ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆಗೆ ವಿದಾಯ ಹೇಳಿ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಪುನೀತ್ ರಾಜ್‌ಕುಮಾರ್ ನಡೆಸಿಕೊಡುತ್ತಿದ್ದ ಕಾರ್ಯಕ್ರಮದ ಜವಾಬ್ದಾರಿಯನ್ನು ಸುದೀಪ್ ಹೊತ್ತುಕೊಳ್ಳಲಿದ್ದಾರೆ.
ವರದಿ; ಅಮೀತ್ ದೇಸಾಯಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕನ್ನಡ ಚಿತ್ರರಂಗದ ಬಾದ್‌ಷಾ ಕಿಚ್ಚ ಸುದೀಪ್ ಈಗಾಗಲೇ ಬಿಗ್ ಬಾಸ್ ನಿರೂಪಣೆಗೆ ಗುಡ್‌ಬೈ ಹೇಳೊದಾಗಿ ಘೊಷಿಸಿದ್ದಾರೆ. ಇದೇ ನನ್ನ ಕೊನೆ ಬಗ್ ಬಾಸ್ ಸೀಸನ್ ಎಂದಿರೋ ಕಿಚ್ಚ, ಬೇರೆ ಹೋಸ್ಟ್ (ಬದಲಿ ನಿರೂಪಕ) ನೋಡಿಕೊಳ್ಳಿ ಅಂತ ಕಲರ್ಸ್ ಕನ್ನಡ ವಾಹಿನಿಗೆ ಸೂಚನೆ ಕೊಟ್ಟಿದ್ದಾರೆ. ಹಾಗಂತ ಕಿಚ್ಚ ಕಂಪ್ಲೀಟ್ ಕಿರುತೆರೆಯಿಂದ ದೂರ ಆಗುತ್ತಿಲ್ಲ. ಬಿಗ್ ಬಾಸ್ ಬದಲು ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಅಪ್ಪು ಅಲಿಯಾಸ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಾಧಿಪತಿ (KBC) ಶೋಗೆ ಕಿಚ್ಚ ಸಾರಥಿ ಆಗಲಿದ್ದಾರೆ.
ಈ ವರ್ಷ ಕನ್ನಡ ಕಿರುತೆರೆ ಲೋಕದಲ್ಲಿ ಒಂದು ದೊಡ್ಡ ಬದಲಾವಣೆ ಆಗಲಿದೆ. ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಬಾದ್‌ಷಾ ಸುದೀಪ್ ಒಂದು ಹೊಸ ಹೆಜ್ಜೆ ಇಡುವುದಕ್ಕೆ ಸಜ್ಜಾಗಿದ್ದಾರೆ. ಈಗಾಗಲೇ ನಿಮಗೆ ಗೊತ್ತಿರೋ ಹಾಗೆ ಸುದೀಪ್ ಬಿಗ್ ಬಾಸ್ ರಿಯಾಲಿಟಿ ಶೋ ನಿರೂಪಣೆಯಿಮದ ದೂರವಾಗಿದ್ದಾರೆ. ಇದೇ ಕೊನೆಯ ಬಿಗ್ ಬಾಸ್ ಸೀಸನ್ ಅಂತ ಸುದೀಪ್ ಮೊದಲೇ ಘೋಷಿಸಿದ್ದಾರೆ. ಈ ಬಾರಿಯ ಬಿಗ್ ಬಾಸ್ ಫೈನಲ್ ಮುಗೀತಾ ಇದ್ದಂತೆ ಬಿಗ್ ಬಾಸ್ ಜೊತೆಗಿನ ಒಪ್ಪಂದಕ್ಕೆ ಗುಡ್ ಬೈ ಹೇಳಲಿದ್ದಾರೆ.
