ಜಗ್ಗ ಮಮ್ಮಿ ಬಂದಿದ್ದು ಮನೆಕೆಲಸಕ್ಕೆ, ಆದ್ರೆ ಈ ಮನೆನೇ ನಂದು ಅಂತಾ ಆಡ್ತಿದ್ದ: ಬಿಗ್‌ಬಾಸ್‌ ಸ್ಪರ್ಧಿಯ ಜಗತ್ತು ಬಿಚ್ಚಿಟ್ಟ ಮನೆ ಒಡತಿ ಸೌಮ್ಯ

Published : Oct 30, 2026, 08:50 PM ISTUpdated : Oct 30, 2026, 09:16 PM IST
Jagga Mummy Jagadish Bigg Boss Kannada

ಸಾರಾಂಶ

ಮೈಸೂರಿನ ಡೈರಿ ನೌಕರನಾಗಿದ್ದ ಜಗದೀಶ್ ಅಲಿಯಾಸ್ ಜಗ್ಗ ಮಮ್ಮಿ, ನಟ ಡಾರ್ಲಿಂಗ್ ಕೃಷ್ಣ ಅವರ ಅಕ್ಕ ಸೌಮ್ಯ ಅವರ ಮನೆಯಲ್ಲಿ ಕೆಲಸಕ್ಕೆ ಸೇರಿದ ಕುತೂಹಲಕಾರಿ ಕಥೆಯನ್ನು ಇಲ್ಲಿ ವಿವರಿಸಲಾಗಿದೆ.

ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ತಮ್ಮ ವಿಶಿಷ್ಟ ಮ್ಯಾನರಿಸಂ, ಹಾಸ್ಯಪ್ರಜ್ಞೆ ಹಾಗೂ ಆಲ್-ಇನ್-ಒನ್ ಕೆಲಸದ ಶೈಲಿಯಿಂದ ಗಮನಸೆಳೆಯುತ್ತಿರುವ ಸ್ಪರ್ಧಿ ಜಗದೀಶ್ ಅಲಿಯಾಸ್ ಜಗ್ಗ ಮಮ್ಮಿ. 'ಲವ್ ಮಾಕ್ಟೇಲ್ 3' ಸಿನಿಮಾದ ಜಗ್ಗ ಮಮ್ಮಿ ಪಾತ್ರದಿಂದ ಹಿಡಿದು ಬಿಗ್‌ಬಾಸ್ ಮನೆವರೆಗೆ ತಲುಪಿರುವ ಇವರ ಹಿನ್ನೆಲೆಯಲ್ಲಿ ಮೈಸೂರಿನ ಒಂದು ಸುಂದರ ಮನೆ ಹಾಗೂ ಅಪೂರ್ವ ಬಾಂಧವ್ಯವಿದೆ. ಮೈಸೂರಿನ ನೇತಾಜಿನಗರದ ಲಲಿತ ಮಹಲ್ ಹಿಂಭಾಗದಲ್ಲಿರುವ ಪೊಲೀಸ್ ಲೇಔಟ್‌ನ ಸಾಂಪ್ರದಾಯಿಕ ತೊಟ್ಟಿ ಮನೆಯ ಮಾಲಕಿ, ನಟ ಡಾರ್ಲಿಂಗ್ ಕೃಷ್ಣ ಅವರ ಅಕ್ಕ ಸೌಮ್ಯ ಅವರು ಪತ್ರಕರ್ತ ಹರೀಶ್‌ ನಾಗರಾಜು ಅವರ ಯೂಟ್ಯೂಬ್‌ ಪಾಡ್‌ಕಾಸ್ಟ್‌ನಲ್ಲಿ ಜಗ್ಗ ಮಮ್ಮಿಯ ಬದುಕಿನ ಯಾರಿಗೂ ಗೊತ್ತಿರದ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ.

