
ಬೆಂಗಳೂರು (ಜ.16): ಬಿಗ್ ಬಾಸ್ ಕನ್ನಡ ಸೀಸನ್ 12ರ ಅತ್ಯಂತ ಚರ್ಚಿತ ಮತ್ತು ವಿವಾದಾತ್ಮಕ ಸ್ಪರ್ಧಿ ಎಂದೇ ಹೆಸರಾದ ಧ್ರುವಂತ್ ಈಗ ತಮ್ಮ ರೂಪವನ್ನೇ ಬದಲಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯೊಳಗೆ 'ಜೈ ಮಹಾಕಾಳ್' ಎನ್ನುತ್ತಾ, ಉದ್ದನೆಯ ಕೂದಲನ್ನು ಜುಟ್ಟು ಕಟ್ಟಿಕೊಂಡು ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದ ಧ್ರುವಂತ್, ಈಗ ಫಿನಾಲೆಗೂ ಮುನ್ನ ತಮ್ಮ ಕೇಶವಿನ್ಯಾಸವನ್ನು ಬದಲಿಸಿ ಸ್ಮಾರ್ಟ್ ಹೀರೋ ಆಗಿ ಹೊರಹೊಮ್ಮಿದ್ದಾರೆ.
ಟ್ರೋಲಿಗರ ಪಾಲಾದ 'ಒನ್ ಮ್ಯಾನ್ ಆರ್ಮಿ' ಬಿಗ್ ಬಾಸ್ ಮನೆಯಲ್ಲಿದ್ದ 24 ಕಂಟೆಸ್ಟೆಂಟ್‌ಗಳನ್ನು ಮನೆಯಿಂದ ಹೊರಹಾಕಿ, ಟ್ರೋಫಿ ಗೆಲ್ಲುವುದಾಗಿ ಎಂಬ ಆತ್ಮವಿಶ್ವಾಸದಿಂದ 'ಒನ್ ಮ್ಯಾನ್ ಆರ್ಮಿ' ಎಂದು ಬೀಗುತ್ತಿದ್ದ ಧ್ರುವಂತ್, (ಬಿಗ್ ಬಾಸ್ ಮನೆಯಲ್ಲಿದ್ದ 24 ಕಂಟೆಸ್ಟೆಂಟ್‌ಗಳನ್ನು ಹೊರಗೆ ಹಾಕಿದ ಒನ್ ಮ್ಯಾನ್ ಆರ್ಮಿ ಎಂಬ ಹೇಳಿಕೆ) ಫಿನಾಲೆಗೆ ಕೇವಲ 3 ದಿನ ಬಾಕಿ ಇರುವಾಗಲೇ ಮಿಡ್ ವೀಕ್ ಎಲಿಮಿನೇಷನ್ ಮೂಲಕ ಮನೆಯಿಂದ ಹೊರಬಂದಿದ್ದಾರೆ. ಈಗ ಅವರು ತಮ್ಮ ಸಿಗ್ನೇಚರ್ ಸ್ಟೈಲ್ ಆಗಿದ್ದ ಜುಟ್ಟನ್ನು ಕತ್ತರಿಸಿಕೊಂಡಿದ್ದಾರೆ. ಇದನ್ನು ಕಂಡ ನೆಟ್ಟಿಗರು, 'ಕೈಗೆ ಟ್ರೋಫಿನೂ ಸಿಗಲಿಲ್ಲ, ಈಗ ತಲೆಮೇಲೆ ಜುಟ್ಟೂ ಇಲ್ಲ' ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಲೆಳೆಯುತ್ತಿದ್ದಾರೆ. ಆದರೆ, ಅವರ ಅಭಿಮಾನಿಗಳು ಮಾತ್ರ ಈ ಸ್ಮಾರ್ಟ್ ಲುಕ್ ಕಂಡು ಖುಷಿಯಾಗಿದ್ದು, ಸಿನಿಮಾದ ಹೀರೋನಂತೆ ಕಾಣುತ್ತಿದ್ದಾರೆ ಎಂದು ಸಂಭ್ರಮಿಸುತ್ತಿದ್ದಾರೆ.
