ಕಾಲ ಎಷ್ಟೇ ಮುಂದೆ ಹೋಗ್ಲಿ, ಇಸ್ರೋ ಚಂದ್ರನಲ್ಲಿಗೆ ಎಷ್ಟೇ ರಾಕೆಟ್ ಹಾರಿ ಬಿಡಲಿ, ನಮ್ ಸೀರಿಯಲ್‌ಗಳು ಪಾತ್ರ ಗಂಡನ ಪಾದ ಪೂಜೆ ಮಾಡ್ತಾ ಅದರಲ್ಲೇ ಧನ್ಯತೆ ಅನುಭವಿಸೋ ಹೆಣ್ಣನ್ನಷ್ಟೇ ತೋರಿಸ್ತವೆ. ಅಂದ್ರೆ ಸೀರಿಯಲ್ ನೋಡೋ ನಮ್ ಹೆಣ್ಮಕ್ಕಳು ಆ ಲೆವೆಲ್‌ಗೆ ಹಿಂದುಳಿದಿದ್ದಾರ? ಸೀರಿಯಲ್ ಟೀಮ್‌ಗಳು ನಮ್ಮ ಮಿಡಲ್ ಕ್ಲಾಸ್ ಮಹಿಳೆಯರನ್ನು ತಪ್ಪಾಗಿ ಜಡ್ಜ್ ಮಾಡ್ತಿದ್ದಾರ?
ಸೀರಿಯಲ್ ಅಂದಾಕ್ಷಣ ಒಂದಿಷ್ಟು ಜನ ಮೂಗು ಮುರಿತಾರೆ. ಆದರೆ ಮನೆಯಲ್ಲಿರೋ ಹೆಣ್ ಮಕ್ಕಳಿಗೆ ಅಲ್ಪ ಸ್ವಲ್ಪ ಮನರಂಜನೆ ಸಿಗೋದೇ ಸೀರಿಯಲ್‌ಗಳಿಂದ. ಹೀಗಾಗಿ ಅವರು ಅನಿವಾರ್ಯವಾಗಿ ಸೀರಿಯಲ್ ನೋಡ್ತಾರೆ. ಆದರೆ ಅಂಥಾ ಹೆಣ್ ಮಕ್ಕಳ ಮನಸ್ಥಿತಿಯನ್ನು ಅಂಡರ್ ಎಸ್ಟಿಮೇಟ್ ಮಾಡ್ಕೊಂಡು ಅವರ ಮನಸ್ಸಲ್ಲಿ ಮೂಢನಂಬಿಕೆ ಹೆಚ್ಚಿಸೋ ಕೆಲಸವನ್ನು ಸೀರಿಯಲ್‌ಗಳು ಮಾಡುತ್ತಿವೆ ಅನ್ನೋದು ಸುಳ್ಳಲ್ಲ. ಭೀಮನ ಅಮವಾಸ್ಯೆ ಹಬ್ಬ. ಯಾವುದೋ ಪುರಾಣದ ಕತೆಯಲ್ಲಿ ಭೀಮನ ಅಮಾವಾಸ್ಯೆ ದಿನ ಹಿಡಿಂಬೆ ಗಂಡನ ಪಾದ ಪೂಜೆ ಮಾಡಿದಳು ಅನ್ನೋ ಉಲ್ಲೇಖ ಇತ್ತಂತೆ. ಅದನ್ನ ಸೀರಿಯಲ್‌ಗಳಲ್ಲಿ ಮತ್ತೆ ಮತ್ತೆ ತೋರಿಸುತ್ತಲೇ ಬರುತ್ತಿವೆ. ಇನ್ನೊಂದು ಕಡೆ ಶಿವ ಪಾರ್ವತಿ ಕಥೆಯನ್ನೂ ಲಿಂಕ್ ಮಾಡಲಾಗುತ್ತಿದೆ. ಮನೆಯಲ್ಲಿ ಗಂಡನ ಜೊತೆ ಜಗಳ ಆಡಿಕೊಂಡೋ, ಕಾಲೆಳೆದುಕೊಂಡೋ ತನ್ನ ಪಾಡಿಗೆ ತಾನಿದ್ದ ಗೃಹಿಣಿ ಸೀರಿಯಲ್ ಪ್ರಭಾವದಿಂದ ಗಂಡನಿಗೆ ಪಾದ ಪೂಜೆ ಮಾಡ್ತೀನಿ ಅಂತ ಹೊರಡ್ತಾಳೆ. ನಿನ್ನೆ ತನಕ ಹೆಂಡತಿ ಸರಿ ಇದ್ದಳಲ್ಲಾ, ಈಗ ಇದ್ದಕ್ಕಿದ್ದಂತೆ ಏನಾಯ್ತಪ್ಪ ಅಂತ ಬಾಯ್ ಬಾಯ್ ಬಡ್ಕೊಳ್ಳೋ ಸರದಿ ಬಡಪಾಯಿ ಗಂಡನದು. ಈ ಸೀರಿಯಲ್‌ಗಳು ಮಾಡುವ ಕರ್ಮಕ್ಕೆ ನಿತ್ಯ ಕಾದಾಡೋ ಹೆಂಡತಿಯಿಂದ ಅವನು ಕಾಲು ತೊಳೆಸಿಕೊಳ್ಳಬೇಕಿದೆ.
