
ಸ್ನೇಹಾಳಿಗೆ ಅಂಟಿರುವ ಕಳಂಕವನ್ನು ತೊಡೆದು ಹಾಕಲು ಪುಟ್ಟಕ್ಕ ಪಣತೊಟ್ಟಿದ್ದಾಳೆ. ರಾಜಿಯ ಕುತಂತ್ರದಿಂದ ಡಿಸಿಯಾಗಿದ್ದ ಸಂದರ್ಭದಲ್ಲಿ ಸ್ನೇಹಾ ಮೋಸ ಮಾಡಿದ್ದಾಳೆ ಎಂದೇ ಜನರು ಅಂದುಕೊಂಡಿದ್ದಾರೆ. ಆದರೆ ತನ್ನ ಮಗಳು ನಿಷ್ಠಾವಂತಳು, ಅವಳು ಯಾವ ತಪ್ಪೂ ಮಾಡಿಲ್ಲ ಎಂದು ಪುಟ್ಟಕ್ಕ ಹೋರಾಟ ಮಾಡುತ್ತಿದ್ದಾಳೆ. ಆಕೆಗೆ ನ್ಯಾಯಬೇಕಾಗಿದೆ. ಒಂದು ಹಂತದಲ್ಲಿ ಸೋತ ಪುಟ್ಟಕ್ಕ ನಡುಬೀದಿಯಲ್ಲಿ ಬೆಂಕಿಹಚ್ಚಿಕೊಳ್ಳಲು ಮುಂದಾಗಿದ್ದಾಳೆ. ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಇನ್ನೇನು ಕಡ್ಡಿಗೀರಬೇಕು ಎನ್ನುವಷ್ಟರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಎಂಟ್ರಿಯಾಗಿದೆ. ಪುಟ್ಟಕ್ಕ ಸಾಯುವುದರಿಂದ ರವಿಚಂದ್ರನ್ ತಡೆದಿದ್ದಾರೆ. ಪುಟ್ಟಕ್ಕನ ಜೊತೆಯಲ್ಲಿ ತಾವೂ ಸ್ನೇಹಾಳಿಗೆ ನ್ಯಾಯ ಒದಗಿಸಲು ಕುಳಿತಿದ್ದಾರೆ. ನೀವೂ ಸ್ನೇಹಾಳಿಗೆ ಬೆಂಬಲ ಸೂಚಿಸಿ ಎಂದು ಕ್ಯೂಆರ್ ಕೋಡ್ ತೋರಿಸಿದ್ದಾರೆ. ಇದು ಜೀ ಕನ್ನಡದ ಪುಟ್ಟಕ್ಕನ ಮಕ್ಕಳು ಸೀರಿಯಲ್ ಕಥೆ. ಇದರ ಪ್ರೊಮೋ ರಿಲೀಸ್ ಆಗಿದೆ.
ಅಷ್ಟಕ್ಕೂ, ಈಚೆಗಷ್ಟೇ 900 ಸಂಚಿಕೆಗಳನ್ನು ಪೂರೈಸಿರುವ ಪುಟ್ಟಕ್ಕನ ಮಕ್ಕಳು ಸೀರಿಯಲ್ಗೆ ತಿರುವು ಕೊಟ್ಟು ಮತ್ತಷ್ಟು ಜೀವ ತುಂಬಲು ನಿರ್ದೇಶಕರು ಹರಸಾಹಸ ಪಡುತ್ತಿದ್ದಾರೆ. 12ನೇ ಡಿಸೆಂಬರ್ 2021ರಿಂದ ಶುರುವಾಗಿದ್ದ ಸೀರಿಯಲ್ ಮೂರು ವರ್ಷ ಎರಡು ತಿಂಗಳುಗಳನ್ನು ಪೂರೈಸಿದೆ. ಸದಾ ಟಿಆರ್ಪಿಯಲ್ಲಿ ನಂಬರ್ 1 ಸ್ಥಾನವನ್ನು ವರ್ಷಗಟ್ಟಲೆ ಕಾದುಕೊಂಡಿದ್ದ ಸೀರಿಯಲ್, ಬರಬರುತ್ತಾ ಉಳಿದ ಬಹುತೇಕ ಸೀರಿಯಲ್ಗಳಂತೆ ತನ್ನತನವನ್ನು ಕಳೆದುಕೊಂಡು ಸಾಗುತ್ತಿದೆ ಎನ್ನುವುದು ಇದರ ವೀಕ್ಷಕರ ಅಭಿಮತ. ಪುಟ್ಟಕ್ಕನ ಗಟ್ಟಿಗಿತ್ತಿತನ, ಸ್ನೇಹಾಳ ಸ್ವಾಭಿಮಾನವೇ ಇಲ್ಲಿ ಹೈಲೈಟ್ ಆಗಿತ್ತು. ಆದರೆ ಈಗ್ಯಾಕೋ ಬಹುತೇಕ ವೀಕ್ಷಕರನ್ನು ಈ ಸೀರಿಯಲ್ ಕಳೆದುಕೊಂಡು ಬಿಟ್ಟಿದೆ. ಉಮಾಶ್ರೀ ಅಮ್ಮಾ ನೀವು ಈ ಸೀರಿಯಲ್ ಅಂದೇ ಮುಗಿಸಿಬಿಡಬೇಕಿತ್ತು ಎಂದು ಕಮೆಂಟ್ಸ್ ತುಂಬಾ ಹಲವರು ಹೇಳುತ್ತಿದ್ದಾರೆ. ಈ ಸೀರಿಯಲ್ಗೆ ಬಹುದೊಡ್ಡ ಹಿನ್ನಡೆಯಾಗಿದ್ದು ನಾಯಕಿ ಸ್ನೇಹಾಳ ಸಾವು! ಆಕೆಯ ಸಾವಿನ ಬೆನ್ನಲ್ಲೇ ಕಥೆ ಏನೇನೋ ತಿರುವು ಪಡೆದುಕೊಂಡು ಎಲ್ಲೆಲ್ಲಿಯೋ ಹೋಗುತ್ತಾ ಹಳಿ ತಪ್ಪುತ್ತಿದೆ ಎಂದು ವೀಕ್ಷಕರು ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ.
