ಕನ್ನಡದ ಖ್ಯಾತ ನಿರೂಪಕಿ, ನಮ್ಮ ಮೆಟ್ರೋಗೆ ಧ್ವನಿ ಆಗಿದ್ದ ಅಪರ್ಣಾ ನಿಧನ: ಗಣ್ಯರಿಂದ ಸಂತಾಪ

By Govindaraj S  |  First Published Jul 11, 2024, 11:27 PM IST

ಕನ್ನಡದ ಖ್ಯಾತ ನಿರೂಪಕಿ, ನಟಿ ಅಪರ್ಣಾ ನಿಧನದ ಸುದ್ದಿ ಆಘಾತ ತಂದಿದೆ. ಬನಶಂಕರಿ 2ನೇ ಹಂತದ ದೇವಗಿರಿ ದೇವಸ್ಥಾನದ ಸಮೀಪದಲ್ಲಿರುವ ನಿವಾಸದಲ್ಲಿ ಅಪರ್ಣಾ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಇವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
 


ಕನ್ನಡದ ಖ್ಯಾತ ನಿರೂಪಕಿ, ನಟಿ ಅಪರ್ಣಾ ನಿಧನದ ಸುದ್ದಿ ಆಘಾತ ತಂದಿದೆ. ಅಪರ್ಣಾ ಅವರು ಕಳೆದ ಹಲವು ತಿಂಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಅಪರ್ಣಾ ಅವರಿಗೆ ಚಿಕಿತ್ಸೆ ಫಲಿಸದೇ ಇಹಲೋಕ ತ್ಯಜಿಸಿದ್ದಾರೆ. ಬನಶಂಕರಿ 2ನೇ ಹಂತದ ದೇವಗಿರಿ ದೇವಸ್ಥಾನದ ಸಮೀಪದಲ್ಲಿರುವ ನಿವಾಸದಲ್ಲಿ ಅಪರ್ಣಾ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಇವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ನಟಿ, ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು. ಸರ್ಕಾರಿ ಸಮಾರಂಭಗಳು ಸೇರಿದಂತೆ ಕನ್ನಡದ ಪ್ರಮುಖ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯಲ್ಲಿ ಅತ್ಯಂತ ಸೊಗಸಾಗಿ ನಿರೂಪಣೆ ಮಾಡುತ್ತಾ ನಾಡಿನ ಮನೆಮಾತಾಗಿದ್ದ ಬಹುಮುಖ ಪ್ರತಿಭೆಯೊಂದು ಬಹುಬೇಗ ನಮ್ಮನ್ನು ಅಗಲಿರುವುದು ದುಃಖದ ಸಂಗತಿ. ಮೃತ ಅಪರ್ಣಾಳ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ. 
-ಸಿಎಂ ಸಿದ್ದರಾಮಯ್ಯ

Latest Videos

undefined

ಸ್ಪಷ್ಟ ಕನ್ನಡದ ಮೂಲಕ ನಿರೂಪಣೆ ಮಾಡಿ ಕನ್ನಡಿಗರ ಮನ ಗೆದ್ದ, ಖ್ಯಾತ ನಿರೂಪಕಿ, ನಟಿ ಶ್ರೀಮತಿ ಅಪರ್ಣ ಅವರ ಸಾವಿನಿಂದ ಮನಸ್ಸಿಗೆ ಅಪಾರ ನೋವುಂಟಾಗಿದೆ. ಅವರ ನಿಧನವು ಕಲಾ ಲೋಕಕ್ಕೆ ತುಂಬಲಾರದ ನಷ್ಟ. ನಿರೂಪಕಿಯಾಗಿ, ನಟಿಯಾಗಿ ದಶಕಗಳಿಂದ ದುಡಿದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬ ಹಾಗೂ ಸ್ನೇಹಿತರಿಗೆ ನನ್ನ ಸಾಂತ್ವನಗಳು.
-ಡಿ.ಕೆ.ಶಿವಕುಮಾರ್, ಡಿಸಿಎಂ