ಬಿಗ್ ಬಾಸ್ ರಿಯಾಲಿಟಿ ಶೋಗೆ ವಿದಾಯ ಹೇಳಿದ ಮೇಲೆ ಕಿಚ್ಚ ಕಂಪ್ಲೀಟ್ ಕಿರುತೆರೆ ಕಡೆ ಬರೋದೇ ಇಲ್ವಾ ಅಂತ ಅವರ ಅಭಿಮಾನಿಗಳು ಬೇಜಾರು ಮಾಡಿಕೊಳ್ಳುವುದಕ್ಕೆ ಅವರು ಅವಕಾಶವನ್ನೇ ಮಾಡಿಕೊಟ್ಟಿಲ್ಲ. ಇದೇ ವರ್ಷ ಬೇರೊಂದು ವಾಹಿನಿಯ ಬೇರೆ ಶೋ ಹೋಸ್ಟ್ ಮಾಡೋ ಮೂಲಕ ಮತ್ತೊಮ್ಮೆ ಕಿಚ್ಚ ಸುದೀಪ ಕಿರುತೆರೆ ವೀಕ್ಷಕರ ಮುಂದೆ ಬರಲಿದ್ದಾರೆ. ಅದು ಬೇರಾವುದೋ ಶೋ ಅಲ್ಲ. ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ.
ಇನ್ನು ಕನ್ನಡದ ಕೋಟ್ಯಧಿಪತಿ ಅಂದ ಕೂಡಲೇ ಮೊದಲು ಕನ್ನಡಿಗರ ಮನಸ್ಸಲ್ಲಿ ಬರೋದೇ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್. 2012ರಲ್ಲಿ ಕನ್ನಡದಲ್ಲಿ ಶುರುವಾದ KBC ಶೋ ಅನ್ನು ನಗುಮೊಗದ ರಾಜಕುಮಾರ ಪುನೀತ್ ರಾಜ್‌ಕುಮಾರ್ ನಡೆಸಿಕೊಡುತ್ತಿದ್ದರು. ಹಿಂದಿಯಲ್ಲಿ ಅಮಿತಾಭ್ ಹೋಸ್ಟ್ ಮಾಡ್ತಾ ಇದ್ದ ಶೋವನ್ನ ಕನ್ನಡದಲ್ಲಿ ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ಅವರು ಸೊಗಸಾಗಿ ನಡೆಸಿ ಟಾಪ್ ಪ್ರೊಗ್ರಾಮ್ ಮಾಡಿದ್ದಾರೆ. ಕನ್ನಡದ ಕೋಟ್ಯಧಿಪತಿ 3 ಸೀಸನ್‌ಗಳನ್ನ ಹೋಸ್ಟ್ ಮಾಡಿ ಒಂದು ಪ್ರಸಿದ್ಧಿಯನ್ನು ತಂದುಕೊಟ್ಟಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಜೊತೆಗಿನ ಕಿರಿಕ್ ಕಥೆ ತೆರೆದಿಟ್ಟ ಕಿಚ್ಚ ಸುದೀಪ್!
