ಖ್ಯಾತ ನಿರೂಪಕಿ ಅಪರ್ಣಾ ನಿಧನ ಬರಸಿಡಿಲಿನಂತೆ ಎರಗಿದೆ. ಅಪರ್ಣಾ ಸಾವಿಗೂ ಮುನ್ನ ಪತಿ ಬರೆದ ನೋವಿನ ಕವನ ಇದೀಗ ಕಣ್ಣಂಚು ತೇವಗೊಳಿಸುತ್ತಿದೆ.
ಬೆಂಗಳೂರು(ಜು.11) ಸ್ಪಷ್ಟ ಕನ್ನಡದ ಮೂಲಕ ನಿರೂಪಣೆ ಮೂಲಕ ಎಲ್ಲರ ಮನಗೆದ್ದ ಅಪರ್ಣಾ ನಿಧನ ಕನ್ನಡಿಗರಿಗೆ ತೀವ್ರ ನೋವು ತರಿಸಿದೆ. ಆದರೆ ಮೂರು ದಿನಗಳ ಹಿಂದೆ ಆಸ್ಪತ್ರೆ ದಾಖಲಾಗಿದ್ದ ಪತ್ನಿ ಅಪರ್ಣಾರನ್ನು ಆರೈಕೆ ಮಾಡಿದ್ದ ಪತಿ ಹಾಗೂ ಸಾಹಿತಿ ನಾಗರಾಜ್ ರಾಮಸ್ವಾಮಿ ವತ್ಸರೆ ಇಂದು ತಮ್ಮ ನೋವನ್ನು ಕವನದ ಮೂಲಕ ವ್ಯಕ್ತಪಡಿಸಿದ್ದರು. ಅಪರ್ಣಾ ಕ್ಷೀಣಿಸುತ್ತಿರುವ ಆರೋಗ್ಯ, ಮರಳಿ ಬಂದು ಕೈಹಿಡಿಯುತ್ತಾಳೆ ಅನ್ನೋ ಭರವಸೆಯೊಂದಿಗೆ ಬರೆದ ಕವನ ಇದೀಗ ಕನ್ನಡಿಗರ ಕಣ್ಣಂಚು ತೇವಗೊಳಿಸುತ್ತಿದೆ. ಭಾವನೆ, ದುಃಖ ಉಮ್ಮಳಿಸಿ ಬರುವಂತೆ ಮಾಡುತ್ತಿದೆ.
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪರ್ಣಾ ಆರೋಗ್ಯ ಕಳೆದೊಂದು ವಾರದಿಂದ ಬಿಗಡಾಯಿಸಿತ್ತು. ಮೂರು ದಿನಗಳ ಹಿಂದೆ ತೀವ್ರ ಆಸ್ವಸ್ಥರಾಗಿದ್ದ ಅಪರ್ಣರನ್ನು ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಪರ್ಣಾ ಆರೋಗ್ಯ ಚೇತರಿಕೆ ಕಾಣಲಿಲ್ಲ. ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಪತ್ನಿ ಆರೈಕೆಯಲ್ಲಿದ್ದ ನಾಗರಾಜ್ ಇಂದು ಅರ್ಥಗರ್ಭಿತ ಕವನದ ಮೂಲಕ ನೋವು ತೋಡಿಕೊಂಡಿದ್ದರು.
undefined
ಕನ್ನಡಿಗರಿಗೆ ಮತ್ತೊಂದು ಆಘಾತ, ಅಚ್ಚ ಕನ್ನಡದ ಖ್ಯಾತ ನಿರೂಪಕಿ ಅಪರ್ಣ ಇನ್ನಿಲ್ಲ!
ಅಪರ್ಣ ಸಾವಿಗೂ ಮುನ್ನ ನಾಗರಾಜ್ ರಾಮಸ್ವಾಮಿ ವತ್ಸರೆ ಬರೆದ ಕವನ ಇಲ್ಲಿದೆ.
ಬೆಳಗಿಕೊಂಡಿರೆಂದು
ಕಿಡಿ ತಾಕಿಸಿ ಹೊರಟಿತು
ಹೆಣ್ಣು
ಚಿತ್ತು ತೆಗೆದು
ಬತ್ತಿಯ ನೆತ್ತಿ ಚೆನ್ನಾಗಿಸಿ
ತಿರುಪಿ ತಿದ್ದಿ
ಇರು
ತುಸುವಿರೆಂದು ಕರೆದರೂ
ನಿಲ್ಲದೆಯೇ
ಬೇರಾವುದೋ ಕರೆಗೆ
ತಣ್ಣಗೆ ಓಗೊಟ್ಟ ಮೇರೆ
ಯಲ್ಲಿ
ಒಂದೇ ಒಂದು
ನಿಮಿಷ
ಬಂದೇನೆಂದು ಕಡೆಗಳಿಗೆ
ಯ ಸೆರಗಿನ ಬೆನ್ನಿನಲ್ಲಿ
ಅಂದು.
ಕಾದಿದ್ದೇನೆ
ಈಗ ಬಂದಾಳೆಂದು
ಆಗ ಬಂದಾಳೆಂದು
ಮರಳಿ
ಜೀವ ತಂದಾಳೆಂದು
ಇದು
ಮೂರನೇ ದಿವಸ
ಇಷ್ಟಾಗಿ
ಬೆಳಗಲಿಟ್ಟ ಕಿರಿಸೊಡರ
ಬೆಳಕು ನಾನು
ಉರಿವುದಷ್ಟೇ ಕೆಲಸ
ಇರುವ ತನಕ.
ಆಸ್ಪತ್ರೆ ದಾಖಲಾದ ಮೂರನೇ ದಿನ ಪತ್ನಿ ಅಪರ್ಣಾ ಕುರಿತು ಬರೆದ ಕವನವಿದು. ಪ್ರತಿ ಅಕ್ಷರದಲ್ಲೂ ತಮ್ಮ ನೋವು ತೋಡಿಕೊಂಡಿದ್ದಾರೆ. ಜೊತೆಗೆ ಅಪರ್ಣಾ ಮತ್ತೆ ಚೈತನ್ಯದ ನಗು ತುಂಬಿ ಜೀವನಕ್ಕೆ ಮರಳುತ್ತಾಳೆ ಅನ್ನೋ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಆದರೆ ಅಪರ್ಣಾ ಇಹಲೋಕ ತ್ಯಜಿಸಿದ್ದಾರೆ. ಇದೀಗ ಈ ಕವನದ ಒಂದೊಂದು ಸಾಲುಗಳು ಎದೆಗೆ ನಾಟುತ್ತಿದೆ. ಮನಸ್ಸು ಭಾರವಾಗುತ್ತಿದೆ.
ಹತ್ತುವಾಗ ಇಳಿಯುವಾಗ ಗಮನವಿರಲಿ, ಮೆಟ್ರೋ ಪ್ರಯಾಣಿಕರ ಕಾಳಜಿ ವಹಿಸಿದ್ದ ಅಪರ್ಣ ನೆನಪು ಮಾತ್ರ!