ಪತ್ನಿ ಅಪರ್ಣಾ ಜೊತೆ ಕಳೆದ ಆಪ್ತ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡ ನಾಗರಾಜ್ ವಸ್ತಾರೆ

By Mahmad RafikFirst Published Jul 16, 2024, 9:53 AM IST
Highlights

ನಾನು ಮತ್ತು ಅಪರ್ಣೆ ತುಂಬಾ ಖಾಸಗಿಯಾಗಿ ಬದುಕಿದವರು ಎಂದು ನಾಗರಾಜ್ ವಸ್ತಾರೆ ಹೇಳಿದ್ದರು. ಸೋಶಿಯಲ್ ಮೀಡಿಯಾದಲ್ಲಿಯೂ ಖಾಸಗಿ ಬದುಕಿನ ಕುರಿತ ಯಾವುದೇ ಮಾಹಿತಿಯನ್ನೂ ಅಪರ್ಣಾ ಮತ್ತು ನಾಗರಾಜ್ ಹಂಚಿಕೊಳ್ಳುತ್ತಿರಲಿಲ್ಲ. 

ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ, ಕನ್ನಡತಿ ಅಪರ್ಣಾ (Kannada Anchor Aparna) ನಿಧನಕ್ಕೆ ಇಡೀ ಕರುನಾಡು ಕಣ್ಣೀರಿಟ್ಟಿದೆ. ಎರಡು ವರ್ಷಗಳಿಂದ ಮಾರಕ ಕಾಯಿಲೆ ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದರೂ ಈ ವಿಷಯವನ್ನು ಯಾರೊಂದಿಗೂ ಅಪರ್ಣಾ ಹಂಚಿಕೊಂಡಿರಲಿಲ್ಲ. ತುಂಬಾ ಅತ್ಯಾಪ್ತರಾದ ಬೆರಳಣಿಕೆಯಷ್ಟೇ ಜನರಗೆ ಈ ವಿಷಯ ಗೊತ್ತಿತ್ತು. ತಮ್ಮ ಅನಾರೋಗ್ಯದ ವಿಷಯವನ್ನು ಯಾರ ಬಳಿಯೂ ಹೇಳಬಾರದೆಂದು ಅಪ್ತರ ಬಳಿಯಲ್ಲಿಯೂ ಅಪರ್ಣಾ ಮಾತು ತೆಗೆದುಕೊಂಡಿದ್ದರು. ನಾನು ಮತ್ತು ಅಪರ್ಣೆ ತುಂಬಾ ಖಾಸಗಿಯಾಗಿ ಬದುಕಿದವರು ಎಂದು ನಾಗರಾಜ್ ವಸ್ತಾರೆ (Nagaraj Ramaswamy Vastarey) ಹೇಳಿದ್ದರು. ಸೋಶಿಯಲ್ ಮೀಡಿಯಾದಲ್ಲಿಯೂ ಖಾಸಗಿ ಬದುಕಿನ ಕುರಿತ ಯಾವುದೇ ಮಾಹಿತಿಯನ್ನೂ ಅಪರ್ಣಾ ಮತ್ತು ನಾಗರಾಜ್ ಹಂಚಿಕೊಳ್ಳುತ್ತಿರಲಿಲ್ಲ. 

ಇದೀಗ ಪತ್ನಿ ನಿಧನದ ಬಳಿಕ ನಾಗರಾಜ್ ವಸ್ತಾರೆ ದೀರ್ಘ ಕವನ ಮತ್ತು ಅಪರ್ಣಾ ಜೊತೆಗಿನ ಸುಂದರ ಫೋಟೋಗಳನ್ನು ನಾಗರಾಜ್ ವಸ್ತಾರೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇದು ವರ್ಷದ ಹಿಂದಿನದು, ಆವಾಗ ಇದನ್ನು ಹೊರಮಾಡುವ ಮನಸ್ಸಿರಲಿಲ್ಲ ಎಂದು ಕವನದ ಕೊನೆಗೆ ನಾಗರಾಜ್ ಬರೆದುಕೊಂಡಿದ್ದಾರೆ.

Latest Videos

"ಅಪರ್ಣಾಗೆ 6 ತಿಂಗಳು ಬದುಕೋದೆ ಡೌಟ್ ಎಂದಿದ್ದರು, ಛಲದಿಂದ ಒಂದೂವರೆ ವರ್ಷ ಬದುಕಿದ್ಳು"!

