ಒಂದು ಹಿಡಿ ಪ್ರೀತಿಗಾಗಿ: ಗೇಬ್ರಿಯಲ್ ಗಾರ್ಸಿಯಾ ಮಾರ್ಕೆಸ್‌ ಹುಟ್ಟುಹಬ್ಬ

By Kannadaprabha NewsFirst Published Mar 6, 2022, 10:49 AM IST
Highlights

ಇಂದು ಲವ್‌ ಇನ್‌ ದಿ ಟೈಮ್‌ ಆಫ್‌ ಕಾಲರಾದಂಥ ಅಪೂರ್ವ ಪ್ರೇಮಕಥನವನ್ನು ಓದುಗರಿಗೆ ಕೊಟ್ಟಗೇಬ್ರಿಯಲ್‌ ಗಾರ್ಸಿಯಾ ಮಾರ್ಕೆಸ್‌ ಹುಟ್ಟುಹಬ್ಬ. ಪ್ರೇಮದ ಹಂಬಲ ಎಲ್ಲ ಕಲೆಯನ್ನೂ ಆವರಿಸಿಕೊಂಡಿರುವ ಈ ಕಾಲದಲ್ಲಿ ಪ್ರೇಮಕ್ಕಾಗಿ ಹಂಬಲಿಸುವ ಪ್ರತಿಯೊಬ್ಬರೂ ನೆನಪಿಸಿಕೊಳ್ಳುವ ಜೀವ ಮಾರ್ಕೆಸ್‌. ಮಾರ್ಕೆಸ್‌ ನೆನಪಲ್ಲಿ ಪ್ರೇಮಕ್ಕೊಂದು ಬಿನ್ನಹ.

ಜೋಗಿ

ಅವನು ಹಲವಾರು ಅಪರಾಧಗಳಲ್ಲಿ ಭಾಗಿಯಾಗಿದ್ದ. ಅವನನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ನಿಲ್ಲಿಸಿದಾಗ, ನ್ಯಾಯಾಲಯ ಅವನನ್ನು ಕೇಳುತ್ತದೆ; ‘ನೀನು ಮಾಡಿರುವ ಯಾವ ಅಪರಾಧಕ್ಕೂ ಲಾಭದ ಉದ್ದೇಶ ಇರಲಿಲ್ಲ. ಮತ್ಯಾಕೆ ನೀನು ಅಪರಾಧ ಮಾಡುತ್ತಲೇ ಹೋದೆ. ಏನು ಬೇಕಾಗಿತ್ತು ನಿನಗೆ?’

ಆತ ಉತ್ತರಿಸುತ್ತಾನೆ: ‘ನನಗೆ ಒಂದು ಹಿಡಿ ಪ್ರೀತಿ ಬೇಕಾಗಿತ್ತು.’

ಈ ಒಂದು ಹಿಡಿ ಪ್ರೀತಿಗಾಗಿ ಏನೆಲ್ಲ ನಡೆದಿದೆ, ಏನೆಲ್ಲ ನಡೆಯುತ್ತಿದೆ, ಏನೆಲ್ಲ ನಡೆಯಲಿದೆ ಅನ್ನುವುದೇ ಈ ಕಾಲದ ಅನೂಹ್ಯ ಬೆರಗು. ದುಡ್ಡು ಸಂಪಾದಿಸಬಹುದು, ನ್ಯಾಯ ತಡವಾಗಿಯಾದರೂ ಸಿಗಬಹುದು, ಆರೋಗ್ಯ ಕಾಪಾಡಿಕೊಳ್ಳಬಹುದು, ಉದ್ಯೋಗ ದೊರಕಿಸಿಕೊಳ್ಳಬಹುದು, ಜ್ಞಾನ ಗಳಿಸಬಹುದು, ಆಯಸ್ಸು ವೃದ್ಧಿಸಿಕೊಳ್ಳಬಹುದು. ತನ್ನದು, ತನಗಷ್ಟೇ ಮೀಸಲು ಅನ್ನುವ ಪ್ರೀತಿಯನ್ನು ಹೊಂದುವುದು ಹೇಗೆ ಎಂಬ ಪ್ರಶ್ನೆಗೆ ಈ ಕಾಲದ ಎಲ್ಲ ಕಲಾಮಾಧ್ಯಮಗಳೂ ಏಕಕಾಲದಲ್ಲಿ ಉತ್ತರ ಹುಡುಕುತ್ತಿರುವಂತಿವೆ.

