ತಮ್ಮನನ್ನು ಪ್ರೀತಿಸಿ, ಅಣ್ಣನನ್ನು ಮದುವೆ ಆದಳು;‌ ಸೂರಜ್‌ ಸಿಂಗ್ Pavithra Bandhana Serial

Published : Jan 22, 2026, 05:29 PM IST
pavithra bandhana serial

ಸಾರಾಂಶ

Pavithra Bandhana Kannada Serial: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಸೂರಜ್‌ ಸಿಂಗ್‌, ಅಮೂಲ್ಯಾ ಭಾರದ್ವಾಜ್‌, ಅನುಷಾ ರಾವ್‌, ರುಹಾನಿ ಶೆಟ್ಟಿ ನಟನೆಯ ‘ಪವಿತ್ರ ಬಂಧನ’ ಧಾರಾವಾಹಿ ತಂಡವು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಹೊಸದಾಗಿ ಪವಿತ್ರ ಬಂಧನ ಧಾರಾವಾಹಿ ( Pavithra Bandhana Serial ) ಪ್ರಸಾರ ಆಗಲಿದೆ. ಈ ಧಾರಾವಾಹಿಯಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಸೂರಜ್‌ ಸಿಂಗ್‌ ಅವರು ಹೀರೋ ಆಗಿ ನಟಿಸುತ್ತಿದ್ದಾರೆ. ಈ ಬಗ್ಗೆ ವಾಹಿನಿಯು ಮಾಹಿತಿ ನೀಡಿದೆ.

ಈ ಧಾರಾವಾಹಿ ಕಥೆ ಏನು?

ಪವಿತ್ರಾ ಕೇವಲ ಒಬ್ಬ ಯುವತಿಯಲ್ಲ, ಅವಳು ಇಂದಿನ ಬದಲಾಗುತ್ತಿರುವ ಕಾಲಘಟ್ಟದ ಸ್ತ್ರೀಶಕ್ತಿಯ ಪ್ರತೀಕ. ಹುಟ್ಟಿದ್ದು ರಾಮನಗರದಲ್ಲಿ. ಓದಿದ್ದು ಎಂ.ಕಾಂ ಅಮ್ಮನನ್ನು ಕಳೆದುಕೊಂಡ ಪವಿತ್ರಾಗೆ ಅಪ್ಪನೇ ಎಲ್ಲ. ಅಪ್ಪನಿಗೆ ಬೆಂಬಲವಾಗಿ ನಿಲ್ಲಬೇಕು. ಕಾಯಿಲೆಗೆ ಬಿದ್ದ ತಮ್ಮನನ್ನು ಉಳಿಸಿಕೊಳ್ಳುವುದೇ ಈಕೆ ಮುಂದಿರುವ ಬಹುದೊಡ್ಡ ಸವಾಲು. ಸಮಾಜದ ಅನ್ಯಾಯದ ವಿರುದ್ಧ ಧೈರ್ಯದಿಂದ ಮಾತಾಡೋ ಪವಿತ್ರಾ, ಹಳ್ಳಿಯಿಂದ ಬಂದಿರೋದ್ರಿಂದ ಪಟ್ಟಣದಲ್ಲಿ ಒಂದೊಳ್ಳೆ ಕೆಲಸ ಹಿಡೀಬೇಕು ಅನ್ನೋ ಆಸೆ. ಕನ್ನಡ ಬಗ್ಗೆ ಅಪಾರ ಪ್ರೀತಿ. ಹೀಗಿರೋವಾಗ ಅತ್ತೆ ಚಂದ್ರಿಕಾಳ ಮಗ ಮನೋಜ್‌ನನ್ನ ಮದುವೆ ಆಗೋ ಪ್ರಸಂಗ ಎದುರಾಗುತ್ತೆ.

ಹೀಗಿರುವಾಗ ಪವಿತ್ರಾ ಮತ್ತು ‘ಅಮ್ಮಾಸ್ ಕಾಫಿ’ ಸಂಸ್ಥೆಯ ಎಂಡಿ ರಾಧಿಕಾ ಅವರ ನಡುವೆ ದೇವಸ್ಥಾನದಲ್ಲಿ ಸಂಘರ್ಷವಾಗುತ್ತದೆ. ಕಾಕತಾಳೀಯ ಎಂಬಂತೆ ಅದೇ ಅಮ್ಮಾಸ್ ಕಂಪನಿಗೆ ಕೆಲಸಕ್ಕೆ ಸೇರುತ್ತಾಳೆ. ಆದರೆ ಅವಳಿಗೆ ಅರಿಯದ ಸತ್ಯವೆಂದರೆ, ತಾನು ದ್ವೇಷಿಸುವ ಸಿಇಒ ದೇವ್ ಮತ್ತು ತಾನು ಇಷ್ಟಪಡುವ ತಿಲಕ್ ಇಬ್ಬರೂ ರಾಧಿಕಾಳ ಪುತ್ರರು‌ ಎಂಬುದು!

