
ಬೆಂಗಳೂರು/ರಾಮನಗರ (ಅ.07): ಕಂದಾಯ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಆರೋಪದ ಮೇಲೆ, 'ಬಿಗ್ ಬಾಸ್ ಕನ್ನಡ ಸೀಸನ್ 12' ರ ರಿಯಾಲಿಟಿ ಶೋ ನಡೆಯುತ್ತಿರುವ ಬಿಡದಿಯ ಜಾಲಿವುಡ್ ಸ್ಟುಡಿಯೋಗೆ ಬೀಗ ಜಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಜೆ 7 ಗಂಟೆಯೊಳಗೆ ಎಲ್ಲ ಬಿಗ್ ಬಾಸ್ ಸ್ಪರ್ಧಿಗಳು ಮನೆಯಿಂದ ಹೊರಗೆ ಹೋಗುವಂತೆ ಸೂಚನೆ ನೀಡಲಾಗಿದೆ.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ನೋಟಿಸ್ ನೀಡಿದ ಹಿನ್ನೆಲೆಯಲ್ಲಿ, ಕಂದಾಯ ಇಲಾಖೆ ಅಧಿಕಾರಿಗಳು ಸ್ಟುಡಿಯೋಗೆ ಆಗಮಿಸಿದ್ದು, ಸಂಜೆ 7 ಗಂಟೆಯೊಳಗೆ ಎಲ್ಲ ಸ್ಪರ್ಧಿಗಳು ಮನೆಯಿಂದ ಹೊರಗೆ ಹೋಗಲು ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಈ ಬೆಳವಣಿಗೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ದೊಡ್ಡ ಹಿನ್ನಡೆಯಾಗಿದೆ.
ನಿಯಮ ಉಲ್ಲಂಘನೆ: ಸಚಿವರಿಂದಲೇ ಸ್ಪಷ್ಟನೆ:
ಈ ವಿಷಯದ ಕುರಿತು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ಅವರೇ ಸ್ಪಷ್ಟನೆ ನೀಡಿದ್ದಾರೆ. 'ಈ ಹಿಂದೆ ರಾಮನಗರ ಪ್ರಾದೇಶಿಕ ಕಚೇರಿಯವರು ಹೋಗಿ ಪರಿಶೀಲನೆ ನಡೆಸಿ ನೋಟಿಸ್ ಕೊಟ್ಟಿದ್ದರು. ಸ್ಟುಡಿಯೋ ಮಾಲೀಕರು ನೀರು (Water) ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಪರವಾನಿಗೆ (Consent for Operation) ತೆಗೆದುಕೊಂಡಿಲ್ಲ. ಇದು ಕೋರ್ಟ್ ಆದೇಶದ ಉಲ್ಲಂಘನೆ ಮಾಡಿದ ಹಾಗೆ. ಹಾಗಾಗಿ ಕೂಡಲೇ ಶೋ ಅನ್ನು ಕ್ಲೋಸ್ ಮಾಡುವಂತೆ ನೋಟಿಸ್ ನೀಡಲಾಗಿದೆ. ಈಗಾಗಲೇ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿದ್ದು, ಕಾನೂನು ರೀತಿ ಯಾವ ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳಲಿದ್ದಾರೆ ಎಂದು ಸಚಿವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸಚಿವರ ಹೇಳಿಕೆಯ ಬೆನ್ನಲ್ಲೇ, ಜಾಲಿವುಡ್ ಸ್ಟುಡಿಯೋ ನಡೆಯುತ್ತಿರುವ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳ ತಂಡ ಆಗಮಿಸಿದೆ. ತಹಶೀಲ್ದಾರ್ ತೇಜಸ್ವಿನಿ, ಬಿಡದಿ ಇನ್ಸ್‌ಪೆಕ್ಟರ್ ಶಂಕರ್ ನಾಯಕ್ ಸೇರಿದಂತೆ ಆರ್.ಐ. ಮತ್ತು ವಿ.ಎ. ಅಧಿಕಾರಿಗಳು ಸ್ಟುಡಿಯೋ ಒಳಗಡೆ ಪರಿಶೀಲನೆ ನಡೆಸುತ್ತಿದ್ದಾರೆ. ನಿಯಮ ಮೀರಿ ಸ್ಟುಡಿಯೋ ನಡೆಸುತ್ತಿರುವುದು ಖಚಿತವಾದರೆ, ಕೆಲವೇ ಕ್ಷಣಗಳಲ್ಲಿ ಸ್ಟುಡಿಯೋಗೆ ಬೀಗ ಬೀಳುವ ಸಾಧ್ಯತೆ ಇದೆ.
ಅನಧಿಕೃತವಾಗಿ ಮತ್ತು ಪರಿಸರಕ್ಕೆ ಮಾರಕವಾಗಿ ಜಾಲಿವುಡ್ ಸ್ಟುಡಿಯೋ ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪದ ಮೇಲೆ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಬಿಡದಿಯ ಜಾಲಿವುಡ್ ಸ್ಟುಡಿಯೋ ಎದುರು ಕಸ್ತೂರಿ ಕನ್ನಡ ಜನಪರ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕಳೆದ ಎರಡು ವರ್ಷಗಳಿಂದ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ಪಡೆಯದೇ ಮನರಂಜನಾ ಪಾರ್ಕ್ ನಡೆಸುತ್ತಿದ್ದಾರೆ. ಇಂತಹ ಅನಧಿಕೃತ ಜಾಗದಲ್ಲಿ ಬಿಗ್ ಬಾಸ್ ಶೋ ಆರಂಭಿಸಿ ರಾಜ್ಯಕ್ಕೆ ಯಾವ ಸಂದೇಶ ನೀಡುತ್ತಿದ್ದಾರೆ? ಕೂಡಲೇ ಜಾಲಿವುಡ್ ಸ್ಟುಡಿಯೋ ಮತ್ತು ಬಿಗ್ ಬಾಸ್ ಕಾರ್ಯಕ್ರಮ ಎರಡನ್ನೂ ಸ್ಥಗಿತಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.