ಒಲವಿನ ನಿಲ್ದಾಣ: ಚಿಪ್ಪು ಸೇರಲಿರುವ ಪ್ರೀತಿಯ ಹನಿ, ಅದು ಮುತ್ತಾಗುತ್ತಾ?

By Suvarna News  |  First Published Jul 15, 2022, 1:02 PM IST

ಒಲವಿನ ನಿಲ್ದಾಣ ಸೀರಿಯಲ್‌ನಲ್ಲಿ ಶ್ರೀಮಂತನೊಂದಿಗೆ ನಡೆಯಬೇಕಿದ್ದ ತಾರಿಣಿ ನಿಶ್ಚಿತಾರ್ಥ ತಪ್ಪಿದೆ. ಸಿದ್ಧಾರ್ಥ ಅವಳ ಬೆರಳಿಗೆ ಉಂಗುರ ತೊಡಿಸಿದ್ದಾನೆ. ಇನ್ನೇನು ಪ್ರೀತಿಯ ಹನಿಯೊಂದು ಚಿಪ್ಪುನೊಳಗೆ ಬೀಳುವ ತವಕದಲ್ಲಿದೆ. ಅದು ಮುತ್ತಾಗುತ್ತಾ?


'ಒಲವಿನ ನಿಲ್ದಾಣ' ಸೀರಿಯಲ್ ಶುರುವಾಗೋ ಮೊದಲೇ ಇದರ ಟೈಟಲ್ ಸಾಂಗ್ ಅಂದರೆ ಶೀರ್ಷಿಕೆ ಗೀತೆ ಸಾಕಷ್ಟು ಜನರಿಗೆ ಇಷ್ಟವಾಯ್ತು. ಇದೀಗ ಈ ಸೀರಿಯಲ್‌ ಅನ್ನೂ ಜನ ಪ್ರೀತಿಯಿಂದ ನೋಡ್ತಿದ್ದಾರೆ. ಈ ಕಾಲದ ಮಲೆನಾಡು ಹುಡುಗಿ ಬೆಂಗ್ಳೂರು ಹುಡುಗನ ಪ್ರೇಮ ಕತೆ ಇರುವ ಈ ಸೀರಿಯಲ್‌ನ ಒನ್‌ ಲೈನ್ ಶ್ರುತಿ ನಾಯ್ಡು ಅವರದು. ರಮೇಶ್ ಇಂದಿರಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸೀರಿಯಲ್‌ನಲ್ಲಿ ತಾರಿಣಿ ಮುದ್ದು ಮುಖವನ್ನು, ಕ್ಯಾಮರಾವನ್ನು ಬಗಲಲ್ಲಿಟ್ಟುಕೊಂಡು ಓಡಾಡುವ ಡೀಸೆಂಟ್ ಹುಡ್ಗ ಸಿದ್ಧಾರ್ಥನನ್ನು ಜನ ಇಷ್ಟಪಡಲಾರಂಭಿಸಿದ್ದಾರೆ. ಈ ಸೀರಿಯಲ್‌ನ ಪ್ರೋಮೋಗಳನ್ನು ಲಕ್ಷಾಂತರ ಜನ ನೋಡಿ ಮೆಚ್ಚಿಕೊಳ್ತಿದ್ದಾರೆ. ಹೆಡ್‌ಫೋನ್ ಕಿವಿಗೆ ಸಿಕ್ಕಿಸಿಕೊಂಡು ತನ್ನ ಪಾಡಿಗೆ ಸಂಗೀತ ಕೇಳ್ತಾ ಬರ್ತಿದ್ದ ಸಿದ್ಧಾರ್ಥ್ ತಾರಿಣಿಗೆ ಢಿಕ್ಕಿ ಹೊಡೆದು ಅವಳ ಮೊಬೈಲ್ ಸ್ಕ್ರೀನ್ ಒಡೆದು ಹಾಕಿದ್ದಾನೆ. ಅದೇ ನೆವವಾಗಿ ಇಬ್ಬರ ಪರಿಚಯವಾಗಿದೆ. ಬಸ್‌ನಲ್ಲಿ ಒಂದೇ ಸೀಟ್‌ನಲ್ಲಿ ಕೂತ ಇಬ್ಬರೂ ಸ್ನೇಹಿತರಾಗಿದ್ದಾರೆ. ತಮ್ಮ ಕಥೆ ಹೇಳಿಕೊಂಡಿದ್ದಾರೆ. ಅದೇ ಸ್ನೇಹದ ನೆವದಲ್ಲಿ ತಾರಿಣಿ ಮನೆಗೆ ಬರುವ ಹುಡುಗನಿಗೆ ಆ ಹುಡುಗಿ ಜೊತೆಗೇ ನಿಶ್ಚಿತಾರ್ಥ ಆದದ್ದು ಕುತೂಹಲಕಾರಿ ಘಟ್ಟ.