ಕನ್ನಡದ ಖ್ಯಾತ‌ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ಕೇಳಿ ಮನಸಿಗೆ ಅತ್ಯಂತ ನೋವಾಯಿತು. ಸರಳ ಕನ್ನಡದಲ್ಲಿ ಸುಂದರವಾಗಿ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುವ ಮೂಲಕ ಎಲ್ಲರ ಮನೆ ಮಾತಾಗಿದ್ದರು.‌ ಅವರ ಅಗಲಿಕೆಯಿಂದ ಕನ್ನಡ ನಾಡು ಒಬ್ಬ ಸಜ್ಜನಿಕೆಯ ನಿರೂಪಕಿಯನ್ನು ಕಳೆದುಕೊಂಡಂತಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಅವರ ಅಭಿಮಾನಿಗಳು ಹಾಗೂ ಕುಟುಂಬ ವರ್ಗಕ್ಕೆ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ
-ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ, ಸಂಸದ

ಕನ್ನಡದ ಕಂಚಿನ ದನಿಯೊಂದು ನಿರಂತರ ಮೌನಕ್ಕೆ ಜಾರಿತು.... ಅಪರ್ಣ ಇನ್ನಿಲ್ಲ
-ಟಿ ಎನ್ ಸೀತಾರಾಮ್

ಸ್ವಚ್ಛ ಕನ್ನಡದ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ಧಿ ಕೇಳಿ ದಿಗ್ಭ್ರಮೆಯಾಗಿದೆ. ಕನ್ನಡದ‌ ಬೆಳ್ಳಿತೆರೆ, ಕಿರುತೆರೆಯಲ್ಲಿ ನಟಿಸಿದ್ದ ಅಪರ್ಣಾರವರು, ಲಕ್ಷಾಂತರ ಕಾರ್ಯಕ್ರಮಗಳನ್ನು ನಿರೂಪಿಸಿದ್ದರು‌. ನಾನು ಸಚಿವೆಯಾದ ಬಳಿಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಲವು ಕಾರ್ಯಕ್ರಮಗಳಿಗೆ ನಿರೂಪಣೆ ಮಾಡಿದ್ದರು. ಆತ್ಮೀಯ ಗೆಳತಿ ಅಪರ್ಣಾ ಅವರ ಅಗಲಿಕೆ ಮನಸ್ಸಿಗೆ ತೀವ್ರ ನೋವನ್ನುಂಟು ಮಾಡಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬಸ್ಥರಿಗೆ ನೋವು ಸಹಿಸುವ ಶಕ್ತಿ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂಶಾಂತಿ | ಸದ್ಗತಿ
-ಲಕ್ಷ್ಮೀ ಹೆಬ್ಬಾಳ್ಕರ್‌, ಸಚಿವೆ

