ಸಿಹಿಯನ್ನು ಸೀತಾ ಹೆತ್ತಿದ್ದರೂ ಆಕೆ ನಿಜವಾದ ತಾಯಿಯಲ್ಲ. ಅವಳು ಬಾಡಿಗೆ ತಾಯಿ. ಇದೀಗ ಸೀರಿಯಲ್ನಿಂದಾಗಿ ಮತ್ತೆ ಸರೋಗಸಿ ಮದರ್ ವಿಷಯ ಮುನ್ನೆಲೆಗೆ ಬಂದಿದೆ.
ಸೀತಾ ಮತ್ತು ಸಿಹಿಯ ಸಂಬಂಧದ ಬಗ್ಗೆ ಇದೀಗ ಸೀರಿಯಲ್ ಪ್ರೇಮಿಗಳಲ್ಲಿ ಆತಂಕ ಶುರುವಾಗಿದೆ. ಸೀತಾ ಮತ್ತು ಸಿಹಿಗೂ ಇರುವ ಸಂಬಂಧ ತಾಯಿ-ಮಗಳದ್ದೇ ಆಗಿದ್ದರೂ ಅವರು ಕಾನೂನಿನ ದೃಷ್ಟಿಯಲ್ಲಿ ತಾಯಿ-ಮಗಳು ಅಲ್ಲ. ಸೀತಾ ತನ್ನ ಗರ್ಭದಲ್ಲಿ ಈ ಮಗುವನ್ನು ಇಟ್ಟು ಒಂಬತ್ತು ತಿಂಗಳು ಹೊತ್ತು ಹೆತ್ತಿದ್ದರೂ ಆಕೆ ಬಾಡಿಗೆ ತಾಯಿ ಮಾತ್ರ! ಎಂಥ ವಿಪರ್ಯಾಸ ಅಲ್ಲವೆ? ಅಷ್ಟಕ್ಕೂ ಬಾಡಿಗೆ ತಾಯ್ತನ ಅಂದರೆ ಇಂಗ್ಲಿಷ್ನಲ್ಲಿ ಸರೋಗಸಿ ಮದರ್ ಎನ್ನುತ್ತಾರೆ. ಇದೇನು ಹೊಸ ಕಲ್ಪನೆಯೂ ಅಲ್ಲ, ಬಾಡಿಗೆ ತಾಯ್ತನ ಎನ್ನುವುದು ಇಂದು-ನಿನ್ನೆಯದ್ದೂ ಅಲ್ಲ. ಎಷ್ಟೋ ಮಂದಿ ಈ ಪ್ರಕ್ರಿಯೆಗೆ ಒಳಗಾಗಿದ್ದಾರೆ. ಸೆಲೆಬ್ರಿಟಿಗಳು ಮಗು ಹೆತ್ತರೆ ತಮ್ಮ ದೇಹ ಸೌಂದರ್ಯ ಎಲ್ಲಿ ಕುಗ್ಗಿ ಹೋಗುತ್ತದೆಯೋ ಎನ್ನುವ ಕಾರಣಕ್ಕೆ ಈ ಪ್ರಕ್ರಿಯೆಯ ಮೊರೆ ಹೋದರೆ, ಹಲವು ಪ್ರಕರಣಗಳಲ್ಲಿ ಗಂಡ ಅಥವಾ ಹೆಂಡತಿ ಮಗುವನ್ನು ಹೆರಲು ಶಕ್ಯ ಆಗಿಲ್ಲದಿದ್ದರೆ ಈ ಪ್ರಕ್ರಿಯೆಯ ಮೊರೆ ಹೋಗುತ್ತಾರೆ.
