
ಹೊಸದಾಗಿ ಆರಂಭವಾಗಿರುವ 'ನಂದ ಗೋಕುಲ' ಮತ್ತು ‘ಭಾರ್ಗವಿ LLB’ ಧಾರಾವಾಹಿಗಳು ಜನರ ಮನಸ್ಸು ಗೆದ್ದಿವೆ. ಈಗ ಎರಡು ಧಾರಾವಾಹಿಗಳ ಸಂಗಮ ಆದರೆ ಹೇಗಿರುತ್ತದೆ?
TRP ಹೆಚ್ಚಿಸಿಕೊಂಡ ಸೀರಿಯಲ್‌ಗಳು!
'ಮಕ್ಕಳನ್ನು ಹೀರೋ ಮಾಡೋಕೆ ಹೋರಾಡೋ ಪ್ರತಿಯೊಬ್ಬ ಅಪ್ಪನ ಕತೆ'ಯನ್ನು ಹೇಳುವ 'ನಂದ ಗೋಕುಲ' ಈಗಾಗಲೇ ಹಲವಾರು ಸಂಚಿಕೆಗಳಿಂದ ತನ್ನ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತ ಬಂದಿದೆ. ಹಾಗೆಯೇ 'ಸ್ವಾಭಿಮಾನದ ಮಹಾ ಸಂಘರ್ಷ'ದ ಕತೆ ಹೇಳುವ 'ಭಾರ್ಗವಿ LLB' ಧಾರಾವಾಹಿಯು ಜನಮನ ಗೆಲ್ಲುತ್ತ TRP ಹೆಚ್ಚಿಸಿಕೊಂಡಿದೆ. ರಾತ್ರಿ 8.30 ಕ್ಕೆ ಪ್ರಸಾರವಾಗುವ 'ನಂದ ಗೋಕುಲ' ರಾತ್ರಿ 9ಕ್ಕೆ ಪ್ರಸಾರವಾಗುವ 'ಭಾರ್ಗವಿ LLB' ಇವೆರಡೂ ಧಾರಾವಾಹಿಗಳ 'ಮಹಾ ಸಂಗಮ'ದ ಪ್ರೋಮೋ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟುಹಾಕಿದೆ.
'ಭಾರ್ಗವಿ LLB' ಕಥೆ ಏನು?
ಧೈರ್ಯಶಾಲಿ ಹಾಗೂ ಮಧ್ಯಮ ವರ್ಗದ ಯುವತಿ ಭಾರ್ಗವಿ ಮತ್ತು ಅತ್ಯಂತ ಪ್ರಭಾವಶಾಲಿ ಮತ್ತು ಬಲಿಷ್ಠ ವಕೀಲ ಜಯಪ್ರಕಾಶ್ ಪಾಟೀಲ್ ನಡುವಿನ ಸ್ವಾಭಿಮಾನದ ಮಹಾ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭಾರ್ಗವಿಯ ಲಾಯರ್ ತಂದೆಯನ್ನು ಕೋರ್ಟ್‌ನಲ್ಲಿ ಹೀನಾಯವಾಗಿ ಅವಮಾನಿಸಿ ತಲೆ ತಗ್ಗಿಸುವ ಹಾಗೆ ಮಾಡಿ ವಕೀಲಿಕೆಯನ್ನೇ ತ್ಯಜಿಸುವಂತೆ ಮಾಡಿದವನು ಜೆಪಿ ಪಾಟೀಲ್. ತನ್ನ ವೃತ್ತಿಜೀವನದಲ್ಲಿ ಒಂದೇ ಒಂದು ಸೋಲು ಕಾಣದ, ಗೆಲ್ಲಲು ಯಾವುದೇ ಕಾನೂನನ್ನು ಮುರಿಯುವ ಅವನಿಗೆ ವಕೀಲಿಕೆ ಎಂದರೆ ಅಧಿಕಾರ, ಪ್ರಭಾವ ಮತ್ತು ನಿಯಂತ್ರಕ ಶಕ್ತಿ. ಇದರ ತದ್ವಿರುದ್ಧ ಭಾರ್ಗವಿ. ನ್ಯಾಯ ದೊರಕಿಸಿ ಕೊಡಬೇಕಾದ ಸಂಧರ್ಭ ಬಂದಾಗ ಅವಳು ಯಾರನ್ನಾದರೂ ಎದುರಿಸಬಲ್ಲವಳು.