ಹಾಗೆ ನೋಡಿದರೆ ಜೀ ಕನ್ನಡದ ಸೀರಿಯಲ್‌ಗಳು ಹೆಚ್ಚು ಪ್ರೋಗ್ರೆಸ್ಸಿವ್ ಅನಿಸುತ್ತವೆ. ಅದರಲ್ಲಿ ಹೆಣ್ಮಕ್ಕಳು ಇಂಥಾ ಆಚರಣೆಯನ್ನೂ ಡಿಫರೆಂಟಾಗಿ ಮಾಡೋ ತರ ಐಡಿಯಾ ಮಾಡ್ತಾರೆ. ಕಳೆದ ಬಾರಿ ಈ ಹಬ್ಬಕ್ಕೆ ಗಟ್ಟಿಮೇಳ ಸೀರಿಯಲ್‌ನಲ್ಲಿ ಮನೆ ಗಂಡುಮಕ್ಕಳೇ ತಮ್ಮ ಶ್ರೇಯಸ್ಸಿಗೆ ಶ್ರಮಿಸೋ ಪತ್ನಿಗೆ ಆರತಿ ಬೆಳಗಿ ಪೂಜಿಸೋ ಸೀನ್ ಇತ್ತು. ಬೇರೆ ಸೀರಿಯಲ್ ಮೈಂಡ್‌ಗಳು ಅಂದುಕೊಳ್ಳುವಂತೆ ಇಂಥಾ ಸೀನ್‌ನಿಂದ ಆ ಸೀರಿಯಲ್‌ನ ಟಿಆರ್‌ಪಿ ಇದ್ದಕ್ಕಿದ್ದ ಹಾಗೆ ಜರ್ರನೆ ಇಳಿದೇನೋ ಹೋಗಿಲ್ಲ. ಬದಲಿಗೆ ಇಂಥಾ ಸೀನ್‌ಗಳು ಬಂದಾಗ ಜನ ಹೆಚ್ಚೆಚ್ಚು ನೋಡಿ ನಾವು ಪ್ರಗತಿ ಕಡೆ ಇದ್ದೀವಿ, ಮೂಢನಂಬಿಕೆ ಕಡೆಗಲ್ಲ ಅನ್ನೋದನ್ನು ಹೇಳುತ್ತಲೇ ಬಂದರು. ಆದರೆ ದಪ್ಪ ಚರ್ಮದ ಉಳಿದ ಸೀರಿಯಲ್ ಟೀಮಿಗೆ ಇದು ಅರ್ಥವಾದ ಹಾಗಿಲ್ಲ. ಅವರಿನ್ನೂ ನಾವು ಜನರಿಗೆ ಏನು ಬೇಕೋ ಅದನ್ನೇ ಕೊಡ್ತೀವಿ, ಟಿಆರ್‌ಪಿ ಹೆಚ್ಚು ಮಾಡ್ಕೊಳ್ತೀವಿ ಅಂತ ಅದದೇ ಮೂಢ ಆಚರಣೆಗಳನ್ನು ಮುಂದುವರಿಸಿದ್ದಾರೆ.
Bhagyalakshmi: ಸೀರಿಯಲ್ ಪ್ರೋಮೋ ನೋಡಿ ತಮ್ಮ ಕಥೆ, ವ್ಯಥೆ ಬಿಚ್ಚಿಟ್ಟ ಪ್ರೇಕ್ಷಕರು!