ಅಪರ್ಣಾ ಅವರ ಆತ್ಮಕ್ಕೆ ಭಾವಪೂರ್ಣ ಶ್ರದ್ಧಾಂಜಲಿ
ಅಚ್ಚಗನ್ನಡವನ್ನು ಸ್ವಚ್ಛವಾಗಿ ಆಡುವಾಕೆಯೆಂದೇ ಹೆಸರು ಮಾಡಿರುವ ಅಪರ್ಣಾ ಆಕಾಶವಾಣಿ ಮತ್ತು ಕಿರುತೆರೆಯ ಕಲಾವಿದೆ. ಇವರ ಪೂರ್ತಿ ಹೆಸರು ಅಪರ್ಣಾ ವಸ್ತಾರೆ. ಕಣಗಾಲ್ ಪುಟ್ಟಣ್ಣನವರ ‘ಮಸಣದ ಹೂವು’ ಚಿತ್ರದಿಂದ ಬೆಳಕಿಗೆ ಬಂದವರು. ಕನ್ನಡ ದೂರದರ್ಶನದ ಎಳವೆಯ ದಿವಸಗಳಿಂದ ಈ ತನಕವೂ ಕಾರ್ಯಕ್ರಮಗಳನ್ನು ನಿರೂಪಿಸುತ್ತ ಬೆಳೆದವರು, ಕಿರುತೆರೆಯನ್ನು ಬೆಳೆಸಿದವರು. ಈವರೆಗೆ ಒಂದೂವರೆ ಸಾವಿರಕ್ಕೂ ಹೆಚ್ಚು ‘ಟೀವಿ' (ಷೋ)ಗಳನ್ನು ನಿರ್ವಹಿಸಿರುವವರು.2004ರಿಂದ ಮತ್ತೆ ಅಭಿನಯದತ್ತ ಗಮನ ಹರಿಸಿ, ಜನಪ್ರಿಯ ಧಾರಾವಾಹಿ ‘ಮುಕ್ತ’ದ ಮುಖೇನ ಶೀಲಾ ಪ್ರಸಾದ್ ಪಾತ್ರವಾಗಿ ಮನೆ ಮಾತಾದವರು. ‘ಪ್ರೀತಿಯಿಲ್ಲದ ಮೇಲೆ’ ಧಾರಾವಾಹಿಯಲ್ಲಿ ಪಲ್ಲವಿಯಾಗಿ ಗುರುತಿಸಿಕೊಂಡವರು. ಝೀ-ವಾಹಿನಿಯ ‘ಜೋಗುಳ’ ಸರಣಿಯಲ್ಲಿ ಪ್ರಧಾನಭೂಮಿಕೆಯಲ್ಲಿ ಅಭಿನಯಿಸಿದ್ದರು. ಕನ್ನಡಪ್ರಭ ಸಾಪ್ತಾಹಿಕದ ‘ಸಖೀಗೀತ’ದ ಅಂಕಣಕಾರ್ತಿ. ‘ಪ್ರೀತಿಯಿಲ್ಲದ ಮೇಲೆ’ಯ ಪಲ್ಲವಿಯ ಪಾತ್ರಕ್ಕೆ ಶ್ರೇಷ್ಠನಟಿ ಪ್ರಶಸ್ತಿ, ನಿರೂಪಣೆಗಾಗಿ ಝೀ-ವಾಹಿನಿಯಿಂದ ಅತ್ಯುತ್ತಮ ಪ್ರಶಸ್ತಿ, ಕಿರುತೆರೆಯ ಮಾಧ್ಯಮದ ‘ಈವರೆಗಿನ’ ಕೆಲಸಕ್ಕೆ ಸರ್ವೋಚ್ಛ ಪ್ರಶಸ್ತಿಯನ್ನು ಪಡೆದಿದ್ದಾರೆ. 2005ರಲ್ಲಿ ಇವರು ಯುವ ವಾಸ್ತುಶಿಲ್ಪಿ ಹಾಗೂ ಕವಿ ನಾಗರಾಜ ವಸ್ತಾರೆ ಅವರನ್ನು ತಮ್ಮ ಬಾಳ ಸಂಗಾತಿಯಾದರು.ಅಪರ್ಣ ಅವರ ತಂದೆ ಕೆ.ಎಸ್‌.ನಾರಾಯಣಸ್ವಾಮಿ ಕನ್ನಡ ಪ್ರಭ ಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿದ್ದರು. ಮಜಾ ಟಾಕೀಸ್ ಸರಣಿಯಲ್ಲಿ ಒನ್ & ಒನ್ಲಿ ವರಲಕ್ಷ್ಮಿ ಪಾತ್ರದಲ್ಲಿ ಬಹಳ ಜನಪ್ರಿಯತೆ ಗಳಿಸಿದ್ದರು.
-ಪರಮ್ ಗುಬ್ಬಿ

ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿ ಹಾಗೂ ಕಲಾವಿದೆ ಅಪರ್ಣಾ ಅವರು ನಿಧನರಾದ ಸುದ್ದಿ ತಿಳಿದು ದುಃಖವಾಯಿತು. ನಿರೂಪಕಿಯಾಗಿ ಮಾತ್ರವಲ್ಲದೇ ನಟಿಯಾಗಿ ಕೂಡ ಗುರುತಿಸಿಕೊಂಡು, ಕಿರುತೆರೆಯಲ್ಲಿ ಮೂಡಿಬಂದ ‘ಮೂಡಲಮನೆ’, ‘ಮುಕ್ತ’ ಮುಂತಾದ ಧಾರಾವಾಹಿಗಳಲ್ಲಿ ನಟಿಸಿ ಮನೆಮಾತಾಗಿದ್ದ ಕಲಾವಿದೆ ಅಪರ್ಣಾ ಅವರು ಬಹುಬೇಗ ಇಹಲೋಕ ತ್ಯಜಿಸಿರುವುದು ನೋವಿನ ಸಂಗತಿ. ಮೃತ ಅರ್ಪಣಾ ಅವರ ಕುಟುಂಬ ವರ್ಗದವರಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿ ದೊರೆಯಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ.
-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

click me!