
ಜೀ ಕನ್ನಡ (Zee Kannada )ದಲ್ಲಿ ಪ್ರಸಾರವಾಗಲಿರುವ ಕರ್ಣ ಸೀರಿಯಲ್ (Karna Serial )ವೀಕ್ಷಕರಿಗೆ ನಿರಾಸೆಯಾಗಿದೆ. ಇಂದಿನಿಂದ ಕರ್ಣ ಸೀರಿಯಲ್ ಪ್ರಸಾರವಾಗುತ್ತೆ ಅಂತ ತುದಿಗಾಲಿನಲ್ಲಿ ಕುಳಿತು ಕಾಯ್ತಿದ್ದ ವೀಕ್ಷಕರಿಗೆ ಜೀ ಕನ್ನಡ ಸಣ್ಣ ಶಾಕ್ ನೀಡಿದೆ. ಇಂದಿನಿಂದ ಕರ್ಣ ಸೀರಿಯಲ್ ಪ್ರಸಾರವಾಗ್ತಿಲ್ಲ ಎಂಬುದನ್ನು ಪ್ರೋಮೋ ಮೂಲಕ ತಿಳಿಸಿದೆ. ಕರ್ಣ ಸೀರಿಯಲ್ ಶೀಘ್ರದಲ್ಲಿ ಎನ್ನುವ ಪ್ರೋಮೋ ಹಾಕಿ ವೀಕ್ಷಕರನ್ನು ವಿಚಲಿತಗೊಳಿಸಿದೆ.
ಇಡೀ ಕರ್ನಾಟಕ ಕಾಯ್ತಾ ಇದೆ ಅನ್ನೋದು ಗೊತ್ತು. ಕೊಟ್ಟ ಮಾತಿನಂತೆ ರಾತ್ರಿ 8 ಗಂಟೆಗೆ ಕರ್ಣ ಬಂದೇ ಬರ್ತಾನೆ. ಶೀಘ್ರದಲ್ಲಿ ಅಂತ ಪ್ರೋಮೋ ಹಾಕಿದೆ. ಜೂನ್ 16 ರಿಂದ ರಾತ್ರಿ 8 ಗಂಟೆಗೆ ಕರ್ಣ ಸೀರಿಯಲ್ ಪ್ರಸಾರವಾಗಲಿದೆ ಅಂತ ಜೀ ಕನ್ನಡ ಈ ಹಿಂದೆ ದಿನಾಂಕವನ್ನು ಘೋಷಣೆ ಮಾಡಿತ್ತು. ಆದ್ರೆ ಕಾರಣಾಂತರಗಳಿಂದ ದಿನಾಂಕ ಬದಲಾಗಿದೆ. ಎಂದಿನಿಂದ ಕರ್ಣ ಬರ್ತಾನೆ ಎಂಬುದನ್ನು ಜೀ ಕನ್ನಡ ಸ್ಪಷ್ಟಪಡಿಸಿಲ್ಲ. ಶೀಘ್ರದಲ್ಲಿ ಎನ್ನುವ ಮೂಲಕ ಇಂದಿನಿಂದ ಕರ್ಣ ಸೀರಿಯಲ್ ಪ್ರಸಾರವಾಗೋದಿಲ್ಲ ಎಂಬುದನ್ನು ಮಾತ್ರ ಸ್ಪಷ್ಟಪಡಿಸಿದೆ.
ಕರ್ಣ ಸೀರಿಯಲ್ ಈಗಾಗಲೇ ಪ್ರೋಮೋಗಳಿಂದ ದೊಡ್ಡ ಹೈಪ್ ಕ್ರಿಯೇಟ್ ಮಾಡಿದೆ. ಸೀರಿಯಲ್ ನಲ್ಲಿ ದಿಗ್ಗಜ ನಟರ ದಂಡೇ ಇದೆ. ಕಿರಣ್ ರಾಜ್ (Kiran Raj) ಕರ್ಣನ ಪಾತ್ರದಲ್ಲಿ ಮಿಂಚಲಿದ್ದಾರೆ. ಇನ್ನು ಗೀತಾ ಖ್ಯಾತಿಯ ಬಿಗ್ ಬಾಸ್ ಬೆಡಗಿ ಭವ್ಯ ಗೌಡ (Bhavya Gowda), ಕರ್ಣನಿಗೆ ಹೀರೋಯಿನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ನಾಗಿಣಿ ಮೂಲಕ ಎಲ್ಲರ ಗಮನ ಸೆಳೆದಿದ್ದ ನಮ್ರತಾ ಗೌಡ (Namrata Gowda) ಕೂಡ ಸೀರಿಯಲ್ ನಲ್ಲಿದ್ದಾರೆ. ದೊಡ್ಡ ಕುಟುಂಬದಲ್ಲಿ ಎಲ್ಲರ ತಾತ್ಸಾರಕ್ಕೆ ಒಳಗಾಗಿರುವ ಡಾಕ್ಟರ್ ಕರ್ಣನ ತ್ರಿಕೋನ ಪ್ರೇಮ ಕಥೆ ಕಥೆ ಇದಾಗಿದ್ದು, ಮೊದಲ ಪ್ರೋಮೋ ದಾಖಲೆ ಮಟ್ಟದಲ್ಲಿ ವೀವ್ಸ್ ಪಡೆದಿತ್ತು. ಅದಾದ್ಮೇಲೆ ಸೀರಿಯಲ್ ಒಂದೊಂದೇ ಪ್ರೋಮೋ ಹೊರಗೆ ಬಂದಿದ್ದು, ಸೀರಿಯಲ್ ಬಗ್ಗೆ ಸಾಕಷ್ಟು ಕುತೂಹಲ ಸೃಷ್ಟಿಸಿತ್ತು.
