
ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿದಂತೆ ಸಮಗ್ರ ಉತ್ತರ ಕರ್ನಾಟಕದ ಜನತೆಗೆ ವಿಮಾನಯಾನ ಸಂಸ್ಥೆ ಇಂಡಿಗೋ (IndiGo Airlines) ಭರ್ಜರಿ ಸಿಹಿಸುದ್ದಿ ನೀಡಿದೆ. ರಾಜಧಾನಿ ದೆಹಲಿ-ಹುಬ್ಬಳ್ಳಿ ಹಾಗೂ ದೆಹಲಿ-ಬೆಳಗಾವಿ ಮಾರ್ಗಗಳ ನಡುವೆ ಅಕ್ಟೋಬರ್ 1ರಿಂದಲೇ ಪ್ರತಿದಿನ (ದೈನಂದಿನ) ನೇರ ವಿಮಾನ ಸಂಚಾರ ಆರಂಭಿಸುವುದಾಗಿ ಇಂಡಿಗೋ ಅಧಿಕೃತವಾಗಿ ಪ್ರಕಟಿಸಿದೆ. ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ ಜೋಶಿ ಅವರ ಮನವಿಗೆ ತಕ್ಷಣ ಸ್ಪಂದಿಸಿರುವ ಇಂಡಿಗೋ ಸಂಸ್ಥೆ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಬೆಳಗಿನ ಜಾವ ಹಾಗೂ ಸಂಜೆಯ ಸಮಯದಲ್ಲಿ ವಿಮಾನಗಳು ಹಾರಾಟ ನಡೆಸಲಿವೆ.
1. ದೆಹಲಿ ⇄ ಹುಬ್ಬಳ್ಳಿ ಮಾರ್ಗ:
ದೆಹಲಿ ➔ ಹುಬ್ಬಳ್ಳಿ (Flight No: 6E 758): ಪ್ರತಿದಿನ ಸಂಜೆ 04:30ಕ್ಕೆ ದೆಹಲಿಯಿಂದ ಹೊರಟು, ಸಂಜೆ 06:55ಕ್ಕೆ ಹುಬ್ಬಳ್ಳಿ ತಲುಪಲಿದೆ.
ಹುಬ್ಬಳ್ಳಿ ➔ ದೆಹಲಿ (Flight No: 6E 2115): ಪ್ರತಿದಿನ ಸಂಜೆ 07:30ಕ್ಕೆ ಹುಬ್ಬಳ್ಳಿಯಿಂದ ಹೊರಟು, ರಾತ್ರಿ 10:05ಕ್ಕೆ ದೆಹಲಿಗೆ ತಲುಪಲಿದೆ.
2. ದೆಹಲಿ ⇄ ಬೆಳಗಾವಿ ಮಾರ್ಗ:
ದೆಹಲಿ ➔ ಬೆಳಗಾವಿ (Flight No: 6E 2511): ಪ್ರತಿದಿನ ಬೆಳಗ್ಗೆ 06:15ಕ್ಕೆ ದೆಹಲಿಯಿಂದ ಹೊರಟು, ಬೆಳಗ್ಗೆ 08:40ಕ್ಕೆ ಬೆಳಗಾವಿಗೆ ತಲುಪಲಿದೆ.
ಬೆಳಗಾವಿ ➔ ದೆಹಲಿ (Flight No: 6E 2512): ಪ್ರತಿದಿನ ಬೆಳಗ್ಗೆ 09:10ಕ್ಕೆ ಬೆಳಗಾವಿಯಿಂದ ಹೊರಟು, ಬೆಳಗ್ಗೆ 11:40ಕ್ಕೆ ದೆಹಲಿ ತಲುಪಲಿದೆ.
(ಗಮನಿಸಿ: ಈ ಎರಡೂ ವಿಮಾನಗಳು ಅಕ್ಟೋಬರ್ 1ರಿಂದ ಪ್ರತಿದಿನ ಕಾರ್ಯಾರಂಭ ಮಾಡಲಿವೆ).
ಉತ್ತರ ಕರ್ನಾಟಕ ಭಾಗದಿಂದ ದೇಶದ ರಾಜಧಾನಿ ನವದೆಹಲಿಗೆ ವ್ಯಾಪಾರ, ಉದ್ಯೋಗ, ರಾಜಕೀಯ ಮತ್ತು ಶೈಕ್ಷಣಿಕ ಕಾರಣಗಳಿಗಾಗಿ ನಿತ್ಯ ನೂರಾರು ಜನರು ಪ್ರಯಾಣಿಸುತ್ತಾರೆ. ಈ ಮಾರ್ಗದಲ್ಲಿ ನಿತ್ಯ ವಿಮಾನಗಳಿಲ್ಲದೆ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದರು. ಜನರ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಸಚಿವ ಪ್ರಲ್ಹಾದ ಜೋಶಿ ಅವರು ಇಂಡಿಗೋ ಏರ್‌ಲೈನ್ಸ್‌ನ ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ದೈನಂದಿನ ವಿಮಾನ ಸೇವೆ ಆರಂಭಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದರು. ಸಚಿವರ ಮನವಿಗೆ ಸ್ಪಂದಿಸಿ ಇಂಡಿಗೋ ಈ ಸೇವೆ ಆರಂಭಿಸುತ್ತಿದೆ.
ಈ ಕುರಿತು ಸಂತಸ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, 'ಪ್ರತಿದಿನ ವಿಮಾನ ಸಂಚಾರ ಆರಂಭವಾಗುವುದರಿಂದ ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಭಾಗದಲ್ಲಿ ಉದ್ಯಮ, ಹೂಡಿಕೆ, ಶಿಕ್ಷಣ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳ ಬೆಳವಣಿಗೆಗೆ ಭಾರೀ ವೇಗ ಸಿಗಲಿದೆ. ಉತ್ತರ ಕರ್ನಾಟಕದ ಸಂಪರ್ಕ ಕ್ರಾಂತಿ ಹಾಗೂ ಸಮಗ್ರ ಅಭಿವೃದ್ಧಿಗೆ ನಮ್ಮ ಬದ್ಧತೆ ನಿರಂತರವಾಗಿರುತ್ತದೆ' ಎಂದು ತಿಳಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.