ನಾಗರಾಜ್ ವಸ್ತಾರೆ ಫೇಸ್‌ಬುಕ್ ಪೋಸ್ಟ್

ಮಂತ್ರಪಠಣದ ನಡುವೆ ನುಡಿತಪ್ಪಿದಂತುಂಟಾದ ನಮ್ಮನ್ನು 
ಯಾತಕ್ಕು ಇದ್ದುಕೊಳ್ಳಿರೆಂದು ಸುಮ್ಮನೆ ಒಡಮಾಡಲಾಯಿತು
ಹಿಡಿಗಾತ್ರದ ಹೃದಯಕ್ಕೆ ಇಡಿಜಗತ್ತಿನ ನೋವು ಬರೆದು 
ಅನುಭವಿಸಿರೆಂದು ಒಡನೋದಿಸಲಾಯಿತು
ಇದೇ ಮೇರೆಗೆ ನಿಘಂಟುದಪ್ಪದ ಪುಸ್ತಕದೊಳಗೆ 
ಯಾರೋ ಒತ್ತಿರಿಸಿ ಮರೆತ ಎರಡು ಹೂಪಕಳೆಗಳಂತೆ 
ಒತ್ತಿ ಒತ್ತರಿಸಿಕೊಂಡಿದ್ದೆವು 
ಇನ್ನು ಆಯ್ಕೆಯ ಅವಕಾಶವೇ ಇಲ್ಲದೆ ತತ್ತರಿಸಿಕೊಂಡಿದ್ದೆವು 
ಅದಿಬದಿಯ ಸಂಗತಿಯಿರಲಿ ಒಡನಿರುವ ಅರ್ಥವನ್ನೂ ಅರಿಯದೆ 
ಹೀಗೇತಕ್ಕೆಂದು ತಲೆಕೆಡಿಸಿಕೊಳ್ಳದೆ ಅಥವಾ ಕೆಡಿಸಿಕೊಳ್ಳತಕ್ಕ 
ತಲೆಯೇ ಇಲ್ಲದೆ ನಮ್ಮ ಪಾಡಿಗೆ ನಾವಿದ್ದೆವು
ಪುಪ್ಪುಸಗಳನ್ನು ಗಾಳಿಗೆ ಅಡವಿಡಲಾಗಿತ್ತು 
ಉಸುರುವ ಹಕ್ಕಿರಲಿಲ್ಲ
ಅಂಗೈಯಲ್ಲಿ ಕಿಟಕಿ ಹೂಡಲಾಗಿತ್ತು 
ಕಾಣುವ ಅಪ್ಪಣೆಯಿರಲಿಲ್ಲ
ಬೆನ್ನುಹುರಿಗೆ ಗೆಜ್ಜೆ ಬಿಗಿಯಲಾಗಿತ್ತು 
ಸದ್ದಿನ ಸನ್ನದಿರಲಿಲ್ಲ 
ಪೂರ್ತಾಕಾಶದ ರಹ ತೆರೆಯಲಾಗಿತ್ತು 
ಬೆಳಕಿಗೆ ಎಡೆಯಿರಲಿಲ್ಲ 
ಸದಾ ತಲೆಯೆತ್ತಿರುವ ಸೊಕ್ಕು ನಸೀಬಿನಲ್ಲಿತ್ತು
ಮೋಡ ರಾಚುವಾಗ ತಗ್ಗಿ ಬಗ್ಗಿ ಡೊಗ್ಗಿ ತಪ್ಪಿಸಿಕೊಳ್ಳಲಿಕ್ಕೆ ಬೆನ್ನಿರಲಿ 
ಸರಿಮೈಯೇ ನಮಗಿರದಾಗಿತ್ತು 
ಇಷ್ಟಿದ್ದೂ ಇದ್ದೇ ಇದ್ದೆವು
ಮೌನವೇ ನೋವಿನ ಪ್ರತ್ಯರ್ಥವೆಂದು ಬಗೆದು 
ತಾಳ್ಮೆಯೊಳಗಿನ ಅತ್ಯರ್ಥ ತೆಗೆದು 
ಇತ್ಯರ್ಥದ ಯೋಚನೆಯನ್ನೇ ಎಡತಾಕಗೊಡದೆ ಸರಿದೂರಕ್ಕೊಗೆದು
ಇರುವ ಕರುಮ ತೀರಿಕೊಳ್ಳಲೆಂದು ನಾವೇ ನಾವಾಗಿದ್ದೆವು 