ಅಷ್ಟಕ್ಕೂ ಗಂಡನ ಪಾದಕ್ಕೆ ಹೆಂಡತಿ ಪೂಜೆ ಮಾಡೋ ಆಚರಣೆ ನಮ್ಮ ವೇದಗಳಲ್ಲಿ ಕಾಣಸಿಗೋದಿಲ್ಲ. ಅಲ್ಲೆಲ್ಲ ಗಂಡು ಹೆಣ್ಣು ಸಮಾನರಾಗಿಯೇ ಇದ್ದಾರೆ. ಅಫ್‌ಕೋರ್ಸ್ ಗಂಡನ ಕಾಲಿಗೆ ನಮಸ್ಕಾರ ಮಾಡು ಅಂತ ಶುದ್ಧ ಭಾರತೀಯ ಪರಂಪರೆ ಹೇಳೋದಿಲ್ಲ. ಬದಲಿಗೆ ಆಮೇಲೆ ಬಂದ ಪುರಾಣಗಳು, ಒಂದಿಷ್ಟು ಶಾಸ್ತ್ರಗಳು ಮಾತ್ರ ಪುರುಷತ್ವವನ್ನು ಎತ್ತಿ ಹಿಡಿಯಲಿಕ್ಕೆ ಇಂಥವನ್ನು ತಗೊಂಡು ಬಂದವು. ನಮ್ ಹೆಣ್ಮಕ್ಕಳೂ ಅತೀ ಒಳ್ಳೆಯವರೆನಸಿಕೊಳ್ಳಲು ಹೋಗಿ ಗಂಡನ ಕಾಲು ತೊಳೆಯೋ ತೆವಲಿಗೆ ಬಿದ್ದರು. ಹಾಗೆ ನೋಡಿದರೆ ನಮ್ಮ ಪುರಾಣಗಳಲ್ಲಿ ದ್ರೌಪದಿ ಎಂಥಾ ಪ್ರಬಲ ಹೆಣ್ಣುಮಗಳು, ತನ್ನ ಮೇಲಾದ ಪುರುಷ ದೌರ್ಜನ್ಯಕ್ಕೆ ಆಕೆ ಯಾವ ರೀತಿ ಪ್ರತಿಕಾರ ತೀರಿಸಿಕೊಂಡಳು ಅನ್ನೋದು ಯಾಕೆ ನಮಗೆ, ನಮ್ಮ ಸೀರಿಯಲ್‌ಗಳಿಗೆ ಮಾಡೆಲ್ ಆಗಲ್ಲ.. ಗಾರ್ಗಿ, ಮೈತ್ರೇಯಿಯಂಥಾ ಜ್ಞಾನಿ ಹೆಣ್ಣುಮಕ್ಕಳ ಪರಂಪರೆಯನ್ನು ನಾವ್ಯಾಕೆ ಮುಂದುವರಿಸೋದಿಲ್ಲ. ಶಿವ ಪಾರ್ವತಿಯರನ್ನೇ ತೆಗೆದುಕೊಂಡರೆ ಶಿವನ ಎದೆ ಮೇಲೆ ನರ್ತಿಸುವ ಶಕ್ತಿಶಾಲಿ ಮಹಾಕಾಳಿ ಮಾತೆ ನಮ್ ಸೀರಿಯಲ್‌ನವರಿಗೆ ಯಾಕೆ ಕಾಣಿಸೋದಿಲ್ಲ..
ದುರಂತ ನೋಡಿ, ಒಂದು ಕಡೆ ನಮ್ಮ ಜನ ಚಂದ್ರನಲ್ಲಿಗೆ ಗಗನ ನೌಕೆ ಕಳಿಸುವಷ್ಟು ಜ್ಞಾನಿಗಳಾಗಿದ್ದಾರೆ. ಅದನ್ನು ಒಂದು ಸೀರಿಯಲ್‌ನಲ್ಲಾದರೂ ತೋರಿಸಿದ್ದಾರ ಅಂದರೆ ಉತ್ತರ ಇಲ್ಲ. ಯಾಕೆ ಚಂದ್ರಯಾನ ಹೆಣ್ಮಕ್ಕಳಿಗೆ ಇಂಟೆರೆಸ್ಟ್ ಅನಿಸಲ್ಲ ಅಂತ ಸೀರಿಯಲ್‌ನವರು ಭಾವಿಸ್ತಾರೆ. ನಮ್ಮ ಹೆಣ್ಮಕ್ಕಳನ್ನು ಬರೀ ಇಂಥಾ ಗೊಡ್ಡು ಸಂಪ್ರದಾಯಗಳಿಗೆ ಕಟ್ಟಿ ಹಾಕ್ತಾರೆ.. ಅದನ್ನು ಮಾಡಿದ್ರೆ ಮಾತ್ರ ಶ್ರೇಷ್ಠ ಅನ್ನೋ ಅಬದ್ಧವನ್ನು ಅವರ ತಲೆಗೆ ಸೆಗಣಿ ತುಂಬಿದ ಹಾಗೆ ತುಂಬುತ್ತಾರೆ.. ಸೀರಿಯಲ್‌ನವ್ರು ಇನ್ನಾದರೂ ಕೊಂಚ ಪ್ರಜ್ಞಾವಂತಿಕೆಯಿಂದ ಯೋಚಿಸ್ತಾರ..
ನಡು ವಯಸ್ಸಿನ ಮಹಿಳೆಯರಿಗೆ ದುಡಿಯೋ ಪಾಠ ಹೇಳಿ ಕೊಟ್ಟ ಶ್ರೀ ರಸ್ತು, ಶುಭ ಮಸ್ತು ಸೀರಿಯಲ್