ಸೀರಿಯಲ್ ನಲ್ಲಿ ನಿಧಿಯಾಗಿ ಭವ್ಯ ಗೌಡ ಹಾಗೂ ನಿತ್ಯಾ ಆಗಿ ನಮ್ರತಾ ಗೌಡ ನಟಿಸಲಿದ್ದಾರೆ. ಇಬ್ಬರು ಅಜ್ಜಿ ಮನೆಯಲ್ಲಿ ವಾಸ ಮಾಡ್ತಿದ್ದು, ಕರ್ಣ ಯಾರ ಪ್ರೀತಿಯಲ್ಲಿ ಬೀಳ್ತಾನೆ ಅನ್ನೋದನ್ನು ಕಾದು ನೋಡ್ಬೇಕು. ಇನ್ನು ಕರ್ಣನ ಬಗ್ಗೆ ಹೇಳೋದಾದ್ರೆ ಅನಾಥವಾಗಿ ಬಿದ್ದಿದ್ದ ಮಗುವನ್ನು ರಾಮಕೃಷ್ಣ ವಸಿಷ್ಠ ತಂದು ಸಾಕ್ತಾರೆ. ಅವನೇ ಕರ್ಣ. ಬಡವರ ನೋವಿಗೆ ಮಿಡಿಯುವ ಡಾಕ್ಟರ್ ಕರ್ಣ ಮನೆಯಲ್ಲಿ ಎಲ್ಲರ ತಾತ್ಸಾರಕ್ಕೆ ಒಳಗಾಗಿದ್ದಾನೆ. ಅವನನ್ನು ಕೆಲಸದವನಂತೆ ನೋಡ್ತಾರೆ ಮನೆಯವರು. ಮನೆಯ ಎಲ್ಲ ಕೆಲ್ಸವನ್ನು ಕಿಂಚಿತ್ತೂ ಬೇಸರವಿಲ್ಲದೆ ಮಾಡುವ ಕರ್ಣನನ್ನು ಕಂಡ್ರೆ ಅಜ್ಜಿ – ಅಮ್ಮನಿಗೆ ಅಪಾರ ಪ್ರೀತಿ.
ಜೀ ಕನ್ನಡ ಪ್ರೋಮೋ ಬಿಡುಗಡೆ ಮಾಡ್ತಿದ್ದಂತೆ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಲಕ್ಷ್ಮಿ ನಿವಾಸ ಸೀರಿಯಲನ್ನು ಒಂದು ಗಂಟೆ ನೋಡ್ಬೇಕಾ? ಆದಷ್ಟು ಬೇಗ ಕರ್ಣ ಸೀರಿಯಲ್ ಪ್ರಸಾರ ಮಾಡಿ ಅಂತ ವಿನಂತಿ ಮಾಡಿದ್ದಾರೆ. ಅಷ್ಟೇ ಅಲ್ಲ ಜೀ ಕನ್ನಡ ಸದ್ಯ ಭವ್ಯ ಗೌಡ ಇದ್ದ ಸೀರಿಯಲ್ ಪ್ರೋಮೋವನ್ನು ಡಿಲಿಟ್ ಮಾಡಿದೆ. ಯಾಕೆ ಭವ್ಯ ಇದ್ದ ಎಲ್ಲ ಪ್ರೊಮೋ ಡಿಲಿಟ್ ಆಗಿದೆ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡ್ತಿದೆ. ಸೀರಿಯಲ್ ನಲ್ಲಿ ಭವ್ಯ ಕಾಣಿಸಿಕೊಳ್ತಾರಾ ಇಲ್ವಾ ಎನ್ನುವ ಪ್ರಶ್ನೆಯನ್ನು ಫ್ಯಾನ್ಸ್ ಕೇಳ್ತಿದ್ದಾರೆ. ಶೀಘ್ರದಲ್ಲಿ ಅಂತ ಪ್ರೋಮೋ ಹಾಕಿದ್ರೂ ಅನೇಕರು ಇದು ಸುಳ್ಳು, ಇಂದೇ ಕರ್ಣ ಸೀರಿಯಲ್ ಪ್ರಸಾರವಾಗುತ್ತೆ ಅಂತ ನಂಬಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.