ಅಮೃತಧಾರೆ ಸೀರಿಯಲ್‌ನ ಜೀವ ಪಾತ್ರಧಾರಿ ಬದಲಾಗಿದ್ದಾರೆ. ಈ ಹಿಂದೆ ಈ ಪಾತ್ರ ಮಾಡ್ತಿದ್ದ ಶಶಿ ಹೆಗಡೆ ಜಾಗಕ್ಕೆ ಹೊಸಬರ ಆಗಮನ ಆಗಿದೆ. ಹಾಗಿದ್ರೆ ಶಶಿ ಹೆಗಡೆಗೆ ಏನಾಯ್ತು?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ಸೀರಿಯಲ್‌ನಲ್ಲಿ ಕಳೆದ ಕೆಲಸ ಸಮಯದಿಂದ ಜೀವ ಮತ್ತು ಮಹಿಮಾ ಸೀನ್‌ಗಳು ಬರುತ್ತಲೇ ಇರಲಿಲ್ಲ. ಈ ಬಗ್ಗೆ ಸಾಕಷ್ಟು ವೀಕ್ಷಕರು ಗಮನ ಸೆಳೆದಿದ್ದರು. ಆದರೆ ಗೌತಮ್, ಭೂಮಿಕಾ ಸ್ಟೋರಿಯಲ್ಲಿ ಮಹತ್ವದ ಘಟನೆಗಳು, ತಿರುವುಗಳು ಹೆಚ್ಚಾದ ಕಾರಣ ಹೆಚ್ಚಿನವರಿಗೆ ಈ ಕಡೆ ಗಮನ ಹೋಗಿರಲಿಲ್ಲ. ಆ ಭಾಗದಲ್ಲಿ ತಾಯಿ, ತಂಗಿಯನ್ನು ಕಳೆದುಕೊಂಡು ಕೊರಗುತ್ತಿದ್ದ ಗೌತಮ್ ದಿವಾನ್‌ಗೆ ಒಂದು ಹಂತದಲ್ಲಿ ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸುಧಾಳೇ ತನ್ನ ತಂಗಿ, ಆಕೆಯ ತಾಯಿಯೇ ತನ್ನ ತಾಯಿ ಅನ್ನೋದು ಗೊತ್ತಾಗಿದೆ, ಈ ಎಮೋಶನಲ್ ಸೀನ್ ಯಾವ ಲೆವೆಲ್‌ಗೆ ಹೈಪ್ ಕ್ರಿಯೇಟ್ ಮಾಡಿದೆ ಅಂದರೆ ಟಿಆರ್‌ಪಿಯಲ್ಲಿ ಟಾಪ್ ೫ನಲ್ಲೋ ಕೆಲವೊಮ್ಮೆ ಅದಕ್ಕೂ ಹಿಂದೆಯೋ ಇದ್ದ ಸೀರಿಯಲ್ ಏಕಾಏಕಿ ಟಾಪ್ ೧ ಸ್ಥಾನಕ್ಕೆ ಬಂದುಬಿಟ್ಟಿತ್ತು. ಗೌತಮ್ ದಿವಾನ್ ಮತ್ತು ಅಮ್ಮನ ಸೀನ್ ಅನ್ನು ಬಹಳ ಎಮೋಶನಲ್ ಆಗಿ ಎಂಥವರ ಕಣ್ಣಲ್ಲೂ ನೀರು ತರಿಸುವ ಹಾಗೆ ಚಿತ್ರೀಕರಿಸಲಾಗಿತ್ತು. ಅಷ್ಟೇ ಅಲ್ಲ, ಈ ಟೈಮಲ್ಲಿ ಗೌತಮ್ ದಿವಾನ್ ಪಾತ್ರದಲ್ಲಿ ರಾಜೇಶ್ ನಟರಂಗ ಅದೆಷ್ಟು ತೀವ್ರವಾಗಿ ನಟಿಸಿದ್ರು ಅಂದರೆ ಈ ಸೀರಿಯಲ್ ನೋಡುವ ಎಷ್ಟೋ ಮಂದಿ ಈ ಸೀನ್ ನೋಡಿ ಕಣ್ಣೀರು ಒರೆಸಿಕೊಳ್ತಿದ್ರು.
ಅದೆಲ್ಲ ಆಯ್ತು, ಗೌತಮ್ ದಿವಾನ್ ಮನೆಗೆ ಅಮ್ಮ, ತಂಗಿ ಬಂದಾಯ್ತು. ಸೀರಿಯಲ್ ನಂ.೧ ಪ್ಲೇಸ್‌ಗೂ ಸೇರಾಯ್ತು. ನಮ್ಮ ಸಂಸಾರ ಆನಂದ ಸಾಗರ ಅಂತ ಇಷ್ಟಕ್ಕೇ ಬಿಡೋದಕ್ಕೆ ಆಗಲ್ವಲ್ಲ.. ಸೋ ಹೊಸದೊಂದು ಟ್ವಿಸ್ಟ್ ಅನ್ನು ಇನ್ನೊಂದು ಕಡೆಯಿಂದ ಸೀರಿಯಲ್ ಟೀಮ್ ತರ್ತಿದೆ. ಇದರಲ್ಲಿ ಭೂಮಿಕಾ ತಮ್ಮ ಜೀವ ಹೊಸ ಮನೆ ಕಟ್ಟಿಸಿದ್ದಾನೆ. ಇದಕ್ಕೆ ಭೂಮಿಕಾ ತಂದೆ, ತಾಯಿಯೇ ಬಂದು ಭೂಮಿಕ ಮತ್ತು ಕುಟುಂಬವನ್ನು ಆಹ್ವಾನಿಸಿದ್ದಾರೆ. ಅದರಂತೆ ಗೌತಮ್ ದಿವಾನ್ ಫ್ಯಾಮಿಲಿ ಮನೆ ಫಂಕ್ಷನ್‌ಗೆ ಬಂದಿದೆ. ನೋಡಿದರೆ ಆ ಮನೆಯಲ್ಲಿ ಜೀವ ಬದಲಾಗಿದ್ದಾನೆ!
