ವೀರಶೈವ-ಲಿಂಗಾಯತ ಮೀಸಲಾತಿ: ಕಲಬುರಗಿಯಲ್ಲಿ 100ಕ್ಕೂ ಹೆಚ್ಚು ಮಠಾಧೀಶರ ಸಭೆ

By Kannadaprabha NewsFirst Published Jul 10, 2023, 8:09 AM IST
Highlights

ವೀರಶೈವ-ಲಿಂಗಾಯತ ಸಮುದಾಯ ಮತ್ತು ಒಳಪಂಗಡಗಳು ಕೇಂದ್ರದ ಒಬಿಸಿ ಪಟ್ಟಿಗೆ ಸೇರುವವರೆಗೂ ಹೋರಾಟ ಮುಂದುವರಿಸುವುದಾಗಿ ಉಜ್ಜಯಿನಿ ಪೀಠದ ಜಗದ್ಗುರು ಸಿದ್ದಲಿಂಗ ಶಿವಾಚಾರ್ಯ ಹೇಳಿದ್ದಾರೆ. 

ಕಲಬುರಗಿ (ಜು.10): ವೀರಶೈವ-ಲಿಂಗಾಯತ ಸಮುದಾಯ ಮತ್ತು ಒಳಪಂಗಡಗಳು ಕೇಂದ್ರದ ಒಬಿಸಿ ಪಟ್ಟಿಗೆ ಸೇರುವವರೆಗೂ ಹೋರಾಟ ಮುಂದುವರಿಸುವುದಾಗಿ ಉಜ್ಜಯಿನಿ ಪೀಠದ ಜಗದ್ಗುರು ಸಿದ್ದಲಿಂಗ ಶಿವಾಚಾರ್ಯ ಹೇಳಿದ್ದಾರೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ವೀರಶೈವ ಲಿಂಗಾಯತ ಮಠಾಧೀಶರ ಸಂಯುಕ್ತಾಶ್ರಯದಲ್ಲಿ ಭಾನುವಾರ ನಗರದಲ್ಲಿ ನಡೆದ 100ಕ್ಕೂ ಅಧಿಕ ಮಠಾಧೀಶರ ಹಕ್ಕೊತ್ತಾಯ ಸಭೆಯಲ್ಲಿ ಅವರು ಮಾತನಾಡಿದರು. ಕೇಂದ್ರದ ಒಬಿಸಿ ಪಟ್ಟಿಗೆ ಸಮುದಾಯವನ್ನು ಸೇರಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸಚಿವ ಸಂಪುಟ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಕಳುಹಿಸಿ ಕೊಡಬೇಕು ಎಂದು ಆಗ್ರಹಿಸಿದರು.

ವೀರಶೈವ ಲಿಂಗಾಯತ ಮಠಗಳು ಅನ್ನ, ಜ್ಞಾನ, ಅಕ್ಷರ, ಅಧ್ಯಾತ್ಮ, ಆಶ್ರಯದಂಥ ಪಂಚರತ್ನಗಳನ್ನು ವಿಶ್ವಕ್ಕೆ ನೀಡಿವೆ. ಆದರೆ, ಇಂದು ಉಪ ಪಂಗಡಗಳ ಭಿನ್ನತೆಯಿಂದ ಒಡೆದು ಹೋಗಿವೆ. ಇದರಿಂದ ಸಮಾಜದ ಮಕ್ಕಳು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇದೀಗ ಎಲ್ಲರೂ ಭಿನ್ನತೆ ಮರೆತು ಒಂದೆಡೆ ಸೇರಿದ್ದೇವೆ. ಮೀಸಲಾತಿಯಿಂದ ಸಮುದಾಯದ 59 ಉಪ ಪಂಗಡಗಳಗೆ ಫಲ ದೊರಕಲಿದೆ. ನಮ್ಮ ಸಮುದಾಯದ ಮಕ್ಕಳು ಏಮ್ಸ್‌, ಐಐಟಿ, ಐಎಎಸ್‌ ಸೇರಿ ಕೇಂದ್ರ ಸರ್ಕಾರದ ಎಲ್ಲ ಇಲಾಖೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡಬೇಕಾಗಿದೆ. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಹೇಳಿದರು. ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ, ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಶಿಫಾರಸ್ಸು ಬಂದ ನಂತರ ಹೆಚ್ಚಿನ ಮುತುವರ್ಜಿ ವಹಿಸಿ ಸಮುದಾಯಕ್ಕೆ ನ್ಯಾಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