ಮನೆ ಕೆಲಸಕ್ಕೆ ಬಂದಿದ್ದು ಹೇಗೆ?: ಬೇದಿ ಮಾತ್ರೆ ಹಾಕೋಣ ಎಂದಿದ್ದ ಜಗ್ಗ!

ಜಗದೀಶ್ ಮೈಸೂರು ಡೈರಿಯ ಕ್ಯಾಂಟೀನ್‌ನಲ್ಲಿ 10 ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಅಲ್ಲಿ ಪ್ರತಿಯೊಬ್ಬರಿಗೂ ಕಾಫಿ-ಟೀ ಕೊಡುತ್ತಾ, ಎಲ್ಲರೊಂದಿಗೂ ತಮಾಷೆ ಮಾಡುತ್ತಾ ಫೇವರೆಟ್ ಆಗಿದ್ದರು. ಆದರೆ ಅಲ್ಲಿ ಯಾವುದೋ ಜಗಳ ಮಾಡಿಕೊಂಡು, ಮನೆ ಕೆಲಸ ಮಾಡಿದರೆ ಹೆಚ್ಚು ಸಂಪಾದಿಸಬಹುದು ಎಂದು ಸೌಮ್ಯ ಅವರ ಮನೆಗೆ ಕೆಲಸಕ್ಕೆ ಸೇರಲು ಬಂದಿದ್ದರು.

"ನಮ್ಮ ಮನೆಯಲ್ಲಿ ಈಗಾಗಲೇ ಕೆಲಸದವರು ಇದ್ದಾರೆ ಕಣಪ್ಪ ಅಂದರೂ ಕೇಳದೆ, 'ಅವರಿಗೆ ಬೇಕಾದರೆ ಬೇದಿ ಮಾತ್ರೆ ಹಾಕಿಬಿಡಿ, ಅವರು ಒಂದು ವಾರ ಬರಲ್ಲ, ಆಮೇಲೆ ಅವರನ್ನು ಬಿಡಿಸಿ ನನ್ನನ್ನೇ ಇಟ್ಟುಕೊಳ್ಳಿ' ಎಂದು ತಮಾಷೆಯಾಗಿ ಒತ್ತಾಯಿಸಿ ಒಂದು ವಾರ ಕಾಡಿ ನಮ್ಮ ಮನೆಗೆ ಕೆಲಸಕ್ಕೆ ಸೇರಿದ. ಸಾಮಾನ್ಯವಾಗಿ ನಾವು ಗಂಡುಮಕ್ಕಳನ್ನು ಮನೆ ಕೆಲಸಕ್ಕೆ ಇಟ್ಟುಕೊಳ್ಳುವುದಿಲ್ಲ. ಆದರೆ ಇವನು 'ಅಡುಗೆ ಮನೆ ಕೆಲಸ, ಮನೆ ಕೆಲಸ ಎಲ್ಲ ನಾನೇ ಮಾಡ್ತೀನಿ' ಎಂದು ಎಲ್ಲವನ್ನೂ ತಾನೇ ವಹಿಸಿಕೊಂಡಿದ್ದ" ಎಂದು ಸೌಮ್ಯ ನೆನಪಿಸಿಕೊಂಡಿದ್ದಾರೆ.

ಅಕ್ಕಂದಿರು ಕಲಿಸಿದ ರಂಗೋಲಿ ಕಲೆ: 'ಈ ಮನೆ ನಂದೇ' ಎನ್ನುತ್ತಿದ್ದ!

