ಡಾ.ಬ್ರೋ ಗಗನ್ ಇಂಡೋನೇಷಿಯಾ ಪ್ರವಾಸದಲ್ಲಿದ್ದು ಅಲ್ಲಿ 'ಎಂಚ ಉಲ್ಲರ್… ಎಂಚ ಉಲ್ಲರ್' ಎನ್ನುತ್ತಾ ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದ್ದಾರೆ. ಏನಿದು ವಿಷಯ?
ಸಾಧಿಸುವ ಛಲ ಇದ್ದರೆ ಸಾಕು, ಜೀವನವನ್ನು ಹೇಗೆ ಬೇಕಾದರೂ ಸಾಗಿಸಬಹುದು ಎನ್ನುವುದಕ್ಕೆ ಈ 22ರ ಹರೆಯದ ನಮಸ್ಕಾರ ದೇವ್ರು... ಖ್ಯಾತಿಯ ಡಾ. ಬ್ರೋನೇ ಸಾಕ್ಷಿ. ನಮಸ್ಕಾರ ದೇವ್ರು... ಎಂದರೆ ಸಾಕು. ಮೊದಲು ನೆನಪಾಗೋದೇ ಡಾ.ಬ್ರೋ (Dr. Bro). ಕನ್ನಡದ ಯುವಕನೊಬ್ಬ ಬಹುತೇಕ ಎಲ್ಲಾ ದೇಶಗಳನ್ನೂ ಸುತ್ತಿ ಅಲ್ಲಿನ ಪರಿಚಯ ಮಾಡುವ ಪರಿ ಅಂತೂ ಅತ್ಯದ್ಭುತವಾದದ್ದೆ. ಕನ್ನಡಿಗರಿಗೇ ಅಂಗೈನಲ್ಲೆ ಇಡೀ ಜಗತ್ತನ್ನೇ (World) ತೋರಿಸ್ತಿದ್ದಾರೆ ಡಾ.ಬ್ರೋ. ಯೂಟ್ಯೂಬ್ನಲ್ಲಿ ಅಲ್ಪ ಕಾಲದಲ್ಲಿಯೇ ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದಿರುವ ಡಾ.ಬ್ರೋ ವಿಶೇಷತೆ ಎಂದರೆ ಯಾವ ದೇಶಕ್ಕೆ ಹೋದರೂ ಅಲ್ಲಿ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಹೃದಯ ಗೆಲ್ಲುತ್ತಿದ್ದಾರೆ. ತಾಲಿಬಾನ್, ಪಾಕಿಸ್ತಾನ್ದಂಥ ರಾಷ್ಟ್ರಗಳಿಗೂ ಮುನ್ನುಗ್ಗಿ ಅಲ್ಲಿನವರನ್ನು ಮಾತನಾಡಿಸಿ ಅದರ ವಿಡಿಯೋ ಮಾಡುವ ಸಾಹಸ ಬಹುಶಃ ಸಾಮಾನ್ಯ ಜನರಿಗೆ ಕನಸಿನ ಮಾತೇ. ಇಂಥ ದುಸ್ಸಾಹಸಕ್ಕೂ ಕೈ ಹಾಕಿದವರು ಡಾ.ಬ್ರೋ.
ಡಾ. ಬ್ರೋ ನಿಜವಾದ ಹೆಸರು ಗಗನ್. ಅತ್ಯಂತ ಕಾಡು ಮನುಷ್ಯರಿಂದಲೇ ತುಂಬಿ ಹೋಗಿರುವ ದೇಶಗಳಿಗೂ ನುಗ್ಗಿದ್ದಿದೆ. ಉಗಾಂಡಾಕ್ಕೆ ಹೋಗಿ ಅಭಿಮಾನಿಗಳಿಗೆ ಆತಂಕವನ್ನೂ ಮೂಡಿಸಿದ್ದಾರೆ. ತಾಲೀಬಾನಿಗಳನ್ನೂ ಮಾತನಾಡಿಸಿ ಫ್ಯಾನ್ಸ್ಗೆ ಶಾಕ್ ನೀಡಿದ್ದಾರೆ. ದಯವಿಟ್ಟು ನಿಮ್ಮ ಪ್ರಾಣ ಪಣಕ್ಕಿಡಬೇಡಿ ಎಂದು ಅಭಿಮಾನಿಗಳು ಹೇಳುತ್ತಲೇ ಇರುತ್ತಾರೆ . ಆದರೂ ಧೈರ್ಯದಿಂದ ಗಗನ್ ಎಲ್ಲಾ ದೇಶಗಳಿಗೂ ಲಗ್ಗೆ ಇಡುತ್ತಿದ್ದಾರೆ.
