
ಕಾದಂಬರಿಕಾರ್ತಿ, ನಟಿ, ಸಂಭಾಷಣೆಕಾರ್ತಿ, ಸಹಾಯಕ ನಿರ್ದೇಶಕಿ ಆಶಾ ರಘು ಅವರು ಜನವರಿ 9 ರಂದು ಆತ್ಮ*ಹತ್ಯೆ ಮಾಡಿಕೊಂಡಿದ್ದರು. ಈ ಸಾವು ಅನೇಕರಿಗೆ ಶಾಕ್ ಉಂಟು ಮಾಡಿದೆ. ಕಳೆದ ಎರಡು ವರ್ಷಗಳ ಹಿಂದೆ ಪತಿ ಡಾ ಕೆಸಿ ರಘು ಅವರನ್ನು ಕಳೆದುಕೊಂಡಿದ್ದ ಆಶಾ ಈಗ ಹೀಗೆ ಮಾಡಿಕೊಂಡಿರೋದು ಅನೇಕರಿಗೆ ದಿಗ್ಭ್ರಮೆ ಉಂಟು ಮಾಡಿತ್ತು. ಈ ಬಗ್ಗೆ ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಪ್ರೀತಿಯ ಶಿಷ್ಯೆ ಆಶಾ,
ಯಾಕಮ್ಮ ಹೀಗೆ ಮಾಡಿದೆ? ನೀನು ಮಾಡಿದ್ದು ಸರಿಯೆ? ಮುದ್ದುಮಗಳು ಉಪಾಸನಾ ನಿನಗೆ ನೆನಪಾಗಲಿಲ್ಲವೆ? ಬರೆಯುವ ಸೃಜನಶೀಲ ಆಕಾಂಕ್ಷೆಯಾದರೂ ನಿನ್ನನ್ನು ನೇಣುಹಗ್ಗದಿಂದ ತಡೆಯಲಿಲ್ಲವೆ?
ಯಾವ ಪ್ರಶ್ನೆಗಳಿಗೂ ನಿಲುಕದ ಅಜ್ಞಾತ ಲೋಕಕ್ಕೆ ಹೋಗಿಬಿಟ್ಟೆ. ಮನಸ್ಸು ವಿಷಾದ, ಸಂಕಟಗಳಿಂದ ಕುಸಿದಿದೆ. ನಿಜಕ್ಕೂ ಜರ್ಝರಿತ ನಾನು. ಅದೆಷ್ಟು ವರುಷ ನಮ್ಮ ಸಂಸ್ಥೆಯ ಸಿನಿಮಾಗಳಲ್ಲಿ, ಸಾಕ್ಷ್ಯಚಿತ್ರಗಳಲ್ಲಿ, ಧಾರಾವಾಹಿಗಳಲ್ಲಿ ಸಹಾಯಕಿಯಾಗಿ ದುಡಿದೆ! ಶಿಸ್ತು, ಬದ್ದತೆ,
ಸಮಯಪ್ರಜ್ಞೆಯಲ್ಲಿ ಗುರುವನ್ನು ಮೀರಿಸುತ್ತಿದ್ದೆ. ನಮ್ಮ ಮನೆಯ ಮಗಳಾಗಿದ್ದೆ. ನನಗಾಗಿ ಒಂದು ಮಹಾಕೃತಿಯ ಸಾರಾಂಶ ಹೆಕ್ಕಲು ಹಸುಗೂಸನ್ನಿಟ್ಟುಕೊಂಡು ವಾರಗಟ್ಟಲೆ ಟೈಪು ಮಾಡಿದ್ದೆ. ಬರೆಯುವ, ಪ್ರಕಟಿಸುವ, ನಿರ್ದೇಶಕಿಯಾಗುವ ಸಾವಿರ ಕನಸು ಅಡಕಿಕೊಂಡಿದ್ದೆ.
ಬದುಕನ್ನು ಹಲವು ಮಗ್ಗಲುಗಳಿಂದ ಆಳವಾಗಿ ವಿಷದವಾಗಿ ವಿಸ್ತಾರವಾಗಿ ನೋಡಬಲ್ಲವಳಾಗಿದ್ದ ನಿನ್ನಂಥವರೇ ಸ್ವಜೀವಹತ್ಯೆಯನ್ನು ಆಯ್ಕೆ ಮಾಡಿಕೊಳ್ಳುವುದಾದರೆ ಇಲ್ಲಿ ಯಾರಿಗೆ ಎಲ್ಲಿದೆ ಉಳಿಗಾಲ? ನೀ ದುಡುಕಬಾರದಿತ್ತು ಆಶಾ.
