ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯದಲ್ಲಿ ದುರಂತ: ಚಿಕಿತ್ಸೆ ನೀಡುತ್ತಿದ್ದ ವೇಳೆ ನೀರಾನೆ ದಾಳಿಗೆ ಪಶುವೈದ್ಯೆ ಬಲಿ

Published : Mar 20, 2026, 11:24 AM ISTUpdated : Mar 20, 2026, 01:02 PM IST
Veterinarian killed in Hippopotamus attack

ಸಾರಾಂಶ

ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯದಲ್ಲಿ, ನೀರಾನೆಗೆ ಚಿಕಿತ್ಸೆ ನೀಡಲು ತೆರಳಿದ್ದ ಯುವ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಮೇಲೆ ಪ್ರಾಣಿ ದಾಳಿ ಮಾಡಿದ್ದು, ಈ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನೆಯ ಕುರಿತು ಸರ್ಕಾರ ತನಿಖೆಗೆ ಆದೇಶಿಸಿದೆ.

ತ್ಯಾವರೆಕೊಪ್ಪ ಮೃಗಾಲಯದಲ್ಲಿ ಆಘಾತಕಾರಿ ಘಟನೆ

ಶಿವಮೊಗ್ಗ: ಇಲ್ಲಿನ ತ್ಯಾವರೆಕೊಪ್ಪ ಮೃಗಾಲಯದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ವನ್ಯಜೀವಿಯೊಂದಕ್ಕೆ ಚಿಕಿತ್ಸೆ ನೀಡಲು ಹೋಗಿದ್ದ ಪಶುವೈದ್ಯೆಯೊಬ್ಬರ ಮೇಲೆ ಪ್ರಾಣಿ ದಾಳಿ ಮಾಡಿದ್ದು, ಈ ದುರಂತದಲ್ಲಿ ಗಂಭೀರ ಗಾಯಗೊಂಡ ಅವರು ಪ್ರಾಣ ಕಳೆದುಕೊಂಡಿದ್ದಾರೆ. ಹಿಪೋಪೋಟೋಮಸ್ ಅಥವಾ ನೀರಾನೆ ದಾಳಿಗೆ ಯುವ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಪ್ರಾಣ ಕಳೆದುಕೊಂಡಿದ್ದಾರೆ. ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯದಲ್ಲಿ ವನ್ಯಜೀವಿಗೆ ಚಿಕಿತ್ಸೆ ನೀಡಲು ತೆರಳಿದ್ದ ವೇಳೆ ಈ ದುರಂತ ನಡೆದಿದೆ.

ನೀರಾನೆ ದಾಳಿಗೆ ವೈದ್ಯೆ ಸಮೀಕ್ಷಾ ಬಲಿ

ಕರ್ತವ್ಯದ ವೇಳೆ ಮೃತರಾದ ಪಶುವೈದ್ಯೆ ಡಾ ಸಮೀಕ್ಷಾ ರೆಡ್ಡಿ ಇತ್ತೀಚೆಗಷ್ಟೇ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದರು. ನಿನ್ನೆ ರಾತ್ರಿ 11.30ರ ಸಮಯದಲ್ಲಿ ವನ್ಯಜೀವಿ ನೀರಾನೆಗೆ ಚಿಕಿತ್ಸೆ ನೀಡಲು ತೆರಳಿದ್ದರು. ಈ ವೇಳೆ ನೀರಾನೆ, ವೈದ್ಯೆ ಸಮೀಕ್ಷಾ ಮೇಲೆ ಹಠಾತ್ ದಾಳಿ ಮಾಡಿದೆ. ಇದರಿಂದ ಗಂಭೀರ ಗಾಯಗೊಂಡ ವೈದ್ಯೆ ಸಮೀಕ್ಷಾ ಅವರನ್ನು ಕೂಡಲೇ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 6.30ರ ಸುಮಾರಿನಲ್ಲಿ ಅವರು ಸಾವನ್ನಪ್ಪಿದ್ದಾರೆ.

