
ಬೆಂಗಳೂರು (ಮೇ.21): ರಾಜ್ಯವ್ಯಾಪಿ ಭರ್ಜರಿ ಮಳೆ ಮುಂದುವರಿದಿದ್ದು ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಮೇ 24ರವರೆಗೂ ಮುಂಗಾರು ಪೂರ್ವ ಮಳೆ ಅಬ್ಬರಿಸಲಿದೆ. ಈ ನಡುವೆ, ದಿನನಿತ್ಯ ಮಳೆಯಾಗುತ್ತಿರುವುದರಿಂದ ರಾಜ್ಯದ ಬಹುತೇಕ ಎಲ್ಲ ಭಾಗದಲ್ಲಿ ಉಷ್ಣತೆಯಲ್ಲಿ ಗಣನೀಯ ಇಳಿಕೆ ದಾಖಲಾಗಿದೆ. ಬೇಸಿಗೆಯಲ್ಲಿ 40 ಡಿಗ್ರಿಗಿಂತ ಹೆಚ್ಚು ತಾಪ ಕಾಣುತ್ತಿದ್ದ ಕಲಬುರಗಿಯಲ್ಲಿ ಗರಿಷ್ಠ 35.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಉಳಿದಂತೆ ಬೀದರ್ 34.6 ಡಿಗ್ರಿ ಸೆಲ್ಸಿಯಸ್, ರಾಯಚೂರು 30.4 ಡಿಗ್ರಿ ಸೆಲ್ಸಿಯಸ್, ಮೈಸೂರು 30 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಆದರೆ ಈ ಎಲ್ಲ ಜಿಲ್ಲೆಗಳಲ್ಲೂ ವಾಡಿಕೆಗಿಂತ ಕಡಿಮೆ ಉಷ್ಣತೆ ದಾಖಲಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳು, ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಒಳನಾಡಿನ ಬೆಳಗಾವಿ, ಹಾವೇರಿ ಜಿಲ್ಲೆಗಳಲ್ಲಿ 25 ಡಿಗ್ರಿಗಿಂತ ಕಡಿಮೆ ತಾಪಮಾನ ವರದಿಯಾಗಿದೆ. ಶಿವಮೊಗ್ಗ, ಮಂಡ್ಯ, ಬೆಳಗಾವಿ, ಬೆಂಗಳೂರು, ರಾಯಚೂರು, ಬಾಗಲಕೋಟೆ ಜಿಲ್ಲೆಗಳಲ್ಲಿ ವಾಡಿಕೆಗಿಂತ 10 ಡಿಗ್ರಿಗಿಂತ ಕಡಿಮೆ ತಾಪಮಾನ ದಾಖಲಾಗಿದೆ.
Hubballi: ಅವಳಿ ನಗರದಲ್ಲಿ ವರುಣನ ಆರ್ಭಟ: ಒಂದೇ ರಾತ್ರಿಯಲ್ಲಿ ಸುರಿಯಿತು 80ಮೀ.ಮಿ ಮಳೆ!
ಗರಿಷ್ಠ 21 ಸೆಂ.ಮೀ. ಮಳೆ: ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆ ಅವಧಿಯಲ್ಲಿ ಶಿವಮೊಗ್ಗದ ಪುರದಾಲು, ಉಡುಪಿಯ ಶಿರೂರು ತಲಾ 21 ಸೆಂ.ಮೀ, ಧಾರವಾಡದ ಯರಗುಪ್ಪಿ, ಶಿವಮೊಗ್ಗದ ಹೊಸನಗರ, ಉತ್ತರಕನ್ನಡದ ಕೊಪ್ಪ, ವಿಜಯನಗರದ ಹಗರನೂರು ತಲಾ 20 ದಾವಣಗೆರೆಯ ಕುಲಂಬಿ 19. ಉಡುಪಿಯ ಕೊಲ್ಲೂರು 18 ಸೆಂ.ಮೀ ಮಳೆಯಾಗಿದೆ.
