ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಡ್ರೋನ್ ಪ್ರತಾಪ್ ಸುಳ್ಳು ಆಪಾದನೆ ಮಾಡಿರುವ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ಅಧಿಕಾರಿ ಹೇಳಿದ್ದೇನು?
ಡ್ರೋನ್ ಪ್ರತಾಪ್ ಹೆಸರನ್ನು ಕೇಳದವರೇ ಇಲ್ಲವೇನೋ. ಕೆಲ ವರ್ಷಗಳ ಹಿಂದೆ ಈ ಯುವಕನ ಹೆಸರು ಹೇಳಿಕೊಂಡು ತಮ್ಮ ಮನೆಯ ಮಕ್ಕಳನ್ನು ಬೈದವರು ಅದೆಷ್ಟೋ ಮಂದಿ. ಇವನನ್ನು ನೋಡಿ ಸ್ವಲ್ಪನಾದರೂ ಬುದ್ಧಿ ಕಲಿ ಎಂದು ಹೇಳಿಸಿಕೊಂಡ ಮಕ್ಕಳು ಇನ್ನೆಷ್ಟೋ. ಹೋದಲ್ಲಿ, ಬಂದಲ್ಲಿ ಈ ಯುವಕನ ಮಾತೇ ಮಾತು. ಪ್ರತಾಪ್ ಅವರ ಮಾತಿನ ಪ್ರತಾಪಕ್ಕೆ ಮೋಡಿಯಾಗದವೇ ಇಲ್ಲ. ವಿಭಿನ್ನ ಕ್ಷೇತ್ರಗಳ ನುರಿತರು, ಮೇಧಾವಿಗಳು ಎನಿಸಿಕೊಂಡವರೂ ಪ್ರತಾಪ್ ಮಾತಿಗೆ ತಲೆದೂಗಿದರು. ಎಷ್ಟೋ ವೇದಿಕೆಗಳಲ್ಲಿ ಇವರು ಮಾಡುತ್ತಿದ್ದ ಪ್ರೇರಣಾತ್ಮಕ ಭಾಷಣಕ್ಕೆ ತಲೆದೂಗಿದರು. ಕೇಳುವ ಪ್ರಶ್ನೆಗಳಿಗೆ ಅಷ್ಟೇ ಚೆನ್ನಾಗಿ ಉತ್ತರಿಸುವ ಮೇಧಾವಿ ಎನಿಸಿಕೊಂಡವರು ಡ್ರೋಣ್. ಡ್ರೋನ್ ತಯಾರಿಸಲು ತಾನು ಪಟ್ಟಿರುವ ಕಷ್ಟಗಳನ್ನು, ಬೀದಿ ಬದಿಯಲ್ಲಿ ಮಲಗಿ ತುತ್ತು ಅನ್ನಕ್ಕಾಗಿ ಪರದಾಡಿದ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಾ ಕೇಳುಗರ ಕಣ್ಣಲ್ಲಿ ನೀರು ತರಿಸಿದ್ದ ಪ್ರತಾಪ್ ನಿಜ ಬಣ್ಣ ಬದಲಾಗಲು ಹಲವಾರು ವರ್ಷಗಳೇ ಬೇಕಾದವು. ಕೊನೆಗೂ ಇಷ್ಟು ವರ್ಷ ಹೇಳಿದ್ದು, ಮಾತನಾಡಿದ್ದು, ತಮ್ಮ ಬಗ್ಗೆ ಹೇಳಿಕೊಂಡಿದ್ದು, ಡ್ರೋನ್ ತಯಾರಿಕೆ ಕುರಿತು ವಿವರಣೆ ನೀಡಿದ್ದು ಎಲ್ಲವೂ ಹಸಿಹಸಿ ಸುಳ್ಳು ಎಂದು ತಿಳಿದು ಹಲವು ಕೇಸ್ಗಳು ದಾಖಲಾದವು. ಸ್ವಲ್ಪ ಸಮಯ ತಲೆ ಮರೆಸಿಕೊಂಡು ಮತ್ತೆ ಈಗ ಬಿಗ್ಬಾಸ್ನಲ್ಲಿ ಕಾಣಿಸಿಕೊಂಡಿದ್ದಾರೆ ಪ್ರತಾಪ್.
ಈ ಸಂದರ್ಭದಲ್ಲಿ ಅವರು ದುಃಖಕರ ವಿಷಯವೊಂದನ್ನು ಹಂಚಿಕೊಂಡಿದ್ದು, ಅದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೆಲ ದಿನಗಳ ಹಿಂದೆ ತಮ್ಮ ನೋವಿನ ದಿನಗಳ ಬಗ್ಗೆ ಮಾತನಾಡಿದ್ದ ಪ್ರತಾಪ್, ಕೋವಿಡ್ ಸಮಯದಲ್ಲಿ ತಮಗೆ ಅಧಿಕಾರಿಗಳು ಹಿಂಸೆ ಕೊಟ್ಟಿರುವುದಾಗಿ ಹೇಳಿದ್ದರು. ಕೋವಿಡ್ ಸೋಂಕು ತಗುಲಿತ್ತು. ಕ್ವಾರಂಟೈನ್ ಮುಗಿಸಿ ಚಿಕ್ಕಮಗಳೂರಿಗೆ ಹೋದೆ. ಆದರೆ ನನ್ನ ಮೇಲೆ ಪ್ರಕರಣ ದಾಖಲು ಮಾಡಲಾಯ್ತು. ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ ಎಂದು ಚಿತ್ರಹಿಂಸೆ ಕೊಟ್ಟರು. ತಲೆ-ತಲೆಗೆ ಹೊಡೆದರು, ಕೆಟ್ಟದಾಗಿ ಮಾತನಾಡಿದರು ಎಂದು ಪ್ರತಾಪ್ ಹೇಳಿದ್ದರು. ಅದೇ ಸಮಯದಲ್ಲಿ ಅಪ್ಪ-ಅಮ್ಮನ ಬಳಿ ನನ್ನ ಬಗ್ಗೆ ಇಲ್ಲ-ಸಲ್ಲದ ದೂರುಗಳನ್ನು ಹೇಳಿದರು. ವಿಷವಿಟ್ಟು ಸಾಯಿಸಿ ಎಂದೆಲ್ಲ ಐಡಿಯಾ ಕೊಟ್ಟರು ಎಂದು ಹೇಳಿ ಬಿಕ್ಕಿ ಬಿಕ್ಕಿ ಅತ್ತಿದ್ದರು.