ಈ ನಡುವೆ ಹೀಗೆಲ್ಲ ಪದ್ಯ ಬರೆಯಬೇಡವೆಂದು ನೋವು ಹೇಳಿತು
ನರನರಕ್ಕು ಹೊಕ್ಕು ಅಲುಗಿಸುವ ನಿಮ್ಮ ನರಕದ ಗೋಳನ್ನು 
ಯಾರೂ ಕೇಳಬಯಸುವುದಿಲ್ಲವೆಂದು ತಾಕೀತು ಮಾಡಿತು 
ಸರಿಯೆಂದು ಬರೆಯನಿಲ್ಲಿಸಿದರೆ 
ಮೈಯೊಳಗಿನ ಇಪ್ಪತ್ತೊಂದು ಲಕ್ಷಕೋಟಿ ನರಗಳೊಟ್ಟಾಗಿ ಒಕ್ಕೊರಲಾಗಿ 
ಬರೆಬರೆಯೆಂದು ಬೊಬ್ಬಿರಿದವು
ಪದ್ಯವೇ ನೋವು ನೀಗುವತ್ತಲಿನ ಸರಿದಾರಿಯೆಂದು 
ಮನವರಿಕೆಗೆ ಮೊದಲಾದವು
ತೂಗುದೀಪದ ವಾಲಾಡುವ ಜ್ವಾಲೆಗೆ ತೆಳ್ಳಗೆ ನೇತಲುಗುವ ಅದೃಷ್ಟವೂ
ಇದೇ ಸರಿಯೆಂದು ಮರುಮರಳಿ ಸಾರಿತು
ಮಾಯತಕ್ಕ ಸರಿತರೀಕೆಯೆಂದರೆ ಜಗತ್ತಿನಲ್ಲಿನ ಇತರರು 
ನಿಮಗೂ ಹೆಚ್ಚು ನೋವಿನಲ್ಲಿರುವುದನ್ನು ಅರಿತಂದೆಂದು ಸಾರಿ ಸಾರಿ ಮೊಳಗಿತು
ಸರಿಪದ್ಯ ಹುಟ್ಟುವುದೇ ನೋವಿನ ಮಧ್ಯದಲ್ಲೆಂದು ಏತನ್ಮಧ್ಯೆ 
ತಿಳಿದವರೊಬ್ಬರು ತಿಳಿಹೇಳಿದರು 
ಭಗವದ್ಗೀತೆಯನ್ನು ಮೊದಲು ಯುದ್ಧಭೂಮಿಯಲ್ಲಿ ಆಡಲಾಯಿತು
ಸಾಯನಿಂತವರು ಮುಗಿಯುವ ಮುನ್ನದ ಮಹಾಕ್ಲೇಶವು ಅದನ್ನು ಹುಟ್ಟಿಸಿತು 
ಅದರ ಮೊದಲ ಅಧ್ಯಾಯವೇ ವಿಷಾದಯೋಗವಷ್ಟೆ
ಗೀತೆಯಾಡಿದ ಮೇಲೆ ರಣಭೂಮಿಯೇ ಸರಿಮರಣದ ಬರಿಯೆಡೆಯಾಯಿತು  
ಕಾಣಿ ಕಾಣಿರೆಂದು ಹತ್ತೆಂಟು ಬಾರಿ ದೃಷ್ಟಾಂತವಿಟ್ಟು ಹೇಳಿದರು
ನೋವು ಕತ್ತಲಿದ್ದ ಹಾಗೆ 
ಕಾಣುವ ಕಾಣಿಸುವ ಬೆಳಕುದಿಸಿದ್ದು ಅದರೊಳಗಿಂದಲೇ ಎಂದು 
ಎಂಥದೋ ಕಣ್ಮನಸಿಗೆಟುಕದ ಸಿದ್ಧಾಂತವರುಹಿದರು 
ನಿರೀಕ್ಷೆಯೇ ಮೊದಲಾಯಿತು 
ಚಳಿಯೆದುರು ಎಲೆಯುದುರುವ ಹಾಗೆ ಗಳಿಗೆಗಳು ಮೈಕಳೆದು ಮುಗಿದವು