ಚೀನಾದಲ್ಲಿ ರೋಬೋಗಳು ಏನೆಲ್ಲಾ ಮಾಡ್ತಿವೆ ಗೊತ್ತಾ? ಇಂಟರೆಸ್ಟಿಂಗ್ ಮಾಹಿತಿ ಹೇಳಿದ ಡಾ.ಬ್ರೋ
ಇದೀಗ ಇಂಡೋನೇಷಿಯಾಕ್ಕೆ ಪ್ರಯಾಣ ಬೆಳೆಸಿದ್ದು, ಅಲ್ಲಿ ತುಳು ಮಾತನಾಡಿ ಸಕತ್ ಸದ್ದು ಮಾಡಿದ್ದಾರೆ. ಅಂದಹಾಗೆ ಗಗನ್ ಅವರೇನೂ ತುಳುನಾಡಿನವರಲ್ಲ. ಬೆಂಗಳೂರಿನವರು. ಆದರೆ ತುಳುವಿನಲ್ಲಿ ಒಂದೇ ಒಂದು ವಾಕ್ಯ ಕಲಿತಿದ್ದು, ಅದನ್ನು ಇಂಡೋನೇಷಿಯಾದಲ್ಲಿಯೂ ಹೇಳುವ ಮೂಲಕ ಸಕತ್ ವೈರಲ್ ಆಗುತ್ತಿದ್ದಾರೆ. ಈ ಕುರಿತು ವಿಡಿಯೋ ತುಣುಕೊಂದನ್ನು ತುಳು ಕಂಟೆಂಟ್ ಕ್ರಿಯೇಟರ್ ಶರಣ್ ಚಿಲಿಂಬಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಅದೀಗ ವೈರಲ್ ಆಗಿದೆ. ಕೆಲ ದಿನಗಳ ಹಿಂದೆ ಗಗನ್ ಅವರು ಮಂಗಳೂರಿಗೆ ಭೇಟಿ ನೀಡಿದ್ದರು. ಆಗ ಶರಣ್ ಚಿಲಿಂಬಿ ಅವರು ಹೇಗಿದ್ದೀರಿ ಎನ್ನುವುದಕ್ಕೆ ತುಳುವಿನಲ್ಲಿ ಏನು ಹೇಳುತ್ತಾರೆ ಎಂದು ಕಲಿಸಿಕೊಟ್ಟಿದ್ದರು. ಎಂಚ ಉಲ್ಲರ್ ಎಂದರೆ ಹೇಗಿದ್ದೀರಿ ಎಂದು ಹೇಳಿದ್ದರು. ಇದನ್ನೇ ಗಗನ್ ಅವರು, ಇಂಡೋನೇಷಿಯಾದಲ್ಲಿಯೂ ಬಳಸಿದ್ದಾರೆ. ಇಂಡೋನೇಷಿಯಾದಲ್ಲಿ ಡಾ. ಬ್ರೋ ಗಾಡಿಯಲ್ಲಿ ಹೋಗುತ್ತಿರುವಾಗ ಅಲ್ಲಿನ ಸ್ಥಳೀಯರಿಗೆ ಕೈಬೀಸಿ ಹಲೋ… ಎಂಚ ಉಲ್ಲರ್… ಎಂಚ ಉಲ್ಲರ್ ಎಂದು ತುಳುವಿನಲ್ಲಿ ಮಾತನಾಡಿರುವಂತಹ ದೃಶ್ಯವನ್ನು ಕಾಣಬಹುದು. ಇದರ ವಿಡಿಯೋ ತುಣುಕು ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.
ಅಂದಹಾಗೆ ಗಗನ್ ಕುರಿತು ಒಂದಿಷ್ಟು ಹೇಳಲೇಬೇಕು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿರೋ ಗಗನ್, ಹುಟ್ಟಿದ್ದು ಅರ್ಚಕರ ಮಗನಾಗಿ. ಇವರ ತಂದೆ ಶ್ರೀನಿವಾಸ್ ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಾರೆ. ತಾಯಿ ಪದ್ಮಾ ಗೃಹಿಣಿ. ಗಗನ್ ಅವರಿಗೆ ಎರಡನೆ ತರಗತಿಯಲ್ಲಿ ಓದುತ್ತಿರುವಾಗಲೇ ಪೌರೋಹಿತ್ಯ ಕಲಿತಿದ್ದ ಗಗನ್ ಅವರು, ಖುದ್ದು ದೇವಸ್ಥಾನದ ಪೂಜೆ ಮಾಡುವುದೂ ಉಂಟು. ಓದಿಗಿಂತ ಹೆಚ್ಚಾಗಿ ಹಾಡು, ನೃತ್ಯ, ನಿರೂಪಣೆಯಲ್ಲಿ ಹೆಚ್ಚು ಆಸಕ್ತಿ ಹೊಂದಿರೋ ಗಗನ್ ಕೀರ್ತಿ ಈಗ ಕರ್ನಾಟಕದಾಚೆಗೂ ಸಾಗಿ, ದೇಶದಿಂದ ವಿದೇಶಕ್ಕೂ ಹೋಗಿದೆ.
ರಾವಣನ ಅಪಾಯಕಾರಿ ಗುಹೆಯೊಳಗೆ ಡಾ. ಬ್ರೋ: ರಿಸ್ಕ್ ತಗೋಬೇಡಪ್ಪಾ... ಭಯ ಆಗ್ತಿದೆ ಎಂದ ಫ್ಯಾನ್ಸ್...