ಡಾ. ಕೆ.ಸಿ. ರಘು ಒಬ್ಬ ಪ್ರಸಿದ್ಧ ಭಾರತೀಯ ಪೌಷ್ಟಿಕತಜ್ಞ, ವಿಜ್ಞಾನಿ, ಉದ್ಯಮಿ ಕೂಡ ಹೌದು. ರಾಗಿ, ಹುರುಳಿಯಂತಹ ಸಾಂಪ್ರದಾಯಿಕ ಆಹಾರದ ಮೂಲಕ ಆರೋಗ್ಯ ಸುಧಾರಿಸಬೇಕು, ರಾಗಿ ಆಧಾರಿತ ಉತ್ಪನ್ನಗಳನ್ನು ಮಾಡಲು ಪ್ರಿಸ್ಟೈನ್ ಆರ್ಗಾನಿಕ್ಸ್ ಸ್ಥಾಪಿಸುವಲ್ಲಿ ಹೆಸರು ಗಳಿಸಿದ್ದರು. ಕಳೆದ ಅಕ್ಟೋಬರ್ 2023 ರಲ್ಲಿ ಬೆಂಗಳೂರಿನಲ್ಲಿ ಶ್ವಾಸಕೋಶದ ಕ್ಯಾನ್ಸರ್‌ನಿಂದ ನಿಧನರಾದರು. ಆಹಾರ, ಪೋಷಣೆಯಲ್ಲಿ ಬಗ್ಗೆ ಮಾತನಾಡುವುದು, ಅಂಕಣಗಳನ್ನು ಬರೆಯುವುದು, ಉಪನ್ಯಾಸಗಳನ್ನು ನೀಡುವುದು, ಆರೋಗ್ಯಕರ, ಕೈಗೆಟುಕುವ ಪ್ರೋಟೀನ್ ಮೂಲಗಳ ಬಗ್ಗೆ ಮಾತನಾಡುತ್ತಿದ್ದರು.
ಆಶಾ ರಘು ಅವರು ಗತ, ‘ಆವರ್ತ', ಪೂತನಿ, ಚಿತ್ತರಂಗ, ಮಾಯೆ ಮುಂತಾದ ಕಾದಂಬರಿಗಳನ್ನು ಬರೆದಿದ್ದರು. ಕಿರುತೆರೆ, ರಂಗಭೂಮಿ, ಬೆಳ್ಳಿತೆರೆಯಲ್ಲಿ ಕಲಾವಿದೆಯಾಗಿ ನಟಿಸಿದ್ದಾರೆ, ಧಾರಾವಾಹಿಗಳಿಗೆ ಸಂಭಾಷಣೆ ಬರೆದಿದ್ದಾರೆ, ಸಹಾಯಕ ನಿರ್ದೇಶಕರಾಗಿಯೂ ಕೂಡ ಕೆಲಸ ಮಾಡಿದ್ದಾರೆ. ನಂಜುಂಡಿ ಸಿನಿಮಾದಲ್ಲಿ ಅವರು ನಟಿಸಿದ್ದರು. ಆಶಾ ರಘು ಅವರಿಗೆ ಉಪಾಸನಾ ಎಂಬ ಮಗಳಿದ್ದಾರೆ. ಕಳೆದ ಹತ್ತು ದಿನದ ಹಿಂದೆ ಅಗಲಿದ ಪತಿಯ ಕನಸು ಬಿದ್ದಿತ್ತು, ಅವರು ಫ್ರಾನ್ಸ್‌ನಲ್ಲಿದ್ದಾರೆ ಎಂದು ಕನಸಿನಲ್ಲಿತ್ತು, ನಾನು ಫ್ರಾನ್ಸ್‌ಗೆ ಹೋದರೆ ಅವರು ಸಿಗಬಹುದಾ ಎಂದು ಪೋಸ್ಟ್ ಹಂಚಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.