ತುಟಿಗೆಟುಕದ ಗುಟುಕುಗಳಂತೆ ನಾಳೆಗಳು ಉರುಳುರುಳಿ ಮುಗಿದವು
ಕಾಲದ ಹೊಸಹೊಸಲಿನಲ್ಲಿ ಲೋಕವು ಬೀದಿಮೆರೆತಕ್ಕೆ ತೊಡಗಿದ ಸರಿರಾತ್ರಿಯಲ್ಲಿ   
ಇಬ್ಬರ ಒಳಗುಂಡಿಗೆಗಳೂ ಲೂಟಿಗೊಂಡ ಶಹರದ ಹೆಬ್ಬಾಗಿಲಂತೆ 
ಕುಸಿದು ನೆಲಕಚ್ಚಿದ್ದವು
ನರಕದ ಹೆದ್ದಾರಿಯಂತಿದ್ದ ಆ ನಟ್ಟಿರುಳಿನಲ್ಲಿ ಅದೃಷ್ಟವೆಣಿಸಿದರೆ 
ಅಂಗೈಗಳು ಒಡೆದ ಕನ್ನಡಿ ತೆರೆದು ನುಚ್ಚಾದ ನೂರು ಭವಿಷ್ಯವನ್ನರುಹಿದವು 
ನೋಡುನೋಡುತ್ತಲೇ ಏನೆಂತೆಷ್ಟು ಜರುಗಿಹೋದವು
ಇದಲ್ಲ ಅದಲ್ಲ ಯಾವುದೂ ಸಲ್ಲದೆಂಬ ಪಟ್ಟು ಪ್ರತಿಪೆಟ್ಟಿನ ನಡುವೆ 
ಬದಲಿದ ಪಠ್ಯದೊಳಗೆ ಇನಿತಾದರೂ ಬದುಕು ಬದಲದೆ
ರಾಮನಾಮ ಪಾಯಸದೆದುರು ಟಿಪ್ಪೂನಾಮದ ಹುಸಿ ಚಪ್ಪರಿಕೆಯೂ
ಬರಿಮಾತಿನ ಕೊಪ್ಪರಿಗೆಯೊಳಗೆ ನಿಜಸವರಿದ ಸುಳ್ಳಿನುಪ್ಪೇರಿಯೂ 
ಪದೇಪದೇ ತುಂಬಿ ಮೈದುಂಬಿಕೊಂಡುಂಟಾದವು 
ಇದ್ದು ಸತ್ತವರ ಚರಿತೆಯು ಇದ್ದೂ ಇರದವರನ್ನು ಇರದೆ ಇದ್ದವರೊಡನೆ 
ಹೂಡಿ ಕೂಡಿ ಕಾಡಿ ಬಾಯಿಗೆ ಬಂದದ್ದಾಡಿ ಕೊಂದಿತು
ಎಡಬಲವೆಂದೆರಡಾಗಿ ಒಡೆದ ಜಗತ್ತು ಜರುಗಲು ಎರಡೂ ಅಲ್ಲದ ನಡುದಾರಿ 
ಕಾಣದೆ ಕಂಗೆಟ್ಟಿತು
ಜರುಗುವುದೆ ಜಗವು ಜರುಗದ್ದದಲ್ಲವು ಎಂಬ ಹಳೆವಾಣಿಯೆದುರು 
ಕಂಡಕಂಡ ಕಡೆ ಅದು ಸೊಂಡಿಲು ಚಾಚಿ ರಾಚಿ ಮುನ್ನಡೆದ ಮಧ್ಯೆ  
ಬದುಕಿನ ಬೇಸಾಯ ಪೂರಯಿಸುವ ಮುನ್ನವೇ ನಾವು 
ಸಾವಿನ ಸಾಗುವಳಿಗೆ ಅನುವಾದೆವು
ಅವರದೊಂದು ಮಾತು ಇಬ್ಬರ ಬದುಕನ್ನೂ ಅನಾಮತ್ತನೆ ಬದಲಿಸಿಟ್ಟಿತು
ಅದಕ್ಕಿಂತ ಸಾವಿನ ಜಾಡು ಬದಲಾಯಿತು 