ಈ ಪ್ರೀತಿಯ ಹಂಬಲ ಇಂದು ನಿನ್ನೆಯದಲ್ಲ. ಚೆನ್ನ ಮಲ್ಲಿಕಾರ್ಜುನನಿಗೆ ಹಂಬಲಿಸಿದ ಅಕ್ಕಮಹಾದೇವಿ, ಗಿರಿಧರನ ಧ್ಯಾನದಲ್ಲಿ ಕಳೆದುಹೋದ ಮೀರಾ, ಸಂಸ್ಥಾನಗಳನ್ನೇ ಉರುಳಿಸಿದ ಹೆಲೆನ್‌, ಪ್ರೇಮಕ್ಕಾಗಿ ಪ್ರಾಣ ತೆತ್ತ ಇತಿಹಾಸದ ಅಮರ ಪ್ರೇಮಿಗಳು, ಶೇಕ್ಸ್‌ಪಿಯರ್‌ ಕಡೆದಿಟ್ಟರೋಮಿಯೋ-ಜೂಲಿಯಟ್‌, ನಮ್ಮವರೇ ಆದ ಸೋಹ್ನಿ-ಮಹಿವಾಲ್‌, ದೇವದಾಸ್‌-ಪಾರ್ವತಿ- ಹೀಗೆ ಪ್ರೇಮವನ್ನು ವೈಭವೀಕರಿಸಿದ ಕತೆಗಳು ನಮ್ಮ ಮುಂದೆ ನೂರಾರಿವೆ. ಎಲ್ಲ ಎಲ್ಲೆಗಳನ್ನು ದಾಟಿದ ಯಶೋಧರೆಯ ಕತೆಯಿದೆ.

ಇವೆಲ್ಲ ಚರಿತ್ರೆಯ ಪುಟಗಳಲ್ಲಿ ಕಾಣಸಿಗುವಂಥ ಕತೆಗಳು. ಕೆಲವು ನಿಜ, ಕೆಲವು ಕಾಲ್ಪನಿಕ, ಕೆಲವು ಉತ್ಪ್ರೇಕ್ಷೆ, ಕೆಲವು ವೈಭವೀಕರಣ. ಬರಬರುತ್ತಾ ಇಂಥ ಕತೆಗಳು ಕಡಿಮೆಯಾಗುತ್ತಾ ಬಂದವು. ಪ್ರೇಮದ ಜಾಗವನ್ನು ದುಡಿಮೆಯ ಹಂಬಲ ಆವರಿಸಿಕೊಂಡಿತು. ಮೈಮುರಿದು ದುಡಿಯುವುದು, ಅವಮಾನವನ್ನು ಎದುರಿಸುವುದು, ಬದುಕು ಕಟ್ಟಿಕೊಳ್ಳುವುದು, ಎದ್ದು ನಿಲ್ಲುವುದು, ತಲೆಯೆತ್ತುವುದು- ಇವೇ ಮುಂತಾದ ಪುರುಷೋತ್ತಮನಾಗುವ ಹಂಬಲಗಳು ಮುನ್ನೆಲೆಗೆ ಬಂದವು. ಸಮಾನತೆಯ ಹುಮ್ಮಸ್ಸು ತಲೆಯೆತ್ತಿತು. ಸಂಪಾದಿಸುವ ಆಶೆ ಅರಳಿತು. ತನ್ನ ಕೇಂದ್ರವನ್ನು ಬಲಪಡಿಸಿಕೊಳ್ಳುವ ಹುರುಪಿನಲ್ಲಿ ಪ್ರೇಮದ ಗುಂಗು ಹಿನ್ನೆಲೆಗೆ ಸರಿಯಿತು.