ಧ್ರುವಂತ್ ಬಿಗ್ ಬಾಸ್ ಮನೆಯೊಳಗೆ ಹೋದ ಮೊದಲ ದಿನದಿಂದಲೂ ಒಂದಲ್ಲ ಒಂದು ವಿವಾದಗಳಿಂದಲೇ ಸುದ್ದಿಯಾದವರು. ಬಿಗ್ ಬಾಸ್ ಮನೆಯ ಹಿರಿಯ ಸ್ಪರ್ಧಿಗಳಿಗೆ ಗೌರವ ನೀಡುತ್ತಿಲ್ಲ ಎಂಬ ಆರೋಪದಿಂದ ಹಿಡಿದು, ಸಹ ಸ್ಪರ್ಧಿಗಳ ಜೊತೆಗಿನ ಕಿರಿಕ್ ವರೆಗೆ ಧ್ರುವಂತ್ ಹೆಸರು ಸದ್ದು ಮಾಡಿತ್ತು. ಎಲ್ಲರೊಂದಿಗೆ ಕಿತ್ತಾಟವಾಡುತ್ತಾ ಮನೆಯ ಬಹುತೇಕರ ವಿರೋಧ ಕಟ್ಟಿಕೊಂಡಿದ್ದರು. ಕಿಚ್ಚ ಸುದೀಪ್ ಕೂಡ ಹಲವು ಬಾರಿ ಅವರ ವರ್ತನೆಯನ್ನು ತಿದ್ದುವ ಪ್ರಯತ್ನ ಮಾಡಿದ್ದರು. ಆದರೂ, ಅವರ ನೇರ ಮಾತು ಹಾಗೂ ಟಾಸ್ಕ್‌ನಲ್ಲಿ ತೋರುತ್ತಿದ್ದ ಕೆಚ್ಚೆದೆಯ ಆಟ ಅವರನ್ನು ಫಿನಾಲೆ ವಾರದವರೆಗೂ ತಂದು ನಿಲ್ಲಿಸಿತ್ತು.
ಇತ್ತೀಚೆಗೆ ಸಂಧ್ಯಾ ಎಂಬ ಚಾರ್ಟೆಡ್ ಅಕೌಂಟೆಂಟ್ ಒಬ್ಬರು ಧ್ರುವಂತ್ ಅವರ 10 ಒಳ್ಳೆಯ ಗುಣಗಳನ್ನು ಪಟ್ಟಿ ಮಾಡುವ ಮೂಲಕ, 'ಧ್ರುವಂತ್ ಅವರೇ ಏಕೆ ಬಿಗ್ ಬಾಸ್ ಟ್ರೋಫಿ ಗೆಲ್ಲಬಾರದು?' ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದ್ದರು. ಸದ್ಯ ಹೊರಬಂದಿರುವ ಅವರು ಫಿನಾಲೆ ವೇದಿಕೆಯಲ್ಲಿ ಯಾವುದಾದರೂ ಒಂದು ಹಾಡಿಗೆ ನೃತ್ಯ ಮಾಡಲಿದ್ದಾರೆಯೇ ಎಂಬ ಕುತೂಹಲವಿದೆ. ಕಲರ್ಸ್ ಕನ್ನಡ ವಾಹಿನಿಯು ಈ ಸ್ಮಾರ್ಟ್ ಹೀರೋ ಲುಕ್‌ನಲ್ಲಿರುವ ಧ್ರುವಂತ್ ಅವರನ್ನು ಯಾವುದಾದರೂ ಧಾರಾವಾಹಿ ಅಥವಾ ಹೊಸ ರಿಯಾಲಿಟಿ ಶೋನಲ್ಲಿ ಬಳಸಿಕೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.