ನೋಯುವ ಮೈಯಿ ಸಾವಿನ ಸಾರಿಗೆಯೆಂದು ಹಿಂದೊಮ್ಮೆ ಉಡಾಫೆಗೆ ಬರೆದಿದ್ದು 
ಇದೀಗ ಕಡುದಿಟದ ಅರಿವಾಗಿ ಮೈಗೂಡಿತು
ಹೇಗಿದ್ದೀರೆಂದು ಕೇಳುವಲ್ಲಿ ಹೇಗಿಲ್ಲವೆಂದು ಆಡಿದೆವು 
ಏನಾಯಿತೆಂದರೆ ಏನಲ್ಲವೆಂದು ಹೇಳಹೆಣಗಿದವು
ಹಲವು ದೇಶಾವರಿಯೆದುರು ಕೆಲಸಾರಿ ಸುಮ್ಮಗೆ ನಸುನಕ್ಕೆವು
ನಿಜದೊಳಗಿನ ನಿಜವೇನೆಂದರೆ 
ಇರುಳಿರುಳೂ ಕಗ್ಗತ್ತಲಿನ ಮುಸುಡಿಗಟ್ಟಿ ಚೀರುವ ನೋವನ್ನೆಂದೂ ಆಡಲಾರೆವು
ದಿಗಿಲಿನ ಗುಹೆಯೊಳಗಿನ ಮತಿಗೆಟ್ಟ ಬಾವಲಿಗಳ ಹಾರುಪೇರನ್ನೆಲ್ಲೂ ತೋಡಲಾರೆವು 
ಬವರವೋ ಬವಳಿಯೋ ಜ್ವರವೋ ಜ್ವಾಲಾಮುಖಿಯೋ ಗರವೋ ಬರಗೆಟ್ಟ ಸಡಗರವೋ 
ತೋಚದ ತೋಚುಗಾಣಿಸದ 
ಒಟ್ಟಾರೆ ಗೋತಹೊಡೆದ ಪಟಸೂತ್ರವೆಳೆಯುತ್ತ ಮಗ್ಗುಲಾದೆವು
ಮಂತ್ರವೊಂದರ ಮಧ್ಯೆ ಉಲಿಗೆಟ್ಟುಂಟಾದೆವಷ್ಟೆ 
ನೂರೆಂಟು ಮದ್ದುಮಾತ್ರೆಗಿಂತ ಫಲಿಸಲೊಲ್ಲದ ಮಂತ್ರತಂತ್ರವೇ ಲೇಸೆಂದು 
ಸಲೀಸೆನಿಸುವ ಮಹಿಮೆಯೆದುರು ಕಾದೆವು ಕಾದೆವು ಮತ್ತು ಕಾದೇ ಕಾದೆವು
ಮೈಯನ್ನೇ ಮೈಯಿ ಕಾಯುತ್ತಿದ್ದಿತಷ್ಟೆ 
ತಕ್ಕುದಾಗಿ ನಮ್ಮನ್ನೇ ನಾವು ಕಾದುಕೊಂಡೆವು 
ಪದ್ಯವಾಗಿ ಒಡಮೂಡದೆ ಪದಪದ ಬೆನ್ನುಹತ್ತಿ ಸೋತೆವು
ರೂಪಕಗಳ ಹಿಂದವಿಯುವ ಕಸುಬರಿತಿದ್ದೆವಷ್ಟೆ 
ನೋವು ಸಾಯದಿದ್ದರೂ ಸಾವು ನೋಯಲೆಂದು ಹಪಹಪಿಸಿ ಶಪಿಸಿ 
ಉಳಿದುಬಳಿದುದನ್ನೆಲ್ಲ ಬಳಿದು ಬಳಿಗೊಳಿಸಿ ತುಸುತುಸುವೇ ಅಸುವೆಣಿಸಿದೆವು   

ಖ್ಯಾತ ನಿರೂಪಕಿ ಅಪರ್ಣಾರ ಕೊನೆ ಆಸೆ ಬಗ್ಗೆ ಹೇಳಿ ಭಾವುಕರಾದ ಪತಿ ನಾಗರಾಜ್ ವಸ್ತಾರೆ

 

click me!