
ಡ್ರೋನ್ ಪ್ರತಾಪ್ ಸದ್ಯ ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಷೋನ ಖುಷಿಯಲ್ಲಿದ್ದಾರೆ. ಕೆಲ ವಾರಗಳ ಹಿಂದಷ್ಟೇ ಡ್ರೋನ್ ಪ್ರತಾಪ್ ಇದೇ ರಿಯಾಲಿಟಿ ಷೋನ ವೇದಿಕೆಯ ಮೇಲೆ ಮತ್ತೋರ್ವ ಸ್ಪರ್ಧಿ ಗಗನಾ ಅವರಿಗೆ ತಾಳಿ ಕಟ್ಟಿದ್ದರು. ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ನಟಿ ರಚಿತಾ ರಾಮ್ ಅವರ ಸಮ್ಮುಖದಲ್ಲಿ ತಾಳಿ ಕಟ್ಟಲಾಗಿತ್ತು. ಮದುಮಗನ ಗೆಟಪ್‌ನಲ್ಲೇ ಬಂದು ಮದುವೆ ಮಾಡಿಕೊಂಡಿದ್ದರು. ಅಷ್ಟಕ್ಕೂ ಇದು ರವಿಚಂದ್ರನ್ ಅವರ ರಾಮಾಚಾರಿ ಸಿನಿಮಾದ ಮದುವೆ ಸೀನ್ ರಿಕ್ರೇಟ್ ಮಾಡಲಾಗಿತ್ತು. ಡ್ರೋನ್ ಪ್ರತಾಪ್ ಅವರ ರವಿಚಂದ್ರನ್ ಗೆಟಪ್‌ನಲ್ಲಿ ಮದುಮಗ ಆಗಿದ್ರೆ, ಮಾಲಾಶ್ರೀ ಗೆಟಪ್‌ನಲ್ಲಿ ಗಗನಾ ವಧುವಿನಂತೆ ಬಂದಿದ್ದರು. ಸಿನಿಮಾದಲ್ಲಿ ಥೇಟ್ ರವಿಚಂದ್ರನ್ ಅವರು ಪೆದ್ದನಂತೆ ಬಂದು ಮಾಲಾಶ್ರೀ ಕೊರಳಿಗೆ ತಾಳಿ ಕಟ್ಟಿದಂತೆಯೇ, ಪ್ರತಾಪ್ ಕೂಡ ಗಗನಾ ಕೊರಳಿಗೆ ತಾಳಿ ಕಟ್ಟಿ ಭೇಷ್ ಭೇಷ್ ಎನ್ನಿಸಿಕೊಂಡಿದ್ದರು.
ಆದರೆ, ಇದೀಗ ಗಗನಾ ಅವರಿಗಾಗಿ ಡ್ರೋನ್ ಪ್ರತಾಪ್ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಗಗನಾ ಅವರಿಗೆ ಸಿನಿಮಾದಲ್ಲಿ ಛಾನ್ಸ್ ಸಿಕ್ಕು ಆಕೆಯ ಆಸೆ ನೆರವೇರಲಿ ಎನ್ನುವ ಸಲುವಾಗಿ, ಹರಕೆ ಹೊತ್ತುಕೊಂಡು ಅದನ್ನು ತೀರಿಸಿದ್ದಾರೆ ಡ್ರೋನ್ ಪ್ರತಾಪ್. ತಣ್ಣೀರು ಸುರಿದುಕೊಂಡು, ಉರುಳುಸೇವೆ ಮಾಡಿ, ನೆಲದಲ್ಲಿ ಊಟ ಮಾಡುವ ಮೂಲಕ ಹರಕೆ ತೀರಿಸಿದ್ದಾರೆ. ಭರ್ಜರಿ ಬ್ಯಾಚುಲರ್ಸ್ ಪಾರ್ಟಿಯಲ್ಲಿ ಇದನ್ನು ನೋಡಿ ಗಗನಾ ಗಳಗಳನೇ ಅತ್ತುಬಿಟ್ಟರು. ಗಗನಾ ಅವರಿಗೆ ಯಾರೋ, ಆದರೂ ಬೆಸ್ಟ್ ಫ್ರೆಂಡ್ ಆಗಿ ಹೀಗೆ ಮಾಡಿದ್ದಾರೆ ಎಂದರೆ ಅದು ಅವರಲ್ಲಿ ಇರುವ ಒಳ್ಳೆಯತನವನ್ನು ತೋರಿಸುತ್ತದೆ ಎಂದಿದ್ದಾರೆ.