ಮಲೆನಾಡ ಹುಡುಗಿ ತಾರಿಣಿ ಮನೆಯವರೆಲ್ಲ ಪ್ರೀತಿಯಲ್ಲಿ ತೋಯುವ ಮುದ್ದು ಹುಡುಗಿ. ಮನೆಯಲ್ಲಿ ಎಲ್ಲರೂ ಅವಳನ್ನು ಕರೆಯೋದು ಪಾಪು ಅಂತಲೇ. ಮಲೆನಾಡಲ್ಲಿ ಹುಟ್ಟಿ ಬೆಳೆದ ತನ್ನ ಕನಸಿನ ಲೋಕದಲ್ಲೇ ಇರುವವಳಾದರೂ ಒಂಚೂರು ಈ ಕಾಲದ ಹುಡುಗಿಯೂ ಹೌದು. ಅವಳಿಗೆ ತನ್ನ ಹುಡುಗನ ಬಗ್ಗೆ ಬಹಳ ಕನಸಿದೆ. ಹೆಲ್ಮೆಟ್ ಹಾಕ್ಕೊಂಡು ಬೈಕಲ್ಲಿ ಬರುವ ರಾಜಕುಮಾರನೊಬ್ಬ ಸದಾ ಅವಳ ಕನಸಲ್ಲಿ ಬರುತ್ತಿರುತ್ತಾನೆ. ಅವನೇ ತನ್ನ ರಾಜಕುಮಾರ ಅಂತ ಅವಳು ಆಪ್ತರ ಬಳಿ ಎಲ್ಲ ಹೇಳಿ ಆಗಿದೆ. ಆದರೆ ಇನ್ನೊಂದೆಡೆ ಅವಳ ಬದುಕಿನಲ್ಲಿ ಅಲ್ಲೋಲ ಕಲ್ಲೋಲ ಆಗುವ ಘಟನೆಯೊಂದು ನಡೆದಿದೆ. ಸಂಪ್ರದಾಯಸ್ಥ ಹಿನ್ನೆಲೆಯ ಅವಳ ಮನೆಯವರು ಅವಳನ್ನು ಊರಿಗೆ ಬರಹೇಳಿ ಶ್ರೀಮಂತ ಮನೆತನದವರೊಂದಿಗೆ ನೆಂಟಸ್ಥನ ಮಾಡಲು ಸಿದ್ಧತೆ ಮಾಡಿದ್ದಾರೆ. ಶ್ರೀಮಂತ ಕುಟುಂಬದ ಹುಡುಗನ ಜೊತೆಗೆ ಅವಳ ಎಂಗೇಜ್ ಮೆಂಟ್ ಫಿಕ್ಸ್ ಮಾಡಿದ್ದಾರೆ.

Tap to resize

Latest Videos

ಸೀರಿಯಲ್‌ನ ಈ ಪಾತ್ರ ಕಂಡ್ರೆ ಕೆಲವ್ರಿಗೆ ಕೆಂಡದಂಥಾ ಕೋಪ!

ತಾರಿಣಿಗೆ ಇದೆಲ್ಲ ಗೊತ್ತಾಗಿ ಶಾಕ್ ಆಗಿದೆ. ಇದಕ್ಕೂ ಮೊದಲು ಅವಳು ಒಂದು ದಿನ ಮೊದಲಷ್ಟೇ ಪರಿಚಯ ಆದ ಸಿದ್ಧಾರ್ಥ್ ಜೊತೆಗೆ ತನ್ನ ಕನಸಿನ ಹುಡುಗನ ವಿಷಯ ಹೇಳಿದ್ದಾಳೆ. ಅವನಿಗೂ ಅವಳಿಗಿಷ್ಟವಿಲ್ಲದ ಈ ಎಂಗೇಜ್‌ಮೆಂಟ್ ಬೇಸರ ತಂದಿದೆ. ಈ ವಿಚಾರವನ್ನು ತನ್ನ ತಂದೆ ಬಳಿ ಹಂಚಿಕೊಂಡರೂ ಯಾವ ನಿರ್ಧಾರಕ್ಕೂ ಬರಲಾಗೋದಿಲ್ಲ. ಆದರೆ ಕೊನೆಯ ಕ್ಷಣದಲ್ಲಿ ತಡೆಯದೇ ತಾನೂ ತಾರಿಣಿ ಪ್ರೀತಿಸುತ್ತಿದ್ದೇವೆ ಅನ್ನುತ್ತಾನೆ. ಒಂದಿಷ್ಟು ರಂಪಾಟದ ನಡುವೆ ಎಂಗೇಜ್‌ಮೆಂಟ್ ನಿಲ್ಲುತ್ತೆ. ಆದರೆ ತಾರಿಣಿ ಮಾವ ಮತ್ತು ಅಮ್ಮನ ವಿರೋಧದ ನಡುವೆ ಅದೇ ಮಂಟಪದಲ್ಲಿ ಸಿದ್ಧಾರ್ಥನಿಂದ ತಾರಿಣಿಗೆ ನಿಶ್ಚಿತಾರ್ಥದ ಉಂಗುರ ತೊಡಿಸುತ್ತಾರೆ.

