ಶ್ರೀರಸ್ತು ಶುಭಮಸ್ತು ಸೀರಿಯಲ್ನಲ್ಲಿ ಅಮ್ಮನ ಮೇಲೆ ಮುನಿಸು ತೋರುತ್ತಲೇ ಮನದೊಳಗೆ ಬೆಟ್ಟದಷ್ಟು ಪ್ರೀತಿ ಇಟ್ಟುಕೊಂಡಿರುವ ಸಮರ್ಥ್ ಪಾತ್ರಧಾರಿಯ ನಟನೆಗೆ ಅಭಿಮಾನಿಗಳು ಹೇಳ್ತಿರೋದೇನು?
ಮಕ್ಕಳಿಗೆ ಕೈತುತ್ತು ತಿನ್ನಿಸುತ್ತಾ, ಪ್ರತಿ ಖುಷಿ-ನೋವಿನ ಕ್ಷಣಗಳಿಗೆ ಸಾಥ್ ನೀಡುತ್ತಾ, ಅವರ ಆಗುಹೋಗುಗಳನ್ನು ನೋಡಿಕೊಳ್ಳುತ್ತಾ, ಸದಾ ಮನೆಯೇ- ಮಕ್ಕಳೇ ಪ್ರಪಂಚ ಎಂದುಕೊಂಡಿದ್ದವಳು ತುಳಸಿ. ಆದರೆ ಅದ್ಯಾವುದೋ ಘಳಿಗೆಯಲ್ಲಿ ಅವಳ ಜೀವನವೇ ಬದಲಾಗಿ ಹೋಯಿತು. ಚಿಕ್ಕ ವಯಸ್ಸಿನಲ್ಲಿಯೇ ವಿಧವೆ ಎನ್ನುವ ಪಟ್ಟ ಕಟ್ಟಿಕೊಂಡು, ನಾಲ್ಕು ಗೋಡೆಗಳೇ ತನ್ನ ಪ್ರಪಂಚ ಎಂದುಕೊಂಡಿದ್ದ ತುಳಸಿಯನ್ನು ಖುದ್ದು ಸೊಸೆ ಮತ್ತು ಮಾವನೇ ಮುಂದೆ ನಿಂತು ಬೇರೆ ಮದ್ವೆ ಮಾಡಿಸಿದ್ದಾರೆ. ಪತ್ನಿಯನ್ನು ಕಳೆದುಕೊಂಡಿದ್ದ ಮಾಧವ್ಗೆ ತುಳಸಿ ಆಧಾರವಾಗಿದ್ದಾಳೆ. ಇಬ್ಬರದ್ದೂ ಸೀರಿಯಲ್ನಲ್ಲಿ ನವೀರಾದ ಪ್ರೀತಿ. ಸೀರಿಯಲ್ ಪ್ರೇಮಿಗಳಿಗೆ ಮುದ ನೀಡುವ ಜೋಡಿ ಇವರದ್ದು. ಅಶ್ಲೀಲತೆಯ ಲವಶೇಷವೂ ಇಲ್ಲದಂತೆ ಇವರ ಪ್ರೀತಿಯನ್ನು ತೋರಿಸುವ ರೀತಿಯೇ ಬಲು ಚೆನ್ನ.
