'ಹಾಡು ಕರ್ನಾಟಕ'ದಲ್ಲಿದ್ದಾನೆ 'ಮೋಸಗಾತಿಯೇ' ಗಾಯಕ; ಜ್ಯೂಸ್‌ ಅಂಗಡಿಯ ಹುಡುಗ!

By Suvarna NewsFirst Published Feb 24, 2020, 9:27 AM IST
Highlights

ಕಷ್ಟಗಳು ಚೂಸಿಯಾಗಿ ಕೆಲವರನ್ನು ಹುಡುಕಿಕೊಂಡು ಬರುತ್ತದೆ. ಮನೆಯಲ್ಲಿ ಠಾಣ್ಯ ಹೂಡಿ ಬಿಡದೇ ಕಾಡುತ್ತದೆ. ಬೆಟ್ಟದಂತೆ ಮುಂದೆ ಬಂದು ಕೆಕ್ಕರಿಸಿ ನಗುತ್ತದೆ. ತಾಕತ್ತಿದ್ದರೆ ಎದುರಿಸು ಎಂದು ಸವಾಲೆಸೆದು ಯುದ್ದಕ್ಕೆ ಆಹ್ವಾನಿಸುತ್ತದೆ. ಅಬ್ಬರಿಸುವ ಅಲೆಗಳಂತೆ ಮೇಲಕ್ಕೊಮ್ಮೆ, ಕೆಲಕ್ಕೊಮ್ಮೆ ಆಡಿಸಿ ಅಲ್ಲಾಡಿಸಿ ಬಿಡುತ್ತದೆ. ಇಂಥ ಕಷ್ಟಗಳೊಂದಿಗೆ ಗುದ್ದಾಡಿ ಅರಳಿದ ಪ್ರತಿಭೆಯೇ ಉಳ್ಳಾಲದ ಅರ್ಫಾಝ್‌. ಕನ್ನಡದ ಹಾಡಿನ ರಿಯಾಲಿಟಿ ಶೋ ಒಂದರಲ್ಲಿ ಮೋಸಗಾತಿಯೇ.... ಮೋಸಗಾತಿಯೇ.. ಎಂದು ಹಾಡಿ ಮಿಂಚು ಹರಿಸಿದ್ದ ಕರಾವಳಿಯ ಪ್ರತಿಭೆ.

ಸಿನಾನ್‌ ಇಂದಬೆಟ್ಟು

ವರ್ಷಕ್ಕೊಮ್ಮೆ ಪ್ರವಾದಿ ಪೈಗಂಬರರ ಜನ್ಮ ದಿನದಂದು ಮಸೀದಿ ಮದ್ರಸಾಗಳಲ್ಲಿ ನಡೆಯುವ ಸಾಂಸ್ಕೃತಿಯ ಕಾರ್ಯಕ್ರಮದಲ್ಲಿ ಹಾಡುತ್ತಾ ಬೆಳೆದ ಯುವಕ ಇಂದು ಇಡೀ ಕರ್ನಾಕವೇ ಗಮನಿಸುವಷ್ಟುಬೆಳೆದು ನಿಂತಿರುವುದಕ್ಕೆ ಕಾರಣ ಬದುಕನ್ನು ಇನ್ನಿಲ್ಲದಂತೆ ಕಾಡಿದ ಕಷ್ಟ. ನೋವುಗಳ ಸರಮಾಲೆ. ಹತ್ತನೇ ತರಗತಿಗೇ ಓದು ಮುಗಿಸುವ ಅನಿವಾರ್ಯತೆ ಎದುರಾಯ್ತು. ಇದಾದ ಒಂದೆರಡು ವರ್ಷಕ್ಕೇ ಬರ ಸಿಡಿಲಿನಂತೆ ಎರಗಿದ್ದು ಅಮ್ಮನ ಸಾವು. ಬಾಲ್ಯದಿಂದ ಮಗನ ಹಾಡನ್ನು ನೋಡಿ, ನನ್ನ ಮಗ ಮುಂದೊಂದು ದಿನ ದೊಡ್ಡ ಗಾಯಕನಾಗಬೇಕು ಎಂದು ಕನಸು ಕಂಡಿದ್ದ ತಾಯಿ, ಮಗನಿಗೆ ವೇದಿಕೆ ಸಿಗುವ ಮುನ್ನವೇ ಕಣ್ಣು ಮುಚ್ಚಿದ್ದರು. ಆಗಿನ್ನೂ ಅರ್ಫಾಝ್‌ಗೆ 17 ವರ್ಷ. ಪ್ರೀತಿಯ ತಾಯಿಯನ್ನು ಕಳೆದುಕೊಂಡ ಮೇಲೆ ಹಾಡುವುದಾದರೂ ಯಾಕೆ? ಯಾರ ಖುಷಿಗಾಗಿ ಹಾಡಬೇಕು?

