮಾಡಿರುವುದು ಇದೇ ಮೊದಲು ಎಂದು ನಟಿ ಈಗ ಹೇಳಿದ್ದಾರೆ. ಅದರಲ್ಲಿಯೂ ಉಮಾಶ್ರೀ ಅವರಂಥ ನಟಿಯ ಎದುರು ಪಾತ್ರ ಮಾಡುವುದು ಎಂದರೆ ಸುಲಭದ ಮಾತಲ್ಲ. ಈ ಪಾತ್ರಕ್ಕೆ ಆಡಿಷನ್ ಬಂದಾಗ ತುಂಬಾ ಜನ ಬಂದಿದ್ರು. ನನಗೆ ಈ ಪಾತ್ರ ಸಿಗುತ್ತದೆ ಎಂಬ ವಿಶ್ವಾಸವೂ ಇರಲಿಲ್ಲ. ಸೆಲೆಕ್ಟ್ ಆದ ಮೇಲೆ ತುಂಬಾ ಹಿಂಜರಿಕೆನೇ ಇತ್ತು ಎಂದು ನಟಿ ಹೇಳಿದ್ದಾರೆ. ಈ ಸೀರಿಯಲ್ ಟಾಪ್ ಒನ್‌ನಲ್ಲಿ ಇರುವ ಕಾರಣ, ನನ್ನ ಎಂಟ್ರಿ ಆದ ಮೇಲೂ ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ತಮ್ಮ ಮೇಲೆ ಇದೆ ಎಂದಿದ್ದಾರೆ ಸ್ನೇಹಾ ಅರ್ಥಾತ್ ಅಪೂರ್ವ ನಾಗರಾಜ್.
ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಕಂಠಿ ಫೈಟಿಂಗ್ ಶೂಟಿಂಗ್ ವೇಳೆ ಆಗಿದ್ದೇನು? ತೆರೆಮರೆ ಹಿಂದಿನ ಕಥೆಯಿದು...