
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ಮುಕ್ತಾಯಗೊಂಡು ವಾರಗಳೇ ಕಳೆದಿದ್ದರೂ, ಆ ಮನೆಯ ಸ್ಪರ್ಧಿಗಳ ನಡುವಿನ ಬಾಂಧವ್ಯ ಮತ್ತು ಕಿತ್ತಾಟಗಳು ಮಾತ್ರ ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಲೇ ಇವೆ. ಈಗ ಬಿಗ್ ಬಾಸ್ ಇತಿಹಾಸದ ಅತ್ಯಂತ ಚರ್ಚಿತ ಸ್ಪರ್ಧಿ, ಸೀಸನ್ 4ರ ವಿಜೇತ ಪ್ರಥಮ್ ಅವರು ಸೀಸನ್ 12ರ ಫೈನಲಿಸ್ಟ್‌ಗಳಾದ ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರೊಂದಿಗೆ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ. ಅಷ್ಟೇ ಅಲ್ಲದೆ, ಸೀಸನ್ 12ರ ಟ್ರೋಫಿ ಗೆದ್ದ ಗಿಲ್ಲಿ ನಟನ ಕಾಲೆಳೆಯುವ ಮೂಲಕ ಅಭಿಮಾನಿಗಳಲ್ಲಿ ನಗು ಮೂಡಿಸಿದ್ದಾರೆ.
ಬಿಗ್ ಬಾಸ್ ಸೀಸನ್ 12ರಲ್ಲಿ ನಟಿ ಅಶ್ವಿನಿ ಗೌಡ ಮತ್ತು ನಿರೂಪಕಿ ಜಾಹ್ನವಿ ಅವರ ಸ್ನೇಹ ಒಂದು ರೋಲರ್ ಕೋಸ್ಟರ್ ರೈಡ್‌ನಂತಿತ್ತು. ಇಬ್ಬರೂ ಮನೆಯಲ್ಲಿ ತಮ್ಮದೇ ಆದ ಗುಂಪು ಕಟ್ಟಿಕೊಂಡು ಆಟವಾಡಿದ್ದರು. ಮಧ್ಯದಲ್ಲಿ ಭಾರೀ ಜಗಳ ಮಾಡಿಕೊಂಡು, ಇನ್ನು ಮುಂದೆ ಜೀವನದಲ್ಲಿ ಇವರ ಮುಖ ನೋಡುವುದಿಲ್ಲ ಎನ್ನುವ ಮಟ್ಟಕ್ಕೆ ಹೋಗಿದ್ದರು. ಆದರೆ, ಬಿಗ್ ಬಾಸ್ ಮನೆಯ ಮಹಿಮೆಯೋ ಏನೋ, ಕೆಲವೇ ದಿನಗಳಲ್ಲಿ ಇಬ್ಬರೂ ಒಂದಾಗಿ ಮತ್ತೆ 'ಜೋಡಿ ಹಕ್ಕಿ'ಗಳಂತೆ ಓಡಾಡಿದ್ದರು.
ಇದೇ ಸಮಯದಲ್ಲಿ ಗಿಲ್ಲಿ ನಟ ಅವರು ಈ ಇಬ್ಬರನ್ನೂ ರೇಗಿಸಲು 'ದೊಡ್ಡವ್ವ' ಮತ್ತು 'ಚಿಕ್ಕವ್ವ' ಎಂಬ ಪಟ್ಟ ನೀಡಿದ್ದರು. ಅಶ್ವಿನಿ ಅವರಿಗೆ ದೊಡ್ಡವ್ವ ಹಾಗೂ ಜಾಹ್ನವಿ ಅವರಿಗೆ ಚಿಕ್ಕವ್ವ ಎಂದು ಕರೆಯುತ್ತಾ ಒಂದು ವಿಲಕ್ಷಣ ಹಾಡನ್ನೂ ಹಾಡುತ್ತಿದ್ದರು. "ಚಿಕ್ಕವ್ವ ಚಿಕ್ಕವ್ವ ಚಕ್ಲಿ ಕೊಡು, ದೊಡ್ಡವ್ವ ದೊಡ್ಡವ್ವ ದ್ವಾಸೆ ಕೊಡು, ನಮ್ಮಪ್ಪ ರಾಜ ಕೊತ್ತುಮರಿ ಬೀಜ, ಸಾರಿಗೆ ಹಾಕ್ತಾರೆ ಉಪ್ಪು, ನೀನು ಮಾಡಿದ್ದು ತಪ್ಪು..." ಎಂಬ ಈ ಹಾಡು ಎಷ್ಟರಮಟ್ಟಿಗೆ ವೈರಲ್ ಆಗಿತ್ತೆಂದರೆ, ಇಂದು ರಾಜ್ಯದ ಮನೆ ಮಂದಿಯೆಲ್ಲಾ ಈ ಹಾಡನ್ನು ಗುನುಗುತ್ತಿದ್ದಾರೆ. ಆದರೆ, ಬಿಗ್ ಬಾಸ್ ಮನೆಯಲ್ಲಿದ್ದಾಗ ಅಶ್ವಿನಿ ಮತ್ತು ಜಾಹ್ನವಿ ಈ ಹೆಸರಿನಿಂದ ಅಸಮಾಧಾನಗೊಂಡಿದ್ದರು.