ಹೊಸ ಕುಟುಂಬ ಅದರಲ್ಲಿಯೂ ಶ್ರೀಮಂತ ಕುಟುಂಬದಲ್ಲಿ ಹೊಂದಿಕೊಳ್ಳಲು ಆರಂಭದಲ್ಲಿ ಹರಸಾಹಸ ಪಟ್ಟ ತುಳಸಿಗೆ ಈಗ ಮಾಧವ್ನ ಇಬ್ಬರು ಮಕ್ಕಳಲ್ಲಿ ಒಬ್ಬನ ಪ್ರೀತಿ ಸಿಕ್ಕಿದೆ. ಮೈದುನ, ಸೊಸೆಗೆ ಈಕೆಯೆಂದರೆ ಪಂಚಪ್ರಾಣ. ಆದರೆ ಓರೆಗಿತ್ತಿ ಶಾರ್ವರಿ, ಇನ್ನೋರ್ವ ಮಗ ಅಭಿ ಮತ್ತು ಆತನ ಪತ್ನಿ ದೀಪಿಕಾ ಸದ್ಯ ವಿಲನ್ಗಳು. ಇವರ ಪ್ರೀತಿ ಪಡೆಯುವುದು ತುಳಸಿಗೆ ಅಷ್ಟು ಸುಲಭವಲ್ಲ. ಇದು ಒಂದೆಡೆಯಾದರೆ, ಖುದ್ದು ಮಗ ಸಮರ್ಥ್ಗೆ ಅಮ್ಮನ ಮೇಲೆ ಈಗ ಕೋಪ. ಈ ವಯಸ್ಸಿನಲ್ಲಿ ಶ್ರೀಮಂತರ ಮನೆಯ ಸೊಸೆಯಾಗಿ ಹೋದ ಅಮ್ಮ ಬದಲಾಗಿದ್ದಾಳೆ, ತಮ್ಮನ್ನು ಕಡೆಗಣಿಸುತ್ತಿದ್ದಾಳೆ ಎನ್ನುವುದು ಆತನಿಗೆ ಇರುವ ಸಿಟ್ಟು.
ಹುಟ್ಟುಹಬ್ಬದ ಸಂಭ್ರಮದಲ್ಲಿ ಸತ್ಯ ಸೀರಿಯಲ್ ಬಾಲ: ಇನ್ಫೋಸಿಸ್ ನೌಕರಿ ಬಿಟ್ಟು ನಟನೆಗೆ ಬಂದದ್ದೇ ರೋಚಕ...
ಆದರೆ ಹೇಳಿಕೇಳಿ ಅಮ್ಮ ಈಕೆ. ಒಳಗಡೆ ಅಮ್ಮನ ಮೇಲೆ ಅದಮ್ಯ ಪ್ರೀತಿ ಇಟ್ಟುಕೊಂಡಿರುವ ಸಮರ್ಥ್, ಹೊರಗಡೆ ಮೇಡಂ ಎನ್ನುತ್ತಲೇ ತುಳಸಿಗೆ ನೋವು ಉಂಟು ಮಾಡುತ್ತಿದ್ದಾನೆ. ಅವಳ ಮನೆಯಲ್ಲಿ ಡ್ರೈವರ್ ಆಗಿ ಸೇರಿಕೊಂಡಿರೋ ಸಮರ್ಥ್ ತುಳಸಿ ಕಷ್ಟದಲ್ಲಿದ್ದಾಗಲೆಲ್ಲಾ ಸಹಾಯ ಮಾಡುತ್ತಾನೆ. ಆದರೆ ಅಮ್ಮನ ಮೇಲೆ ಹುಸಿಮುನಿಸು. ಮಗನಿಗೆ ತನ್ನ ಮೇಲಿರುವ ಪ್ರೀತಿ ತುಳಸಿಗೆ ತಿಳಿಯದ ವಿಷಯವಲ್ಲ. ಆದರೂ ಆಕೆ ಏನೂ ಮಾಡದ ನಿಸ್ಸಹಾಯಕಳು. ಮನಸ್ಸಿನಲ್ಲಿ ಅಮ್ಮನ ಮೇಲೆ ಪ್ರೀತಿ, ಎದುರಿಗೆ ಬಂದಾಗ ಕೋಪ... ಈ ರೀತಿಯ ಆ್ಯಕ್ಟಿಂಗ್ ಮಾಡುವುದು ಸುಲಭದ ಮಾತಲ್ಲ. ಇಂಥ ಒಂದು ನಟನೆಯಲ್ಲಿ ದೊಡ್ಡ ದೊಡ್ಡ ತಾರೆಯರನ್ನೇ ಮೀರಿಸುತ್ತಿದ್ದಾನೆ ಸಮರ್ಥ್. ಸಮರ್ಥ್ ನಿಜವಾದ ಹೆಸರು ದರ್ಶಿತ್ ಗೌಡ.