ಕಲೆಯಲ್ಲೂ ಇದೇ ಆಯಿತು. ಬಂಡಾಯದ ಕತೆಗಳು, ಹೋರಾಟದ ಕತೆಗಳು ಬಂದವು. ಯುದ್ಧೋನ್ಮಾದದ, ದೇಶಭಕ್ತಿಯ ಕಥನಗಳು ಮೊಳಗಿದವು, ಅವಮಾನವನ್ನು ಹಿಮ್ಮೆಟ್ಟಿಸುವ ಆಕ್ರೋಶದ ಕೂಗು ಕವಿತೆಗಳಲ್ಲಿ ಕೇಳಿಬಂತು. ಗುಲಾಬಿ ಬಣ್ಣದ ಗೀತೆಗಳನ್ನು ಕೆಂಪುಗೀತೆಗಳು ಮುಚ್ಚಿಹಾಕಿದವು. ಇದೇ ಹೊತ್ತಲ್ಲಿ, ಕುಟುಂಬ ವ್ಯವಸ್ಥೆಯಲ್ಲಿ ಬದಲಾವಣೆ ಕಂಡುಬಂತು. ಅವಿಭಕ್ತ ಕುಟುಂಬಗಳು ಒಡೆದು, ಸಣ್ಣ ಸಣ್ಣ ಕುಟುಂಬಗಳಾದವು. ಅದರ ಜೊತೆಗೇ ಶಿಕ್ಷಣದಲ್ಲಿ ಮಹತ್ತರ ಬದಲಾವಣೆ ಕಂಡುಬಂತು. ಶಾಲೆಗೆ ಹೋಗುವುದು, ಜತೆಗೆ ಓದುವುದು ಸಾಮೂಹಿಕ ಕ್ರಿಯೆಯಾಗಿ ಉಳಿಯಲಿಲ್ಲ. ಮಕ್ಕಳು ಕ್ಲಾಸು ಮುಗಿಯುತ್ತಿದ್ದಂತೆ ಮನೆಗೆ ಬರಬೇಕಾಯಿತು. ಹೋಮ್‌ವರ್ಕ್ ಒತ್ತಡ ಅವರನ್ನು ಪುಸ್ತಕಗಳಿಗೆ ಅಂಟಿಕೊಳ್ಳುವಂತೆ ಮಾಡಿತು. ಸಮೂಹ, ಗುಂಪು, ಗೆಳೆತನಗಳ ಸವಿಯನ್ನು ಅಂಕಪಟ್ಟಿಯ ಭಾರ ಹೆಚ್ಚಿಸುವ ಒತ್ತಡ ನುಂಗಿಹಾಕಿತು.

ಸರ್ಜಿಕಲ್‌ ಸ್ಟ್ರೈಕ್‌ ರೂವಾರಿಯ ಅಂತರಂಗದ ಮಾತು; ಕರ್ನಲ್‌ Harpreet Sandhu ಜತೆಗೊಂದು ಇಳಿಸಂಜೆ

ಇವತ್ತು ಆಪ್ತಸಲಹಗಾರರ ಬಳಿಗೆ ಬರುವವರ ಪೈಕಿ ನೂರಕ್ಕೆ ಎಂಬತ್ತು ಮಂದಿ ಖಿನ್ನತೆಯಿಂದ ಬಳಲುತ್ತಿದ್ದಾರೆ. ಆ ಖಿನ್ನತೆಗೆ ಕಾರಣ ಪ್ರೇಮದ ಅಭಾವ. ತನ್ನನ್ನು ಯಾರೂ ಪ್ರೀತಿಸುತ್ತಿಲ್ಲ ಎಂಬ ಹತಾಶೆ. ಇನ್ನೊಂಚೂರು ಪ್ರೀತಿ ಸಿಕ್ಕರೆ ಸಂತೋಷವಾಗಿರಬಲ್ಲೆ ಎಂಬ ಆಶೆ, ವೃತ್ತಿಜೀವನ ಮತ್ತು ಏಕಾಂತ ತನ್ನನ್ನು ಕೊಲ್ಲುತ್ತಿದೆ ಎಂಬ ಭಯ, ಇವೆಲ್ಲದರ ಜತೆಗೇ ಮನುಷ್ಯರನ್ನು ಪ್ರೀತಿಸುವ ಬದಲು ವರ್ಚುಯಲ್‌ ಜಗತ್ತನ್ನು ಪ್ರೀತಿಸಲು ಶುರುಮಾಡಿದ್ದೇನೆ ಎಂಬ ಹೊಸ ಭಯ.