ತಿಲಕ್ ತನ್ನ ಅಸಲಿ ಗುರುತನ್ನು ಮರೆಮಾಚಿ ಪವಿತ್ರಾಳ ಮನಸ್ಸಿಗೆ ಹತ್ತಿರವಾಗ್ತಾನೆ. ಆದರೆ, ವಿಧಿಯ ಆಟವೇ ಬೇರೆ. ಅಚ್ಚರಿಯ ತಿರುವಿನಲ್ಲಿ ತಿಲಕ್‌ನ ಅಣ್ಣ ದೇವ್‌ ಜೊತೆ ಪವಿತ್ರಾಳ ಅನಿರೀಕ್ಷಿತ ವಿವಾಹ ನಡೆದೇ ಬಿಡುತ್ತದೆ! ಪವಿತ್ರಾ- ದೇವ್‌ ಮದುವೆ ಘಟಿಸಿದ್ದು ಹೇಗೆ? ಭಿನ್ನ ಮನಸ್ಸುಗಳ ಮದುವೆಗೆ ಕಾರಣವಾಗಿದ್ದಾದರೂ ಏನು? ಈ ಬಲವಂತದ ಮದುವೆ ಗಟ್ಟಿಯಾಗಿ ನಿಲ್ಲುತ್ತಾ? ಸಂಸಾರದ ಬಂಡಿ ಹಳ್ಳಿತಪ್ಪದೇ ಸಾಗುತ್ತಾ? ಅನ್ನೋದೇ “ಪವಿತ್ರ ಬಂಧನ” ಧಾರಾವಾಹಿ ಕಥೆ.

ಪವಿತ್ರಾ ಮತ್ತು ದೇವ್ ಒಬ್ಬರಿಗೊಬ್ಬರು ಇಷ್ಟವಿಲ್ಲದಿದ್ದರೂ, ಸನ್ನಿವೇಶಗಳ ಒತ್ತಡದಿಂದಾಗಿ ಮದುವೆಯಾಗಬೇಕಾಗುತ್ತದೆ. ದ್ವೇಷಿಸುವ ವ್ಯಕ್ತಿಯ ಜೊತೆಯೇ ಬದುಕಬೇಕಾದ ಅನಿವಾರ್ಯತೆ ಬಂದಾಗ, ಮನುಷ್ಯ ತನ್ನ ಅಹಂಕಾರವನ್ನು ಬಿಟ್ಟು ಹೇಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ ಮತ್ತು ವಿಧಿ ಹೇಗೆ ಮನುಷ್ಯನ ಜೀವನವನ್ನು ಬದಲಿಸುತ್ತದೆ ಎಂಬುದು ಈ ಕಥೆಯ ಸಾರ.

ಹೆಣ್ಣು, ಒಂದು ಮನೆ ಜವಾಬ್ದಾರಿ ಹೊತ್ತರೆ, ಆಕೆ ಎಂಥ ತ್ಯಾಗಕ್ಕೂ ಸಿದ್ಧ. “ಪವಿತ್ರ ಬಂಧನ”ದಲ್ಲಿಯೂ ಒಂದು ತ್ಯಾಗದ ಕಥೆಯಿದೆ. ಅನಿವಾರ್ಯತೆಗೆ ಕಟ್ಟುಬಿದ್ದು, ವಿಧಿ ನಡೆಸಿದ ಹಾದಿಯಲ್ಲಿ ಸಾಗುವ ಆಕೆಯ (ಪವಿತ್ರಾ) ಗಟ್ಟಿತನದ ಎಳೆಯಿದೆ. ಇದು ಕೇವಲ ಒಬ್ಬ ಹೆಣ್ಣಿನ ಹೋರಾಟವಲ್ಲ, ಬದಲಿಗೆ ಸವಾಲುಗಳ ನಡುವೆ ಧೃತಿಗೆಡದೆ ತನ್ನವರ ಸುಖಕ್ಕಾಗಿ ಹೇಗೆ ದೃಢವಾಗಿ ನಿಲ್ಲಬೇಕು ಅನ್ನೋ ಗಟ್ಟಿಗಿತ್ತಿ ಮಹಿಳೆಯರ ಜೀವನ ಪಾಠ.

