ರಾಜ್ಯದಲ್ಲಿ ಭವಿಷ್ಯದ ವಿದ್ಯುತ್ ಕೊರತೆ ನೀಗಿಸಲು ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲೇ ಕ್ರಾಂತಿಕಾರಕ ಹೆಜ್ಜೆ ಇಡಲು ರಾಜ್ಯ ಸರ್ಕಾರ ಮುಂದಾಗಿದ್ದು, ‘ಭವಿಷ್ಯದ ಇಂಧನ‘ ಎಂದೇ ಕರೆಯಲ್ಪಡುವ ‘ಗ್ರೀನ್ ಹೈಡ್ರೋಜನ್‘ ಉತ್ಪಾದನೆಗೆ ದೇಶದ ಮೊದಲ ಗ್ರೀನ್ ಹೈಡ್ರೋಜನ್ ಕ್ಲಸ್ಟರ್ ನಿರ್ಮಾಣಕ್ಕೆ ತೀರ್ಮಾನಿಸಿದೆ.
ಶ್ರೀಕಾಂತ್ ಎನ್.ಗೌಡಸಂದ್ರ
ಬೆಂಗಳೂರು (ಸೆ.22): ರಾಜ್ಯದಲ್ಲಿ ಭವಿಷ್ಯದ ವಿದ್ಯುತ್ ಕೊರತೆ ನೀಗಿಸಲು ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲೇ ಕ್ರಾಂತಿಕಾರಕ ಹೆಜ್ಜೆ ಇಡಲು ರಾಜ್ಯ ಸರ್ಕಾರ ಮುಂದಾಗಿದ್ದು, ‘ಭವಿಷ್ಯದ ಇಂಧನ‘ ಎಂದೇ ಕರೆಯಲ್ಪಡುವ ‘ಗ್ರೀನ್ ಹೈಡ್ರೋಜನ್‘ ಉತ್ಪಾದನೆಗೆ ದೇಶದ ಮೊದಲ ಗ್ರೀನ್ ಹೈಡ್ರೋಜನ್ ಕ್ಲಸ್ಟರ್ ನಿರ್ಮಾಣಕ್ಕೆ ತೀರ್ಮಾನಿಸಿದೆ. ಈ ಬಗ್ಗೆ ಈಗಾಗಲೇ ಏಳು ಕಂಪೆನಿಗಳೊಂದಿಗೆ ಪ್ರಾಥಮಿಕ ಚರ್ಚೆ ಪೂರ್ಣಗೊಂಡಿದ್ದು, ಕೆಲ ಕಂಪೆನಿಗಳು ಹೂಡಿಕೆಗೂ ಸಮ್ಮತಿಸಿವೆ.
ಈ ಹಿನ್ನೆಲೆಯಲ್ಲಿ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಸದ್ಯದಲ್ಲೇ ಮಂಗಳೂರಿನಲ್ಲಿ ದೇಶದ ಮೊದಲ ಗ್ರೀನ್ ಹೈಡ್ರೋಜನ್ ಘಟಕ ಸ್ಥಾಪಿಸಲು ಸಿದ್ಧತೆ ನಡೆಸಿದ್ದೇವೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ‘ಕನ್ನಡಪ್ರಭಕ್ಕೆ‘ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿದ್ದು, ಕಲ್ಲಿದ್ದಲು ಪೂರೈಕೆ, ಮಳೆ ಅಭಾವ ಮತ್ತಿತರ ಕಾರಣಗಳಿಗೆ ವಿದ್ಯುತ್ ಉತ್ಪಾದನೆ ಕುಸಿಯುತ್ತಿದೆ. ಭವಿಷ್ಯದಲ್ಲಿ ವಿದ್ಯುತ್ ಬೇಡಿಕೆ ಮತ್ತಷ್ಟು ಹೆಚ್ಚಾಗಲಿದ್ದು ಭವಿಷ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಲು ‘ಗ್ರೀನ್ ಹೈಡ್ರೋಜನ್‘ ಮೊರೆ ಹೋಗಿರುವುದಾಗಿ ತಿಳಿಸಿದ್ದಾರೆ.