ಮಂಡ್ಯದ ಜನತೆ ತತ್ತರ: ಮಂಡ್ಯದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಬೇಸಿಗೆ ಮಳೆ ಭಾರಿ ಅನಾಹುತವನ್ನೇ ಸೃಷ್ಟಿಸಿದೆ. ಹಲವು ಕೆರೆಕಟ್ಟೆಗಳು ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ನಗರದ ಹಲವು ಬಡಾವಣೆಗಳಿಗೆ ನೀರು ನುಗ್ಗಿ ಅವಾಂತರವಾಗಿದೆ. ಹಾಲಹಳ್ಳಿ, ಶಂಕರಪುರದ ಹಲವು ಮನೆಗಳಿಗೆ ನೀರು ನುಗ್ಗಿ ಜನ ರಾತ್ರಿಯಿಡೀ ಜಾಗರಣೆ ಮಾಡಿದ್ದಾರೆ. ಮೇಲುಕೋಟೆ ರಸ್ತೆಯಲ್ಲಿರುವ ಎನ್.ಎಫ್. ಇಂಡಸ್ಟ್ರೀಸ್‌ಗೆ ನೀರು ನುಗ್ಗಿ ಅಪಾರ ಪ್ರಮಾಣದ ಖಾರದ ಪುಡಿ ನೀರುಪಾಲಾಗಿದೆ ಮಂಡ್ಯದ ಇಂಡುವಾಳು ಬಳಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆಯೊಂದು ಕೊಚ್ಚಿಹೋಗಿದ್ದು, ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಹಳ್ಳದಲ್ಲಿ ನೀರಿನ ರಭಸ ಹೆಚ್ಚಾದ ಕಾರಣ ಈ ಘಟನೆ ನಡೆದಿದೆ.
ಕರಾವಳಿಯಲ್ಲಿ ಅಬ್ಬರದ ಮಳೆ: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಭರ್ಜರಿ ಮಳೆಯಾಗಿದೆ. ಗುರುವಾರ ಮಳೆಯ ತೀವ್ರತೆ ಕಡಿಮೆ ಇತ್ತಾದರೂ ಬುಧವಾರ ರಾತ್ರಿಯಿಂದ ಬಿರುಸಿನ ಮಳೆ ಸುರಿದ ಕಾರಣ ಪ್ರವಾಹದ ಆತಂಕ ಸೃಷ್ಟಿಸಿದೆ. ಕೊಡಗಿನಲ್ಲೂ ಉತ್ತಮ ಮಳೆಯಾಗುತ್ತಿದ್ದು, ಚಿಕ್ಲಿಹೊಳೆ ಜಲಾಶಯ ತುಂಬಿ ಹರಿಯಲಾರಂಭಿಸಿದೆ. ಮಳೆಯಿಂದಾಗಿ ಮಡಿಕೇರಿ-ಚೆಟ್ಟಳ್ಳಿ ರಸ್ತೆಯಲ್ಲಿ ಸಣ್ಣ ಪ್ರಮಾಣದಲ್ಲಿ ಮಣ್ಣು ಕುಸಿಯಲಾರಂಭಿಸಿದ್ದು, ರಸ್ತೆ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ.
ಬೆಂಗ್ಳೂರಲ್ಲಿ ಕಳೆದ 50 ವರ್ಷದಲ್ಲೇ ಅತೀ ತಣ್ಣನೆಯ ದಿನ ದಾಖಲು: ಗಾರ್ಡನ್ ಸಿಟಿ ಕೂಲ್ ಕೂಲ್..!
ದಾವಣಗೆರೆಯಲ್ಲಿ 2 ಸಾವಿರ ಎಕರೆಗೂ ಹೆಚ್ಚು ಬೆಳೆ ಹಾನಿಯಾಗಿದೆ. ಜಗಳೂರು ತಾಲೂಕಿನ ಬಿಸ್ತುವಳ್ಳಿ ಗ್ರಾಮದ ಯುವ ರೈತ ನಾಗರಾಜ (28 ವರ್ಷ) ನೀರಿನಲ್ಲಿ ಮುಳುಗಿದ್ದ ಪಂಪ್‌ಸೆಟ್ ತೆರವು ಮಾಡಲು ಹೋಗಿದ್ದಾಗ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ. ಬೀದರ್, ಯಾದಗಿರಿಯಲ್ಲಿ ಮಳೆಯಬ್ಬರ ಕಡಿಮೆ ಇದ್ದರೂ ಸಿಡಿಲು-ಗಾಳಿಯಬ್ಬರಕ್ಕೆ ಹಲವು ಮನೆಗಳ ಚಾವಣಿಗೆ ಹಾನಿಯಾಗಿದೆ. ಸಿಡಿಲು ಬಡಿದು ಯಾದಗಿರಿಯ ಹುಣಸಗಿ ತಾಲೂಕಿನ ವರಹಟ್ಟಿಗ್ರಾಮದಲ್ಲಿ ಭೀಮಪ್ಪ, ಬೀದರ್ನಲ್ಲಿ ಚಿಮಕೋಡ ಗ್ರಾಮದ ವಿದ್ಯಾವತಿ ಟೊಳ್ಳೆ (52) ಮೃತಪಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