ಬಿಗ್‌ ಬಾಸ್‌‌ನಿಂದ ಹೊರ ಬಂದ ಚಂದನಾ ತೆಗೆದುಕೊಂಡ ದೊಡ್ಡ ನಿರ್ಧಾರವಿದು!

ಅರ್ಧಕ್ಕೆ ಕೈ ಕೊಟ್ಟಓದು. ಹಾಳಾದ ನೆಮ್ಮದಿ. ಅಮ್ಮನ ಅಗಲಿಕೆ. ಈ ಎಲ್ಲಾ ದುಃಖಗಳು ಕೈ ಹಾಕಿದ ಪೈಂಟಿಂಗ್‌, ಎಲೆಕ್ಟ್ರೀಷಿಯನ್‌, ಕೂಲಿ ಹೀಗೆ ಎಲ್ಲ ಕೆಲಸವನ್ನೂ ನುಂಗಿ ಬಿಡ್ತು. ಏಳು ಮಂದಿಯಿರುವ ಮನೆಗೆ ಅಪ್ಪನ ದುಡಿಮೆ ಸಾಲುವುದಿಲ್ಲ. ಕಷ್ಟಗಳನ್ನು ಎದುರಿಸಲು, ನೋವುಗಳನ್ನು ಮರೆಯಲು ಆಗ ಅರ್ಫಾಝ್‌ನನ್ನು ಕೈ ಹಿಡಿದು ನಡೆಸಿದ್ದು ಸಂಗೀತ. ಹೊಟ್ಟೆಗೆ ಬೇಕಾದಷ್ಟುಅಲ್ಲವಾದರೂ ಮನಸ್ಸು ತುಂಬುವಷ್ಟುಖುಷಿ ಕೊಟ್ಟದ್ದು ಹಾಡುಗಾರಿಕೆ.

ತಂದೆ ಮತ್ತು ಮಾವ ಹಾಡುಗಾರರಾಗಿರುವುದರಿಂದ ಅರ್ಫಾಝ್‌ಗೆ ಹಾಡು ಜೀನ್‌ನಲ್ಲಿಯೇ ಬಂದಿತ್ತು. ಕೋಗಿಲೆ ಕಂಠ ದೇವರು ಕರುಣಿಸಿದ್ದ. ಕೂಲಿ ಕೆಲಸದ ಜತೆ ಮದುವೆ ಹಾಗೂ ಇನ್ನಿತರ ಸಣ್ಣ ಕಾರ್ಯಕ್ರಮಗಳಲ್ಲಿ ಹಾಡುತ್ತಾ ಸ್ಥಳೀಯವಾಗಿ ಗುರುತಿಸಿಕೊಂಡರೂ, ಬೆಂಬಲಕ್ಕೆ ನಿಂತವರು ಶೂನ್ಯ. ಈ ವೇಳೆ ಅರ್ಫಾಝ್‌ನನ್ನು ಗುರುತಿಸಿದ್ದು ಬೆಳ್ತಂಗಡಿಯ ಜುನೈದ್‌. ತಂಗಾಳಿ ಕಿವಿಗೆ ಸೋಕಿದಂಥ ಅರ್ಫಾಜ್‌ನ ರಾಗ ಕೇಳಿ ನೀನ್ಯಾಕೆ ಯಾಕೆ ಅಲ್ಬಂ ಸಾಂಗ್‌ ಮಾಡಬಾರದು ಎಂದು ಪ್ರಶ್ನಿಸಿದ್ದರು. ಅರ್ಫಾಝ್‌ಗೆ ಮೊದಲು ಅವಕಾಶ ಹುಡುಕಿ ಬಂದಿದ್ದು ಜುನೈದ್‌ ರೂಪದಲ್ಲಿ.

