
ಬಿಗ್ ಬಾಸ್ ಕನ್ನಡ ಸೀಸನ್ 10 ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಅವರನ್ನು ಹುಲಿ ಉಗುರು ಕೇಸ್‌ನಲ್ಲಿ, ಹುಲಿ ಉಗುರನ್ನೊಳಗೊಂಡ ಆಭರಣ (ಪೆಂಡೆಂಟ್) ಧರಿಸಿದ್ದ ಕಾರಣಕ್ಕಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದರು. ಭಾನುವಾರ ತಡರಾತ್ರಿ ಬಂಧನಕ್ಕೊಳಗಾಗಿದ್ದ ಬಿಗ್‌ಬಾಸ್ ರಿಯಾಲಿಟಿ ಶೋ ಸ್ಪರ್ಧಿ ವರ್ತೂರು ಸಂತೋಷ್ ಗೆ ಇಂದು (27 ಅಕ್ಟೋಬರ್ 2023) ಜಾಮೀನು ಮಂಜೂರಾಗಿದೆ. ಇದೀಗ, ವರ್ತೂರು ಸಂತೋಷ್ ಈಗ ಮತ್ತೆ ಬಿಗ್ ಬಾಸ್ ಶೋಗೆ ಮರಳಬಹುದೇ ಎಂಬುದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆಯಾಗಿದೆ!
ಇದಕ್ಕೆ ಪುಷ್ಠಿ ನೀಡುವಂತೆ, ವರ್ತೂರು ಸಂತೋಷ್‌ಗೆ ಜಾಮೀನು ಸಿಗ್ತಿದ್ದಂತೆ ಜೈಲು ಬಳಿ ಕಲರ್ಸ್ ಕನ್ನಡದ ಕಾರು ಪ್ರತ್ಯಕ್ಷವಾಗಿದೆ. ಹಾಗಿದ್ರೆ ಮತ್ತೆ ಬಿಗ್ ಬಾಸ್‌ಗೆ ಹೋಗ್ತಾರಾ ಎಂದು ಪ್ರಶ್ನೆ ಎದ್ದಿದೆ. ರಿಯಾಲಿಟಿ ಶೋ ನಡೆಸುತ್ತಿರುವ ಕಲರ್ಸ್ ಕನ್ನಡ ವಾಹಿನಿ ಲೋಗೋ ಇರುವ ಕಾರು ಜೈಲು ಬಳಿ ಪ್ರತ್ಯಕ್ಷವಾಗಿದೆ. ಆದರೆ, ಕಲರ್ಸ್ ಕನ್ನಡದ ಕಡೆಯಿಂದ ನಮಗೆ ಈ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಈ ಬಗ್ಗೆ ವಾಹಿನಿಯನ್ನು ಸಂಪರ್ಕಿಸಿದಾಗ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಉತ್ತರ ಬಂದಿದೆ.
2ನೇ ಎಸಿಜೆಎಂ ಕೋರ್ಟ್ ಜಾಮೀನು ನೀಡಿದ್ದು, ನ್ಯಾಯಾಧೀಶರ ನರೇಂದ್ರ ಅವರಿಂದ ಆದೇಶ ಹೊರಬಿದ್ದಿದೆ. 4 ಸಾವಿರ ರೂಪಾಯಿ ನಗದು ಭದ್ರತೆ ಅಥವಾ ಒಬ್ಬರ ಶ್ಯೂರಿಟಿ ನೀಡುವಂತೆ ಷರತ್ತು ವಿಧಿಸಿ ನ್ಯಾಯಾಲಯ ಜಾಮೀನು ನೀಡಿದೆ. ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿರುವ ವರ್ತೂರು ಸಂತೋಷ್ ತಮ್ಮ ಕತ್ತಿನಲ್ಲಿ ಹಾಕಿದ್ದ ಸರದಲ್ಲಿ ಹುಲಿ ಉಗುರಿನ ಪೆಂಡೆಂಟ್‌ನ್ನು ಧರಿಸಿ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದರು. ಅಕ್ಟೋಬರ್ 8ರಂದು ಪ್ರಸಾರವಾದ ಬಿಗ್‌ಬಾಸ್‌ನ ಆರಂಭದ ಎಪಿಸೋಡ್‌ನಲ್ಲಿ ಅದು ಪ್ರಸಾರವಾಗಿತ್ತು.
ಅದನ್ನು ಗಮನಿಸಿದ ಖಾಸಗಿ ವ್ಯಕ್ತಿಯೊಬ್ಬರು ವರ್ತೂರು ಸಂತೋಷ್ ಹುಲಿ ಉಗುರನ್ನೊಳಗೊಂಡ ಆಭರಣ ಧರಿಸಿರುವ ಕುರಿತು ಮಾಹಿತಿ ನೀಡಿದ್ದರು. ಮಾಹಿತಿ ಮೇರೆಗೆ ವರ್ತೂರು ಸಂತೋಷ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಸೆಕ್ಷನ್ 9ರ ಅಡಿಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಅಕ್ಟೋಬರ್ 22ರ ಭಾನುವಾರ ಬಂಧಿಸಿದ್ದರು.
ಸೋಮವಾರ ನ್ಯಾಯಾಲಯ ರಜೆಯಿದ್ದ ಕಾರಣ ರಾಮೋಹಳ್ಳಿ 2ನೇ ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರ ಎದುರು ಅವರ ನಿವಾಸದಲ್ಲಿ ವರ್ತೂರು ಸಂತೋಷ್ ಅವರನ್ನು ಹಾಜರುಪಡಿಸಿ, ಅವರ ಮೇಲಿನ ಆರೋಪಗಳ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಮಾಹಿತಿ ಆಧರಿಸಿ ನ್ಯಾಯಾಧೀಶರು ವರ್ತೂರು ಸಂತೋಷ್‌ರನ್ನು 14 ದಿನಗಳ ನ್ಯಾಯಾಂಗ ಬಂಧನದಲ್ಲಿಟ್ಟು, ಬಳಿಕ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲಾಗಿತ್ತು.
ಸಂತೋಷ್ ಬಂಧನದ ಬಳಿಕ, ಹಲವು ಅರಣ್ಯಾಧಿಕಾರಿಗಳು, ಸೆಲೆಬ್ರಿಟಿಗಳು ಕೂಡ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದು ಬೆಳಕಿಗೆ ಬಂದಿತ್ತು. ಹೀಗಿರುವಾಗ ವರ್ತೂರು ಸಂತೋಷ್ ಬಂಧನಕ್ಕೆ ತೀವ್ರ ವಿರೋಧ ಕೂಡ ವ್ಯಕ್ತವಾಗಿತ್ತು. ಅರಣ್ಯಾಧಿಕಾರಿಗಳ ಮೇಲೆ ಅನುಮಾನ ಕೂಡ ವ್ಯಕ್ತವಾಗಿದ್ದು, ನೊಟೀಸ್ ನೀಡದೆ ಸಂತೋಷ್ ಅವರನ್ನು ಬಂಧಿಸಲಾಗಿದೆ ಎಂದು ಸುದ್ದಿ ಹಬ್ಬಿತ್ತು. ಇದೀಗ, ಸಂತೋಷ್ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ. ಮತ್ತೆ ಬಿಗ್ ಬಾಸ್ ಮನೆಗೆ ಮರಳಿ ಶೋದಲ್ಲಿ ಮುಂದುವರಿಯುತ್ತಾರೆ ಎಂಬುದೀಗ ಹಲವರ ಪ್ರಶ್ನೆ. ಇದಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.