ಈ ವರ್ಚುಯಲ್‌ ಭಯದ ಸ್ವರೂಪ ಗಂಭೀರವಾಗುತ್ತಲಿದೆ ಅನ್ನುವುದು ಸುಳ್ಳಲ್ಲ. ನಮ್ಮ ಶತ್ರುಗಳು ಮತ್ತು ಮಿತ್ರರನ್ನು ಇವತ್ತು ಸ್ನೇಹವೋ ಸಾಂಗತ್ಯವೋ ಹುಡುಕಿಕೊಡುತ್ತಿಲ್ಲ. ಬದಲಾಗಿ ನಾವು ನಮ್ಮ ವಿರೋಧಿಗಳನ್ನೂ ಬಂಧುಗಳನ್ನೂ ವರ್ಚುವಲ್‌ ಜಗತ್ತಿನಲ್ಲಿ ಹುಡುಕಿಕೊಳ್ಳುತ್ತಿದ್ದೇವೆ. ರಾಜಕೀಯ ನಿಲುವು, ಸೈದ್ಧಾಂತಿಕತೆಯ ಆಧಾರದ ಮೇಲೆ ನಮ್ಮ ಗೆಳೆಯರ ಪಟ್ಟಿತಯಾರಾಗುತ್ತದೆ. ಒಮ್ಮೆ ನಮ್ಮ ನಮ್ಮ ಫೇಸ್‌ಬುಕ್‌ ಫ್ರೆಂಡ್‌ಲಿಸ್ಟ್‌ ನೋಡಿದರೆ ನಮ್ಮ ಗೆಳೆಯರು ಯಾರು, ವಿರೋಧಿಗಳು ಯಾರು ಎಂಬುದು ಗೊತ್ತಾಗಿಬಿಡುತ್ತದೆ. ಗೆಳೆಯರು ನಮ್ಮ ರಾಜಕೀಯ ನಿಲುವುಗಳಿಗೆ ಬೆಂಬಲ ನೀಡುವವರೇ ಆಗಿರುತ್ತಾರೆ. ಶತ್ರುಗಳ ಪಟ್ಟಿಯಲ್ಲಿ ನಮ್ಮನ್ನು ಸೈದ್ಧಾಂತಿಕವಾಗಿ ವಿರೋಧಿಸುವವರೇ ಇರುತ್ತಾರೆ. ಭೇಟಿ, ಸಂವಾದ, ಚರ್ಚೆ, ತಮಾಷೆ, ಹುಡುಗಾಟಗಳೆಲ್ಲವೂ ವರ್ಚುವಲ್‌ ಜಗತ್ತಿನಲ್ಲೇ ನಡೆಯುತ್ತವೆ. ಕೊರೋನಾ ಕಾಲದಲ್ಲಂತೂ ರಂಗನಟರೊಬ್ಬರು ಝೂಮ್‌ ಕರೆಯ ಮೂಲಕ ಗೆಳೆಯರನ್ನು ಆಹ್ವಾನಿಸಿ, ಆನ್‌ಲೈನ್‌ ಪಾರ್ಟಿ ನಡೆಸಲು ಯತ್ನಿಸಿದ್ದು ಕೂಡ ಈ ಕಾಲದ ವ್ಯಂಗ್ಯ. ದೇವರಿಗೆ ಆನ್‌ಲೈನ್‌ ಕುಂಕುಮಾರ್ಚನೆ ಮಾಡಿಸಿದಷ್ಟೇ ತಮಾಷೆಯ ಸಂಗತಿ ಇದು.

