
ಕನ್ನಡ ಕಿರುತೆರೆಯ ಜನಪ್ರಿಯ ಸಂಖ್ಯಾಶಾಸ್ತ್ರಜ್ಞ ಹಾಗೂ 'ಬಿಗ್ ಬಾಸ್' ಖ್ಯಾತಿಯ ಆರ್ಯವರ್ಧನ್ ಗುರೂಜಿ ಅಂದ್ರೆ ಯಾರಿಗೆ ಗೊತ್ತಿಲ್ಲ? ತಮ್ಮ ವಿಭಿನ್ನ ಮ್ಯಾನರಿಸಂ ಮತ್ತು ಸಂಖ್ಯೆಗಳ ಮೇಲಿನ ಅದ್ಭುತ ಹಿಡಿತದಿಂದ ಸದಾ ಸುದ್ದಿಯಲ್ಲಿರುವ ಗುರೂಜಿ, ಇದೀಗ ಮತ್ತೊಂದು ಕುತೂಹಲಕಾರಿ ವಿಚಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಾರೆ. ತಮ್ಮ ಜೀವನದ ಆಧಾರಿತ ಸಿನಿಮಾ ಅಥವಾ 'ಬಯೋಪಿಕ್' ಬಗ್ಗೆ ಮಾತನಾಡುತ್ತಾ, ತಮ್ಮ ಪಾತ್ರವನ್ನು ಯಾರು ನಿರ್ವಹಿಸಬೇಕು ಎಂಬ ಬಗ್ಗೆ ಗುರೂಜಿ ಅಚ್ಚರಿಯ ಆಸೆ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಗುರೂಜಿ ಅವರಿಗೆ, 'ಮುಂದಿನ ದಿನಗಳಲ್ಲಿ ನಿಮ್ಮ ಲೈಫ್ ಸ್ಟೋರಿ ಸಿನಿಮಾ ರೂಪದಲ್ಲಿ ಬಂದರೆ, ನಿಮ್ಮ ಪಾತ್ರದಲ್ಲಿ ನೀವು ಯಾರನ್ನು ನೋಡಲು ಬಯಸುತ್ತೀರಿ?' ಎಂಬ ಪ್ರಶ್ನೆ ಎದುರಾಯಿತು. ಇದಕ್ಕೆ ಕ್ಷಣಾರ್ಧದಲ್ಲಿ ಉತ್ತರಿಸಿದ ಗುರೂಜಿ, 'ನನ್ನ ಬಯೋಪಿಕ್ ಬಂದರೆ ಅದು ರಿಷಬ್ ಶೆಟ್ಟಿಯೇ ಮಾಡಬೇಕು ಎಂದು ಕರಾವಳಿಯ ಪ್ರತಿಭೆ, 'ಕಾಂತಾರ' ನಟನ ಹೆಸರನ್ನು ಸೂಚಿಸಿದ್ದಾರೆ.
ಈ ಆಯ್ಕೆಗೆ ಬಲವಾದ ಕಾರಣವನ್ನೂ ಗುರೂಜಿ ನೀಡಿದ್ದಾರೆ. 'ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರು ತೋರಿಸಿದ ದೈವಿಕ ಕಲ್ಪನೆ ಮತ್ತು ದೇವರ ಕಾನ್ಸೆಪ್ಟ್ ನನಗೆ ತುಂಬಾ ಇಷ್ಟವಾಯಿತು. ನಾನೂ ಕೂಡ ಭದ್ರಕಾಳಿ ಮತ್ತು ನವಗ್ರಹಗಳ ಆರಾಧಕ. ರಿಷಬ್ ಅವರಿಗೆ ದೈವಿಕ ಶಕ್ತಿ ಮತ್ತು ಮಣ್ಣಿನ ನಂಬಿಕೆಯನ್ನು ತೆರೆಯ ಮೇಲೆ ತರುವ ರೀತಿ ಚೆನ್ನಾಗಿ ಗೊತ್ತಿದೆ. ಅವರ ಆ ಶೈಲಿ ನನ್ನ ಪಾತ್ರಕ್ಕೆ ಪಕ್ಕಾ ಸೂಟ್ ಆಗುತ್ತದೆ. ಹಾಗಾಗಿ ನನ್ನ ಸಿನಿಮಾ ಬಂದರೆ ಅವರೇ ಮಾಡಲಿ' ಎಂದು ರಿಷಬ್ ನಟನೆಗೆ ಗುರೂಜಿ ಫಿದಾ ಆಗಿದ್ದಾರೆ.