ಕೊಳಲೇನು ಪುಣ್ಯವ ಮಾಡಿತೋ 'ಹಾಡು ಕರ್ನಾಟಕ'ದ ವಾರಿಜಾಶ್ರೀ ಕೈ ಸೇರಿ!

ದುಂಡು ಮುಖದ, ನೀಳ ದಾಡಿಯ ಅರ್ಫಾಝ್‌ ಅಮ್ಮನ ಕನಸು ಈಡೇರಿಸಲು ಹಾಡಲು ಪ್ರಾರಂಭಿಸುತ್ತಾರೆ. ಸ್ನೇಹಿತ ಬರೆದ ಲಿರಿಕ್ಸ್‌ಗೆ ಕಂಠ ಕೊಟ್ಟಅರ್ಫಾಝ್‌ಗೆ ಮೊಲದ ಕಲ್ಲಲ್ಲಿ ಹಣ್ಣು ಬೀಳಲಿಲ್ಲ. ಆದರೆ ಸುಮ್ಮನೆ ಕೂರದ ಅರ್ಫಾಝ್‌ ಅಲ್ಬಂಗಳಿಗೆ ಹಾಡುವುದನ್ನು ಮುಂದರುವರಿಸಿದರು. ಅಮ್ಮನ ನೆನಪಿನಲ್ಲಿ ಅಮ್ಮನ ಕುರಿತು ಹಾಡಿದ ಅರ್ಫಾಝ್‌ಗೆ ಸ್ವಲ್ಪ ಮಟ್ಟಿನ ಹೆಸರು ತಂದು ಕೊಟ್ಟಿತು. ಕೋಟಿ ದೇವರೇ ಎದುರಿದ್ದರೂ... ನಿನ್ನಂತೆ ಯಾರೂ ಕಾಣರಮ್ಮ... ಹಾಗೂ ಮಡದಿಯ ಪ್ರೀತಿ ಮುಂದೆ... ತಾಯಿಯ ಪ್ರೀತಿ ಕೊಂದೆ ಎನ್ನುವ ತಾಯಿ ಬಗೆಗಿನ ಹಾಡು ಕರಾವಳಿಯಲ್ಲಿ ಭಾರೀ ಸದ್ದು ಮಾಡಿತು. ಯೂಟ್ಯೂಬ್‌ನಲ್ಲಿ ಈ ಹಾಡು ಸದ್ದು ಮಾಡುತ್ತಿದ್ದಂತೆ ಅರ್ಫಾಜ್‌ ಕರಾವಳಿಯ ಮನೆ ಮಾತಾದರು.

ಸುಮಾರು 15 ಹಾಡುಗಳು ಅರ್ಫಾಝ್‌ ಕಂಠದಿಂದ ಬಂದಿದ್ದರು ಹೆಚ್ಚಿನ ಪ್ರಚಾರ ಸಿಕ್ಕಿರಲಿಲ್ಲ. ಆಗತಾನೇ ಬಂದು ಎಲ್ಲರ ಬಾಯಲ್ಲಿ ಗುಣುಗುಣಿಸುತ್ತಿದ್ದ ಹಿಂದಿಯ ‘ಪಚ್ತಾವೋಗೇ’ ಹಾಡು ಅರ್ಫಾಝ್‌ ಜೀವನಕ್ಕೊಂದು ತಿರುವು ಕೊಟ್ಟಿತು. ಒಂದು ದಿನ ಯಾವುದೋ ಒಂದು ಹಾಡಿನ ರೆಕಾರ್ಡಿಂಗ್‌ ಮುಗಿದ ಬಳಿಕ, ನಾನು ಪಚ್ತಾವೋಗೇ ಹಾಡನ್ನು ಗುಣುಗುಣಿಸುತ್ತಿದೆ. ಇದನ್ನೇ ಕನ್ನಡಕ್ಕೆ ಮಾಡಿದರೇ ಹೇಗೆ? ನಿನ್ನ ಕಂಠ ಇದಕ್ಕೆ ಹೇಳಿ ಮಾಡಿಸಿದಂತಿದೆ ಎಂದು ಹೇಳಿದ ಸ್ನೇಹಿತ ಒಂದೆರಡು ದಿನದಲ್ಲಿ ಲಿರಿಕ್ಸ್‌ ಕೂಡ ಬರೆದ. ಹಾಗೇ ಹಾಡಿದ ಮೋಸಗಾತಿಯೇ ನನ್ನ ನನ್ನ ಕೆರಿಯರ್‌ಗೆ ಹೊಸ ದಿಕ್ಕು ತೋರಿಸಿತು ಎಂದು ಹೇಳುತ್ತಾರೆ ಅರ್ಫಾಝ್‌.

