
ಬೆಂಗಳೂರು (ಮೇ.21): ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯಡಿ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ವಿವಿಧ ಕಾರ್ಯಕ್ರಮಗಳಿಗೆ ಪ್ರಸಕ್ತ ಸಾಲಿನಲ್ಲಿ 28 ಸಾವಿರ ಕೋಟಿ ರೂಗಳನ್ನು ನೀಡಲು ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ನಡೆದ ಅನುಸೂಚಿತ ಜಾತಿ/ಅನುಸೂಚಿತ ಬುಡಕಟ್ಟುಗಳ ರಾಜ್ಯ ಅಭಿವೃದ್ಧಿ ಪರಿಷತ್‌ನ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಭೆಯಲ್ಲಿ ಕಳೆದ ವರ್ಷದ ಅನುದಾನದಲ್ಲಿ ಎಷ್ಟುಬಳಕೆಯಾಗಿದೆ ಮತ್ತು ಎಷ್ಟುಬಾಕಿ ಇದೆ ಎನ್ನುವುದನ್ನು ಪರಿಶೀಲನೆ ನಡೆಸಲಾಗಿದೆ. ಕೆಲವು ಯೋಜನೆಗಳಿಗೆ ಮಾತ್ರ ಬದಲಾವಣೆ ಮಾಡಿ ಉಳಿದಿರುವುದಕ್ಕೆ ಅನುಮೋದನೆ ನೀಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಗೆ 500 ಕೋಟಿ ರೂ ಅನ್ನು ಹೆಚ್ಚಿಗೆ ನೀಡಲಾಗಿದೆ. ಕೃಷಿ ಇಲಾಖೆಗೆ 851 ಕೋಟಿ ರೂ ಇದ್ದ ಅನುದಾನವನ್ನು 1061 ಕೋಟಿ ರೂಗೆ ಏರಿಸಲಾಗಿದೆ ಎಂದು ಮಾಹಿತಿ ನೀಡಿದರು.
ದಾವೋಸ್‌ನಲ್ಲಿ ಭಾರತದ ಆರ್ಥಿಕ ಶಕ್ತಿ ತೋರಿಸುವೆ: ಸಿಎಂ ಬೊಮ್ಮಾಯಿ
ತೋಟಗಾರಿಕೆ ಇಲಾಖೆಗೆ 142 ಕೋಟಿ ರೂ ಇದ್ದ ಅನುದಾನವನ್ನು 187 ಕೋಟಿ ರೂಗಳಿಗೆ ಹೆಚ್ಚಿಸಲಾಗಿದೆ. ಆರೋಗ್ಯ ಇಲಾಖೆಗೆ 899 ಕೋಟಿ ರೂಗಳನ್ನು ಕಳೆದ ವರ್ಷ ನೀಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ 1,300 ಕೋಟಿ ರೂ ಅನ್ನು ನೀಡಲಾಗಿದೆ. ಸಹಕಾರ ಇಲಾಖೆಯಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯದವರಿಗೆ ಸದಸ್ಯತ್ವ ನೀಡಲು 203 ಕೋಟಿ ರೂ ಒದಗಿಸಲಾಗಿದೆ. ಕಂದಾಯ ಇಲಾಖೆಯಲ್ಲಿ ಪಿಂಚಣಿಗಳ ಮೊತ್ತ ಹೆಚ್ಚಳ ಮಾಡಿದ್ದು, ಕಳೆದ ವರ್ಷ 2,900 ಕೋಟಿ ರೂ ಇದ್ದ ಅನುದಾನವನ್ನು 3,748 ಕೋಟಿ ರೂ ಗೆ ಹೆಚ್ಚಳ ಮಾಡಲಾಗಿದೆ. ಕೌಶಲ್ಯಾಭಿವೃದ್ಧಿಗೆ 180 ಕೋಟಿ ರೂ ಒದಗಿಸಲಾಗಿದೆ. ಗಂಗಾ ಕಲ್ಯಾಣ ಯೋಜನೆಯಡಿ ಒಂಭತ್ತು ಸಾವಿರ ಕೋಟಿ ರೂ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ ಎಂದು ವಿವರಿಸಿದರು.
ಉಚಿತ ಬಸ್‌ಪಾಸ್: ಡಾ.ಬಿ.ಆರ್.ಅಂಬೇಡ್ಕರ್ ಅವರು ಕರ್ನಾಟಕದಲ್ಲಿ ಪ್ರವಾಸ ಮಾಡಿದ್ದ ಸ್ಥಳಗಳ ಅಭಿವೃದ್ಧಿ ಒಟ್ಟು 20 ಕೋಟಿ ರೂಗಳನ್ನು ಮೀಸಲಿಡಲಾಗಿದೆ. ಎಸ್‌ಸಿ/ಎಸ್‌ಟಿ ವರ್ಗಗಳಿಗೆ ಸೇರಿದ ಮಕ್ಕಳಿಗೆ ಬಸ್‌ಪಾಸ್ ಅನ್ನು ಸಂಪೂರ್ಣ ಉಚಿತವಾಗಿ ನೀಡಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿತ್ತು. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಅನುದಾನವನ್ನು ನೀಡುವುದಲ್ಲದೇ, ನಿಗಮ ಮಂಡಳಿಗಳಿಗೂ ಅನುದಾನಗಳನ್ನು ಒದಗಿಸಲಾಗಿದೆ. ಅದನ್ನೂ ಹೆಚ್ಚಿಸಬೇಕು ಎಂಬುದು ಎಲ್ಲರ ಅಭಿಪ್ರಾಯ ಇದೆ. ಒಂದು ವಾರದಲ್ಲಿ ಅನುದಾನ ಹೆಚ್ಚಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರೂ ಕಾರ್ಯಕ್ರಮದಲ್ಲಿ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಕೋಟ ಶ್ರೀನಿವಾಸ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಮಳೆ ಅವಾಂತರದಿಂದ ಬೆಂಗಳೂರು ಬ್ರ್ಯಾಂಡ್ ಉಳಿಸಿಕೊಳ್ಳಲು ಸಿಎಂಗೆ SM ಕೃಷ್ಣ ಪತ್ರ, 4 ಸಲಹೆ
ಶಾಸಕರಿಗೆ 1 ಕೋಟಿ ರೂ ಅನುದಾನ: ಮಲೆನಾಡು ಅಭಿವೃದ್ಧಿ ಮಂಡಳಿ, ಬಯಲು ಸೀಮೆ ಅಭಿವೃದ್ಧಿ ಮಂಡಳಿ ಮತ್ತು ಕರಾವಳಿ ಅಭಿವೃದ್ಧಿ ಮಂಡಳಿ ವ್ಯಾಪ್ತಿಯ ಶಾಸಕರಿಗೆ ಒಂದು ಕೋಟಿ ರೂ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ. ಹಿಂದಿನ ಸರ್ಕಾರ ಈ ಅನುದಾನ ಒದಗಿಸುವುದಾಗಿ ಘೋಷಣೆ ಮಾಡಿತ್ತು. ಅನುದಾನ ಒದಗಿಸಿ ಕ್ರಿಯಾ ಯೋಜನೆ ರೂಪಿಸಲು ಅನುಮತಿ ನೀಡಲಾಗಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