ಅದೃಷ್ಟ ಚೆನ್ನಾಗಿತ್ತು, ಮಳೆ ನಿಂತು ಕಾಪ್ಟರ್‌ನಲ್ಲಿ ರಕ್ಷಿಸಿದರು: ಅಮರನಾಥ ಯಾತ್ರಿಕರ ಅನುಭವದ ಮಾತು

Published : Jul 10, 2023, 07:03 AM IST
ಅದೃಷ್ಟ ಚೆನ್ನಾಗಿತ್ತು, ಮಳೆ ನಿಂತು ಕಾಪ್ಟರ್‌ನಲ್ಲಿ ರಕ್ಷಿಸಿದರು: ಅಮರನಾಥ ಯಾತ್ರಿಕರ ಅನುಭವದ ಮಾತು

ಸಾರಾಂಶ

ಅಮರನಾಥದಲ್ಲಿ ದೇವರ ದರ್ಶನ ಮಾಡಿ ಮರಳಿ ಬರುವ ಹಾದಿಯಲ್ಲಿ 6 ಕಿಮೀ ಸಾಗಿದ ನಂತರ ಅತಿಯಾದ ಮಳೆಯಿಂದಾಗಿ ಭೂಕುಸಿತ ಉಂಟಾಗಿತ್ತು. ಹೀಗಾಗಿ, ಪಂಚತಾರ್ನಿ ಬೇಸ್‌ಕ್ಯಾಂಪ್‌ನಲ್ಲಿ ಸಿಕ್ಕಿ ಹಾಕಿಕೊಂಡು ಸಂಕಷ್ಟಅನುಭವಿಸಿದೆವು. 

ಬೆಂಗಳೂರು (ಜು.10): ‘ಅಮರನಾಥದಲ್ಲಿ ದೇವರ ದರ್ಶನ ಮಾಡಿ ಮರಳಿ ಬರುವ ಹಾದಿಯಲ್ಲಿ 6 ಕಿಮೀ ಸಾಗಿದ ನಂತರ ಅತಿಯಾದ ಮಳೆಯಿಂದಾಗಿ ಭೂಕುಸಿತ ಉಂಟಾಗಿತ್ತು. ಹೀಗಾಗಿ, ಪಂಚತಾರ್ನಿ ಬೇಸ್‌ಕ್ಯಾಂಪ್‌ನಲ್ಲಿ ಸಿಕ್ಕಿ ಹಾಕಿಕೊಂಡು ಸಂಕಷ್ಟಅನುಭವಿಸಿದೆವು. ಅದೇ ಪರಿಸ್ಥಿತಿ ಮುಂದುವರಿದರೆ ಸೇನಾ ಹೆಲಿಕಾಪ್ಟರ್‌ ಬರುವವರೆಗೂ ಕಾಯಬೇಕಾಗಿತ್ತು. ಆದರೆ, ಅದೃಷ್ಟಚೆನ್ನಾಗಿತ್ತು, ಭಾನುವಾರ ಬೆಳಗ್ಗೆಯಿಂದಲೇ ವಾತಾವರಣ ಸ್ವಚ್ಛವಾಗಿ ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ನಾವು ಬುಕ್‌ ಮಾಡಿದ್ದ ಸಾಮಾನ್ಯ ಹೆಲಿಕಾಪ್ಟರ್‌ನಲ್ಲೇ ಶ್ರೀನಗರ ತಲುಪಿದೆವು’ ಇದು ಅಮರನಾಥ ಯಾತ್ರೆ ವೇಳೆ ಭೂಕುಸಿತದಿಂದ ಸಿಕ್ಕಿ ಹಾಕಿಕೊಂಡಿದ್ದ ಗದಗಿನ ಯಾತ್ರಾರ್ಥಿ ವಿನೋದ ಅವರು ಅನುಭವದ ಮಾತುಗಳು.