ಕನ್ನಡ-ತುಳು ಪಟಪಟ ಮಾತಾಡ್ತಾ ಜನರಿಗೆ ಮರಳು ಮಾಡೋ ಆರ್‌ಜೆ ಶ್ರದ್ಥಾ ಇವರೇ!

ಅರ್ಫಾಝ್‌ ಹಾಡಿದ ಮೋಸಗಾತಿಯೇ ಹಾಡು ಯೂಟ್ಯೂಬ್‌ನಲ್ಲಿ ಸಂಚಲನ ಸೃಷ್ಟಿಸಿತು. ಕರಾವಳಿಯ ಎಲ್ಲೋ ಮೂಲೆಯಲ್ಲಿ ಕುಳಿತ ಹಾಡಿದ ಹಾಡು ರಾಜ್ಯದ್ಯಂತ ಮನೆ ಮಾತಾಯ್ತು. ಟಿಕ್‌ ಟಾಕ್‌ ಹಾಗೂ ವಾಟ್ಸಪ್‌ ಸ್ಟೇಟಸ್‌ಗಳಲ್ಲಿ ರಾರಾಜಿಸತೊಡಗಿತು. ಹಾಡು ಹೆಚ್ಚು ಪ್ರಸಿದ್ದಿ ಪಡೆಯುತ್ತಿದ್ದಂತೆ ಮೋಡಗಳು ಮುತ್ತಿಕ್ಕಿಕೊಂಡ ಸೂರ್ಯನಂತಿದ್ದ ಅರ್ಫಾಝ್‌ ಮೊಡಗಳನ್ನು ಸರಿಸಿ ಬೆಳಕಿಗೆ ಬಂದರು. ಒಂದು ದಿನ ಕೆಫೆ ಕಾಫಿ ಡೇಗೆ ಹೋದಾಗ ಮೋಸಗಾತಿಯೇ ಹಾಡನ್ನು ಹಾಕಿದ್ದರು. ಸ್ನೇಹಿತನ ಒತ್ತಾಯಕ್ಕೆ ಹಾಡಿದ ಹಾಡು ಇಷ್ಟುದೊಡ್ಡ ಮಟ್ಟದಲ್ಲಿ ಜನರನ್ನು ತಲುಪುತ್ತದೆ ಎಂದು ನಾನು ಅಂದು ಕೊಂಡಿರಲಿಲ್ಲ. ಇದಾದ ಕೆಲ ದಿನಗಳಲ್ಲಿ ನನ್ನ ಹಾಡು ಕೇಳಿ ಸಾಧು ಕೋಕಿಲ ಅವರು ಕರೆ ಮಾಡಿ ಅಭಿನಂದಿಸಿದ್ದರು. ಆ ಖುಷಿಗೆ ನನಗೆ ಎರಡು ದಿನ ನಿದ್ದೆಯೇ ಹತ್ತಲಿಲ್ಲ. ಕಾಲು ಭೂಮಿ ಮೇಲಿರಲಿಲ್ಲ. ಆಕಾಶಕ್ಕೆ ಎರಡೇ ಹೆಜ್ಜೆ ಎಂಬಷ್ಟುಸಂತಸ ಪಟ್ಟಿದ್ದೆ ಎಂದು ಹೇಳುವಾಗ ಅರ್ಫಾಝ್‌ ಮಾತಲ್ಲಿ ಸಂತೋಷದ ಅಲೆಗಳು ಅನುರಣಿಸುತ್ತಿದ್ದವು.

