ಕರ್ಣ ಧಾರಾವಾಹಿ ನೋಡುವ ಬಹುಪಾಲು ವೀಕ್ಷರಿಗೆ ಒಂದು ಗೊಂದಲವಿತ್ತು. "ಇದೇನಪ್ಪಾ ಮನೆಯಲ್ಲಿ ಇಷ್ಟೆಲ್ಲಾ ಆಗಿದೆ. ಒಂದು ಕಡೆ ನಿಧಿ ಒಂದೇ ಸಮನೆ ಅಳ್ತಾ ಇದ್ದಾಳೆ. ಇತ್ತ ಕಡೆ ನಿತ್ಯಾ ತೇಜಸ್ ಮಾಡಿರುವ ಮೋಸ ನೆನಪಿಸಿಕೊಂಡು ದುಃಖದಲ್ಲಿದ್ದಾಳೆ. ಆದರೆ ಈ ಕರ್ಣ ಮಾತ್ರ ಏನೇನೂ ಆಗಿಲ್ಲವೇನೋ ಎಂಬಂತೆ ಇವರೊಂದಿಗೆ ಖುಷಿ ಖುಷಿಯಾಗಿದ್ದಾನಲ್ಲಾ" ಅಂತೆಲ್ಲಾ ಕಾಮೆಂಟ್ ಮಾಡಿದ್ದರು.
ತಮಾಷೆಯ ಸಂಗತಿಯೆಂದರೆ ವೀಕ್ಷಕರು ಮಾತ್ರವಲ್ಲ, ತೆರೆಯ ಮೇಲೆ ನಿಧಿ ಸಹ ಇದೇ ಪ್ರಶ್ನೆಯನ್ನ ಕರ್ಣನಿಗೆ ಕೇಳಿದ್ದಾಳೆ. ಮುಂಬರುವ ಸಂಚಿಕೆಯಲ್ಲಿ ನಿಧಿಗೆ ಉತ್ತರವನ್ನ ಕರ್ಣ ಕೊಡಬಹುದಾದರೂ, ನಿನ್ನೆ ಸಂಚಿಕೆ ನೋಡಿದವರಿಗೆ ಕರ್ಣನ ನಗುವಿಗೆ ಕಾರಣವೇನು ಎಂಬುದು ಅದಾಗಲೇ ತಿಳಿದಿದೆ.
ಕರ್ಣನೂ ಕೂಡ ತಲೆಯ ಮೇಲೆ ಕೈ ಹೊತ್ತಿ ಕುಳಿತಿರುವಾಗ, ಬೇಸರದಲ್ಲಿದ್ದಾಗ ಅವನಿಗೆ ಬೇಜಾರು ಮಾಡಿಕೊಳ್ಳದೆ, ಬಂದ ಕಷ್ಟಗಳನ್ನು ಎದುರಿಸಬೇಕೆಂದು ಹೇಳಿದವರು ಕರ್ಣನ ತಾಯಿ. ಹೌದು. ಕರ್ಣ ಮನೆಯ ಒಂದೊಂದು ಮೂಲೆಯಲ್ಲಿ ಎಲ್ಲರೂ ಅಳುತ್ತಾ ಮಲಗಿರುವುದನ್ನ ನೋಡುತ್ತಾನೆ. ನಿಧಿ ಮುದ್ದುವಿನ ಬಳಿ ಬೇಸರ ಹೊರಹಾಕುತ್ತಿರುತ್ತಾಳೆ. ನಿತ್ಯಾ ಕೋಣೆಯಲ್ಲಿ ಧೀರ್ಘವಾಗಿ ಆಲೋಚಿಸುತ್ತಾ ಕುಳಿತಿರುತ್ತಾಳೆ. ಇಬ್ಬರೂ ಅಜ್ಜಿಯರು ಒಟ್ಟಿಗೆ ಮಲಗಿದ್ದರೂ ನಿತ್ಯಾ-ನಿಧಿ ಅಜ್ಜಿ ಮಾತ್ರ ಕಣ್ಣೀರು ಹಾಕುತ್ತಲೇ ಇರುತ್ತಾರೆ. ಇದನ್ನೆಲ್ಲಾ ನೋಡಿದ ಕರ್ಣನಿಗೆ ಮನಸ್ಸಿನ ಆಳದಲ್ಲಿ ತಾನೇನೋ ದೊಡ್ಡ ತಪ್ಪು ಮಾಡಿದೆ ಎಂಬ ಭಾವ ಬರುತ್ತದೆ. ಆಗ ಅಮ್ಮ ಬರುತ್ತಾಳೆ. ಅಮ್ಮ-ಮಗನ ನಡುವಿನ ಸಂಭಾಷಣೆ ಹೀಗಿರುತ್ತದೆ...