ಸ್ನೇಹಾ ಸತ್ತ ವಿಷ್ಯ ಕೇಳಿ ಶಾಕ್ನಿಂದ ಬಿದ್ದ ಬಂಗಾರಮ್ಮನಿಗೆ ಶೂಟಿಂಗ್ ವೇಳೆ ಆಗಿದ್ದೇನು? ವಿಡಿಯೋ ವೈರಲ್
ಆದ್ದರಿಂದ ಸೀರಿಯಲ್ ಅನ್ನು ಮತ್ತೆ ಟಾಪ್ನಲ್ಲಿ ತರುವುದಕ್ಕಾಗಿ ಇನ್ನಿಲ್ಲದ ಸಾಹಸ ಮಾಡಲಾಗುತ್ತಿದ್ದು, ರವಿಚಂದ್ರನ್ ಅವರ ಎಂಟ್ರಿ ಕೊಡಿಸಲಾಗಿದೆ. ಇನ್ನಾದರೂ ಸೀರಿಯಲ್ ಮತ್ತೆ ಚಿಗುರುತ್ತಾ ಎಂದು ಕಾದುನೋಡಬೇಕಿದೆ. ಪಾತ್ರಗಳಿಗೆ ಪರಕಾಯ ಪ್ರವೇಶ ಮಾಡಿದಂತೆ ನಟಿಸುತ್ತಲೇ ಚಿತ್ರಪ್ರಿಯರ ಕಣ್ಮಣಿಯಾಗಿದವರು ಉಮಾಶ್ರೀ. ಅವರು ಮಾಡುವ ಪ್ರತಿಯೊಂದು ಪಾತ್ರಗಳಲ್ಲೂ ಸ್ವಂತಿಕೆ, ಜೀವಂತಿಕೆ ಇದೆ. ನಟಿಯ ಭಾವುಕತೆಯಲ್ಲಾಗಲಿ, ಹಾವ ಭಾವಗಳಲ್ಲಾಗಲಿ, ಅಭಿವ್ಯಕ್ತಿಯಲ್ಲಾಗಲಿ ಅವರ ಸಮಕ್ಕೆ ಇರುವ ಕಲಾವಿದರು ಅಪರೂಪವೆಂಬುದು ಚಿತ್ರಪ್ರಿಯರ ಅಭಿಪ್ರಾಯ. ಕೆಲವೊಂದು ವೈಶಿಷ್ಟ್ಯಪೂರ್ಣ ಪಾತ್ರಗಳಲ್ಲಿ ಕಣ್ಣುಗಳಲ್ಲಿಯೇ ತುಂಬಿಕೊಡುತ್ತಾರೆ. ಹಲವು ವಿವಿಧ ಪಾತ್ರಗಳಲ್ಲಿ ಲೀಲಾಜಾಲವಾಗಿ ನಟಿಸುವ ಇವರು ಪುಟ್ಟಕ್ಕನ ಪಾತ್ರಕ್ಕೆ ಜೀವ ತುಂಬಿದ್ದರೂ, ಕಥೆಯೇ ಯಾವುದೋ ದಿಕ್ಕಿಗೆ ಹೋಗುತ್ತಿರುವುದರಿಂದ ಯಾಕೋ ಜನರಿಗೆ ಅದು ಹಿಡಿಸುತ್ತಿಲ್ಲ.
ಇದೀಗ 900ರ ಸಂಚಿಕೆ ಎಂದು ಜೀ ಕನ್ನಡ ಪೋಸ್ಟ್ ಮಾಡಿದಾಗಲೂ, ಅದಕ್ಕೆ ಬಂದಿರುವ ಕಮೆಂಟ್ಗಳ ತುಂಬೆಲ್ಲಾ ಸೀರಿಯಲ್ ಮುಗಿಸಿ ಎನ್ನುವ ಮಾತೇ ಕೇಳಿಬರುತ್ತಿದೆ. ಹಿಂದೊಮ್ಮೆ ಸಂದರ್ಶನದಲ್ಲಿ ಆರೂರು ಜಗದೀಶ್ ಅವರು, 2025ರಲ್ಲಿಯೂ ಸೀರಿಯಲ್ ಮುಂದುವರೆಯುತ್ತದೆ ಎಂದಿದ್ದರು. ರವಿಚಂದ್ರನ್ ಎಂಟ್ರಿಯಿಂದ , ಧಾರಾವಾಹಿ ಮತ್ತೆ ವೀಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಸಫಲವಾಗುತ್ತಾ ಎಂದು ಕಾದು ನೋಡಬೇಕಿದೆ.
ಸೆಟ್ನಲ್ಲಿ ಉಮಾಶ್ರೀ ಹೊಟ್ಟೆಗೆ ಚೂರಿ ಇರಿತ! ಪುಟ್ಟಕ್ಕನ ಮಕ್ಕಳು ಶೂಟಿಂಗ್ನಲ್ಲಿ ನಡೆದದ್ದೇನು? ವಿಡಿಯೋ ವೈರಲ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.