ಮೋಸಗಾತಿಯೇ ಹಾಡು ಸಕ್ಸಸ್‌ ಬಳಿಕ ಅರ್ಫಾಝ್‌ಗೆ ಸಿನಿಮಾದಲ್ಲಿ ಹಾಡುವುದಕ್ಕೂ ಅವಕಾಶ ಒದಗಿ ಬಂತು. ಕರಾವಳಿಯ ಅರ್ಜಿತ್‌ ಸಿಂಗ್‌ ಎಂದು ಜನ ಮಾತನಾಡಿಕೊಂಡರು. ಆದರೆ ನೇಮು, ಫೇಮು ಹೊಟ್ಟೆತುಂಬಿಸುತ್ತಾ? ನೆವರ್‌. ಹೊಟ್ಟೆಪಾಡಿಗಾಗಿ ಮಾಯಾನಗರಿಗೆ ಬಸ್‌ ಏರಬೇಕಾತ್ತು. ಐದು ತಿಂಗಳ ಹಿಂದೆ ಬೆಂಗಳೂರಿಗೆ ಬಂದು ಸ್ನೇಹಿತನೊಬ್ಬರ ಜತೆಗೂಡಿ ಕೋರಮಂಗದಲ್ಲಿ ಜ್ಯೂಸ್‌ ಅಂಗಡಿ ಆರಂಭಿಸಿದರು. ಈ ವೇಳೆ ಹಾಡು ಕರ್ನಾಟಕ ಶೋನ ಆಡಿಷನ್‌ನಲ್ಲಿ ಪಾಲ್ಗೊಂಡು ಆಯ್ಕೆಯೂ ಆದರು. ಸ್ಪರ್ಧೆಯ ಸೆಲೆಕ್ಷನ್‌ ರೌಂಡ್‌ನಲ್ಲಿ ತಮ್ಮ ಮೋಸಗಾತಿಯೇ ಹಾಡನ್ನು ಹಾಡಿ ತೀರ್ಪುಗಾರರಿಂದ ಭೇಷ್‌ ಎನಿಸಿಕೊಂಡರು. ಹಣ್ಣಿನ ರಸದಂತ ಕಂಠಕ್ಕೆ ಮನಸೋತ ಸಂಗೀತ ನಿರ್ದೇಶಕ ಅದೇ ವೇದಿಯಲ್ಲಿ ಅವರ ಪ್ರಾಜೆಕ್ಟ್ ಒಂದರಲ್ಲಿ ಹಾಡಿಸುವುದಾಗಿ ಹೇಳಿದ್ದರು. ಅರ್ಫಾಝ್‌ ಬಾಳಲ್ಲಿ ಹೊಸ ಬೆಳಕೊಂದು ಮೂಡಿತು.

ಅಂದಹಾಗೆ ಅರ್ಫಾಝ್‌ ಸಂಗೀತ ಕಲಿತವರಲ್ಲ. ಸಂಗೀತ ಕಲಿಯಲೆಂದು ಹೋದವರು ತರಗತಿಯ ಕಟ್ಟು ಪಾಡು ಸಾಕೆನಿಸಿ ಎರಡೇ ದಿನಕ್ಕೆ ಹಿಂದೆ ಬಂದವರು. ಈಗ ಹಾಡು ಕರ್ನಾಟಕದ ಸ್ಪರ್ಧಿ. ಅಸ್ಪಷ್ಟಭವಿಷ್ಯಕ್ಕೆ ಬೆಳಕು ಹರಿದ ಸಿಕ್ಕ ಖುಷಿ. ಇದೇ ಕ್ಷೇತ್ರದಲ್ಲಿ ಮುಂದುವರಿಯುವ ಆಸಕ್ತಿ ಇದೆ. ಒಬ್ಬರು ಸಹೋದರಿಯರನ್ನು ಮದುವೆ ಮಾಡಿಸಿಕೊಡಬೇಕೆಂಬ ಕನಸು. ಅಪ್ಪನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಆಸೆ. ಚಿಕ್ಕಮ್ಮನ ಮಕ್ಕಳನ್ನು ಓದಿಸುವ ಉಮೇದು. ಜತೆಗೆ ಬೆಟ್ಟದಷ್ಟುಆಸ್ಥೆ. ಶುಭವಾಗಲಿ ಎಂದು ಹಾರೈಸೋಣ.

click me!