Rapper ಚಂದನ್ ಶೆಟ್ಟಿ- ನಿವೇದಿತಾ ಗೌಡ ಮದುವೆ ಡೇಟ್‌ ಫಿಕ್ಸ್!

By Suvarna News  |  First Published Jan 11, 2020, 4:09 PM IST

ರ‍್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಮದುವೆ ದಿನಾಂಕ ನಿಗದಿಯಾಗಿದ್ದು, ಮದುವೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ..
 


2019 ಮೈಸೂರು ಯುವ ದಸರಾ ವೇದಿಕೆ ಮೇಲೆ ಲಕ್ಷಾಂತರ ಜನರ ಎದುರೇ ಬಾರ್ಬಿ ಡಾಲ್ ನಿವೇದಿತಾ ಗೌಡ ಅವರಿಗೆ ಚಂದನ್ ಶೆಟ್ಟಿ ಉಂಗುರ ತೊಡಿಸಿ ಪ್ರೀತಿ ವ್ಯಕ್ತ ಪಡಿಸಿದ್ದರು. ತಾವು ಯುವ ದಸರಾ ಕಾರ್ಯಕ್ರಮಕ್ಕಾಗಿ ಹಾಡುತ್ತಿದ್ದ ವೇದಿಕೆಯಲ್ಲೇ, ತಮ್ಮ ಮನದನ್ನೆ ನಿವೇದಿತಾಗೆ ಮಂಡಿಯೂರಿ ಪ್ರಪೋಸ್ ಮಾಡಿ ಉಂಗುರ ತೊಡಿಸಿದ್ದರು. ಇದು ನಿವೇದಿತಾಗೆ ಸಖತ್ ಸರ್‌ಪ್ರೈಸ್ ತಂದಿತ್ತು. ಅಷ್ಟೇ ಅಲ್ಲ ಚಂದನ್ ಅವರ ಈ ನಡೆಗೆ ಅಪಾರ ವಿರೋಧವೂ ವ್ಯಕ್ತವಾಗಿತ್ತು. ಕರ್ನಾಟಕದ ಈ ಗಾಯಕನ ಬಂಧನಕ್ಕೆ ಆಗ್ರಹಿಸಿ ಎಲ್ಲೆಡೆ ಪ್ರತಿಭಟನೆಗಳೂ ನಡೆದಿದ್ದವು. 

ಕೆನಡಾದಿಂದಲೇ ಮುದ್ದು ಗೊಂಬೆಗೆ ಸರ್ಪ್ರೈಸ್ ಕೊಟ್ಟ ಚಂದನ್ ಶೆಟ್ಟಿ!

Tap to resize

Latest Videos

ಆ ನಂತರ ಗುರು- ಹಿರಿಯರ ಸಮ್ಮುಖದಲ್ಲಿ ಮೈಸೂರಿನ ಖಾಸಗಿ ಹೊಟೇಲ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡು 'ಗೊಂಬೆ ಗೊಂಬೆ' ಹಾಡಿಗೆ ಈ ಜೋಡಿ ಜೊತೆಯಾಗಿ ಹೆಜ್ಜೆ ಹಾಕಿದರು. ಡಿಗ್ರಿ ಮುಗಿದ ನಂತರ ಪ್ರತಿಷ್ಠಿತ ಏರ್‌ಲೈನ್ಸ್ ಕಂಪನಿಯೊಂದಕ್ಕೆ ಆಪರೇಷನ್ ಅಸಿಸ್ಟೆಂಟ್ ಆಗಿ ನಿವೇದಿತಾ ಕೆಲಸ ಮಾಡುತ್ತಿದ್ದಾರೆ. ಬಿಗ್‌ಬಾಸ್ ವಿನ್ನರ್ ಕಿರೀಟ ಪಡೆದುಕೊಂಡ ನಂತರ ಚಂದನ್‌ ಅವರನ್ನು ಹಲವು ಆಫರ್ಸ್ ಹುಡುಕಿಕೊಂಡು ಬರುತ್ತಿವೆ. 