ಅಧಿಕಾರ, ಹಣ, ಪ್ರಭಾವ ಇದ್ಯಾವುದಕ್ಕೂ ಕಿಂಚಿತ್ತೂ ಬೆಲೆ ಕೊಡದ ಅವಳು ನ್ಯಾಯಪರ, ಯಾರಿಗೂ ಹೆದರದ ದಿಟ್ಟ ಯುವತಿ. ತನ್ನ ಪ್ರೀತಿಯ ಅಪ್ಪ ಅಮ್ಮ ಮತ್ತು ತನ್ನ ಪುಟ್ಟ ಕುಟುಂಬವೇ ಅವಳ ಜೀವನ. ಭಾರ್ಗವಿಯ ಅಪ್ಪ ರವೀಂದ್ರ ಭಟ್ಕಳ್ ಕೂಡಾ ವಕೀಲನಾಗಿದ್ದು ವೃತ್ತಿಯಲ್ಲಿ ಯಶಸ್ಸು ಕಂಡಿರುವುದಿಲ್ಲ. ಮಗಳ ಕನಸಿಗೆ ತಂದೆ ಪೂರ್ತಿಯಾಗಿ ಬೆಂಬಲ ನೀಡಿದರೂ ಅಮ್ಮನಿಗೆ ಮಾತ್ರ ಲಾಯರ್ ವೃತ್ತಿ ಅನಗತ್ಯ ತೊಂದರೆಗಳನ್ನು ತರಬಹುದು ಎಂಬ ಆತಂಕ. ಮದುವೆಯಾಗಿ ಅವಳು ಸುಖವಾಗಿದ್ದರೆ ಸಾಕು ಅನ್ನುವುದು ಅಮ್ಮನ ಬಯಕೆ.
ಜೆಪಿ ಪಾಟೀಲ್‌ನ ಮಗ ಅರ್ಜುನ್ ಪಾಟೀಲ್‌ನನ್ನು ಭೇಟಿ ಮಾಡಿದಾಗ ಭಾರ್ಗವಿಯ ಜೀವನ ಅನಿರೀಕ್ಷಿತ ತಿರುವು ಪಡೆಯುವುದು. ಶ್ರೀಮಂತ ಕುಟುಂಬದಲ್ಲಿ ಬೆಳೆದರೂ ಸಹೃದಯಿಯಾಗಿರುವ ಅರ್ಜುನ್ ಭಾರ್ಗವಿಯನ್ನು ಮೊದಲ ನೋಟದಲ್ಲೇ ಪ್ರೀತಿಸುತ್ತಾನೆ. ತನ್ನ ತಂದೆ ವಿರುದ್ಧ ಹೋರಾಟ ಮಾಡುತ್ತಿರುವ ವಕೀಲೆ ಎಂಬ ಅರಿವಿರದ ಅರ್ಜುನ್ ಭಾರ್ಗವಿಗೆ ಹತ್ತಿರವಾಗುತ್ತಾನೆ.
ಮಹಾ ಸಂಗಮದಲ್ಲಿ ಹೊಸ ದಿಕ್ಕು
'ನಂದ ಗೋಕುಲ'ದ ನಾಯಕ 'ವಲ್ಲಭ' ಭಾರ್ಗವಿಗೆ ಅರ್ಜುನ್ ಮೇಲೆ ಇರುವ ಪ್ರೀತಿಯನ್ನು ಅವಳಿಗೆ ತಿಳಿಸಿಕೊಡುತ್ತಾನೆ. ಹಾಗೆಯೇ ಅಪ್ಪನ ಮಾತಿನಿಂದ ಬೇಸರಗೊಂಡು 'ನಂದ ಗೋಕುಲ'ವನ್ನು ಬಿಟ್ಟಿರುವ ವಲ್ಲಭನಿಗೆ ತಂದೆ ತಾಯಿಯ ಮಹತ್ವವನ್ನು ತಿಳಿಸಿ ಅವನು ಮನೆಗೆ ಮರಳುವಂತೆ ಭಾರ್ಗವಿ ಪ್ರೇರೇಪಣೆ ನೀಡುತ್ತಾಳೆ. ಕಲರ್ಸ್ ಕನ್ನಡದಲ್ಲಿ ಜುಲೈ 21ರಿಂದ ಜುಲೈ 25 ರವರೆಗೆ ರಾತ್ರಿ 8.30ಕ್ಕೆ ‘ಭಾರ್ಗವಿ LLB’ ನಂದ ಗೋಕುಲ' ಮಹಾ ಸಂಗಮವು ಪ್ರಸಾರವಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.