ಬೀದಿಗೆ ಬಂದ ಡ್ರೋನ್ ಪ್ರತಾಪ್- ಎಲ್ಲವೂ ತಾಳಿ ಕಟ್ಟಿರೋ ಗಗನಾಗೋಸ್ಕರ! ಫ್ಯಾನ್ಸ್ ಶಾಕ್- ಅಷ್ಟಕ್ಕೂ ಆಗಿದ್ದೇನು?
ಈ ಹಿಂದೆ, ಡ್ರೋನ್ ಪ್ರತಾಪ್ ಗಗನಾಗೋಸ್ಕರ ಬೀದಿಗೆ ಬಂದು ವ್ಯಾಪಾರ ಮಾಡಿದ್ದರು. ಬೀದಿಗೆ ಬಂದು ಭರ್ಜರಿ ಬ್ಯಾಚುಲರ್ಸ್ನ ಬ್ಯಾಗ್ ಅನ್ನು ಮಾರಾಟ ಮಾಡಿದ್ದರು. ಜೊತೆಗೆ ಬಟ್ಟೆ ಅಂಗಡಿಯಲ್ಲಿಯೂ ಕೆಲಸ ಮಾಡಿದ್ದರು. ಬಳೆ, ಕಿವಿಯೋಲೆಯನ್ನೂ ಮಾರಿದ್ದಾರೆ ಡ್ರೋನ್ ಪ್ರತಾಪ್‌ರನ್ನು ನೋಡಿ ಹಲವರಿಗೆ ಅಚ್ಚರಿಯಾಗಿದೆ. ಬಿಗ್ಬಾಸ್ನ ರನ್ನರ್ ಅಪ್ಗೆ ಇದೇನಾಗೋಯ್ತು ಎಂದು ಬಹುತೇಕ ಮಂದಿ ಅಚ್ಚರಿಯಿಂದ ನೋಡಿದ್ದರು. ಇನ್ನೇನಾದರೂ ಎಡವಟ್ಟು ಮಾಡಿಕೊಂಡು ಬಿಟ್ರಾ ಎಂದು ಕೆಲವರು ಭಯಪಟ್ಟಿದ್ದರು. ಕೊನೆಗೆ ಪ್ರತಾಪ್ ಅವರೇ ಎಲ್ಲರನ್ನೂ ಕೂಲ್ ಮಾಡಿ, ನನಗೆ ಒಂದು ದಿನದ ಟಾಸ್ಕ್ ಇದೆ. ಭರ್ಜರಿ ಬ್ಯಾಚಲರ್ಸ್ ಪಾರ್ಟಿ ಷೋಗೋಸ್ಕರ ಒಂದು ದಿನದ ಮಟ್ಟಿಗೆ ಈ ಕೆಲಸ ಮಾಡುತ್ತಿದ್ದೇನೆ ಎಂದಿದ್ದರು. ಕೊನೆಗೆ ಕೆಲವರು ಅವುಗಳನ್ನು ಖರೀದಿ ಮಾಡಿದ್ದರು. ಇದನ್ನು ನೋಡಿ ಗಗನಾ ಫುಲ್ ಫಿದಾ ಆಗಿಬಿಟ್ಟಿದ್ದರು. ಇವರನ್ನು ಮದ್ವೆಯಾಗೋಳು ತುಂಬಾ ಲಕ್ಕಿ ಎಂದಿದ್ದರು.