ಅಷ್ಟಕ್ಕೂ ಬಾಡಿಗೆ ತಾಯ್ತನ ಅಥವಾ ಸರೋಗಸಿ ಎನ್ನುವುದು ಕೃತಕ ಪುನರುತ್ಪಾದನಾ ವಿಧಾನ. ಮಕ್ಕಳಿಲ್ಲದ ದಂಪತಿಗಾಗಿ ಬೇರೊಬ್ಬ ಮಹಿಳೆ ಗರ್ಭ ಧರಿಸಿ ಮಗುವನ್ನು ಹೆತ್ತು ಕೊಡುವುದು. ಇದು ಹೆಚ್ಚಾಗಿ ಆಗಲು ಕಾರಣ, ಮಹಿಳೆಯರಲ್ಲಿ ಅಂಡೋತ್ಪಾದನೆ ಸ್ಥಗಿತವಾದಾಗ ಅಥವಾ ಗರ್ಭಕೋಶದ ತೊಂದರೆ ಇದ್ದಾಗ ಗರ್ಭಧರಿಸುವ ಸಾಧ್ಯತೆ ಬಹಳಷ್ಟು ಕಡಿಮೆ ಇದ್ದ ಸಂದರ್ಭದಲ್ಲಿ. ಆ ಸಮಯದಲ್ಲಿ ಪುರುಷರ ವೀರ್ಯಾಣು ಮತ್ತು ಆತನ ಪತ್ನಿಯ ಅಂಡಾಣುಗಳನ್ನು ಸಂಗ್ರಹಿಸಿ ಅದನ್ನು ಬೇರೊಬ್ಬ ಮಹಿಳೆಯ ಗರ್ಭದಲ್ಲಿ ಇರಿಸಲಾಗುತ್ತದೆ. ಅಂದರೆ ಮೂರನೆಯ ಮಹಿಳೆ ತನ್ನ ಗರ್ಭವನ್ನು ಬಾಡಿಗೆಗೆ ಕೊಟ್ಟಂತೆ. ಬೇರೆಯ ಅಂಡಾಣು-ವೀರ್ಯಾಣುವನ್ನು ತನ್ನ ಗರ್ಭದಲ್ಲಿ ಇರಿಸಿಕೊಂಡು ಆಕೆ ಗರ್ಭವತಿಯಾಗುತ್ತಾಳೆ. ಇನ್ನೊಂದು ವಿಧದಲ್ಲಿ ಪುರುಷಣ ವೀರ್ಯಾಣುವಿನ ಜೊತೆ ಮೂರನೆಯ ಮಹಿಳೆಯ ಅಂಡಾಣುವನ್ನೇ ಸಂಯೋಜಿಸಿ ಆಕೆಯ ಗರ್ಭದಲ್ಲಿ ಇರಿಸಿ ಮಗುವನ್ನು ಹೆರುವಂತೆ ಮಾಡಲಾಗುತ್ತದೆ.
undefined
ಪ್ರಿಯಂಗೆ ಕ್ಯಾನ್ಸರ್, ಸೀತಂಗೆ ಮಗಳು ಕೈತಪ್ಪು ಭಯ: ಆದ್ರೂ ಹೀಗೆ ಕುಣಿಯೋದಾ ಕೇಳಿದ ಫ್ಯಾನ್ಸ್!
ಇದಕ್ಕೆ ಹತ್ತಾರು ಕಾನೂನು ಪ್ರಕ್ರಿಯೆಗಳು ಇವೆ. ಪುರುಷರ ವೀರ್ಯವನ್ನು ಬಾಡಿಗೆ ತಾಯಿಯ ಗರ್ಭಕೋಶದ/ಯೋನಿಯ ಒಳಕ್ಕೆ ಕೃತಕವಾಗಿ ಹಾಯಿಸಲಾಗುವುದು. ಇಲ್ಲವೇ ಬೇರೊಬ್ಬರ ವೀರ್ಯ ಮತ್ತು ಅಂಡಾಣುವನ್ನು ಈಕೆಯ ಗರ್ಭದಲ್ಲಿ ಇರಿಸಲಾಗುವುದು. ಪ್ರಕ್ರಿಯೆ ಏನೇ ಇದ್ದರೂ ಮಗು ಮಹಿಳೆಯ ಗರ್ಭದಲ್ಲಿ ಬೆಳೆಯುತ್ತದೆ. ಆದರೆ ಆ ಮಗುವಿಗೆ ಆಕೆ ತಾಯಿಯಲ್ಲ. ಬಾಡಿಗೆ ತಾಯಿಯಷ್ಟೇ. ಇದೊಂದು ರೀತಿಯಲ್ಲಿ ಕೇಳಲು ನೋವು ಉಂಟು ಮಾಡುವ ಸಂಗತಿಯೂ ಆಗಿರುತ್ತದೆ. ಮಗುವನ್ನು ಒಂಬತ್ತು ತಿಂಗಳು ಹೊತ್ತು-ಹೆತ್ತಾಕೆ ಆ ಮಗುವನ್ನು ಅದರ ಪಾಲಕರಿಗೆ ವಾಪಸ್ ನೀಡುವುದು ನೆನೆಸಿಕೊಂಡರೆ ಕೆಲವು ಮಹಿಳೆಯರಿಗೆ ಇದು ತುಂಬಾ ನೋವಿನ ಸಂಗತಿಯೂ ಆಗಿರಲಿಕ್ಕೆ ಸಾಕು. ಅದರೆ ಹಲವಾರು ರೀತಿಯ ಷರತ್ತುಗಳ ಜೊತೆಗೇ ಈ ಪ್ರಕ್ರಿಯೆಗೆ ಮಹಿಳೆಯರು ಮುಂದಾಗುತ್ತಾರೆ.