ಮನೆಗೆ ಬಂದ ಕೆಲವೇ ದಿನಗಳಲ್ಲಿ ಜಗದೀಶ್ ಎಲ್ಲರನ್ನೂ ತನ್ನತ್ತ ಸೆಳೆದುಕೊಂಡಿದ್ದರು. ಹೆಣ್ಣುಮಕ್ಕಳಿಗಿಂತ ಅತ್ಯಂತ ಅಚ್ಚುಕಟ್ಟಾಗಿ ಅಡುಗೆ ಮಾಡುವುದು, ಮನೆ ಕ್ಲೀನ್‌ ಮಾಡೋದು ಹಾಗೂ ಮನೆ ಮುಂದೆ ಸುಂದರ ರಂಗೋಲಿ ಬಿಡಿಸುವುದನ್ನು ಮಾಡುತ್ತಿದ್ದ. ನನಗೆ ರಂಗೋಲಿ ಬಿಡಿಸಲು ಬರದಿದ್ದಾಗ 'ನಿಮ್ಮ ಅಮ್ಮ ನಿಮಗೇನು ಹೇಳಿಕೊಟ್ಟಿಲ್ಲ, ನೋಡಿ ನಮ್ಮ ಅಕ್ಕಂದಿರು ನಂಗೆ ಹೆಂಗೆ ರಂಗೋಲಿ ಬಿಡಿಸೋದನ್ನು ಹೇಳಿಕೊಟ್ಟಿದ್ದಾರೆ' ಎಂದು ನನ್ನನ್ನೇ ಬೈಯುತ್ತಿದ್ದ. ಯಾರಾದರೂ ಹೊರಗಿನವರು ಬಂದು ಅಡ್ರೆಸ್ ಕೇಳಿ 'ಯಾರ ಮನೆ ಇದು? ಅಂತಾ ಕೇಳಿದ್ರೆ, 'ನಮ್ಮದೇ ಮನೆ' ಎಂದು ಹೇಳುತ್ತಿದ್ದ. ಎಲ್ಲರನ್ನೂ ಸ್ವಂತ ಸಂಬಂಧಿಕರಂತೆಯೇ ಚಿಕ್ಕಮ್ಮ, ಅವ್ವ ಎಂದು ಕರೆಯುತ್ತಿದ್ದ ಎಂದು ಸೌಮ್ಯ ತಿಳಿಸಿದ್ದಾರೆ.

‘ಜಗ್ಗನಿಗೆ ನನ್ನ ಮನೆ, ಫ್ಯಾಮಿಲಿ, ನೆಂಟರು ಎಲ್ಲರೂ ಗೊತ್ತು. ನಾನು ಅವರನ್ನು ಹೇಗೆ ಕರೀತೀನೋ ಹಾಗೇ ಅವನೂ ಕೂಡ ಕರೀತಾನೆ. ನಾನು ನಮ್ಮ ಅಜ್ಜಿಯನ್ನು ಅಜ್ಜಿ ಅಂತಾ ಕರೆದ್ರೆ, ಆತ ಅವ್ವ ಅಂತಿದ್ದ. ಚಿಕ್ಕಮ್ಮ, ಚಿಕ್ಕಪ್ಪ ಎಲ್ಲರಿಗೂ ಹಾಗೇ ಹೇಳ್ತಿದ್ದ. ಬೇರೆ ಅವರಿಗೆಲ್ಲ ಈತ ಕೂಡ ನಮ್ಮ ಮನೆಯವನೇನೋ ಅನ್ನಿಸಿಬಿಡಬೇಕು ಹಾಗೆ ಮಾಡ್ತಾನೆ. ಯಾರಾದ್ರೂ ವಿಳಾಸ ಕೇಳ್ಕೊಂಡು ಮನೆ ಬಳಿ ಬಂದ್ರೆ. ಇದು ನಮ್ಮದೇ ಮನೆ ಅನ್ನೋ ಥರ ಮಾತಾಡ್ತಿಲ್ಲ. ಅವರ ಹೆಸರಲ್ಲಿ ಈ ಮನೆ ಇಲ್ಲ ಅಷ್ಟೆ. ಮತ್ತೆಲ್ಲ ಮಾಲೀಕ ಅನ್ನೋ ರೀತಿಯಲ್ಲೇ ಮಾಡ್ತಿದ್ದ. ಮನೆ ಹೊರಗೆ ರಂಗೋಲಿ ತುಂಬಾ ಚೆನ್ನಾಗಿ ಬಿಡ್ತಾನೆ. ಮನೆ ಗುಡಿಸೋದು ಎಲ್ಲವನ್ನೂ ಮಾಡ್ತಿಲ್ಲ. ನಿಮಗೇನೂ ರಂಗೋಲಿ ಹಾಕೋಕೆ ಬರಲ್ಲ. ನಾನು ಅಕ್ಕ-ತಂಗಿಯರ ಜೊತೆ ಬೆಳೆದಿದ್ದೇನೆ. ನೋಡಿ ನಂಗೆ ಹೇಗೆ ಹೇಳಿಕೊಟ್ಟಿದ್ದಾರೆ ಅಂತಾ ಅವನೇ ರಂಗೋಲಿ ಬಿಡ್ತಿದ್ದ. ನಮ್ಮ ಅಮ್ಮನ ಎದುರೇ, ನನಗೆ ರಂಗೋಲಿ ಹೇಳಿಕೊಟ್ಟಿಲ್ಲ ಅಂತಾ ಬೈತಿದ್ದ. ಈ ಕೆಲಸ ನಾನ್ಯಾಕೆ ಮಾಡ್ಬೇಕು ಅನ್ನೋ ಭಾವನೆಯೇ ಇಲ್ಲ. ಇದನ್ನ ಹುಡುಗೀರೇ ಮಾಡ್ಬೇಕು, ಹುಡುಗರೇ ಮಾಡ್ಬೇಕು ಅನ್ನೋದೆಲ್ಲಾ ಇಲ್ಲ. ಎಲ್ಲಾ ಕೆಲಸವನ್ನ ಶ್ರದ್ಧೆಯಿಂದ ಮಾಡ್ತಿದ್ದ’ ಎಂದಿದ್ದಾರೆ.

