
ಕನ್ನಡ ಕಿರುತೆರೆ ಹಾಗೂ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟಿ ರೂಪಿಕಾ (Roopika) ಇದೀಗ ತಮ್ಮ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಟ್ಟಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರೂಪಿಕಾ, ಇದೀಗ ವೈವಾಹಿಕ ಜೀವನ ಆರಂಭಿಸಿದ್ದಾರೆ. ರೂಪಿಕಾ ಅವರು ಅಂಕಿತ್ ಜಹಗೀರ್ಡಾರ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಗಸ್ಟ್ 31ರಂದು ಬೆಂಗಳೂರಿನಲ್ಲಿ ರೂಪಿಕಾ ಹಾಗೂ ಅಂಕಿತ್ ಅವರ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿದೆ. ಕುಟುಂಬಸ್ಥರು, ಆಪ್ತರು ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಮದುವೆ ಸಮಾರಂಭ ನಡೆದಿದ್ದು, ನವಜೋಡಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
ರೂಪಿಕಾ ಹಾಗೂ ಅಂಕಿತ್ ಅವರದ್ದು ಲವ್ ಮ್ಯಾರೇಜ್ ಅಲ್ಲ. ಇದು ಪಕ್ಕಾ ಅರೇಂಜ್ಡ್ ಮ್ಯಾರೇಜ್ ಎನ್ನಲಾಗಿದೆ. ಕುಟುಂಬದ ಹಿರಿಯರ ಒಪ್ಪಿಗೆಯೊಂದಿಗೆ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ.ಇದಕ್ಕೂ ಮುನ್ನ ರೂಪಿಕಾ ಹಾಗೂ ಅಂಕಿತ್ ಅವರ ನಿಶ್ಚಿತಾರ್ಥ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಸರಳವಾಗಿ ನಡೆದಿತ್ತು. ಇದೀಗ ಬೆಂಗಳೂರಿನಲ್ಲೇ ಅದ್ಧೂರಿಯಾಗಿ ವಿವಾಹ ನೆರವೇರಿದೆ.
ರೂಪಿಕಾ ಅವರ ಪತಿ ಅಂಕಿತ್ ಜಹಗೀರ್ಡಾರ್ ಮೂಲತಃ ಬೆಂಗಳೂರಿನವರು. ಕಳೆದ ಕೆಲವು ವರ್ಷಗಳಿಂದ ಅವರು ಕೆನಡಾದಲ್ಲಿ ನೆಲೆಸಿದ್ದಾರೆ. ಕೆನಡಾದ ‘ಇನ್ವೆಸ್ಕೋ’ ಸಂಸ್ಥೆಯಲ್ಲಿ ಟ್ಯಾಕ್ಸ್ ಸ್ಪೆಷಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಂಕಿತ್ ಅವರಿಗೆ ಸಂಗೀತದಲ್ಲಿಯೂ ವಿಶೇಷ ಆಸಕ್ತಿ ಇದೆ. ಮ್ಯೂಸಿಕಲ್ ಕಂಪೋಸರ್ ಆಗಿಯೂ ಅವರು ಕೆಲಸ ಮಾಡುತ್ತಾರೆ ಎನ್ನಲಾಗಿದ್ದು, ಚಿತ್ರರಂಗದ ಬಗ್ಗೆಯೂ ಆಸಕ್ತಿ ಹೊಂದಿದ್ದಾರೆ.