ಕರ್ಣ ಹೇಳುತ್ತಾನೆ "ನಾವು ಮಾಡಿರುವ ಕೆಲಸ, ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿ ಇದ್ದಿದ್ರೆ ಮನಸ್ಸು ಗಟ್ಟಿಯಾಗಿ ಇರಬೇಕಿತ್ತು ಅಲ್ವಾ. ಮನೆಯವರ ಖುಷಿಗೋಸ್ಕರ ಈ ನಿರ್ಧಾರ ತಗೊಂಡೆ. ಆದ್ರೆ ಈಗ ಎಲ್ಲರೂ ಅಳುತ್ತಾ ಇದ್ದಾರೆ" ಎಂದು ಅಮ್ಮನನ್ನು ಕೇಳುತ್ತಾನೆ. "ತಪ್ಪು-ಸರಿ ಎಲ್ಲಾ ಆಯಾ ಸಂದರ್ಭಕ್ಕೆ ತಕ್ಕಂತೆ ಒಂದೊಂದು ತರಹ ಕಾಣುತ್ತೆ. ಆದರೆ ನೀನು ತೆಗೆದುಕೊಂಡಿರೊ ನಿರ್ಧಾರ ಅ ಸಂದರ್ಭನ್ನ ಸರಿ ಮಾಡುವುದೇ ಆಗಿತ್ತು" ಎಂದು ಅಮ್ಮ ಉತ್ತರಿಸುತ್ತಾರೆ. ಅದಕ್ಕೆ ಕರ್ಣ "ಪ್ರತಿ ಸಾರಿ ಒಬ್ಬೊಬ್ಬರ ಮುಖ ನೋಡಿದಾಗ ಪಾಪ ಪ್ರಜ್ಞೆ ಕಾಡ್ತಿದೆ. ಏನ್ ಮಾಡ್ಬೇಕು ಅಂತಾನೆ ಗೊತ್ತಾಗ್ತಿಲ್ಲ" ಅಂದಾಗ ನಗಬೇಕು ಅಂದಿದ್ದಾಳೆ ಅಮ್ಮ. ಹೌದು ಅಮ್ಮ ಕರ್ಣನಿಗೆ "ನಿನ್ನ ನಗು ನಂದಾದೀಪದ ತರಹ ಸದಾ ಇರಬೇಕು. ಈ ನಗುನೇ ನಿನ್ನ ಸುತ್ತ ಇರುವ ಪ್ರಪಂಚ ಕಾಪಾಡೋದು. ಎಲ್ಲ ಗೊಂದಲಕ್ಕೂ ಉತ್ತರ ಕೊಡೋದು. ನೀನು ಒಬ್ಬ ನಕ್ಕರೆ ಈ ಮನೆ ಗೋಡೆಗಳಿಗೂ ನಗು ಹತ್ಕೊಂಡಿರುತ್ತೆ ಗೊತ್ತಾ. ಆದ್ರೆ ನಿನ್ನ ಕಣ್ಣಲ್ಲಿ ಒಂದು ಹನಿ ನೀರಿದ್ರೂ ಎಲ್ರೂ ಮನಸ್ಸು ಒದ್ದೆಯಾಗುತ್ತೆ ಕಂದ. ಅದಕ್ಕೆ ಹೇಳ್ತಾ ಇರೋದು ಈ ನಗುನ ಕಾಪಾಡಿಕೊ. ಈ ನಗುನೇ ಈ ಮನೆಯವ್ರನ್ನೆಲ್ಲಾ ಕಾಪಡುತ್ತೆ" ಎಂದಿದ್ದಾರೆ.
ಬ್ಯಾಲೆನ್ಸ್ ಮಾಡ್ತಿದ್ದಾನೆ ಕರ್ಣ
ಅಮ್ಮನೊಂದಿಗೆ ಈ ಸಂಭಾಷಣೆ ನಡೆಸಿದ ನಂತರ ಕರ್ಣನ ಮನಸ್ಸಿನಲ್ಲಿ ಬೇಸರವಿದ್ದರೂ ಮುಖದಲ್ಲಿ ನಗು ಮಾತ್ರ ಕಾಣುತ್ತಿದೆ. ಇದನ್ನ ನೋಡಿದ ಕೇಡಿ ಅಪ್ಪ ರಮೇಶ್‌ಗೂ ಆಶ್ಚರ್ಯವಾಗಿದೆ. ಇದರಿಂದ ಸಹಜವಾಗಿಯೇ ಕರ್ಣನ ಎದುರಾಳಿ ಗುಂಪಿಗೆ ಕಿಚ್ಚು ಹೊತ್ತಿದೆ. ಇತ್ತ ಕಡೆ ಅಜ್ಜಿಯಂದಿರಿಗೂ ಕರ್ಣನ ಮುಖದಲ್ಲಿ ನಗು ನೋಡಿ ಖುಷಿಯಾಗಿದೆ. ಬೆಳಗ್ಗೆದ್ದು ಪ್ರತಿಯೊಬ್ಬರಿಗೂ ಕರ್ಣನೇ ಕಾಫಿ, ಜ್ಯೂಸ್ ಕೊಟ್ಟಿದ್ದಾನೆ. ಜೊತೆಗೆ ಅಡುಗೆಯವರಿಗೂ ಯಾರಿಗೆ ಏನೂ ಮಾಡಿಕೊಡಬೇಕೆಂದು ಟಿಪ್ಸ್ ಕೊಡ್ತಾ ಇದ್ದಾನೆ.
ನಿತ್ಯಾಗೆ ತಾನು ತಾಯಿಯಾಗುತ್ತಿರುವ ಸುದ್ದಿ ಗೊತ್ತಿರದ ಕಾರಣ ಕರ್ಣನೇ ಆಕೆಯ ಆರೈಕೆ ಮಾಡ್ತಾ ಇದ್ದಾನೆ. ಜ್ಯೂಸ್, ಟ್ಯಾಬ್ಲೆಟ್ ಕೊಡುತ್ತಾ ಉಪಚರಿಸುತ್ತಿದ್ದಾನೆ. ನಿಧಿ ಮನಸ್ಸಿಗೂ ನೋವಾಗದಂತೆ ಏನೂ ಮಾಡಬೇಕು ಅಂತ ಯೋಚಿಸುತ್ತಿದ್ದಾನೆ. ಮುಂಬರುವ ಸಂಚಿಕೆಗಳಲ್ಲಿ ಮುಖದಲ್ಲಿ ಇದೇ ನಗುವನ್ನು ಹೊತ್ತು ಕರ್ಣ ಎಲ್ಲರನ್ನ ಹೇಗೆ ಬ್ಯಾಲೆನ್ಸ್ ಮಾಡುತ್ತಾನೆ ಎಂಬುದನ್ನ ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.