
ಬೆಂಗಳೂರು (ನ.16) : ವ್ಯಾಪಾರಿ ವಲಯ’ (ವೆಂಡಿಂಗ್ ಝೋನ್) ಗುರುತಿಸಿ ಅಲ್ಲಿ ವ್ಯಾಪಾರ ಮಾಡಲು ಅವಕಾಶ ಕೊಡದೇ ಬೀದಿ ಬದಿ ವ್ಯಾಪಾರಸ್ಥರ ತೆರವಿಗೆ ಮುಂದಾದರೆ ತೀವ್ರವಾಗಿ ಹೋರಾಟ ಮಾಡುವುದಾಗಿ ವ್ಯಾಪಾರಿಗಳು ಎಚ್ಚರಿಸಿದ್ದಾರೆ.
ನಗರದ 1,400 ಕಿಮೀ ಉದ್ದದ ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಯಲ್ಲಿ ಬೀದಿ ವ್ಯಾಪಾರಿಗಳಿಂದ ವಾಹನ ಸಂಚಾರ ಹಾಗೂ ಪಾದಚಾರಿಗಳ ಓಡಾಟಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೀದಿ ವ್ಯಾಪಾರ ತೆರವು ಮಾಡುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತರ ನಿರ್ಧಾರಕ್ಕೆ ಬೀದಿ ಬದಿ ವ್ಯಾಪಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Bengaluru: ಮುಖ್ಯರಸ್ತೆಗಳಲ್ಲಿ ಬೀದಿ ವ್ಯಾಪಾರ ನಿಷೇಧಕ್ಕೆ ತೀರ್ಮಾನ: ತುಷಾರ್ ಗಿರಿನಾಥ್
ನಗರದಲ್ಲಿ ಸುಮಾರು 1.50 ಲಕ್ಷ ಬೀದಿಬದಿ ವ್ಯಾಪಾರಸ್ಥರಿದ್ದು, ತೆರವು ನಿರ್ಧಾರದಿಂದ ಸುಮಾರು 80 ಸಾವಿರಕ್ಕೂ ಹೆಚ್ಚು ವ್ಯಾಪಾರಿಗಳ ಬದುಕು ಅತಂತ್ರವಾಗಲಿದೆ. ಈವರೆಗೆ ಬೀದಿ ಬದಿ ವ್ಯಾಪಾರಿಗಳ ಗುರುತಿಸುವ ಸಮೀಕ್ಷೆ ಸಮರ್ಪಕವಾಗಿ ನಡೆದಿಲ್ಲ. ಅಧಿಕಾರಿಗಳು ಅರೆಬರೆ ಸಮೀಕ್ಷೆ ನಡೆಸಿ ಕೇವಲ 26 ಸಾವಿರ ವ್ಯಾಪಾರಿಗಳಿಗೆ ಮಾತ್ರ ಗುರುತಿನ ಚೀಟಿ ನೀಡಿದ್ದಾರೆ. ತಳ್ಳುಗಾಡಿ ವ್ಯಾಪಾರಿಗಳನ್ನು ಸಮೀಕ್ಷೆಯಲ್ಲಿ ಪರಿಗಣಿಸಿಲ್ಲ ಎಂದು ವಿವಿಧ ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳು ದೂರಿವೆ.
ಪರ್ಯಾಯ ವ್ಯವಸ್ಥೆ ಕಲ್ಪಿಸದೇ ತೆರವು ಮಾಡುವುದರಿಂದ ಸುಮಾರು 2 ಲಕ್ಷಕ್ಕೂ ಅಧಿಕ ಕುಟುಂಬಸ್ಥರ ಮೇಲೆ ಪರಿಣಾಮ ಬೀರಲಿದೆ. ಶಿವಮೊಗ್ಗ, ಗದಗ, ಚಿಕ್ಕಬಳ್ಳಾಪುರ, ಹುಬ್ಬಳ್ಳಿ ಸೇರಿ ಇತರೆಡೆ ವ್ಯಾಪಾರಿ ವಲಯ ಗುರುತಿಸುವ ಕಾರ್ಯವಾಗಿದೆ. ಆದರೆ ಬೆಂಗಳೂರು ನಗರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಕಾರ್ಯ ಆಗಿಲ್ಲ. ಹೋಟೆಲ್ ಸಂಘಟನೆಗಳ ಮನವಿ ಮೇರೆಗೆ ಬಿಬಿಎಂಪಿ ಬೀದಿ ವ್ಯಾಪಾರಿಗಳ ಮೇಲೆ ಗದಾಪ್ರಹಾರ ಮಾಡಹೊರಟಿರುವುದು ಸರಿಯಲ್ಲ ಎಂದು ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಸಿ.ಇ.ರಂಗಸ್ವಾಮಿ, ‘ರಾಷ್ಟ್ರೀಯ ನಗರ ಜೀವನೋಪಾಯ ಮತ್ತು ಸಂರಕ್ಷಣೆ ಮತ್ತು ಬೀದಿ ಬದಿ ವ್ಯಾಪಾರಿಗಳ ಅಧಿನಿಯಮ-2014, ಕರ್ನಾಟಕ ಸರ್ಕಾರ ಬೀದಿಬದಿ ವ್ಯಾಪಾರಿಗಳ ಅಧಿನಿಯಮ-2019-20ರ ಅನ್ವಯ ಪಟ್ಟಣ ವ್ಯಾಪಾರ ಸಮಿತಿ ರಚನೆಯಾಗಿದೆ. ಈ ಸಮಿತಿಯಲ್ಲಿ ತೀರ್ಮಾನ ಆಗದೆ ಬೀದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಲು ಬರುವುದಿಲ್ಲ. ಆದರೆ, ಸಮಿತಿ ಜತೆಗೆ ಚರ್ಚಿಸದೆ ಬೀದಿ ವ್ಯಾಪಾರ ತೆರವು ಮಾಡುವ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದರು.