ರೂಪಿಕಾ ಸದ್ಯ ಜೀ ಕನ್ನಡ ವಾಹಿನಿಯ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದಕ್ಕೂ ಮೊದಲು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಿದ್ದ ‘ದೊರೆಸಾನಿ’ ಧಾರಾವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸಿ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿದ್ದರು. ಕಿರುತೆರೆಯಲ್ಲಿ ತಮ್ಮ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳ ಮನಗೆದ್ದಿರುವ ರೂಪಿಕಾ ಅವರ ಮದುವೆ ಸುದ್ದಿ ಇದೀಗ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ರೂಪಿಕಾ ಅವರಿಗೆ ನಟನೆ ಹೊಸದೇನಲ್ಲ. ಬಾಲನಟಿಯಾಗಿಯೇ ಕಿರುತೆರೆಗೆ ಪ್ರವೇಶಿಸಿದ ಅವರು, ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ‘ಬೆಳ್ಳಿಚುಕ್ಕಿ’, ‘ಬದುಕು’, ‘ಅವಳ ಮನೆ’, ‘ತ್ರಿವೇಣಿ ಸಂಗಮ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. ಸುಮಾರು 20ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಬಾಲನಟಿಯಾಗಿ ಅಭಿನಯಿಸಿರುವ ರೂಪಿಕಾ, ‘ಜಾಲಿಡೇಸ್’ ಹಾಗೂ ‘ಕೃಷ್ಣ’ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.
ರೂಪಿಕಾ ನಾಯಕಿಯಾಗಿ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದು ‘ಚೆಲುವಿನ ಚಿಲಿಪಿಲಿ’ ಚಿತ್ರದ ಮೂಲಕ. ವಿಶೇಷವೆಂದರೆ, 9ನೇ ತರಗತಿಯಲ್ಲಿ ಓದುತ್ತಿದ್ದಾಗಲೇ ಎಸ್. ನಾರಾಯಣ್ ನಿರ್ದೇಶನದ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಅವರಿಗೆ ಸಿಕ್ಕಿತ್ತು. ನಂತರ ‘ತೀರ್ಥರೂಪ’, ‘ಥರ್ಡ್‌ಕ್ಲಾಸ್’, ‘ರುದ್ರಾಕ್ಷಿಪುರ’, ‘ಮಾಯದಂಥ ಮಳೆ’, ‘ಬೀರ’, ‘ಮಂಜರಿ’, ‘ನವರಂಗಿ’, ‘ಡೈಮಂಡ್ ಕ್ರಾಸ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ರೂಪಿಕಾ ಅಭಿನಯಿಸಿದ್ದಾರೆ. ಕನ್ನಡ ಸಿನಿಮಾಗಳ ಜೊತೆಗೆ ‘ಚಿಲ್ ಬ್ರೋ’ ಎಂಬ ತೆಲುಗು ಸಿನಿಮಾದಲ್ಲಿಯೂ ಅವರು ನಟಿಸಿದ್ದಾರೆ.
ಸಿನಿಮಾ ಮತ್ತು ಕಿರುತೆರೆ ಮಾತ್ರವಲ್ಲದೆ ರೂಪಿಕಾ ನಾಟಕ ರಂಗದಲ್ಲಿಯೂ ಸಕ್ರಿಯರಾಗಿದ್ದಾರೆ. ಬೆನಕ, ಸೂರ್ಯ ಹಾಗೂ ಪ್ರಭಾತ್ ನಾಟಕ ತಂಡಗಳೊಂದಿಗೆ ಕೆಲಸ ಮಾಡಿರುವ ಅವರು, ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಅವರ ನಾಟಕಗಳಲ್ಲಿಯೂ ಅಭಿನಯಿಸಿದ್ದಾರೆ. ಹಲವು ವರ್ಷಗಳ ಕಾಲ ಸಿನಿಮಾ, ಕಿರುತೆರೆ ಹಾಗೂ ನಾಟಕ ರಂಗದಲ್ಲಿ ಸಕ್ರಿಯವಾಗಿದ್ದ ರೂಪಿಕಾ ಇದೀಗ ತಮ್ಮ ವೈಯಕ್ತಿಕ ಬದುಕಿನಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ರೂಪಿಕಾ ಹಾಗೂ ಅಂಕಿತ್ ಜಹಗೀರ್ಡಾರ್ ಅವರ ವಿವಾಹದ ಸುದ್ದಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದ್ದು, ನವದಂಪತಿಯ ಹೊಸ ಜೀವನ ಸುಖಮಯವಾಗಿರಲಿ ಎಂದು ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.