ತಾರಿಣಿ ಗೆಳತಿಯ ಹಾಗಿರುವ ಅತ್ತೆ ಈ ಬಗ್ಗೆ ಅವಳಲ್ಲಿ ವಿಚಾರಿಸಿದಾಗ ಇದೆಲ್ಲ ಸಿದ್ಧಾರ್ಥ್ ಆಡಿರೋ ನಾಟಕ. ಅವರಿಬ್ಬರ ಮಧ್ಯೆ ಏನೂ ಇಲ್ಲ ಅನ್ನುವ ಸತ್ಯ ತಾರಿಣಿ ಬಾಯಿಂದ ಹೊರಬರುತ್ತೆ. ಆ ಹೊತ್ತಿಗೆ ಅತ್ತೆ ಹೇಳಿದ ಮಾತು ತಾರಿಣಿ ಯೋಚಿಸೋ ಹಾಗೆ ಮಾಡುತ್ತೆ. ಅತ್ತೆ ಪ್ರಕಾರ ಸಿದ್ಧಾರ್ಥ್ ಗೆ ಅವಳ ಮೇಲೆ ಪ್ರೀತಿ ಇದೆ. ಇಲ್ಲವಾದರೆ ಒಂದು ದಿನದ ಹಿಂದೆ ಪರಿಚಯವಾದ ಅವನು ನಿಶ್ಚಿತಾರ್ಥ ನಿಲ್ಲಿಸೋ ರಿಸ್ಕ್ ತಗೊಳ್ತಿರಲಿಲ್ಲ. ವಿಧಿ ನಿಮ್ಮಬ್ಬರನ್ನೂ ಒಂದು ಮಾಡ್ತಿದೆ ಅನ್ನುತ್ತಿದ್ದಾಳೆ. ಸದ್ಯ ಇದನ್ನು ನಂಬಬೇಕೋ ಬಿಡಬೇಕೋ ಅನ್ನೋದು ತಾರಿಣಿ ಗೊತ್ತಾಗ್ತಿಲ್ಲ. ಅತ್ತ ಸಿದ್ಧಾರ್ಥ್ ಅಪ್ಪನಿಗೂ ವಿಚಾರ ತಿಳಿದಿದೆ.

 

ಸದ್ಯದ ಬೆಳವಣಿಗೆ ನೋಡಿದರೆ ಪ್ರೀತಿಯ ಹನಿಯೊಂದು ಚಿಪ್ಪು ಸೇರಲು ಕಾಯುತ್ತಿರುವ ಹಾಗಿದೆ. ಅದು ಯಾವಾಗ ಮುತ್ತಾಗುತ್ತೋ ಗೊತ್ತಿಲ್ಲ. ಹೇಳಿ ಕೇಳಿ ಸೀರಿಯಲ್ ಅಲ್ವಾ, ಸದ್ಯಕ್ಕಂತೂ ಇದೇ ಆಟ ಮುಂದುವರೀಬಹುದು ಅನ್ನೋದು ವೀಕ್ಷಕರ ಅಭಿಪ್ರಾಯ. ಆದರೆ ವಿಭಿನ್ನ ಕತೆ ಮೂಲಕ ಈ ಸೀರಿಯಲ್ ಕುತೂಹಲವನ್ನಂತೂ ಹುಟ್ಟು ಹಾಕಿದೆ.

ಚಿತ್ಕಲಾಗೀಗಿ 50K ಫ್ಯಾನ್ಸ್! ಖುಷಿ ಹಂಚಿಕೊಂಡ ಕನ್ನಡತಿ ಅಮ್ಮಮ್ಮ

click me!