ಅಷ್ಟಕ್ಕೂ, ಎರಡು ವರ್ಷಗಳ ಹಿಂದೆ ಡ್ರೋನ್ ಪ್ರತಾಪ್ ಸಕತ್ ಹವಾ ಸೃಷ್ಟಿ ಮಾಡಿದ್ದ ಯುವಕ. ಇದ್ದರೆ ಇಂಥ ಮಗ ಇರಬೇಕು, ನೀನೂ ಒಬ್ಬ ಇದ್ಯಾ... ದಂಡ-ಪಿಂಡ ಎಂದೆಲ್ಲಾ ಅದೆಷ್ಟೋ ಅಪ್ಪ-ಅಮ್ಮಂದಿರು ಡ್ರೋನ್ ಪ್ರತಾಪ್ನ ಭಾಷಣ ಕೇಳಿ ಮಕ್ಕಳಿಗೆ ಬೈದದ್ದೇ ಬೈದದ್ದು, ಪ್ರತಾಪ್ನ ಪ್ರತಾಪವನ್ನು ಹಾಡಿ ಹೊಗಳಿದ್ದೇ ಹೊಗಳಿದ್ದು. ವಿಶ್ವವಿದ್ಯಾಲಯಗಳಲ್ಲಿ, ಘಟಾನುಘಟಿಗಳ ಎದುರಿನಲ್ಲಿ, ಸೆಲೆಬ್ರಿಟಿಗಳ ಜೊತೆಯಲ್ಲಿ, ರಾಜಕಾರಣಿಗಳು, ಸಿನಿಮಾ ನಟರು... ಹೀಗೆ ಎಲ್ಲರ ಎದುರೂ ಭಾಷಣ ಮಾಡುತ್ತಾ, ತಾನು ಪಟ್ಟಿರುವ ಕಷ್ಟಗಳನ್ನೆಲ್ಲಾ ಕಣ್ಣಿಗೆ ಕಟ್ಟುವಂತೆ ಹೇಳುತ್ತಲೇ ಎಲ್ಲರ ಪ್ರೀತಿ, ವಿಶ್ವಾಸ ಗಳಿಸಿ ಭಲೆ ಭಲೆ ಎನ್ನಿಸಿಕೊಂಡವರು ಡ್ರೋನ್ ಪ್ರತಾಪ್. ಆದರೆ, ಅದೊಂದು ದಿನ ಪ್ರತಾಪ್ಗೆ ಗ್ರಹಗತಿಗಳೇ ಬದಲಾಗೋಯ್ತು. ಡ್ರೋನ್ ಮಾಡುವುದಾಗಿ ಹೇಳಿ ನಂಬಿಸಿದ್ದರಿಂದ ಹಿಡಿದು, ತಮ್ಮ ನೋವಿನ ಜೀವನದ ಬಗ್ಗೆ ಎಲ್ಲರ ಕಣ್ಣು ತೇವ ಮಾಡುವಂತೆ ಆಡಿದ ಮಾತುಗಳು ಎಲ್ಲವೂ ಹಸಿಹಸಿ ಸುಳ್ಳು ಎಂದು ಸುದ್ದಿಯಾಯಿತು. ಅಲ್ಲಿಂದ ಡ್ರೋನ್ ಪ್ರತಾಪ್ ವಿರುದ್ಧ ಗಂಭೀರ ಆರೋಪಗಳೇ ಹರಿದು ಬಂದವು. ಎಷ್ಟೋ ಮಂದಿ ಸುಳ್ಳು ಹೇಳಿ ತಮ್ಮಿಂದ ಹಣ ವಸೂಲಿ ಮಾಡಿದ್ದಾನೆ ಎನ್ನುವ ಆರೋಪಗಳೆಲ್ಲವೂ ಮಾಡಲು ಶುರು ಮಾಡಿದರು. ಕೊನೆಗೆ ದೂರು ದಾಖಲಾಗಿ, ಜೈಲು ಶಿಕ್ಷೆಯೂ ಆಯಿತು. ಇಷ್ಟೆಲ್ಲಾ ಕಾಂಟ್ರವರ್ಸಿ ಮಾಡಿಕೊಂಡಿದ್ದರಿಂದ ಬಿಗ್ಬಾಸ್ನಲ್ಲಿ ಆಫರ್ ಬಂದು, ಈಗ ಸೆಲೆಬ್ರಿಟಿ ಆಗಿದ್ದಾರೆ.
Drone Prathap ಭಾವಿ ಪತ್ನಿಯ ವೇದಿಕೆ ಮೇಲೆಯೇ ರಿವೀಲ್ ಮಾಡಿದ ಅಜ್ಜಿ: ಎಲ್ಲರೂ ಶಾಕ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.