ಆರ್.ಆರ್.ನಗರದ ತರಕಾರಿ ವ್ಯಾಪಾರಸ್ಥ ಚಂದ್ರು ಮಾತನಾಡಿ, ‘ಹಲವು ವರ್ಷದಿಂದ ಒಂದೇ ಸ್ಥಳದಲ್ಲಿ ವ್ಯಾಪಾರ ನಡೆಸುತ್ತಿದ್ದೇವೆ. ತರಕಾಯಿ, ಹಣ್ಣು ಸೇರಿದಂತೆ ಇತರೆ ವ್ಯಾಪಾರಿ ಮಳಿಗೆಗಳಿಗೆ ಸೂಕ್ತ ಸ್ಥಳದಲ್ಲೆ ವ್ಯಾಪಾರಿ ವಲಯ ಗುರುತಿಸಿ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕು. ಇಲ್ಲದಿದ್ದರೆ ತೆರವು ಮಾಡುವುದನ್ನು ಒಪ್ಪುವುದಿಲ್ಲ’ ಎಂದು ಹೇಳಿದರು.
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ನಿರ್ಮಾಣ , ಬೀದಿ ಬದಿ ವ್ಯಾಪಾರಿಗಳ ಬದುಕು ಅತಂತ್ರ!
ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ವ್ಯಾಪಾರಿ ವಲಯ ಗುರುತಿಸುವ ಕಾರ್ಯ ನಡೆಯುತ್ತಿಲ್ಲ. ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತೆರವಿಗೆ ಮುಂದಾದರೆ ನಗರದ ಎಲ್ಲ ಬೀದಿ ವ್ಯಾಪಾರಸ್ಥರು ಒಟ್ಟಾಗಿ ಪ್ರತಿಭಟಿಸಲಾಗುವುದು.
-ಸಿ.ಇ.ರಂಗಸ್ವಾಮಿ, ಕರ್ನಾಟಕ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ
ಏಕಾಏಕಿ ವ್ಯಾಪಾರದ ಸ್ಥಳದಿಂದ ಬಿಡಿಸುವುದು ಸರಿಯಲ್ಲ. ಮೊದಲು ವ್ಯಾಪಾರಿ ವಲಯ ಗುರುತಿಸಿ ಬಳಿಕ ನಾವು ಆಗ್ರಹಿಸುವ ಸ್ಥಳದಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಿ.
-ಶಶಿಕುಮಾರ್, ಅಂಜನ್‌ನಗರ, ತಿನಿಸುಗಳ ವ್ಯಾಪಾರಿ
ಫ್ಲೆಕ್ಸ್ ಹಾಕುತ್ತಿರುವುದು ಕಂಡರೆ ತಕ್ಷಣ ಪಾಲಿಕೆಗೆ ತಿಳಿಸಿ: ತುಷಾರ್
ಬೆಂಗಳೂರು: ನಗರದಲ್ಲಿ ಅನಧಿಕೃತವಾಗಿ ಫ್ಲೆಕ್ಸ್ ಅಳವಡಿಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಸಹಕರಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಚ್ ಆದೇಶ, ಬಿಬಿಎಂಪಿ ಕೌನ್ಸಿಲ್ ನಡಾವಳಿಗಳಿದ್ದರೂ ದಿನದಿಂದ ದಿನಕ್ಕೆ ನಗರದಲ್ಲಿ ಫ್ಲೆಕ್ಸ್, ಬ್ಯಾನರ್‌ಗಳ ಅಳವಡಿಕೆ ಹೆಚ್ಚುತ್ತಿದೆ. ಅನಧಿಕೃತ ಫ್ಲೆಕ್ಸ್‌ಗಳ ಅಳವಡಿಕೆ ತಡೆಗೆ ಬಿಬಿಎಂಪಿ ಹಲವಾರು ಕ್ರಮ ಕೈಗೊಳ್ಳಲಾಗಿದೆ. ವಾರ್ಡ್ ಮಟ್ಟದಲ್ಲಿ ಫ್ಲೆಕ್ಸ್‌ಗಳ ತೆರವಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಫ್ಲೆಕ್ಸ್ ಬ್ಯಾನರ್ ಅಳವಡಿಕೆ ಮಾಡುವುದು ಕಂಡು ಬಂದರೆ ಸಾರ್ವಜನಿಕರು ಈ ಬಗ್ಗೆ ಬಿಬಿಎಂಪಿಗೆ ಮಾಹಿತಿ ನೀಡಿದರೆ ತೆರವು ಕಾರ್ಯಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