ಗ್ರಾಮಾಯಣ ರಿಲೀಸ್‌, ಸಂಭ್ರಮಿಸೋಕೆ ಅವಳಿಲ್ಲವಲ್ಲಾ ಅಂತಾ ಅಪರ್ಣಾ ಅವರ ಕೊನೇ ದಿನಗಳ ಕರುಳು ಹಿಂಡುವ ಪೋಸ್ಟ್ ಹಾಕಿದ ಪತಿ!

Published : Jul 01, 2026, 10:38 PM IST
aparna vastarey in gramayana

ಸಾರಾಂಶ

ವಿನಯ್ ರಾಜ್‌ಕುಮಾರ್ ನಟನೆಯ 'ಗ್ರಾಮಾಯಣ' ಚಿತ್ರವು ದಿವಂಗತ ನಟಿ ಅಪರ್ಣಾ ವಸ್ತಾರೆ ಅಭಿನಯದ ಕೊನೆಯ ಸಿನಿಮಾವಾಗಿದೆ. ಅನಾರೋಗ್ಯದ ನಡುವೆಯೂ ಅಪರ್ಣಾ ಈ ಚಿತ್ರಕ್ಕಾಗಿ ಶ್ರಮಿಸಿದ್ದರು ಎಂದು ಅವರ ಪತಿ ನಾಗರಾಜ್ ವಸ್ತಾರೆ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಬೆಂಗಳೂರು (ಜು.1): ಹಳ್ಳಿ ಸೊಗಡಿನ ಕಥೆ ಎನ್ನುವ ಕಾರಣಕ್ಕಾಗಿ ಟ್ರೇಲರ್‌ ರಿಲೀಸ್‌ ಆದ ದಿನದಿಂದ ಭಾರೀ ಭರವಸೆ ಮೂಡಿಸಿರುವ ಸಿನಿಮಾ ಗ್ರಾಮಾಯಣ. ದೇವನೂರು ಚಂದ್ರ ನಿರ್ದೇಶನದ ಈ ಸಿನಿಮಾ ಜುಲೈ 3ಕ್ಕೆ ತೆರೆಎ ಬರಲಿದೆ. ಈ ಸಿನಿಮಾದಲ್ಲಿ ವಿನಯ್‌ ರಾಜ್‌ಕುಮಾರ್‌ ಹಾಗೂ ಕಿರುತೆರೆ ನಟಿ ಮೇಘಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಖ್ಯಾತ ನಿರೂಪರಿ ಹಾಗೂ ನಟಿ ದಿವಂಗತ ಅಪರ್ಣಾ ವಸ್ತಾರೆ ಅವರು ನಟಿಸಿದ್ದಾರೆ. ಅಪರ್ಣಾ ಅವರು ನಟಿಸಿರುವ ಕೊನೆಯ ಸಿನಿಮಾ. 2024ರ ಜುಲೈ 11 ರಂದು ಅಪರ್ಣಾ ಅನಾರೋಗ್ಯದಿಂದ ಸಾವು ಕಂಡಿದ್ದರು. ಅವರು ನಿಧನದ ಅಂದಾಜು 2 ವರ್ಷಗಳ ಬಳಿಕ ಈ ಸಿನಿಮಾ ತೆರೆ ಕಾಣುತ್ತಿದೆ.