ಪ್ರಕರಣದ ತನಿಖೆಗೆ ಸಚಿವ ಖಂಡ್ರೆ ಆದೇಶ

ಘಟನೆಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸಂತಾಪ ವ್ಯಕ್ತಪಡಿಸಿದ್ದು, ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ಇದೊಂದು ದುರದೃಷ್ಟಕರ ಘಟನೆ ಈ ದುಃಖದ ಸಂದರ್ಭದಲ್ಲಿ ಮೃತ ವೈದ್ಯರ ಕುಟುಂಬದೊಂದಿಗೆ ಸರ್ಕಾರ ನಿಲ್ಲುತ್ತದೆ. ತಿಯೊಂದು ಜೀವವೂ ಅಮೂಲ್ಯ. ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ಸಚಿವ ಖಂಡ್ರೆ ಹೇಳಿದ್ದಾರೆ.

ತನಿಖೆಗೆ ತಂಡ ರಚನೆ: 7 ದಿನಗಳ ಒಳಗೆ ವರದಿಗೆ ಸೂಚನೆ

ಮೃತ ಯುವ ವೈದ್ಯೆಯ ಕುಟುಂಬದವರಿಗೆ ನಿಯಮಾನುಸಾರ ಕೂಡಲೇ ಪರಿಹಾರ ನೀಡಲು ಸಚಿವರು ಸೂಚಿಸಿದ್ದು, ರಾಜ್ಯದ ಎಲ್ಲಾ ಮೃಗಾಲಯಗಳ ಪಶುವೈದ್ಯರು ಯಾವುದೇ ವನ್ಯಜೀವಿಗೆ ಚಿಕಿತ್ಸೆ ನೀಡುವಾಗ ಎಸ್.ಓ.ಪಿ. ಪಾಲಿಸಬೇಕು ಎಂಬ ಸ್ಪಷ್ಟ ಸೂಚನೆ ಇದೆ. ಈ ದುರಂತದ ಬಗ್ಗೆ ಹಿರಿಯ ಪಶುವೈದ್ಯರು ಹಾಗೂ ಅರಣ್ಯಾಧಿಕಾರಿಗಳ ಒಳಗೊಂಡ ತಂಡದಿಂದ ತನಿಖೆ ಮಾಡಲಾಗುವುದು ಈ ತಂಡಕ್ಕೆ 7 ದಿನಗಳ ಒಳಗಾಗಿ ವರದಿ ನೀಡುವಂತೆಯೂ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಟಿಕೆಟ್ ಘೋಷಣೆಗೂ ಮೊದಲೇ ಇಂದು ನಾಮಪತ್ರ ಸಲ್ಲಿಸಲ್ಲಿರುವ ಸಮರ್ಥ ಶಾಮನೂರು

ಎರಡು ಮೂರು ದಿನಗಳಲ್ಲಿ ಮರಿ ಹಾಕಲಿರುವ ನೀರಾನೆ

ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಮೃಗಾಲಯ ಪ್ರಾಧಿಕಾರದ ನಿರ್ದೇಶಕ ಅಮರಾಕ್ಷರ ಹೇಳಿಕೆ ನೀಡಿದ್ದು, ಡಾ. ಸಮೀಕ್ಷಾ ರೆಡ್ಡಿ ಫೆಬ್ರವರಿಯಲ್ಲಿ ಹುದ್ದೆಗೆ ಸೇರಿದ್ದರು. ಅವರು ತ್ಯಾವರೆಕೊಪ್ಪ ಮೃಗಾಲಯಕ್ಕೆ ಫಾಲೋ ಅಪ್ ಟ್ರೀಟ್ಮೆಂಟ್‌ಗೆ ಹೋಗಿದ್ದರು. ಎರಡು ಮೂರು ದಿನಗಳಲ್ಲಿ ಮರಿ ಹಾಕಲಿರುವ ನೀರಾನೆಯ ತಪಾಸಣೆ ಮಾಡಲು ತೆರಳಿದ್ದರು. ಆದರೆ ನೀರಾನೆ ಇದಕ್ಕಿದ್ದಂತೆ ಸಮೀಕ್ಷಾ ರೆಡ್ಡಿ ಮೇಲೆ ದಾಳಿ ನಡೆಸಿದೆ. ತಕ್ಷಣವೇ ಸಮೀಕ್ಷಾ ಅವರನ್ನುಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದೆವು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಸಮೀಕ್ಷಾ ರೆಡ್ಡಿ ಸಾವನ್ನಪ್ಪಿದ್ದಾರೆ ಎಂದು ಶಿವಮೊಗ್ಗ ಮೃಗಾಲಯ ಪ್ರಾಧಿಕಾರದ ನಿರ್ದೇಶಕ ಅಮರಾಕ್ಷರ ಮಾಹಿತಿ ನೀಡಿದ್ದಾರೆ.