ನೆನಪುಗಳೇ ಹಾಗೆ..ಬಿಟ್ಟು ಹೋದ ಗೆಳತಿಯಂತೆ: ಬೇಡ ಎಂದರೂ ಪದೇಪದೇ ಕಾಡುತ್ತದೆ

ಇಂಥ ಹೊತ್ತಲ್ಲಿ ನೆನಪಾಗುವುದು ಲವ್‌ ಇನ್‌ ದಿ ಟೈಮ್‌ ಆಫ್‌ ಕಾಲರಾ ಬರೆದ ಗೇಬ್ರಿಯಲ್‌ ಗಾರ್ಸಿಯಾ ಮಾರ್ಕೆಸ್‌. ಇಂದು ಮಾರ್ಕೆಸ್‌ ಹುಟ್ಟುಹಬ್ಬ. ಪ್ರೇಮದ ವ್ಯಾಖ್ಯಾನವನ್ನೇ ಬದಲಾಯಿಸಿದ ಮಾರ್ಕೆಸ್‌, ಪ್ರೇಮದ ಹಂಬಲವನ್ನು ತನ್ನ ಎಲ್ಲಾ ಬರಹಗಳಲ್ಲೂ ಕಟ್ಟಿಕೊಟ್ಟವನು. ನಾವಿಬ್ಬರೂ ಸೇರಲೇಬೇಕು ಅಂತೇನಿಲ್ಲ, ಈ ಕ್ಷಣ ನಾನೂ ನೀನೂ ಎಲ್ಲೋ ಇದ್ದೇವೆ ಅನ್ನುವ ಅರಿವೇ ಪ್ರೇಮ ಎಂದ ಮಾರ್ಕೆಸ್‌, ನಾನು ಸಾಯುತ್ತಿರುವುದು ಪ್ರೇಮಕ್ಕಾಗಿ ಅಲ್ಲ ಅಂತಾದರೆ ಮಾತ್ರ ಪಶ್ಚಾತ್ತಾಪಪಡುತ್ತೇನೆ ಎಂದು ಬರೆದು ಪ್ರೇಮದ ರುಚಿಯನ್ನು ಹೆಚ್ಚಿಸಿದವನು. ಪ್ರೀತಿಗಾಗಿ ಸಾಯುವುದಕ್ಕಿಂದ ದೊಡ್ಡ ಸಂಭ್ರಮ ಮತ್ತೊಂದಿಲ್ಲ ಅನ್ನುವುದು ಕೂಡ ಮಾರ್ಕೆಸ್‌ನ ಮತ್ತೊಂದು ಪ್ರಸಿದ್ಧ ಹೇಳಿಕೆ.

ಅವನು ತಾನು ಕುಳಿತ ಕೋಣೆಯ ಕಿಟಕಿಯಿಂದ ಹೊರಗೆ ನೋಡುವ ಹೊತ್ತಿಗೆ, ಮನೆಯೆದುರಿನ ಬಯಲಿನಲ್ಲಿ ಅವಳು ಸಂಜೆ ಸೂರ್ಯನಿಗೆ ಎದುರಾಗಿ ನಡೆದು ಹೋಗುತ್ತಿದ್ದಾಳೆ. ಅವಳ ಬೆನ್ನು ಮತ್ತು ಉದ್ದದ ನೆರಳು ಮಾತ್ರ ಅವನಿಗೆ ಕಾಣಿಸುತ್ತದೆ. ಅವಳ ನ‚ಡಿಗೆಯಲ್ಲಿರುವ ಸೌಖ್ಯ ಅವನೊಳಗೆ ಉಳಿದುಬಿಡುತ್ತದೆ. ಆ ಸಂಜೆ, ಆ ಕಿಟಕಿ, ಆ ಬೆನ್ನು, ಆ ನೆರಳು, ಆ ಸೌಖ್ಯ ಅವನನ್ನು ಜೀವನಪೂರ್ತಿ ಕಾಯುತ್ತದೆ.

ಅದು ಪ್ರೇಮ.

click me!