ಕಥಾನಾಯಕ ದೇವ್‌ದತ್‌ ದೇಶಮುಖ್‌ ಕೆಲಸದ ವಿಚಾರದಲ್ಲಿ ಶಿಸ್ತಿನ ಮನುಷ್ಯ. ಹಿಡಿದ ಕೆಲಸವನ್ನು ಪಟ್ಟುಬಿಡದೆ ಮಾಡುವವ. ಮೊದಲ ಪ್ರಾಶಸ್ತ್ಯ ಏನಿದ್ದರೂ ಕೆಲಸ ಮಾತ್ರ. ಆದ್ರೆ, ಸಹೋದರ ತಿಲಕ್‌ ಅಂದ್ರೆ, ದೇವ್‌ಗೆ ಅತೀವ ಪ್ರೀತಿ. ತಿಲಕ್‌ಗಾಗಿ ಏನೇ ಪ್ರಾಮಿಸ್‌ ಮಾಡಿದ್ರೂ ದೇವ್‌ ತಪ್ಪಲ್ಲ. ಆದ್ರೆ, ಅದೇ ತಮ್ಮನ ಸಲುವಾಗಿ ತನಗೇ ತಾನೇ ಹಾಕಿಕೊಂಡ ಪಾಲಿಸಿಯನ್ನು ಬ್ರೇಕ್‌ ಮಾಡ್ತಾನೆ. ಅದೇ ರೀತಿ ಅಮ್ಮ ರಾಧಿಕಾ, ನಮ್ರತಾ ಜೊತೆಗೆ ಮದುವೆ ಸೆಟ್‌ ಮಾಡಲು ಮುಂದಾಗಿದ್ದಾಳೆ. ಅಮ್ಮ ತೋರಿಸೋ ಹುಡುಗಿಯನ್ನೇ ಮದುವೆ ಆಗೋಕೂ ದೇವ್‌ ರೆಡಿಯಾಗಿದ್ದಾನೆ.

ಉತ್ತಮ್ ಮಧು ಅವರ ನಿರ್ದೇಶನದಲ್ಲಿ ಈ ಸೀರಿಯಲ್‌ ಮೂಡಿಬರುತ್ತಿದೆ. ಮಹೇಶ್ ಜೊತೆಗೆ ಉತ್ತಮ್ ಮಧು ಜಂಟಿಯಾಗಿ ಈ ಸೀರಿಯಲ್ ನಿರ್ಮಾಣ ಮಾಡುತ್ತಿದ್ದಾರೆ. 'ಪವಿತ್ರ ಬಂಧನ' ಧಾರಾವಾಹಿಯಲ್ಲಿ ದೊಡ್ಡ ತಾರಾಗಣವೇ ಇದೆ. ಪವಿತ್ರಾ ಪಾತ್ರದಲ್ಲಿ ಅಮೂಲ್ಯ ಭಾರದ್ವಾಜ್, ದೇವ್ ಆಗಿ ಸೂರಜ್ ಮತ್ತು ತಿಲಕ್ ಪಾತ್ರದಲ್ಲಿ ಯಶಸ್ ನಟಿಸುತ್ತಿದ್ದಾರೆ. ಉಳಿದಂತೆ ರಾಧಿಕಾ ಪಾತ್ರದಲ್ಲಿ ಅನುಷಾ ರಾವ್, ನಮ್ರತಾ ಆಗಿ ರುಹಾನಿ ಶೆಟ್ಟಿ ಕಾಣಿಸಿಕೊಂಡರೆ, ಹಿರಿಯ ನಟರಾದ ವಿಜಯ್ ಕಾಶಿ ಅವರು ಗೋವರ್ಧನ್ ಪಾತ್ರಕ್ಕೆ ಹಾಗೂ ಅಂಬರೀಶ್ ಸಾರಂಗಿ ಅವರು ರಂಗ ಎಂಬ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.‌

‘ಗೌರಿ ಕಲ್ಯಾಣ’ ಮತ್ತು ‘ಪವಿತ್ರ ಬಂಧನ’ ಎರಡೂ ಕತೆಗಳು ಆಧುನಿಕ ಬದುಕಿನ ಸಂಬಂಧಗಳ ಮತ್ತು ವರ್ಗ ವ್ಯತ್ಯಾಸಗಳ ನಡುವಿನ ಕಂದಕದ ಬಗ್ಗೆ ಬೆಳಕು ಚೆಲ್ಲಲಿವೆ. ಭಾವನೆಗಳ ಸಂಘರ್ಷದ ಜತೆಗೆ, ನಾರಿಶಕ್ತಿಯ ಮತ್ತೊಂದು ಮಗ್ಗಲನ್ನೂ ಇಲ್ಲಿ ನೋಡಬಹುದು. ಈ ಎರಡು ಧಾರಾವಾಹಿಗಳು ಕಲರ್ಸ್‌ ಕನ್ನಡದಲ್ಲಿ ಜನವರಿ 27ರಿಂದ ಪ್ರಸಾರ ಆರಂಭಿಸಲಿವೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶ್ರೀಮಂತರ ಮನೆಗೆ ಹೆಣ್ಣು ಮಕ್ಕಳನ್ನು ಸೊಸೆಯಾಗಿ ಕಳಿಸೋದೇ ಈ ತಾಯಿ ಗುರಿ; Gowri Kalyana Serial
Megha Shetty: ಮಾವನ ಮಗಳ ಬೆಂಕಿ ಲುಕ್ ಗೆ ಮನಸೋತ ಪಡ್ಡೆ ಹೈಕ್ಳು