ಕೋಟಿ ಗೆಲ್ಲುವ ಈ ರಸಪ್ರಶ್ನೆ ಆಟದಲ್ಲಿ ಸಾಮಾನ್ಯರಷ್ಟೇ ಅಲ್ಲದೇ ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟೀಸ್ ಅಪ್ಪು ಎದುರು ಹಾಟ್ ಸೀಟ್‌ನಲ್ಲಿ ಕುಳಿತು ಆಟ ಆಡಿದ್ದಾರೆ. ಆದರೆ, ಅಪ್ಪು ಅಗಲಿಕೆ ನಂತರ ಈ ಸೀಟಿನಲ್ಲಿ ಕುಳಿತು ಪ್ರಶ್ನೆಗಳ ಬಾಣ ಬಿಡುವ ಸೇನಾನಿ ಯಾರು ಅನ್ನೋ ಪ್ರಶ್ನೆ ಮೂಡಿತ್ತು. ಅದಕ್ಕೆ ಉತ್ತರನೇ ಕಿಚ್ಚ ಸುದೀಪ್ ಎನ್ನುವಂತಾಗಿದೆ. ಈ ಹಿಂದೆ ಕೆಬಿಸಿ ಶೋ ನಡೆಸಿದ್ದ ವಾಹಿನಿಗಳನ್ನ ಬಿಟ್ಟು ಬೇರೊಂದು ವಾಹಿನಿ ಈ ಬಾರಿಯ ಕೆಬಿಸಿ ನಡೆಸೋದು ಫಿಕ್ಸ್ ಆಗಿದೆ. ಸುದೀಪ್ ಜೊತೆ ಮಾತುಕತೆ ನಡೆಸಿಯೇ ಆ ವಾಹಿನಿ ಕೆಬಿಸಿ ಆಯೋಜನೆ ಮಾಡುವ ಪ್ಲ್ಯಾನ್ ಮಾಡಿಕೊಂಡಿದೆ. ಸುದೀಪ್ ಕೂಡ ಇದಕ್ಕೆ ಯೆಸ್ ಅಂದಾಗಿದೆ.
ಅಸಲಿಗೆ ಬಿಗ್ ಬಾಸ್ ಶೋ ಸಾಗುತ್ತಿರುವ ದಾರಿಯ ಬಗ್ಗೆ ಕಿಚ್ಚನಿಗೆ ಅಸಮಾಧಾನ ಇದೆ. ಆದ್ದರಿಂದ ಬಿಗ್ ಬಾಸ್ ಶೋನಿಂದ ದೂರವಾಗೋಣ ಅಂತ ನಿರ್ಧರಿಸಿದ್ದಾರೆ. ಜೊತೆಗೆ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ಅಪ್ಪಟ ಫ್ಯಾಮಿಲಿ ಶೋ ಆಗಿದೆ. ಇದರ ನಿರೂಪಣೆ ಹೊಣೆ ಹೊತ್ತರೆ ಮತ್ತಷ್ಟು ಫ್ಯಾಮಿಲಿ ಆಡಿಯನ್ಸ್‌ಗೆ ಹತ್ತಿರವಾಗಬಹುದು ಅನ್ನೋದು ಕಿಚ್ಚನ ಲೆಕ್ಕಾಚಾರ. ಆದ್ದರಿಂದ ಕಿಚ್ಚ ಕೂಡ ಕೆಬಿಸಿ ಶೋ ನಡೆಸಲು ಉತ್ಸುಕರಾಗಿದ್ದಾರಂತೆ. ಒಟ್ಟಾರೆ ಅಪ್ಪು ನಂತರ ಕನ್ನಡದ ಕೋಟ್ಯಧಿಪತಿ ನಡೆಸಿಕೊಡೋರು ಯಾರು ಅನ್ನೋ ಪ್ರಶ್ನೆ ಬಹಳ ದಿನಗಳಿಂದ ಕಾಡುತ್ತಿತ್ತು. ಈಗ ಅದಕ್ಕೆ ಉತ್ತರ ಸಿಕ್ಕಾಕಿದೆ. ಅಪ್ಪು ಜಾಗಕ್ಕೆ ಕಿಚ್ಚ ಬರಲಿದ್ದಾರೆ. ಆದರೆ ಬಿಗ್ ಬಾಸ್‌ನಲ್ಲಿ ಕಿಚ್ಚನ ಜಾಗ ತುಂಬೋದ್ಯಾರು..? ಕಿಚ್ಚ ಇರದ ಬಿಗ್ ಬಾಸ್ ಹೇಗಿರಲಿದೆ ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಸೀಸನ್ 6ರ ಬಳಿಕ ಸುದೀಪ್‌ಗೆ ಏನಾಗಿತ್ತು? ಕಿಚ್ಚ ಬಿಚ್ಚಿಟ್ರು ಸೀಕ್ರೆಟ್!