ಇತ್ತೀಚೆಗೆ ಸಿನಿಮಾದ ಟ್ರೇಲರ್‌ ರಿಲೀಸ್‌ನಲ್ಲಿ ಅಪರ್ಣಾ ಅವರ ಪತಿ ನಾಗರಾಜ್‌ ವಸ್ತಾರೆ ಭಾವುಕವಾಗಿ ಮಾತನಾಡಿ ಕಣ್ಣೀರಿಟ್ಟಿದ್ದರು. ಈಗ ಪತ್ನಿ ಕೊನೆಯ ಸಿನಿಮಾದಲ್ಲಿ ಆಕೆಯ ಪಾತ್ರವನ್ನು ನೋಡಿ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಸಿನಿಮಾಕ್ಕೆ ಒಳ್ಳೆಯದಾಗಲಿ ಎಂದು ಹರಸಿದ್ದಾರೆ. ಈ ಚಿತ್ರಕ್ಕಾಗಿಯೇ ಅಪರ್ಣಾ ಬದುಕಿದ್ದಳೇನೋ ಅಂತಾ ಅನಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಇನ್ಸ್‌ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ನಾಗರಾಜ್‌ ವಸ್ತಾರೆ, 'ಅಸ್ವಾಸ್ಥ್ಯವೆಂಬುದು ಇನ್ನು ಸರಿಹೋಗದೆನ್ನುವ ಸ್ಥಿತಿಯಲ್ಲಿದ್ದಾಗ ಅಪರ್ಣೆ ಇಂಥದೊಂದು ಸಾಹಸಕ್ಕೆ ತನ್ನನ್ನು ತಾನು ಒಡ್ಡಿಕೊಂಡಳು. ಕೋವಿಡ್ ದಿವಸಗಳಿಗೆ ಮುನ್ನವೊಮ್ಮೆ ಚಿತ್ರೀಕರಣಗೊಂಡು ನಿಂತುಹೋಗಿದ್ದ ಸಿನೆಮಾವಿದು. ಇಪ್ಪತ್ತಮೂರನೇ ಇಸವಿಯಲ್ಲಿ, ನಿರ್ದೇಶಕ ದೇವನೂರು ಚಂದ್ರು ಪಟಕತೆಯನ್ನು ಮತ್ತೊಮ್ಮೆ ಮತ್ತು ಹೊಸತಾಗಿ ಸೆಟ್ಟೇರಿಸಲಿಕ್ಕೆಂದು ಸಂಪರ್ಕಿಸುವಾಗ ನಮ್ಮ ಪರಿಸ್ಥಿತಿ ಕರಾಳವಾಗಿತ್ತು. ಇಷ್ಟಿದ್ದೂ, ಅಪರ್ಣೆಗೆ ಈ ಸಿನೆಮಾದಲ್ಲಿ ಮಾಡಲೇಬೇಕೆನ್ನುವ ಹುಚ್ಚು ಹುಚ್ಚಾದ ಉಮೇದಿತ್ತು. ಚಂದ್ರು ಅವರದೂ ಅದೇ ಪಟ್ಟು. ಈ ಪಾತ್ರವನ್ನು ಇವಳನ್ನು ಮನಸಿನಲ್ಲಿಟ್ಟುಕೊಂಡೇ ಬರೆದಿದ್ದೆನ್ನುವ ಅಷ್ಟೇ ಹುಚ್ಚೇ ಹುಚ್ಚಿನ ಒತ್ತಾಯ. ಹದಿನೈದು ದಿವಸ ಕಡೂರಿನ ಆಸುಪಾಸಿನಲ್ಲಿ ಶೂಟಿಂಗು. ಅಂತೂ ಇಂತೂ ಮುಗಿಸಿ ಸಕ್ಷೇಮವಾಗಿ ವಾಪಸಾದಳು. ಚಿತ್ರದ ಕ್ಲೈಮಾಕ್ಸಿನಲ್ಲಿ ಇನ್ನೊಂದು ಸೀನ್ ಬಾಕಿಯಿತ್ತೆಂದು ಹೇಳುತ್ತಿದ್ದಳು. ಕಡೆಕಡೆಯಲ್ಲಿ, ‘ಮುಗಿಸುತೀನೋ ಇಲ್ಲವೋ, ವಸ್ತಾರೆ... ನನ್ನಿಂದ ಇನ್ನೊಬ್ಬರಿಗೆ ತೊಂದರೆ ಆಗಬಾರದು’ ಅನ್ನುತ್ತಿದ್ದಳು. ಈವಾಗ ಯೋಚಿಸಿದರೆ, ಈ ಸಿನೆಮಾದ ಸಲುವಾಗಿಯೇ ಹೆಣ್ಣಿನ ಮೈಪರಿಸ್ಥಿತಿಯು ಸುಧಾರಿಸಿತ್ತೇನೋ ಅನಿಸುತ್ತದೆ' ಎಂದು ಹೇಳಿದ್ದಾರೆ.

ಸಂಭ್ರಮಿಸೋಕೆ ಅವಳಿಲ್ಲ ಎಂದ ನಾಗರಾಜ್‌ ವಸ್ತಾರೆ

ನಾಳೆಯಲ್ಲ, ನಾಳಿದ್ದು ‘ಗ್ರಾಮಾಯಣ’ ಬಿಡುಗಡೆಯಾಗುತ್ತಿದೆ. ಯಾಕೋ ಏನೋ, ಇದನ್ನು ಬಲುವಾಗಿ ಹಚ್ಚಿಕೊಂಡಿದ್ದಳು. ನೆಚ್ಚಿಕೊಂಡಿದ್ದಳು. ಮೊನ್ನೆ ಭಾನುವಾರ, ಈ ಸಿನೆಮಾದ ಟ್ರೇಲರ್ ಬಿಡುಗಡೆಗೆ ಹೋಗಿ ಬಂದಮೇಲೆ ಮನಸ್ಸು ಮತ್ತೆ ತಳಮಳಿಸಿದೆ. ಇಂಥದೊಂದನ್ನು ಸಂಭ್ರಮಿಸಲಿಕ್ಕೆ ನಾನಲ್ಲದೆ ಇನ್ನಾರೂ ಒಡನಿಲ್ಲವಲ್ಲ ಎನ್ನುವ ಕೊರಗು. ಅವಳ ಚೆನ್ನುಲಿಯಲ್ಲಿ ಇನ್ನೊಂದು ಸೊಗಡಿನಲ್ಲಿ ಕೇಳಿಸಿಕೊಂಡಿದ್ದರ ಸಂಭ್ರಮವೂ ಇಲ್ಲದಿಲ್ಲ.ಚಿತ್ರಕ್ಕೆ ಒಳಿತಾಗಲಿ ಎಂದು ನಾಗರಾಜ್‌ ವಸ್ತಾರೆ ಹಾರೈಸಿದ್ದು, ಸಿನಿಮಾದ ಶೂಟಿಂಗ್‌ ಸ್ಪಾಟ್‌ನ ಕೆಲವು ಚಿತ್ರ ಹಾಗೂ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅವನ ಜೊತೆ ಸಮುದ್ರ ಪಕ್ಕದಲ್ಲೇ ಮನೆ ಮಾಡುವ ಆಸೆ ನಮ್ರತಾ ಗೌಡಗೆ?
ಮೊದಲ ಬಾರಿಗೆ ಕಿರುತೆರೆಗೆ ಬಿ.ಸಿ ಪಾಟೀಲ್ ಎಂಟ್ರಿ: ಇದು 'ಶ್ರೀ ರಾಘವೇಂದ್ರ ಮಹಾತ್ಮೆ'ಯ ಪವಾಡ!