ನಾವು ಯಾವುದೇ ತಪ್ಪು ಮಾಡಿಲ್ಲ. ನಮ್ಮ ವಿರುದ್ಧ ಯಾರೋ ಷಡ್ಯಂತ್ರ ಮಾಡಿದ್ದಾರೆ. ನಮ್ಮ ಮನೆಯಲ್ಲಿ ಸಿಕ್ಕಿರೋದು ನಮ್ಮ ಕುಟುಂಬದ ಹಣವಾಗಿದ್ದು, ಅದಕ್ಕೆ ದಾಖಲೆಗಳೂ ಇವೆ. ಅದನ್ನು ವಾಪಸ್ ಪಡೆಯುತ್ತೇವೆ ಎಂದು ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದ್ದಾರೆ.
ದಾವಣಗೆರೆ (ಮಾ.08): ನಾವು ಯಾವುದೇ ತಪ್ಪು ಮಾಡಿಲ್ಲ. ನಮ್ಮ ವಿರುದ್ಧ ಯಾರೋ ಷಡ್ಯಂತ್ರ ಮಾಡಿದ್ದಾರೆ. ನಮ್ಮ ಮನೆಯಲ್ಲಿ ಸಿಕ್ಕಿರೋದು ನಮ್ಮ ಕುಟುಂಬದ ಹಣವಾಗಿದ್ದು, ಅದಕ್ಕೆ ದಾಖಲೆಗಳೂ ಇವೆ. ಅದನ್ನು ವಾಪಸ್ ಪಡೆಯುತ್ತೇವೆ ಎಂದು ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದ್ದಾರೆ. ಹೈಕೋರ್ಟ್‌ನಲ್ಲಿ ತಮಗೆ ಜಾಮೀನು ದೊರೆತ ಹಿನ್ನೆಲೆಯಲ್ಲಿ ಚನ್ನಗಿರಿ ಕ್ಷೇತ್ರ, ಚನ್ನೇಶಪುರ (ಮಾಡಾಳು) ಗ್ರಾಮದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು ಹಮ್ಮಿಕೊಂಡಿದ್ದ ಮೆರವಣಿಗೆ ವೇಳೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಚನ್ನಗಿರಿ ಅಡಕೆ ನಾಡಾಗಿದ್ದು, ನಮಗೆ 125 ಎಕರೆ ಅಡಕೆ ತೋಟ ಇದೆ. ಎರಡು ಕ್ರಷರ್‌ಗಳು, ಅಡಕೆ ಮಂಡಿ ಇದೆ. ಬೆಂಗಳೂರಿನ ಮನೆಯಲ್ಲಿ ಸಿಕ್ಕಿರೋ ಹಣ ನಮ್ಮ ಕುಟುಂಬದ್ದು, ನಮ್ಮ ಕುಟುಂಬದ ವ್ಯವಹಾರಕ್ಕೆ ಸಂಬಂಧಿಸಿದ್ದು. ಆ ಹಣದ ಬಗ್ಗೆ ನಮ್ಮಲ್ಲಿ ದಾಖಲೆಯೂ ಇದೆ. ಸಾಮಾನ್ಯ ಕೃಷಿಕನ ಬಳಿಯೂ .2-3 ಕೋಟಿ ಇರುತ್ತದೆ. ನಾವೂ ದೊಡ್ಡ ಜಮೀನ್ದಾರರಾಗಿದ್ದು, ಆರೇಳು ಕೋಟಿ ರು. ಮನೆಯಲ್ಲಿ ಇದ್ದೇ ಇರುತ್ತದೆ ಎಂದು ಮಾಡಾಳ್ ವಿರುಪಾಕ್ಷಪ್ಪ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು
ಶಾಸಕ ಮಾಡಾಳು ವಿರೂಪಾಕ್ಷಪ್ಪಗೆ ಜಾಮೀನು: ವಿವಾದದ ವಿಜಯೋತ್ಸವ!