Latest Videos

ಶಿವಮೊಗ್ಗದಲ್ಲಿ ವಿಶ್ವದ ಎತ್ತರದ ಸುಬ್ರಹ್ಮಣ್ಯ ಮೂರ್ತಿ ಸ್ಥಾಪನೆ: 151 ಅಡಿ ಮೂರ್ತಿ ಪ್ರತಿಷ್ಠಾಪನೆಗೆ ಶಿಲಾನ್ಯಾಸ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಹಾಗೂ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಸಾಮಾಜಿಕ ನ್ಯಾಯ ನೀಡಿದ ವೀರಶೈವ ಲಿಂಗಾಯತ ಸಮುದಾಯವಿಂದು ಶೋಷಣೆಗೆ ಒಳಗಾಗುವಂತಾಗಿದೆ. ನಾವು ಯಾರ ಹಕ್ಕನ್ನೂ ಕಸಿಯುತ್ತಿಲ್ಲ. ನಮ್ಮ ಸಾಂವಿಧಾನಿಕ ಹಕ್ಕನ್ನು ಕೇಳುತ್ತಿದ್ದೇವೆ ಎಂದು ಹೇಳಿದರು. ಕಾಶಿ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಉಜ್ಜಯಿನಿ ಪೀಠದ ಡಾ.ಚೆನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಸಚಿವರಾದ ಡಾ.ಶರಣಪ್ರಕಾಶ ಪಾಟೀಲ, ಶರಣಬಸಪ್ಪ ದರ್ಶನಾಪುರ, ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಮಾನ್ಯತೆಗೆ ನೀಡಿ: ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಲಿಂಗಾಯತ ಮಠಾಧಿಪತಿ ಒಕ್ಕೂಟದಿಂದ ಮನವಿ ಸಲ್ಲಿಸಲಾಗುವುದು ಎಂದು ಗದಗ ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದರು. ಭಾನುವಾರ ಲಿಂಗಾಯತ ಧರ್ಮ ಚಿಂತನಾ ಶಿಬಿರ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸರ್ಕಾರದ ಎಲ್ಲ ದಾಖಲೆಗಳಲ್ಲಿ ಲಿಂಗಾಯತ ಎಂಬ ಶಬ್ದ ಮಾತ್ರ ಬಳಕೆಯಲ್ಲಿದೆ. ಎಲ್ಲಿಯೂ ವೀರಶೈವ ಲಿಂಗಾಯತ ಎಂದಿಲ್ಲ. ವೀರಶೈವವೂ ಕೂಡ ಲಿಂಗಾಯತ ಧರ್ಮದ ಒಂದು ಒಳಪಂಗಡ. ಕೆಲವರು ವೀರಶೈವ ಲಿಂಗಾಯತ ಶಬ್ದ ಬಳಸಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಹೀಗಾಗಿ, ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವನ್ನಾಗಿ ಘೋಷಿಸಬೇಕು ಎಂದರು.

Reporters Dairy: ಪ್ರತಿಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಆಗಬೇಕಂತೆ..!

ಲಿಂಗಾಯತ ಧರ್ಮದಲ್ಲಿ ನೂರಾರು ಒಳಪಂಗಡಗಳು ಇರುವುದು ವಾಸ್ತವ. ಈಗಾಗಲೇ ಕೆಲ ಪಂಗಡಗಳನ್ನು ಹಿಂದುಳಿದ ವರ್ಗಗಳ ಪಂಗಡಗಳಲ್ಲಿ ಸೇರಿಸಲಾಗಿದೆ. ಇನ್ನುಳಿದ ಪಂಗಡಗಳಲ್ಲಿ ಅನೇಕರು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಅವರನ್ನೂ ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು. ಈಗಾಗಲೇ ಕೇಂದ್ರ ಸರ್ಕಾರಕ್ಕೆ ಒಂದು ಬಾರಿ ಪ್ರಸ್ತಾವನೆ ಕಳುಹಿಸಲಾಗಿದೆ. ಆದರೆ, ಕೇಂದ್ರ ಪರಿಶೀಲನೆ ಮಾಡದೇ ವಾಪಸ್‌ ಕಳುಹಿಸಿದೆ. ಈಗ ಶಾಸಕರು, ಸಚಿವರು ಹಾಗೂ ರಾಜ್ಯ ಲೋಕಸಭಾ ಸದಸ್ಯರಿಗೆ ಮತ್ತೊಮ್ಮೆ ಮನವಿ ಮೂಲಕ ಆಗ್ರಹಿಸಲಾಗುವುದು. 

click me!