ಶಾಸಕ ಮಾಡಾಳು ವಿರೂಪಾಕ್ಷಪ್ಪಗೆ ಜಾಮೀನು: ವಿವಾದದ ವಿಜಯೋತ್ಸವ!

Published : Mar 08, 2023, 06:23 AM IST
ಶಾಸಕ ಮಾಡಾಳು ವಿರೂಪಾಕ್ಷಪ್ಪಗೆ ಜಾಮೀನು: ವಿವಾದದ ವಿಜಯೋತ್ಸವ!

ಸಾರಾಂಶ

ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಕೆ.ಮಾಡಾಳು ವಿರೂಪಾಕ್ಷಪ್ಪಗೆ ಹೈಕೋರ್ಟ್‌ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ. ಇದರ ಬೆನ್ನಲ್ಲೇ ಚನ್ನಗಿರಿ ಕ್ಷೇತ್ರದಲ್ಲಿ ಬೆಂಬಲಿಗರು ಮಾಡಾಳು ವಿರೂಪಾಕ್ಷಪ್ಪ ಅವರನ್ನು ವಾಹನದಲ್ಲಿ ಮೆರವಣಿಗೆ ಮಾಡಿ, ವಿಜಯೋತ್ಸವ ಆಚರಿಸಿದ್ದಾರೆ. 

ಬೆಂಗಳೂರು (ಮಾ.08): ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್‌) ಸಂಸ್ಥೆಗೆ ಕೆಮಿಕಲ್‌ ಆಯಿಲ್‌ ಪೂರೈಸುವ ಗುತ್ತಿಗೆಯ ಕಾರ್ಯಾದೇಶ ನೀಡಿರುವುದಕ್ಕೆ ಪ್ರತಿಯಾಗಿ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಲ್ಲಿ ಸಿಲುಕಿ ಲೋಕಾಯುಕ್ತ ಪೊಲೀಸರಿಂದ ಬಂಧನದ ಭೀತಿ ಎದುರಿಸುತ್ತಿದ್ದ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಕೆ.ಮಾಡಾಳು ವಿರೂಪಾಕ್ಷಪ್ಪಗೆ ಹೈಕೋರ್ಟ್‌ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ. ಇದರ ಬೆನ್ನಲ್ಲೇ ಚನ್ನಗಿರಿ ಕ್ಷೇತ್ರದಲ್ಲಿ ಬೆಂಬಲಿಗರು ಮಾಡಾಳು ವಿರೂಪಾಕ್ಷಪ್ಪ ಅವರನ್ನು ವಾಹನದಲ್ಲಿ ಮೆರವಣಿಗೆ ಮಾಡಿ, ವಿಜಯೋತ್ಸವ ಆಚರಿಸಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ. ನಿರೀಕ್ಷಣಾ ಜಾಮೀನು ಕೋರಿ ಮಾಡಾಳು ವಿರೂಪಾಕ್ಷಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್‌ ಅವರ ನ್ಯಾಯಪೀಠ ಮಂಗಳವಾರ ಜಾಮೀನು ನೀಡಿ ಆದೇಶ ಮಾಡಿದೆ.

48 ತಾಸಲ್ಲಿ ಶರಣಾಗಬೇಕು: ಪ್ರಕರಣದ ಕುರಿತು ಆಕ್ಷೇಪಣೆ ಸಲ್ಲಿಸಲು ಮತ್ತು ತನಿಖಾಧಿಕಾರಿಯಿಂದ ಅಗತ್ಯ ಸಲಹೆ-ಸೂಚನೆ ಪಡೆಯಲು ಕಾಲಾವಕಾಶ ನೀಡುವಂತೆ ಲೋಕಾಯುಕ್ತ ಪರ ವಕೀಲರು ಕೋರಿದ್ದಾರೆ. ಹಾಗಾಗಿ, ಲೋಕಾಯುಕ್ತ ಪೊಲೀಸರು ದಾಖಲೆ ಸಲ್ಲಿಸುವವರೆಗೂ ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗುತ್ತಿದೆ ಎಂದು ತಿಳಿಸಿದ ನ್ಯಾಯಪೀಠ, ಅರ್ಜಿದಾರ ಆರೋಪಿಯನ್ನು ಬಂಧಿಸಿದರೆ 5 ಲಕ್ಷ ರು. ಮೊತ್ತದ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ಪಡೆದು ಬಿಡುಗಡೆ ಮಾಡಬೇಕು ಎಂದು ಆದೇಶಿಸಿದೆ.