ಆರ್ಯವರ್ಧನ್ ಗುರೂಜಿ ಅವರು 'ಬಿಗ್ ಬಾಸ್ ಕನ್ನಡ ಸೀಸನ್ 9' ಮತ್ತು 'ಬಿಗ್ ಬಾಸ್ ಒಟಿಟಿ' ಸೀಸನ್‌ನಲ್ಲಿ ಸ್ಪರ್ಧಿಯಾಗಿ ಪಾಲ್ಗೊಂಡು ಕನ್ನಡಿಗರ ಮನೆಮಾತಾಗಿದ್ದರು. ಮನೆಯಲ್ಲಿ ಅವರ 'ಸಂಖ್ಯೆಗಳ ಲೆಕ್ಕಾಚಾರ' ಮತ್ತು ಪ್ರತಿಯೊಂದು ವಿಚಾರಕ್ಕೂ ನಂಬರ್ಸ್ ಹುಡುಕುತ್ತಿದ್ದ ರೀತಿ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿತ್ತು. ರೂಪೇಶ್ ಶೆಟ್ಟಿ ಮತ್ತು ಗುರೂಜಿ ನಡುವಿನ ಸ್ನೇಹ ಕೂಡ ಸಖತ್ ಫೇಮಸ್ ಆಗಿತ್ತು. ಸೋಲಲಿ ಅಥವಾ ಗೆಲ್ಲಲಿ, ಗುರೂಜಿ ಮಾತ್ರ ಎಲ್ಲಿಯೂ ತಮ್ಮ ಕಾನ್ಫಿಡೆನ್ಸ್ ಕಳೆದುಕೊಳ್ಳದೆ ಕೊನೆಯವರೆಗೂ ಮನೆಯಲ್ಲಿದ್ದು ಫೈನಲಿಸ್ಟ್ ಕೂಡ ಆಗಿದ್ದರು.
ಗುರೂಜಿ ಅವರ ಜೀವನ ಕೇವಲ ಮನರಂಜನೆಯಿಂದ ಮಾತ್ರವಲ್ಲದೆ, ಸಾಲು ಸಾಲು ವಿವಾದಗಳಿಂದಲೂ ಕೂಡಿದೆ. ಈ ಹಿಂದೆ ಅವರ ವೈಯಕ್ತಿಕ ಜೀವನದ ಬಗ್ಗೆ ಕೆಲವು ಕಾಂಟ್ರವರ್ಸಿಗಳು ಕೇಳಿಬಂದಿದ್ದವು. ಅಷ್ಟೇ ಅಲ್ಲದೆ, ಅವರು ಹೇಳುವ ಸಂಖ್ಯಾಶಾಸ್ತ್ರದ ಭವಿಷ್ಯಗಳು ಹಲವು ಬಾರಿ ಟ್ರೋಲ್‌ಗಳಿಗೂ ಆಹಾರವಾಗಿವೆ. ಚುನಾವಣಾ ಫಲಿತಾಂಶ ಅಥವಾ ಕ್ರಿಕೆಟ್ ಮ್ಯಾಚ್‌ಗಳ ಬಗ್ಗೆ ಅವರು ಹೇಳುವ ಲೆಕ್ಕಾಚಾರಗಳು ಉಲ್ಟಾ ಹೊಡೆದಾಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆಗಳು ವ್ಯಕ್ತವಾಗುತ್ತಿದ್ದವು. ಆದರೂ, 'ನನ್ನ ಸಂಖ್ಯೆ ಯಾವತ್ತೂ ಕೈಕೊಡುವುದಿಲ್ಲ' ಎನ್ನುವ ಅವರ ಹಠ ಮತ್ತು ವಿಶಿಷ್ಟ ವ್ಯಕ್ತಿತ್ವವೇ ಅವರನ್ನು ಇಂದಿಗೂ ಸುದ್ದಿಯಲ್ಲಿರುವಂತೆ ಮಾಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.