ಅಪ್ಪು ಅಗಲಿಕೆ ವೇಳೆ ಬಿಕ್ಕಳಿಸಿತ್ತಿದ್ದ ಜಗ್ಗ - ಕೃಷ್ಣ ಸಿನಿಮಾಗೆ ಸ್ಪೂರ್ತಿ

ಜಗದೀಶ್ ಅವರಿಗೆ ನಟ ಪುನೀತ್ ರಾಜ್‌ಕುಮಾರ್ (ಅಪ್ಪು) ಎಂದರೆ ಅಪಾರ ಗೌರವ. ಪ್ರತಿದಿನ ಅಪ್ಪು ಫೋಟೋಗೆ ಪೂಜೆ ಮಾಡುತ್ತಿದ್ದ ಜಗ್ಗ, ಅಪ್ಪು ಅಗಲಿದ ಕಹಿ ಸುದ್ದಿಯನ್ನು ಟಿವಿಯಲ್ಲಿ ನೋಡುವಾಗ ಸೌಮ್ಯ ಅವರ ಜೊತೆ ಕುಳಿತು ಬಿಕ್ಕಿ ಬಿಕ್ಕಿ ಅತ್ತಿದ್ದ ಎಂದು ನೆನಪಿಸಿಕೊಂಡಿದ್ದಾರೆ. ಸೌಮ್ಯ ಅವರ ಮನೆಯಲ್ಲಿದ್ದಾಗ ಇವನ ಕಾಮಿಡಿ, ಮಾತುಗಾರಿಕೆ ಹಾಗೂ ಕ್ಯಾರೆಕ್ಟರ್ ನೋಡಿ ಅವರ ತಂದೆಗೆ ಇವನನ್ನು ಹೇಗಾದರೂ ಮಾಡಿ ಚಿತ್ರರಂಗಕ್ಕೆ ಕಳುಹಿಸಬೇಕು, ದೊಡ್ಡ ಕಾಮಿಡಿಯನ್ ಆಗ್ತಾನೆ ಎನ್ನುವ ಆಸೆಯಿತ್ತಂತೆ. ಅದೇ ರೀತಿ ಡಾರ್ಲಿಂಗ್ ಕೃಷ್ಣ ಮನೆಗೆ ಬಂದಾಗ ಜಗ್ಗ ಮಮ್ಮಿಯ ಮ್ಯಾನರಿಸಂ ನೋಡಿ, ಅವರ ಮೈಂಡ್‌ ಸೈಕಾಲಜಿಯನ್ನೇ ಇಟ್ಟುಕೊಂಡು 'ಲವ್ ಮಾಕ್ಟೇಲ್ 3' ಗಾಗಿ ಕ್ಯಾರೆಕ್ಟರ್ ಸೃಷ್ಟಿ ಮಾಡಲಾಗಿತ್ತು ಎಂದಿದ್ದಾರೆ.