ಪಾಕಿಸ್ತಾನದ ಲಾಹೋರ್‌ನಲ್ಲಿ ಗಣೇಶ ಪ್ರತಿಷ್ಠಾಪಿಸುತ್ತೇವೆ: ಶಾಸಕ ಬಸನಗೌಡ ಯತ್ನಾಳ್
ಏಳು ಕಂಪೆನಿಗಳಿಂದ ಆಸಕ್ತಿ: ಈಗಾಗಲೇ ಬೃಹತ್ ಕೈಗಾರಿಕಾ ಇಲಾಖೆ ಹಾಗೂ ಇಂಧನ ಇಲಾಖೆಯು ಏಳು ಕಂಪೆನಿಗಳೊಂದಿಗೆ ಪ್ರಾಥಮಿಕ ಚರ್ಚೆ ಪೂರ್ಣಗೊಳಿಸಿದ್ದು, ಏಳು ಕಂಪೆನಿಗಳು ಹೂಡಿಕೆಗೆ ಆಸಕ್ತಿ ತೋರಿವೆ. ಎಸಿಎಂಇ ಸೋಲಾರ್, ಎಬಿಸಿ ಕ್ಲೀನ್‌ಟೆಕ್, ರಿನ್ಯೂ ಪವರ್, ಅವಾಡ, ಜೆಎಸ್‌ಡಬ್‌ಲ್ಯೂ ಗ್ರೀನ್ ಹೈಡ್ರೊಜನ್, ಪೆಟ್ರೋನಾಸ್ ಹೈಡ್ರೋಜನ್, 02 ಪವರ್ ಕಂಪೆನಿಗಳು ಸಾವಿರಾರು ಕೋಟಿ ರು. ಹೂಡಿಕೆಗೆ ಮುಂದಾಗಿವೆ. ಈ ಪೈಕಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಿಂದ ರಚಿಸಿರುವ ಉನ್ನತ ಮಟ್ಟದ ಸಮಿತಿಯು ನಾಲ್ಕು ಕಂಪೆನಿಗಳಿಗೆ ಹೂಡಿಕೆಗೆ ಅನುಮತಿ ನೀಡಿದೆ.
ಇವುಗಳಿಗೆ ರಾಜ್ಯ ಇಂಧನ ಇಲಾಖೆಯು ನೆರವು ನೀಡಲಿದ್ದು, ಈಗಾಗಲೇ ಇಂಧನ ಇಲಾಖೆಯು ಕಂಪೆನಿಗಳ ಜತೆ ಮಾತುಕತೆ ನಡೆಸಿದೆ. 100 ರಿಂದ 300 ಎಕರೆ ಭೂಮಿ ಅಗತ್ಯವಾಗಲಿದ್ದು, ಮಂಗಳೂರಿನಲ್ಲಿ ಇದಕ್ಕೆ ಕ್ಲಸ್ಟರ್ ನಿರ್ಮಿಸಲು ಸರ್ಕಾರ ಮುಂದಾಗಿದೆ. ಜತೆಗೆ ಗ್ರೀನ್ ಹೈಡ್ರೋಜನ್ ಉತ್ಪಾದನೆಗೆ ನಿಯಮಿತ ವಾಗಿ ಸೌರ ಅಥವಾ ಪವನ ವಿದ್ಯುತ್ ಪೂರೈಕೆಯಾಗ ಬೇಕಿದ್ದು, ಕೆಪಿಟಿಸಿಎಲ್ ಅಥವಾ ಪವರ್‌ಗ್ರಿಡ್ ಕಾರ್ಪೊರೇಷನ್ ನ ಟ್ರಾನ್ಸ್‌ಮಿಷನ್ ಲೈನ್‌ಗಳ ಮೂಲಕ ಮಂಗಳೂರಿನ ಹೈಡ್ರೋಜನ್ ಸ್ಥಾವರಗಳಿಗೆ ಇಂಧನ ಪೂರೈಕೆ ಮಾಡಬೇಕಾಗುತ್ತದೆ ಎಂದು ಇಂಧನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ
ಏನಿದು ಗ್ರೀನ್ ಹೈಡ್ರೋಜನ್?: ಸಮುದ್ರದ ನೀರಿನಲ್ಲಿರುವ ಹೈಡ್ರೋಜನ್ ಹಾಗೂ ಆಮ್ಲಜನಕವನ್ನು ನವೀಕರಿಸಬಹುದಾದ ಇಂಧನ ಬಳಕೆ ಮಾಡಿ ವಿಭಜಿಸುತ್ತೇವೆ. ಎಲೆಕ್ಟ್ರೋಸೈಸ್ (ವಿದ್ಯುದ್ವಿಭಜನೆ) ಮೂಲಕ ಹೈಡ್ರೋಜನ್ ಗೆ ಅಮೋನಿಯಾ ಮಿಶ್ರಣ ಮಾಡಿ ಗ್ರೀನ್ ಹೈಡ್ರೋಜನ್ ರೂಪದಲ್ಲಿರುವ ಇಂಧನವನ್ನು ಶೇಖರಿಸುತ್ತೇವೆ. ಇದಕ್ಕೆ ಯೂರೋಪ್ ಸೇರಿದಂತೆ ಕೆಲವೆಡೆ ಭಾರೀ ಬೇಡಿಕೆಯಿದ್ದು, ಇದೀಗ ನಮ್ಮ ರಾಜ್ಯದಲ್ಲೂ ಮಂಗಳೂರಲ್ಲಿ ಘಟಕ ಮಾಡಲು ನಿರ್ಧರಿಸಿದ್ದೇವೆ ಎಂದು ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು
Chikkamagaluru: ಪ್ರಸಿದ್ಧ ಪ್ರವಾಸಿ ತಾಣ ವಸಿಷ್ಠ ತೀರ್ಥಕ್ಕೆ ಹೋಗಲುಬೇಕು ಡಬಲ್ ಗುಂಡಿಗೆ!
ಹೇಗೆ ಉಪಯುಕ್ತ?: ಯಾವುದೇ ನವೀಕರಿಸಬಹುದಾದ ಇಂಧನ (ಪವನ, ಸೋಲಾರ್) ಉತ್ಪಾದಿಸಿದರೂ ಶೇಖರಣೆ ಸಮಸ್ಯೆ ತೀವ್ರವಾಗಿ ಕಾಡುತ್ತದೆ. ಆದರೆ ಗ್ರೀನ್ ಹೈಡ್ರೋಜನ್ ಇಂಧನವನ್ನು ಸುಲಭವಾಗಿ ಹಾಗೂ ದೊಡ್ಡ ಪ್ರಮಾಣದಲ್ಲಿ ಶೇಖರಿಸಬಹುದು. ಜತೆಗೆ ದಾಸ್ತಾನು ಮಾಡಿದ ಇಂಧನವನ್ನು ಸುಲಭವಾಗಿ ಸಾಗಾಣೆ ಮಾಡಬಹುದು. ಉತ್ಪಾದನೆಗೆ ಹೆಚ್ಚು ಬಂಡವಾಳ ಬೇಕಿದ್ದರೂ ಇದು ಭವಿಷ್ಯದ ಇಂಧನ ಎಂದು ಗುರುತಿಸಲ್ಪಟ್ಟಿದೆ. ಎಲೆಕ್ಟ್ರಿಕಲ್ ವಾಹನಗಳಲ್ಲಿ ತುಂಬಾ ಬೇಡಿಕೆ ಇದೆ. ಹೀಗಾಗಿ ಬ್ಯಾಕಪ್ ಪವರ್, ಪೋರ್ಟಬಲ್ ಪವರ್‌ಆಗಿಯೂ ಬಳಕೆ ಮಾಡಬಹುದು.