ಈ ಹುದ್ದೆಗೆ ಆಯ್ಕೆಯಾದಾಗ ಯಾರ ಮಾತು ಕೇಳದೆ ಇಲ್ಲಿಗೆ ಬಂದಿದ್ದ ಸಮೀಕ್ಷಾ ರೆಡ್ಡಿ

ಈ ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಡಾ ಸಮೀಕ್ಷಾ ರೆಡ್ಡಿ ಸೋದರ ಮಾವ ರಾಜಶೇಖರ್ ಪ್ರತಿಕ್ರಿಯಿಸಿದ್ದು, ಸಮೀಕ್ಷಾ ರೆಡ್ಡಿ ಇಲ್ಲಿಗೆ ಬಂದು ಕೇವಲ ಒಂದು ತಿಂಗಳಾಗಿತ್ತು. ಹಿರಿಯ ಮೇಲ್ವಿಚಾರಕರ ಜೊತೆ ಆಕೆ ಕೆಲಸ ಮಾಡಬೇಕಿತ್ತು. ಮೊನ್ನೆ ಈ ಹುದ್ದೆಗೆ ಆಯ್ಕೆಯಾದಾಗ ಯಾರ ಮಾತು ಕೇಳದೆ ಇಲ್ಲಿಗೆ ಬಂದಿದ್ದರು. ಮಂಗಳೂರು ಮೃಗಾಲಯದಲ್ಲಿ ಕೆಲಸ ಮಾಡಿದ್ದ ಸಮೀಕ್ಷಾ ಅಲ್ಲಿಂದ ಇಲ್ಲಿಗೆ ಬಂದಿದ್ದರು. ಶೇಕಡಾ 100 ನಿರ್ಲಕ್ಷ್ಯದಿಂದಲೇ ಈ ಸಾವು ಸಂಭವಿಸಿದೆ. ನಮ್ಮ ಮಕ್ಕಳ ಸ್ಥಿತಿ ಹೀಗಾಗಿದೆ, ಬೇರೆ ಮಕ್ಕಳಾದರೂ ಉಳಿಯಲಿ, ನಮ್ಮ ಮಕ್ಕಳಿಗಾಗಿದ್ದು ಬೇರೆಯವರಿಗೆ ಆಗುವುದು ಬೇಡ, ಎಷ್ಟು ನಿರ್ಲಕ್ಷ ಎಂದರೆ ನಾವು ಬರುವಾಗ ಲಿವರ್‌ಗೆ ಪೆಟ್ಟಾಗಿತ್ತು ಅದನ್ನೆಲ್ಲ ತೆಗೆದಿದ್ದಾರೆ. ಪ್ಪೋ ಫೋಟೋಮಸ್ ದಾಳಿಗೆ ಒಳಗಾಗಿದ್ದಾಳೆ. ಮೇಲೆ ಹತ್ತಿ ಬರುವಾಗ ದಾಳಿಗೆ ಒಳಗಾಗಿ ಸಾವನ್ನಪ್ಪಿದ್ದಾಳೆ ಎಂದು ಸಮೀಕ್ಷಾ ಮಾವ ರಾಜಶೇಖರ್ ರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ:  ಸೈಲೆಂಟ್ ಕಟ್ಟರ್ ಬಳಸಿ 10,000ಕ್ಕೂ ಅಧಿಕ ಮರಗಳ ಕಡಿತ: ದೂರು ನೀಡಿದ ಫಾರೆಸ್ಟ್ ಗಾರ್ಡ್‌ಗೆ ಅಮಾನತಿನ ಶಿಕ್ಷೆ