ದರ್ಶಿತ್ ಗೌಡ ಅವರ ಅಮೋಘ ಅಭಿನಯಕ್ಕೆ ಇದಾಗಲೇ ಅಭಿಮಾನಿಗಳು ಮನಸೋತಿದ್ದಾರೆ. ಅಮ್ಮ ತುಳಸಿ ದೊಡ್ಡವರ ಮನೆಯ ಸೊಸೆಯಾಗಿ ಹೋದಾಗಿನಿಂದಲೂ ಮಗ ಸಮರ್ಥ್ನಲ್ಲಿ ಆಗುತ್ತಿರುವ ತಳಮಳ, ಅಮ್ಮನ ಮೇಲಿನ ಪ್ರೀತಿ, ಇನ್ನೊಂದೆಡೆ ದ್ವೇಷ ಎಲ್ಲವನ್ನೂ ಕಾಲಕ್ಕೆ ತಕ್ಕಂತೆ ಅಭಿನಯದ ಮೂಲಕ ಅಮೋಘವಾಗಿ ತೋರಿಸುವ ದರ್ಶಿತ್ ಅವರ ಅಭಿನಯಕ್ಕೆ ಹಲವರು ಭೇಷ್ ಭೇಷ್ ಎನ್ನುತ್ತಿದ್ದಾರೆ. ಇದೀಗ ಅಭಿಯನ್ನು ಒಲಿಸಿಕೊಳ್ಳಲು ತುಳಸಿ ಡ್ರೈವಿಂಗ್, ಡಾನ್ಸ್ ಕಲಿತು ವೇದಿಕೆ ಮೇಲೆ ನೃತ್ಯ ಪ್ರದರ್ಶನ ನೀಡಿದ್ದಾಳೆ. ನಾಲ್ಕು ಗೋಡೆಗಳ ನಡುವೆ ಇದ್ದ ಅಮ್ಮ ಈ ಪರಿ ಬದಲಾಗಿದ್ದನ್ನು ನೋಡಿ ಸಮರ್ಥ್ ಕಣ್ಣೀರಾಗಿದ್ದಾನೆ. ಹೊರಗಡೆ ಬಂದು ಅಮ್ಮನಿಗೆ ಚಪ್ಪಾಳೆ ತಟ್ಟಿದ್ದಾನೆ. ದರ್ಶಿತ್ ಅವರ ಈ ಅಭಿನಯ ನೋಡಿ ಖುದ್ದು ಪ್ರೇಕ್ಷಕರಿಗೆ ಕಣ್ಣೀರಾಗಿದ್ದಾರೆ. ಅಷ್ಟು ಉತ್ತಮ ನಟನೆ ಎಂದು ಕಮೆಂಟ್ಗಳಲ್ಲಿ ಹೇಳುತ್ತಿದ್ದಾರೆ.
ಶ್ರೀರಸ್ತು-ಶುಭಮಸ್ತು ಲಲನೆಯರ ನೃತ್ಯದ ಮೋಡಿಯಲ್ಲಿ ತೇಲಾಡಿದ ಸೀರಿಯಲ್ ಪ್ರೇಮಿಗಳು
ದರ್ಶಿತ್ ಗೌಡ ಅವರು ಈಗಾಗಲೇ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ದೊರೆಸಾನಿ ಸೀರಿಯಲ್ ನಲ್ಲಿ ನಾಯಕಿಯ ಅಣ್ಣನ ಪಾತ್ರದಲ್ಲಿ ನಟಿಸಿದ್ದರು. ಅಷ್ಟೇ ಅಲ್ಲದೇ ಇವರು ತೆಲುಗು ಸೀರಿಯಲ್ ನಲ್ಲೂ ನಟಿಸಿದ್ದರು. ದರ್ಶಿತ್ ಅವರು ಕಣ್ಸೆಳೆವ ಮಾಯಾವಿ ಎಂಬ ಆಲ್ಬಂ ಸಾಂಗ್ ನಲ್ಲೂ ನಟಿಸಿದ್ದಾರೆ. ಇದೀಗ ಸಮರ್ಥ್ ಆಗಿ ಶ್ರೀರಸ್ತು ಶುಭಮಸ್ತುವಿನಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.