ಮಗು ಥರ ಇರ್ಬೆಡ್ವೋ... ಎಲ್ಲರೂ ಹಾಲು ಕುಡಿಸಿ ಹೋಗ್ತಾರೆ ಅಂತ ಡ್ರೋನ್ಗೆ ಹೇಳ್ತಾನೇ ಇದ್ದೇನೆ...
ಇದು ಭಾರಿ ವೈರಲ್ ಆಗುತ್ತಲೇ, ಇದೀಗ ಅವರ ವಿರುದ್ಧ ಕೇಸ್ ದಾಖಲಿಸುವುದಾಗಿ ಹೇಳಿದ್ದಾರೆ ಬಿಬಿಎಂಪಿ ನೋಡಲ್ ಅಧಿಕಾರಿ ಡಾ. ಪ್ರಯಾಗ್. ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಡಾ.ಪ್ರಯಾಗ್ ಅವರು, ನಾವು ಅವರಿಗೆ ಹಿಂಸೆ ಕೊಟ್ಟಿಲ್ಲ. ಬಿಗ್ಬಾಸ್ ಮನೆಯಲ್ಲಿ ಆತ ಹೇಳುತ್ತಿರುವುದೆಲ್ಲವೂ ಸತ್ಯಕ್ಕೆ ದೂರವಾದದ್ದು ಎಂದಿರುವ ಡಾ.ಪ್ರಯಾಗ್ ಅವರು, ಹಾಗೊಮ್ಮೆ ನಾವು ಹಿಂಸೆ ಕೊಟ್ಟಿದ್ದಿದ್ದರೆ ಆಗಲೇ ನಮ್ಮ ವಿರುದ್ಧ ದೂರು ನೀಡಬಹುದಿತ್ತು, ಈಗ ಸುಮ್ಮನೇ ಆರೋಪ ಮಾಡುತ್ತಿದ್ದಾರೆ ಎಂದರು.
ಅವರ ತಲೆಗೆ ಹೊಡೆಯುವುದಾಗಲಿ, ಹಿಂಸೆ ನೀಡುವುದಾಗಿ ಮಾಡಿಲ್ಲ. ಅವರ ತಂದೆಯ ಬಳಿಯೂ ಸೌಜನ್ಯದಿಂದಲೇ ವರ್ತಿಸಿದ್ದೆವು. ಕ್ವಾರಂಟೈನ್ ಟೈಮಿನಲ್ಲಿಯೂ ಆತ ಟಿವಿ ಚಾನೆಲ್ ಒಂದರಲ್ಲಿ ಸಂದರ್ಶನಕ್ಕೆ ಹೋಗಿದ್ದ ಕಾರಣ, ಆಗಿನ ರೂಲ್ಸ್ ಅನ್ವಯ ಎಫ್ಐಆರ್ ದಾಖಲಿದ್ದೆವು. ಆದರೆ ಹಿಂಸೆ ಕೊಟ್ಟಿಲ್ಲ. ಸರ್ಕಾರಿ ಅಧಿಕಾರಿಗಳಾಗಿರುವ ನಾವು ಹಾಗೆಲ್ಲ ಮಾಡುವಂತಿಲ್ಲ. ನಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡರೆ ಶಿಕ್ಷೆಯಾಗುತ್ತದೆ. ಕೆಲಸವೇ ಹೋಗುತ್ತದೆ. ಘಟನೆ ನಡೆದು 3 ವರ್ಷಗಳ ನಂತರ ಪ್ರತಾಪ್ ಸುಳ್ಳು ಆರೋಪ ಮಾಡುತ್ತಿದ್ದಾರೆ. ಆತ ಮಾಡಿರುವ ಆರೋಪಗಳನ್ನು ಬೇಕಿದ್ದರೆ ಸಾಬೀತು ಮಾಡಲಿ ಎಂದಿರುವ ಡಾ.ಪ್ರಯಾಗ್ ಅವರು, ಇನ್ನೊಂದರೆಡು ದಿನಗಳಲ್ಲಿ ಅಂದರೆ ಸೋಮವಾರ, ಮಂಗಳವಾರದ ಒಳಗೆ ತಾನು ಹೇಳಿದ್ದು ಸುಳ್ಳು ಎಂದು ಒಪ್ಪಿಕೊಳ್ಳದೇ ಹೋದರೆ, ಡ್ರೋನ್ ಪ್ರತಾಪ್ ವಿರುದ್ಧ ಮೊಕದ್ದಮೆ ದಾಖಲಿಸುವುದಾಗಿ ಹೇಳಿದ್ದಾರೆ.
ಬೆಂಕಿ ಇಲ್ಲದಿದ್ರೂ ಅದರ ನೆನಪಲ್ಲೇ ಬೆಂದಿದ್ದು ಯಾರು? ವರ್ತೂರು ಕಾಲೆಳೆದ ಕಿಚ್ಚ ಸುದೀಪ್!