ಭಾನುವಾರ ‘ಕನ್ನಡಪ್ರಭ’ ಜೊತೆ ಮಾತನಾಡಿ, ಅತಿಯಾದ ಮಳೆ ಮತ್ತು ಶೀತಗಾಳಿಯಿಂದಾಗಿ ನಾವೆಲ್ಲಾ ಸಹಜವಾಗಿಯೇ ಆತಂಕದಲ್ಲಿ ಇದ್ದೆವು. ಶನಿವಾರ ಬೆಳಗ್ಗೆ ಉಪಾಹಾರಕ್ಕೂ ನಮಗೆ ಸಮಸ್ಯೆಯಾಗಿತ್ತು. ಅಮರನಾಥ ಯಾತ್ರೆಯ ಆಡಳಿತ ಮಂಡಳಿ ಹಾಗೂ ಸೈನ್ಯದ ಸಿಬ್ಬಂದಿ ಅಗತ್ಯ ಹೊದಿಕೆ, ಸ್ವೆಟರ್‌, ಔಷಧಿಗಳನ್ನು ನೀಡಿದರು. ಭಾನುವಾರ ಪ್ರತಿ 8 ನಿಮಿಷಕ್ಕೊಮ್ಮೆ ಹೆಲಿಕಾಪ್ಟರ್‌ ಬಂದು ತೊಂದರೆಯಲ್ಲಿದ್ದ ಎಲ್ಲರನ್ನೂ ಕರೆದುಕೊಂಡು ಸುರಕ್ಷಿತ ಸ್ಥಳಕ್ಕೆ ತಲುಪಿಸಿದರು. ನೀಲ್‌ಗ್ರಥ್‌ ಕ್ಯಾಂಪ್‌ನಿಂದ ಶ್ರೀನಗರ 2 ತಾಸಿನ ಹಾದಿಯಿತ್ತು. ಗದಗ ಜಿಲ್ಲೆಯಿಂದ ತೆರಳಿದ್ದ 23 ಜನರು ಅಲ್ಲಿಂದ ಶ್ರೀನಗರಕ್ಕೆ ನಾವು ಮೊದಲು ತಂಗಿದ್ದ ಹೋಟೆಲ್‌ಗೆ ಸಂಜೆ 5.45ಕ್ಕೆ ಬಂದು ತಲುಪಿದ್ದೇವೆ. ಪೂರ್ವ ನಿಗದಿಯಂತೆ ಶ್ರೀನಗರದಿಂದ ಜುಲೈ 11ಕ್ಕೆ ವಿಮಾನ ಬುಕ್‌ ಆಗಿದೆ. ಜುಲೈ 11ರವರೆಗೂ ನಾವು ಶ್ರೀನಗರದಲ್ಲಿಯೇ ಉಳಿಯುತ್ತೇವೆ. ಜುಲೈ 12ರ ವೇಳೆಗೆ ನಾವು ಗದಗಿಗೆ ಬರುತ್ತೇವೆ ಎಂದು ತಿಳಿಸಿದರು.

ಅಮರನಾಥಕ್ಕೆ ತೆರಳಿದ್ದ ರಾಜ್ಯ ಯಾತ್ರಿಕರು ಸೇಫ್‌: ಯಾತ್ರೆಗೆ ತೆರಳಿದ್ದು 80 ಅಲ್ಲ, 300 ಕನ್ನಡಿಗರು