ಆಂಟಿ ಅಂಕಲ್ ಕಥೆ ಅಂತ ಜನ ಬೈಯ್ಯುತ್ತಿದ್ದ ಅಮೃತಧಾರೆ ನಂಬರ್ 1 ಆಗಿದ್ದು ಹೇಗೆ? ಇದು ಅಮ್ಮಮ್ಮನ ಕೊಡುಗೆಯಾ?
ಅಂದರೆ ಜೀವ ನಿಜಕ್ಕೂ ಬದಲಾಗಿದ್ದಾನೆ. ಜೀವ ಪಾತ್ರಧಾರಿಯೇ ಬದಲಾಗಿ ಬಿಟ್ಟಿದ್ದಾನೆ. 'ಇದು ಹಳೇ ಜೀವ ಅಲ್ಲ ಭಾವ, ಹೊಸ ಜೀವ' ಅನ್ನೋ ಮಾತನ್ನು ಬದಲಾದ ಪಾತ್ರಧಾರಿ ಹೇಳುತ್ತಾನೆ. ಇಂಥದ್ದೊಂದು ಅನಿರೀಕ್ಷಿತ ನಿರೀಕ್ಷಿಸಿದ ಮಂದಿ ಹೊಸ ಜೀವನನ್ನು ನೋಡಿ ಶಾಕ್ ಆಗಿದ್ದಾರೆ. ಈ ಹಿಂದೆ ಈ ಪಾತ್ರವನ್ನು ನಿರ್ವಹಿಸುತ್ತಿದ್ದವರು ಶಶಿ ಹೆಗಡೆ. ಅವರ ಪತ್ನಿ ಲಾವಣ್ಯ ಸಹ ಸುಧಾರಾಣಿ ನಟನೆಯ 'ಶ್ರೀರಸ್ತು ಶುಭಮಸ್ತು' ನಲ್ಲಿ ಲೀಡ್ ಪಾತ್ರದಲ್ಲಿದ್ದಾರೆ. ಶಶಿ ಹೆಗಡೆ ರೀಲ್ಸ್ ಮಾಡೋದ್ರಲ್ಲೂ ಮುಂದಿದ್ದರು. ಆದರೆ ಇತ್ತೀಚೆಗೆ ಅವರ ರೀಲ್ಸ್‌ಗಳೂ ಅಷ್ಟಾಗಿ ಕಾಣುತ್ತಿಲ್ಲ. ಇವರೆಲ್ಲಿ ಹೋದರು ಅನ್ನೋದು ಅಮೃತಧಾರೆ ಫ್ಯಾನ್ಸ್ ಪ್ರಶ್ನೆ. ಹೊಸ ಪಾತ್ರಧಾರಿಯನ್ನು ಜನ ಒಪ್ಪಿಕೊಳ್ತಿಲ್ಲ.
ಸೀರಿಯಲ್ ಪ್ರೋಮೋದಲ್ಲಿ ಶ್ರುತಿ, ಸಪ್ತಮಿ ಗೌಡ - ರೀಲ್ಸ್ ರಾಣಿ ಮಧು ಭೈರಪ್ಪ ನೋಡ್ತಿದ್ದಂತೆ ವೀಕ್ಷಕರು ಕೆಂಡಾಮಂಡಲ
ಹೀಗೆ ಜನ ಒಂದು ಕಡೆ ಜೀವ ಪಾತ್ರಧಾರಿ ಬದಲಾದ ಶಾಕ್‌ನಿಂದ ಚೇತರಿಸಿಕೊಳ್ಳುವ ಮೊದಲೇ ಮತ್ತೊಂದು ಶಾಕ್ ಎದುರಾಗಿದೆ. ಗೌತಮ್ ದಿವಾನ್ ಪರಮ ಶತ್ರು ರಾಜೇಂದ್ರ ಭೂಪತಿ ಜೀವನ್ ಮನೆಯ ಗೃಹಪ್ರವೇಶದಲ್ಲಿ ಕಾಣಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ, ಆತನನ್ನು ಹೊಸ ಜೀವ ಹಗ್ ನೀಡಿ ಸ್ವಾಗತಿಸುತ್ತಾನೆ. ಅಂದರೆ ಈ ಹಿಂದೆ ಗೌತಮ್ ತಂಗಿಯ ಹಿಂದೆ ಬಿದ್ದದ್ದ ರಾಜೇಂದ್ರ ಇದೀಗ ಭೂಮಿಕಾ ತಮ್ಮನ ಹಿಂದೆ ಬಿದ್ದಿದ್ದಾನೆ. ಅಲ್ಲಿಗೆ ಇನ್ನೊಂದು ರೋಚಕ ಎಪಿಸೋಡ್ ಮುಂದಿವೆ. ಅಂದಹಾಗೆ ಜೀವ ಪಾತ್ರಕ್ಕೆ ಬಂದಿರೋ ಹೊಸ ಪಾತ್ರಧಾರಿ ಬಗ್ಗೆ ಇನ್ನಷ್ಟೇ ವಿವರ ತಿಳಿದುಬರಬೇಕಿದೆ.