ಯಾರೋ ಹಣ ಇಟ್ಟು ಹೋದ್ರು: ಆಡಳಿತ ಪಕ್ಷದ ಶಾಸಕನ ಮನೆ, ಕಚೇರಿ ಮೇಲೆ ದಾಳಿ ನಡೆದಿರುವುದು ಇದೇ ಮೊದಲು. ನನ್ನ ಮೇಲೆ ನಿರಾಧಾರ ಆರೋಪಗಳನ್ನು ಮಾಡಲಾಗುತ್ತಿದೆ. ಈ ಆರೋಪಗಳೆಲ್ಲ ಸತ್ಯಕ್ಕೆ ದೂರವಾದ ಸಂಗತಿ. ಬೆಂಗಳೂರಿನ ಕಚೇರಿಯಲ್ಲಿ ಪುತ್ರ ಎಂ.ವಿ.ಪ್ರಶಾಂತ್ ಕುಳಿತಿದ್ದಾಗ ಯಾರೋ ಬಂದು ಹಣ ಇಟ್ಟು ಓಡಿ ಹೋಗಿದ್ದಾರೆ. ನಂತರ ಲೋಕಾಯುಕ್ತ ಅಧಿಕಾರಿಗಳು ನನ್ನ ಮಗನ ಕೈಗೆ ಹಣ ಇಟ್ಟು, ವಶಕ್ಕೆ ಪಡೆದಿದ್ದಾರೆ. ಇದರ ಹಿಂದೆ ಯಾರೋ ದೊಡ್ಡ ಷಡ್ಯಂತ್ರ ಮಾಡಿದ್ದಾರೆ ಎಂದು ದೂರಿದರು.
ಓಡಿಹೋಗಿಲ್ಲ, ಮನೆಯಲ್ಲೇ ಇದ್ದೆ: ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾನು ನನ್ನ ಸ್ವಗ್ರಾಮ ಚನ್ನೇಶಪುರ ಮನೆಯಲ್ಲೇ ಇದ್ದೆ. ಕ್ಷೇತ್ರದ ಜನ ನನಗೆ ದೇವರ ಸಮಾನ. ಆ ಎಲ್ಲರ ಮೇಲೆ ಆಣೆ ಮಾಡಿ ಹೇಳುತ್ತೇನೆ. ನನಗೆ ಇದರ ಬಗ್ಗೆ ಮಾಹಿತಿ ಇಲ್ಲ. ಕಾನೂನಿಗೆ ಗೌರವ ಕೊಡಬೇಕಾದ್ದು, ನಮ್ಮ ಕರ್ತವ್ಯ. ಕೆಎಸ್‌ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ಪಕ್ಷಕ್ಕೆ ಮುಜುಗರವಾಗಬಾರದೆಂದು ಮುಖ್ಯಮಂತ್ರಿ ಸೂಚನೆಯಂತೆ ರಾಜೀನಾಮೆ ನೀಡಿದ್ದೇನೆ ಎಂದು ವಿವರಿಸಿದರು.
ಜಾಮೀನಿಗಾಗಿ ಮಾಡಾಳ್ ವಿರೂಪಾಕ್ಷಪ್ಪ ಹೈಕೋರ್ಟ್‌ಗೆ ಮೊರೆ: ಪ್ರಕರಣ ರದ್ದು ಕೋರಿ ಪ್ರತ್ಯೇಕ ಅರ್ಜಿ ಸಲ್ಲಿಕೆ
ಉಚ್ಚಾಟನೆ ಬಗ್ಗೆ ಮಾಹಿತಿ ಇಲ್ಲ: ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ ಬಗ್ಗೆ ಯಾರೂ ಮಾಹಿತಿ ನೀಡಿಲ್ಲ. ಮಾಧ್ಯಮಗಳಿಂದಷ್ಟೇ ತಿಳಿದಿದ್ದೇನೆ. ಪಕ್ಷ ನನಗೆ ತಾಯಿ ಇದ್ದಂತೆ. ಎರಡು ಸಲ ಶಾಸಕನಾಗಲು ಬಿಜೆಪಿ ಅವಕಾಶ ಮಾಡಿಕೊಟ್ಟಿದೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧ. ನನಗೆ ಅನುಕೂಲ ಮಾಡಿಕೊಡಬಹುದು ಎಂಬ ಭಾವನೆ ಬರಬಹುದು ಎಂಬ ಕಾರಣಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ, ಯಡಿಯೂರಪ್ಪ, ಸಚಿವರು ಹೀಗೆ ಯಾರನ್ನೂ ಭೇಟಿ ಮಾಡಿಲ್ಲ. ಪಕ್ಷಕ್ಕೆ ಮುಜುಗರ ಆಗಬಾರದೆಂಬ ಕಾರಣಕ್ಕೆ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಇದೇ ವೇಳೆ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.