ಹೆಂಡ್ತಿ ಹತ್ರ ಸರಿಯಾಗಿ ಮುಖ ಕೊಟ್ಟು ರೊಮ್ಯಾಂಟಿಕ್ ಆಗಿ ಮಾತಾಡೋಕೂ ನಾಚಿಕೊಳ್ಳೋ ಗೌತಮ್ ದಿವಾನ್ ಅಂತೂ ಭೂಮಿಯ ತಲೆಗೆ ಮಲ್ಲಿಗೆ ಹೂ ಮುಡಿಸಿದ್ದಾನೆ. ಅಷ್ಟೇ ಸಾಲದೆ, ಕವಿಯಂತೆ ಮಾತಾಡಿ ಭೂಮಿಯ ಮನಸ್ಸನ್ನು ಮೆಚ್ಚಿಸಿದ್ದಾನೆ. ಸೂಪರ್ ಡುಮ್ಮಾ ಸಾರ್ ಅಂತಿದಾರೆ ಫ್ಯಾನ್ಸ್..
'ಅಮೃತಧಾರೆ' ಧಾರಾವಾಹಿಯಲ್ಲಿ ಗೌತಮ್- ಭೂಮಿಕಾ ನಡುವೆ ಅರಳುತ್ತಿರುವ ಪ್ರೀತಿಯು ಸಣ್ಣ ಸಣ್ಣ ವಿಷಯಗಳಲ್ಲಿ ವ್ಯಕ್ತವಾಗುತ್ತಿದ್ದು, ಇದನ್ನು ವೀಕ್ಷಕರು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದಾರೆ. ಇದೀಗ ಮುದ್ದು ಮಡದಿಗೆ ಮಲ್ಲಿಗೆ ಮುಡಿಸಿದ್ದಾರೆ ಗೌತಮ್ ಸಾರ್. ಈ ಸೀನ್‌ನ ಪ್ರೋಮೋಗೆ ಬಹಳಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮುದ್ದಾದ ಜೋಡಿ ಅಂತಿದಾರೆ.
ಭೂಮಿಕಾಗೆ ಹೂ ಮುಡುಸ್ತೀನಿ ಎಂದು ಗೌತಮ್ ಕೇಳ್ತಿದ್ದಂಗೇ ಹೂವಿನಂತೇ ಅರಳುತ್ತೆ ಭೂಮಿ ಮುಖ. ಹೂವು ಅಲರ್ಜಿ ಅಲ್ವಾ ನಿಮ್ಗೆ ಕೇಳಿದ್ಕೆ, 'ಪರ್ವಾಗಿಲ್ಲ ಅದಕ್ಕೊಂದು ಟ್ಯಾಬ್ಲೆಟ್ ತಗೋತೀನಿ' ಅಂತಾ ಮಡದಿಯ ಮುಡಿಗೆ ಮಲ್ಲಿಗೆ ಮಾಲೆ ಮುಡಿಸುತ್ತಾನೆ ಗೌತಮ್. ಸಂತೋಷದ ಕಣ್ಣೀರನ್ನು ತೋರಿಸಿಕೊಳ್ದೇ ಒರೆಸ್ಕೊಳ್ತಾಳೆ ಭೂಮಿಕಾ.
ಈ ಸೀನ್ ನೋಡಿ ಗೆಳೆಯ ಆನಂದನಿಂದ ಪತ್ನಿಗೆ ಪ್ರೀತಿ ತೋರೋದ್ರಲ್ಲಿ ಗೌತಮ್ ದಿನದಿಂದ ದಿನಕ್ಕೆ ಇಂಪ್ರೂವ್ ಆಗ್ತಿದಾನೆ ಅಂತ ಕೆಲ ನೆಟ್ಟಿಗರು ಹೇಳ್ತಿದಾರೆ.
ಇದೇ ಸಮಯದಲ್ಲಿ ಸಡನ್ ಆಗಿ ಬಂದು ಅವರಿಬ್ಬರ ಫೋಟೋ ತೆಗೆವ ಪಾರ್ಥ, ಈ ಪೋಟೋನ ಸ್ಟೇಟಸ್, ಡಿಪಿ ಎಲ್ಲ ಕಡೆ ಹಾಕ್ತೀನಿ. ಮಿಸಸ್‌ಗೆ ಮಲ್ಲಿಗೆ ಹೂ ಮುಡಿಸಿದ ದ ಗ್ರೇಟ್ ಗೌತಮ್ ದಿವಾನ್ ಅಂತಾ ಫೋಟೋ ವೈರಲ್ ಆಗುತ್ತೆ ಅಂತಿದ್ರೆ ಭೂಮಿಕಾ ಸಂತೋಷ ಇಮ್ಮಡಿಯಾಗ್ತಿದೆ.
ಇನ್ನು ಹೂ ಮುಡ್ಕೊಂಡು ಹೇಗೆ ಕಾಣಿಸ್ತಿದೀನಿ ಅಂತ ಭೂಮಿ ಗೌತಮ್‌ಗೆ ಕೇಳ್ದಾಗ, 'ಚೆನಾಗ್ ಕಾಣಿಸ್ತಿದೀಯಾ, ಮಲ್ಲಿಗೆ ಮುಡ್ದಿರೋ ತಾವರೆ ಹೂ ತರಾ' ಅಂತಾನೆ. ಭೂಮಿಗೆ ತನ್ನ ಕಿವಿನೇ ನಂಬಕ್ಕಾಗ್ದೆ ಮತ್ತೊಮ್ಮೆ ಅದ್ನ ಕೇಳ್ದಾಗ, 'ಹೂವುನ್ನೇ ಹೂ ಮುಡ್ಕೊಂಡಿರೋ ತರಾ ಇದೆ' ಅಂತಾನೆ ಡುಮ್ಮಾ ಸಾರ್.
ಅರೆ, ಸದಾ ತನ್ಹತ್ರ ಬೆಬ್ಬೆಬ್ಬೆ ಅನ್ನೋ ಗೌತಮ್‌ಗೆ ಹೀಗೂ ಮಾತಾಡೋಕ್ ಬರುತ್ತಾ ಅಂತ ಭೂಮಿಗೆ ಅಚ್ಚರಿಯಾದ್ರೆ, ಗೌತಮ್‌ಗೆ ತಾನಾಡಿದ್ ಮಾತ್ ಬಗ್ಗೆ ತನ್ಗೇ ಮುಜುಗರ ಆಗತ್ತೆ. ಆದ್ರೆ ಕಚೇರಿಗೆ ಹೊರಟ ಗೌತಮ್ ತಿರುಗಿ ಭೂಮಿ ಮುಖ ನೋಡಿ ನಗ್ತಾ ಹೋಗುವಾಗ ಇವರಿಬ್ರ ಜೀವನದಲ್ಲೂ ತಂಗಾಳಿ ಬೀಸ್ತಿರೋ ಖುಷಿ ಪ್ರೇಕ್ಷಕರದ್ದು.