ಇತ್ತೀಚೆಗೆ ಅಶ್ವಿನಿ ಗೌಡ, ಜಾಹ್ನವಿ ಮತ್ತು ಪ್ರಥಮ್ ಅವರು ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭೇಟಿಯಾಗಿದ್ದಾರೆ. ಇವರು 'ಫಸ್ಟ್ ನೈಟ್ ದೆವ್ವ' ಎಂಬ ಸಿನಿಮಾ ಪ್ರಮೋಷನ್ ಕೆಲಸಕ್ಕಾಗಿ ಬೆಳಗಾವಿಗೆ ಹೊರಟಿದ್ದರು. ಈ ವೇಳೆ ಮೂವರು ಫೋಟೋಗೆ ಫೋಸ್ ನೀಡಿದ್ದು, ಪ್ರಥಮ್ ಅವರು ಇದನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಪೋಸ್ಟ್‌ನಲ್ಲಿ ಗಿಲ್ಲಿ ನಟನನ್ನು ಟ್ಯಾಗ್ ಮಾಡಿರುವ ಪ್ರಥಮ್, "ದೊಡ್ಡವ್ವ-ಚಿಕ್ಕವ್ವನ ಜೊತೆ ಬೆಳಗಾವಿಗೆ... ಅಲ್ಲಪ್ಪ ಗಿಲ್ಲಿ ನಟ, ಇಷ್ಟು ಮಿಂಚುತ್ತಿರೋ ಅಶ್ವಿನಿ ಗೌಡ ಮೇಡಂ ಮತ್ತು ನಿರೂಪಕಿ ಜಾಹ್ನವಿ ಅವ್ರನ್ನ ದೊಡ್ಡವ್ವ ಚಿಕ್ಕವ್ವ ಮಾಡೋಕೆ ಹೆಂಗಪ್ಪ ಮನಸು ಬಂತು ನಿಂಗೆ?" ಎಂದು ತಮಾಷೆಯಾಗಿ ಕಾಲೆಳೆದಿದ್ದಾರೆ. ಅಶ್ವಿನಿ ಮತ್ತು ಜಾಹ್ನವಿ ಅವರು ಏರ್‌ಪೋರ್ಟ್ ಲುಕ್‌ನಲ್ಲಿ ಅತಿ ಸುಂದರವಾಗಿ ಕಾಣುತ್ತಿದ್ದು, ಇಂತಹ ಗ್ಲಾಮರಸ್ ನಟಿಯರನ್ನು ಆಂಟಿಗಳಂತೆ ಕರೆಯುವುದು ಸರಿನಾ ಎಂದು ಪ್ರಥಮ್ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಭಾರಿ ವೈರಲ್ ಆಗುತ್ತಿದ್ದು, ಬಿಗ್ ಬಾಸ್ ಅಭಿಮಾನಿಗಳು ಪ್ರಥಮ್ ಅವರ ಕಾಲೆಳೆಯುವ ಗುಣಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. "ಸೀಸನ್ 4ರ ಕಿಂಗ್ ಮತ್ತು ಸೀಸನ್ 12ರ ಲೇಡಿ ಟೈಗರ್ಸ್ ಒಂದೇ ಫ್ರೇಮ್‌ನಲ್ಲಿ" ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಬಿಗ್ ಬಾಸ್ ಮನೆಯ ಹೊರಗೂ ಈ 'ದೊಡ್ಡವ್ವ-ಚಿಕ್ಕವ್ವ' ಕಾಟ ತಪ್ಪಿಲ್ಲ ಎನ್ನುವುದು ಮಾತ್ರ ಸಾಬೀತಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.