
ಬೆಂಗಳೂರು (ಸೆ.22): ಹಸಿರು ಕಟ್ಟಡದ ಮಾದರಿಯಲ್ಲಿ ತಲೆ ಎತ್ತಲಿರುವ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಪುನರಾಭಿವೃದ್ಧಿ ಕಾರ್ಯ ಭರದಿಂದ ಸಾಗಿದೆ. ಪ್ರಸ್ತುತ ಮೊದಲ ಹಂತದಲ್ಲಿ ಒಂದನೇ ಪ್ಲಾಟ್‌ಫಾರ್ಮ್ ಬದಿಯ ಕಾಮಗಾರಿ ಪೂರ್ಣಗೊಂಡ ಬಳಿಕ ಮೆಟ್ರೋ ಭಾಗದಲ್ಲಿ ಕೆಲಸಗಳು ನಡೆಯಲಿವೆ.
ಬರೋಬ್ಬರಿ ₹380 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಈ ಕಾಮಗಾರಿ 2025ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ದೆಹಲಿಯ ಗಿರ್ಧಾರಿ ಲಾಲ್ ಕನ್ಸ್ಟ್ರಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಗುತ್ತಿಗೆ ಪಡೆದು ಕಳೆದ ಫೆಬ್ರವರಿಯಿಂದ ಕಾಮಗಾರಿ ನಡೆಸುತ್ತಿದೆ.
ರಾಜ್ಯದ 3 ಎಕ್ಸ್‌ಪ್ರೆಸ್ ರೈಲುಗಳ ಸೇವೆ ವಿಸ್ತರಣೆ, ನಿಮ್ಮ ಜಿಲ್ಲೆಯಲ್ಲಿ ಯಾವ ರೈಲುಗಳು ಸಂಚರಿಸಲಿದೆ
ಪ್ರಸ್ತುತ ರೈಲ್ವೆ ನಿಲ್ದಾಣದ ಒಂದನೇ ಪ್ಲಾಟ್‌ಫಾರ್ಮ್ ಪ್ರವೇಶ ದ್ವಾರವನ್ನು ಬಂದ್ ಮಾಡಿ ಪ್ರಮುಖ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ನಿರ್ಮಾಣ ಆಗಲಿದೆ. ಇಲ್ಲಿ 90 ದ್ವಿಚಕ್ರ ವಾಹನ, 90 ಕಾರು ಪಾರ್ಕ್ ಮಾಡಲು ಅವಕಾಶವಿರಲಿದೆ. ಜೊತೆಗೆ 40 ಆಟೋ ನಿಲುಗಡೆಗೂ ಅವಕಾಶ ಇರಲಿದೆ.
ಇನ್ನು ಪ್ರಯಾಣಿಕರ ಪಿಕ್ ಅಪ್, ಡ್ರಾಪ್‌ಗೆ ಅನುಕೂಲವಾಗುವ ಎಲಿವೇಟೆಡ್ ರಸ್ತೆಗೆ ಸಂಬಂಧಿಸಿದ ನಿರ್ಮಾಣ ಕಾರ್ಯ ನಡೆಯುತ್ತಿದೆ. ನಿಲ್ದಾಣದ ಆಗಮನ - ನಿರ್ಗಮನ ದ್ವಾರಗಳು ಪ್ರತ್ಯೇಕವಾಗಿದ್ದು, ಪ್ರಯಾಣಿಕರ ದಟ್ಟಣೆಯಾಗದೆ ಸರಾಗವಾಗಿ ವಾಹನ ಸಂಚಾರಕ್ಕೂ ಕೂಡ ಅನುಕೂಲವಾಗಲಿದೆ.
ಹೈದರಾಬಾದ್-ಯಶವಂತಪುರ ನಡುವೆ ರಾಜ್ಯದ 3ನೇ ವಂದೇಭಾರತ್ ರೈಲು, ಸೆ.24ಕ್ಕೆ ಲೋಕಾರ್ಪಣೆ
ಹಸಿರು ಕಟ್ಟಡ: ಮಳೆ ನೀರು ಕೊಯ್ಲು, ಒಳಚರಂಡಿ ನೀರು ಸಂಸ್ಕರಣಾ ಘಟಕ ಸೇರಿದಂತೆ ಹಸಿರು ಕಟ್ಟಡ ಮಾನದಂಡದ ಪ್ರಕಾರ ಈ ನಿಲ್ದಾಣವನ್ನು ನಿರ್ಮಿಸಲಾಗುತ್ತಿರುವುದು ಇನ್ನೊಂದು ವಿಶೇಷ. ಇದರ ಜೊತೆಗೆ ನವೀಕೃತ ಕಟ್ಟಡದಲ್ಲಿ ಇಂಧನ ದಕ್ಷತೆಯ ಎಲ್ಇಡಿ ದೀಪಗಳ ಲೈಟಿಂಗ್ ಅಳವಡಿಸಲು ನಿರ್ಧರಿಸಲಾಗಿದೆ.
ವಿಮಾನ ನಿಲ್ದಾಣ ಮಟ್ಟದ ಸೌಲಭ್ಯ: ವಾಹನಗಳಿಗೆ ಪ್ರತ್ಯೇಕ ಆಗಮನ ಮತ್ತು ನಿರ್ಗಮನ ವ್ಯವಸ್ಥೆ ಇರಲಿದ್ದು, ಇದರಿಂದ ವಾಹನಗಳ ದಟ್ಟಣೆ ನಿಯಂತ್ರಿಸಬಹುದು. ನಿಲ್ದಾಣವು ಬೃಹತ್ ಗಾತ್ರದ ಏರ್ ಕಾನ್ಕೋರ್ಸ್ (14,800 ಚ.ಮೀ.) ಸಹ ಹೊಂದಿರಲಿದೆ. ಇದರಲ್ಲಿ ಆಹಾರ ಮಳಿಗೆಗಳು, ವಾಣಿಜ್ಯ ಮಳಿಗೆಯ ಸ್ಥಳ, ವ್ಯಾಪಾರ ಕೇಂದ್ರ ಸೇರಿ ಇನ್ನಿತರ ಸ್ಥಳಗಳನ್ನು ಒದಗಿಸುವ ಮೂಲಕ ವಿಮಾನ ನಿಲ್ದಾಣಗಳಲ್ಲಿನ ಲೌಂಜ್‌ಗೆ ಸರಿಸಮವಾಗಿ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್ ಹೆಗಡೆ ತಿಳಿಸಿದ್ದಾರೆ.
ಈಗ ನಡೆಯುತ್ತಿರುವ ಹಂತ -1 ಅಂದರೆ ಪೂರ್ವ ಭಾಗದ ಕಾಮಗಾರಿ ಪೂರ್ಣಗೊಂಡ ನಂತರ, ಪಶ್ಚಿಮ ಭಾಗದ (ಮೆಟ್ರೋ ಕಡೆಗೆ) ಕೆಲಸ ಪ್ರಾರಂಭವಾಗಲಿದೆ. 2022ರ ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ನಿಲ್ದಾಣದ ಪುನರಾಭಿವೃದ್ಧಿಗೆ ತಳಪಾಯ ಹಾಕಿದ್ದರು. ಪುನರಾಭಿವೃದ್ಧಿಪಡಿಸಿದ ನಿಲ್ದಾಣದ 3ಡಿ ಮಾದರಿ ಚಿತ್ರವನ್ನು ರೈಲ್ವೆ ನಿಲ್ದಾಣದ ಆವರಣದಲ್ಲಿ ಇಡಲಾಗಿದ್ದು, ಜನತೆ ವೀಕ್ಷಿಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