ಜಾಮೀನಿಗಾಗಿ ಮಾಡಾಳ್ ವಿರೂಪಾಕ್ಷಪ್ಪ ಹೈಕೋರ್ಟ್‌ಗೆ ಮೊರೆ: ಪ್ರಕರಣ ರದ್ದು ಕೋರಿ ಪ್ರತ್ಯೇಕ ಅರ್ಜಿ ಸಲ್ಲಿಕೆ

ಅರ್ಜಿದಾರರು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿಯಾಗಲಿ ಪ್ರಕರಣದ ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸಬಾರದು. ಈ ಆದೇಶ ಪ್ರತಿ ಲಭ್ಯವಾದ 48 ಗಂಟೆಗಳಲ್ಲಿ ಅವರು ತನಿಖಾಧಿಕಾರಿ ಮುಂದೆ ಶರಣಾಗಬೇಕು. ತನಿಖೆಗೆ ಎಲ್ಲ ರೀತಿ ಸಹಕರಿಸಬೇಕು, ನ್ಯಾಯಾಲಯದ ಮುಂದಿನ ಆದೇಶದವರೆಗೆ ಕೆಎಸ್‌ಡಿಎಲ್‌ ಕಚೇರಿಗೆ ಅರ್ಜಿದಾರರು ಹೋಗಬಾರದು ಎಂದು ಷರತ್ತು ವಿಧಿಸಿ ನ್ಯಾಯಪೀಠ ನಿರೀಕ್ಷಣಾ ಜಾಮೀನು ನೀಡಿದೆ. ಅರ್ಜಿಗೆ ಲೋಕಾಯುಕ್ತ ಪೊಲೀಸರು ಆಕ್ಷೇಪಣೆ ಸಲ್ಲಿಸಬೇಕು ಎಂದು ನಿರ್ದೇಶಿಸಿದ ನ್ಯಾಯಪೀಠ, ವಿಚಾರಣೆಯನ್ನು ಮಾ.17ಕ್ಕೆ ವಿಚಾರಣೆ ಮುಂದೂಡಿದೆ.

‘ಲಂಚ ಕೇಳಿದ್ದಕ್ಕೆ ಉಲ್ಲೇಖವಿಲ್ಲ’: ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಕೆ.ಸುಮನ್‌ ವಾದ ಮಂಡಿಸಿ, ಪ್ರಕರಣದ ದೂರುದಾರ ಶ್ರೇಯಸ್‌ ಕಶ್ಯಪ್‌ ಅವರ ಕಂಪನಿಗೆ ಮಾಡಾಳು ವಿರೂಪಾಕ್ಷಪ್ಪ ಅಧ್ಯಕ್ಷರಾಗಿದ್ದ ಕೆಎಸ್‌ಡಿಎಲ್‌ನಿಂದ ಟೆಂಡರ್‌ ಕಾರ್ಯಾದೇಶ ನೀಡಲು ಶೇ.30ರಷ್ಟುಕಮೀಷನ್‌ ಕೇಳಲಾಗಿದೆ ಎಂಬ ಆರೋಪವಿದೆ. ಆದರೆ, ಟೆಂಡರ್‌ ಅಂತಿಮಗೊಳಿಸಿ ಕಾರ್ಯಾದೇಶ ನೀಡುವ ಅಧಿಕಾರ ವಿರೂಪಾಕ್ಷಪ್ಪ ಅವರಿಗೆ ಇಲ್ಲ. ಅವರು ಲಂಚಕ್ಕೆ ಯಾವುದೇ ಬೇಡಿಕೆಯಿಟ್ಟ ಬಗ್ಗೆ ದೂರಿನಲ್ಲಿ ಉಲ್ಲೇಖವಿಲ್ಲ. ಪುತ್ರನೊಂದಿಗೆ ಮಾತನಾಡುವಂತೆ ಅರ್ಜಿದಾರರು ತಿಳಿಸಿರುವುದಾಗಿ ಆರೋಪಿಸಲಾಗಿದೆ. ಒಂದು ರುಪಾಯಿ ಪಡೆಯದೆ ಟೆಂಡರ್‌ ಕಾರ್ಯಾದೇಶ ನೀಡಲಾಗಿದೆ ಎಂದು ತಿಳಿಸಿದರು.

ಪ್ರಕರಣ ಸಂಬಂಧ ವಿರೂಪಾಕ್ಷಪ್ಪ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಅವರು ಲಂಚಕ್ಕೆ ಬೇಡಿಕೆಯಿಟ್ಟಿಲ್ಲ ಹಾಗೂ ಸ್ವೀಕರಿಸಿಯೂ ಇಲ್ಲ. ಪ್ರಕರಣದ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಲೋಕಾಯುಕ್ತ ಪೊಲೀಸರು ಯಾವುದೇ ಅರ್ಜಿ ಸಲ್ಲಿಸಿಲ್ಲ. ಆದರೂ ವಿಚಾರಣಾ ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ವಿರೂಪಾಕ್ಷಪ್ಪ ಅವರಿಗೀಗ 75 ವರ್ಷ. ನಾಲ್ಕು ಬಾರಿ ಶಾಸಕರಾಗಿದ್ದಾರೆ, ಮೇಲಾಗಿ ಹೃದಯ ಸಂಬಂಧಿ ಸಮಸ್ಯೆ ಹೊಂದಿದ್ದಾರೆ. ವಿಚಾರಣೆಗೆ ಹಾಜರಾದರೆ ಲೋಕಾಯುಕ್ತ ಪೊಲೀಸರು ಬಂಧಿಸುವ ಭೀತಿ ಇದೆ. ಆದ್ದರಿಂದ, ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಕೋರಿದರು.