ಆದರೆ ಯಾವುದೇ ಕಾರಣಕ್ಕೆ ಮಗುವನ್ನು ಹೆತ್ತ ಮಹಿಳೆ ಆ ಮಗುವನ್ನು ತನ್ನ ಮಗು ಎಂದು ಹೇಳುವುದು ಕಾನೂನು ಬಾಹಿರ. ಅವಳು ಒಮ್ಮೆ ಮಗುವನ್ನು ಹೆತ್ತ ಮೇಲೆ ಆಕೆಗೂ ಮಗುವಿಗೂ ಸಂಬಂಧ ಇರುವುದಿಲ್ಲ. ವೀರ್ಯ ಅಥವಾ ಅಂಡಾಣು ದಾನ ಮಾಡಿದವರಿಗೆ ಮಕ್ಕಳ ಮೇಲೆ ಹಕ್ಕಿಲ್ಲ ಎಂದು ಹಲವು ಪ್ರಕರಣಗಳಲ್ಲಿ ವಿವಿಧ ಕೋರ್ಟ್ಗಳು ತೀರ್ಪು ಕೂಡ ಕೊಟ್ಟಿವೆ. ಅದಕ್ಕೆ ಏನಿದ್ದರೂ ವೀರ್ಯಾಣು ದಾನ ಮಾಡಿದ ಮತ್ತು ಆತನ ಪತ್ನಿಯ ಮೇಲಷ್ಟೇ ಹಕ್ಕು ಇರುವುದು. ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಹೆರುವವರ ಸಂಖ್ಯೆಯೂ ಹೆಚ್ಚುತ್ತಿರುವ ಕಾರಣ ಈಚೆಗೆ ಕೇಂದ್ರ ಸರ್ಕಾರ 50 ವರ್ಷಗಳ ಕಾನೂನನ್ನು ಬದಲಿಸಿ ಅಂಥ ಅಮ್ಮಂದಿರಿಗೆ ಆರು ತಿಂಗಳ ರಜೆಯನ್ನೂ ಘೋಷಿಸಿದೆ. ಅದೇನೇ ಇದ್ದರೂ ಈಗ ಸೀರಿಯಲ್ ವಿಷಯಕ್ಕೆ ಬರುವುದಾದರೆ, ಕಾನೂನಿನ ಪ್ರಕಾರ ಸಿಹಿಗೆ ಸೀತಾ ಅಮ್ಮ ಅಲ್ಲವೇ ಅಲ್ಲ. ಆದರೆ ಮನಸ್ಸಿಗೆ? ಐದಾರು ವರ್ಷ ತನ್ನ ಬಳಿ ಇಟ್ಟುಕೊಂಡು ಮಗುವನ್ನು ಸಾಕಿದ್ದಾಳೆ ಆಕೆ, ಅದರಲ್ಲಿಯೂ ಅವಳದ್ದು ತಪ್ಪಿಲ್ಲ. ಮಗು ಹುಟ್ಟಿದ ಬಳಿಕ ಆಕೆಯ ಅಪ್ಪ-ಅಮ್ಮ ಸಂಪರ್ಕಕ್ಕೆ ಸಿಗಲೇ ಇಲ್ಲ. ಇದೇ ಕಾರಣಕ್ಕೆ ಅನಾಥಾಶ್ರಮದಲ್ಲಿ ಮಗುವನ್ನು ಬಿಡದೇ ತನ್ನ ಎಲ್ಲಾ ಆಸೆ-ಕಾಮನೆಗಳನ್ನು ಬದಿಗಿಟ್ಟು ಸೀತಾ ಸಿಹಿಯನ್ನು ತನ್ನ ಜೀವನದ ಅವಿಭಾಜ್ಯ ಅಂಗ ಮಾಡಿಕೊಂಡಿದ್ದಾಳೆ. ಆದರೆ ಆಕೆ ಈಗ ಬಾಡಿಗೆ ತಾಯಿ ಮಾತ್ರ!