ಇದೇ ಫೆಬ್ರವರಿ 25-26ರಂದು ಮೈಸೂರಿನ ಸ್ಪೆಕ್ಟ್ರಾ ಹಾಲ್‌ನಲ್ಲಿ ಈ ಜೋಡಿ ಸಪ್ತಪದಿ ತುಳಿಯಲಿದೆ. ನಿಶ್ಚಿತಾರ್ಥಕ್ಕೆ ಇಬ್ಬರೂ ಒಂದೇ ಡಿಸೈನರ್‌ ವೇರ್ ಉಡುಪು ಧರಿಸಿದ್ದರು, ಮದುವೆ ದಿನದ ಹಾಗೂ ಆರತಕ್ಷತೆಯಲ್ಲಿ ತೊಡುವ ವಸ್ತ್ರಗಳು ಹೇಗಿರಬಹುದು ಎಂದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. 

ಚಂದನ್ ಶೆಟ್ಟಿ - ನಿವೇದಿತಾ ಗೌಡ ನಿಶ್ಚಿತಾರ್ಥ ಫೋಟೋಸ್!

ಬಿಗ್‌ಬಾಸ್ ಸೀಸನ್‌-5ರಲ್ಲಿ ಚಂದನ್ ಹಾಗೂ ನಿವೇದಿತಾ ಸ್ಪರ್ಧಿಗಳಾಗಿದ್ದರು, ಈ ವೇಳೆ ನಿವೇದಿತಾ ಫ್ಯಾಷನ್‌ ಸೆನ್ಸ್‌ಗೆ ಮನಸೋತ ಚಂದನ್ 'ಗೊಂಬೆ ಗೊಂಬೆ' ಎಂಬ ಹಾಡು ಬರೆದು, ಸಂಗೀತ ಸಂಯೋಜಿಸಿ ಹಾಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸ್ನೇಹಿತರಾಗಿ ಪರಿಚಯವಾಗಿ, ಬಿಗ್‌ಬಾಸ್ ಮನೆಯಲ್ಲಿ ಸುಮಾರು ಮೂರು ತಿಂಗಳ ಕಾಲ ಜತೆಯಾಗಿದ್ದ ಈ ಇಬ್ಬರಲ್ಲಿ ಅಲ್ಲಿಯೇ ಪ್ರೀತಿ ಚಿಗುರಿತ್ತು. ಈ ಬಗ್ಗೆ ಹಲವು ಸಂದರ್ಭಗಳಲ್ಲಿ ಇವರಿಬ್ಬರ ಕಾಲೆಳೆದರೂ, ಇಬ್ಬರೂ ಒಪ್ಪಿಕೊಂಡಿರಲಿಲ್ಲ. ಮೈಸೂರು ಯುವ ದಸರಾದಲ್ಲಿ ಯಾವಾಗ ಚಂದನ್ ನಿವೇದಿತಾಗೆ ಪ್ರಪೋಸ್ ಮಾಡಿದರೋ ಆಗ ಯಾರಿಗೂ ಅಷ್ಟು ಆಶ್ಚರ್ಯವೇನೂ ಆಗಲಿಲ್ಲ. ಆದರೆ, ಪ್ರಪೋಸ್ ಮಾಡಿದ ರೀತಿ ಮಾತ್ರ ಎಲ್ಲರನ್ನೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿತ್ತು. 

ಹಸೆಮಣೆ ಏರುತ್ತಿರುವ ಈ ಜೋಡಿಗೆ ಶುಭವಾಗಲಿ. ಬಾಳು ಬಂಗಾರವಾಗಲಿ ಎಂಬುವುದು ಸುವರ್ಣನ್ಯೂಸ್.ಕಾಮ್ ಶುಭ ಹಾರೈಕೆಗಳು.

ಜನವರಿ 11ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!