ಚಿಕ್ಕಮಗಳೂರು ಯಾತ್ರಾರ್ಥಿ ಶ್ರೀನಿವಾಸ್‌ ಮಾತನಾಡಿ, ಕಳೆದ ಮೂರು ದಿನಗಳಿಂದ ಇಲ್ಲಿ ಭಾರೀ ಮಳೆ, ನಿರಂತರವಾಗಿ ಹಿಮ ಬೀಳುತ್ತಿತ್ತು. ಮುಂದೆ ಹೋಗಲು ರಸ್ತೆ ಕಾಣುತ್ತಿರಲಿಲ್ಲ. ನಮ್ಮನ್ನು ಶೇಷ್‌ನಾಗ್‌ ಪ್ರದೇಶದಲ್ಲಿ ಉಳಿಸಿಕೊಂಡಿದ್ದರು. ಭಾನುವಾರ ಮಳೆ ಇಳಿಮುಖವಾಗಿದ್ದು, ಪಂಚತರಣಿಗೆ ಬಂದಿದ್ದೇವೆ. ಇಲ್ಲಿಂದ ಸೋಮವಾರ ಅಮರನಾಥ ದೇವಾಲಯಕ್ಕೆ ಪ್ರಯಾಣ ಬೆಳೆಸಲಾಗುವುದು. ಸದ್ಯ ನಾವಿರುವ ಪಂಚತರಣಿಯಿಂದ 9 ಕಿ.ಮೀ. ಪ್ರಯಾಣ ಮಾಡಿದರೆ ದೇಗುಲ ತಲುಪಲಿದ್ದೇವೆ. ನಾವೆಲ್ಲಾ ಸುರಕ್ಷಿತವಾಗಿದ್ದೇವೆ. ನಾವು ತೆರಳಬೇಕಾದ ರಸ್ತೆ ಕ್ಲಿಯರ್‌ ಆಗಿದೆ ಎಂದು ತಿಳಿಸಿದರು.

ಅಮರನಾಥ ಭೂಕುಸಿತ: 80 ಕನ್ನಡಿಗರು ಅತಂತ್ರ, ರಕ್ಷಣೆಗೆ ರಾಜ್ಯ ಸರ್ಕಾರದಿಂದ ತಂಡ ರವಾನೆ

ಮಾಗಡಿಯ ಮಾಡಬಾಳ್‌ ಜಯರಾಂ ಮಾತನಾಡಿ, ನಮ್ಮ ತಂಡದ 9 ಮಂದಿ ಯಾತ್ರಿ​ಕರ ಪೈಕಿ ನಾಲ್ವರು ಲಡಾಕ್‌ನ ಖಾಸಗಿ ಹೊಟೆಲ್‌ನಲ್ಲಿ ಹಾಗೂ ಐದು ಮಂದಿ ಬೇಸ್‌ಕ್ಯಾಂಪ್‌ ನಲ್ಲಿ ಸುರ​ಕ್ಷಿ​ತ​ವಾ​ಗಿ​ದ್ದಾ​ರೆ. ಜು.13ರವರೆಗೂ ವಿಮಾನ ಟಿಕೆಟ್‌ಗಳು ಬುಕ್‌ ಆಗಿದ್ದು, ರಸ್ತೆ ಮಾರ್ಗ ಸಂಪೂರ್ಣ ಬಂದ್‌ ಆಗಿದೆ. ಸಹಾಯವಾಣಿಗೆ ಎಷ್ಟೇ ಬಾರಿ ಕರೆ ಮಾಡಿದರು ಪ್ರಯೋಜನವಾಗುತ್ತಿಲ್ಲ. ನಾವು ತಂಗಿರುವ ಲಡಾಕ್‌ನ ಹೋಟೆಲ್‌ ದುಬಾರಿಯಾಗಿದ್ದು, ಅನ್ನ ಸಾಂಬಾರಿಗೆ 250 ರು​ಪಾ​ಯಿ, ಒಂದು ಕಾಫಿಗೆ 100 ರುಪಾಯಿ ತಗುಲುತ್ತಿದೆ. ಸೋಮವಾರ ಶ್ರೀನಗರಕ್ಕೆ ತೆರಳಿ ವಿಮಾನದ ಮೂಲಕ ಮಂಗಳವಾರ ಬೆಂಗಳೂರಿಗೆ ಆಗಮಿಸಲಿದ್ದೇವೆ ಎಂದು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ರಾಜ್ಯ ಮೊದಲ ಸ್ಥಾನ: ಗೃಹಸಚಿವ ಪರಮೇಶ್ವರ್
ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