ಅದನ್ನು ಆಕ್ಷೇಪಿಸಿದ ಲೋಕಾಯುಕ್ತ ಪರ ವಕೀಲರು, ಮಾಡಾಳು ವಿರೂಪಾಕ್ಷಪ್ಪ ಪುತ್ರ ಹಣ ಪಡೆಯುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ. ಅವರ ಮನೆಯಲ್ಲಿ ಕೋಟ್ಯಂತರ ರು. ಹಣ ಪತ್ತೆಯಾಗಿದೆ. ಹೆಚ್ಚಿನ ತನಿಖೆಗಾಗಿ ವಿರೂಪಾಕ್ಷಪ್ಪ ಅವರನ್ನು ಬಂಧಿಸಲು ಯತ್ನಿಸಲಾಗುತ್ತಿದೆ. ಅವರು ತಲೆಮರೆಸಿಕೊಂಡಿದ್ದು, ಈವರೆಗೂ ಪತ್ತೆಯಾಗಿಲ್ಲ. ಅರ್ಜಿಗೆ ಆಕ್ಷೇಪಣೆ ಸಲ್ಲಿಸಬೇಕಿದೆ ಮತ್ತು ತನಿಖಾಧಿಕಾರಿಯಿಂದ ಅಗತ್ಯ ಸಲಹೆ-ಸೂಚನೆ ಪಡೆದು ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕಿದೆ. ಹಾಗಾಗಿ, ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಾರದು ಕೋರಿದರು. ವಾದ-ಪ್ರತಿವಾದ ಆಲಿಸಿದ ಪೀಠ ಕೊನೆಗೆ ಅರ್ಜಿದಾರರಿಗೆ ಮಧ್ಯಂತರ ಜಾಮೀನು ನೀಡಿ ಆದೇಶ ಮಾಡಿದೆ.

ದೇಶದಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್‌ ತಬ್ಬಲಿ: ಬಿ.ಎಸ್‌.ಯಡಿಯೂರಪ್ಪ

ಪ್ರಕರಣದ ಹಿನ್ನೆಲೆ: ವಿರೂಪಾಕ್ಷಪ್ಪ ಅವರ ಪುತ್ರರೂ ಆದ ಬೆಂಗಳೂರು ಜಲಮಂಡಳಿ ಪ್ರಧಾನ ಲೆಕ್ಕಾಧಿಕಾರಿ ಪ್ರಶಾಂತ್‌ ಮಾಡಾಳು ಅವರು ದೂರುದಾರ ಶ್ರೇಯಸ್‌ ಕಶ್ಯಪ್‌ ನಿರ್ದೇಶಕರಾಗಿರುವ ಮೆ. ಡಿಲಿಸಿಯಾ ಕೆಮಿಕಲ್ಸ್‌ ಕಂಪನಿಗೆ ಕೆಎಸ್‌ಡಿಎಲ್‌ನಿಂದ ಕೆಮಿಕಲ್‌ ಆಯಿಲ್‌ ಖರೀದಿಯ ಟೆಂಡರ್‌ ಹಂಚಿಕೆ ಮಾಡಿರುವುದಕ್ಕೆ ಪ್ರತಿಯಾಗಿ 40 ಲಕ್ಷ ರು. ಲಂಚ ಪಡೆದ ಆರೋಪ ಸಂಬಂಧ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮಾ.2ರಂದು ಎಫ್‌ಐಆರ್‌ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ವಿರೂಪಾಕ್ಷಪ್ಪ ಮೊದಲ ಆರೋಪಿಯಾದರೆ, ಪ್ರಶಾಂತ್‌ ಮಾಡಾಳು ಎರಡನೇ ಆರೋಪಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

VB–G RAM G Bill 2025: ಗಾಂಧೀಜಿ, ಹೋರಾಟಗಾರರಿಗೆ ಅಪಮಾನ: ಕೇಂದ್ರದ ವಿರುದ್ಧ ಉಗ್ರಪ್ಪ ಕೆಂಡಾಮಂಡಲ!
ಮೈಸೂರು ಕೆನರಾ ಬ್ಯಾಂಕ್ ಚಿನ್ನ ಅಡವಿಟ್ಟ ಗ್ರಾಹಕರಿಗೆ ಪಂಗನಾಮ: ಅಕ್ಕಸಾಲಿಗನ ವಿರುದ್ಧ ಎಫ್‌ಐಆರ್ ದಾಖಲು!