ಬಿಗ್‌ಬಾಸ್‌ನಲ್ಲಿ ಕೆಲಸ ಮಾಡಬೇಡ ಅಂದ ತಕ್ಷಣ ಕೈ ಕಟ್ಟಿದಂತಾಗಿದೆ!

ಜಗ್ಗ ಮಮ್ಮಿಗೆ ಅಡುಗೆ ಮನೆ ಅಂದರೆ ಪ್ರಪಂಚ. ಅವನಿಗೆ ಯಾರಾದರೂ ಅಡುಗೆ ಮನೆಗೆ ಬಂದರೆ ಅಥವಾ ಪಾತ್ರೆಗಳನ್ನು ಆಚೆ ಈಚೆ ಇಟ್ಟರೆ ಕೋಪ ಬರುತ್ತಿತ್ತು. ಅವನು ಇಲ್ಲದ ದಿನ 'ಅಯ್ಯೋ ಇವನಿರಬೇಕಿತ್ತಪ್ಪ' ಅನಿಸುತ್ತಿತ್ತು. ಬಿಗ್‌ಬಾಸ್‌ನಲ್ಲೂ ಆತ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದ. ಆದರೆ ಕಿಚ್ಚ ಸುದೀಪ್ ಸರ್ 'ನೀನು ಕೆಲಸ ಮಾಡಬಾರದು, ನೀನು ಸ್ಪರ್ಧಿ' ಎಂದು ಹೇಳಿದ ತಕ್ಷಣ ಅವನ ಕೈ ಕಟ್ಟಿಹಾಕಿದಂತಾಗಿದೆ. ಜಗ್ಗ ಮಮ್ಮಿಗೆ ಕೆಲಸ ಮಾಡದೇ ಸುಮ್ಮನೆ ಇರಲು ಸಾಧ್ಯವೇ ಇಲ್ಲ" ಎಂದು ಸೌಮ್ಯ ತಮ್ಮ ಹಳೆಯ ದಿನಗಳನ್ನು ವಿವರಿಸಿದ್ದಾರೆ. ಸಾಮಾನ್ಯ ಡೈರಿ ನೌಕರನಾಗಿ, ಸೌಮ್ಯ ಅವರ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಾ, ಇಂದು ಕನ್ನಡಿಗರ ಮನೆ ಮಾತಾಗಿರುವ 'ಜಗ್ಗ ಮಮ್ಮಿ' ಜಗದೀಶ್ ಅವರ ಈ ಪಯಣ ನಿಜಕ್ಕೂ ರೋಚಕ ಹಾಗೂ ಸ್ಪೂರ್ತಿದಾಯಕ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಮೃತಧಾರೆ ಭೂಮಿಕಾಗೆ ಜೀ ಕುಟುಂಬ ಅವಾರ್ಡ್ಸ್‌ನಲ್ಲಿ ಡಬಲ್ ಸರ್ಪ್ರೈಸ್: ಪತಿಯನ್ನು ಕಂಡು ಕಣ್ಣೀರಿಟ್ಟ ನಟಿ
ದುಬೈ ಸಮುದ್ರ ತೀರದಲ್ಲಿ ಪವಿತ್ರ ಬಂಧನ ನಾಯಕಿಯ ಬಿಂದಾಸ್ ಲುಕ್