ಮತ್ತೊಂದು ವರದಿಯ ಪ್ರಕಾರ ಸಮೀಕ್ಷಾ ಅವರು ರಾತ್ರಿ ಪಕ್ಷಿಯೊಂದಕ್ಕೆ ಚಿಕಿತ್ಸೆ ನೀಡಲು ಹೋಗಿದ್ದರು. ಈ ವೇಳೆ ದೂರದಿಂದಲೇ ನೀರಾನೆಯ ಫೋಟೋ ತೆಗೆಯಲು ಹೋಗಿದ್ದಾಗ ಘಟನೆ ನಡೆದಿದೆ. ಫೋಟೋ ತೆಗೆದು ಏಣಿ ಹತ್ತುವಾಗ ನೀರಾನೆ ಓಡಿ ಬಂದು ದಾಳಿ ನಡೆಸಿದೆ.

ಸನ್ ಕ್ಯಾಮ್ಯೂರ್ ಪಕ್ಷಿಗೆ ಇಂಜೆಕ್ಷನ್ ಕೊಡಲು ವೈದ್ಯೆ ಸಮೀಕ್ಷಾ ರೆಡ್ಡಿ ತೆರಳಿದ್ದರು.

ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಮೃಗಾಲಯ ಪ್ರಾಧಿಕಾರದ ವೈದ್ಯ ಮುರಳಿ ಮನೋಹರ ಮಾತನಾಡಿ, ಹಿಪೋಪೊಟೋಮೊಸ್ ಸೌಮ್ಯವಾಗಿದ್ದರು ಅದು ತುಂಬಾ ಅಗ್ರಸಿವ್ ಆಗಿ ಇರುತ್ತದೆ. ಸನ್ ಕ್ಯಾಮ್ಯೂರ್ ಪಕ್ಷಿಗೆ ಇಂಜೆಕ್ಷನ್ ಕೊಡಲು ವೈದ್ಯೆ ಸಮೀಕ್ಷಾ ರೆಡ್ಡಿ ತೆರಳಿದ್ದರು.

ಬೆಳಗ್ಗೆ ಮತ್ತು ರಾತ್ರಿ ವೇಳೆ ಈ ಪಕ್ಷಿಗೆ ರೋಗನಿರೋಧಕ ಚುಚ್ಚುಮದ್ದು ನೀಡಬೇಕಿತ್ತು. ಪಕ್ಷಿಗೆ ಚುಚ್ಚುಮದ್ದು ನೀಡಿದ ಬಳಿಕ ನೀರಾನೆ ಬಳಿ ಯಾಕೆ ಹೋದರು ಎಂಬುವುದು ಗೊತ್ತಿಲ್ಲ, ನೀರಾನೆ ಕಳೆದ ಐದು ದಿನಗಳಿಂದ ಊಟ ಬಿಟ್ಟಿದೆ. ಸಾಮಾನ್ಯವಾಗಿ ಮರಿ ಹಾಕುವ ಸಂದರ್ಭದಲ್ಲಿ ಊಟ ಬಿಡುತ್ತದೆ. ನೀರಾನೆ ಬಳಿ ಅವರು ಇಳಿದು ಹೋಗಿದ್ದರ ಬಗ್ಗೆ ನಮಗೆ ಮಾಹಿತಿ ಗೊತ್ತಿಲ್ಲ, ಎಸ್ ಓ ಪಿ ಪ್ರಕಾರ ಗಾರ್ಡ್ಸ್‌ಗಳು ಮತ್ತು ಶಸ್ತ್ರಧಾರಿಗಳು ಇರಬೇಕು, ಅರಳಿಕೆ ಮದ್ದುಕೊಟ್ಟು ಹೋಗುವ ಪದ್ಧತಿ ಇದೆ. ನಾನು ಕೇವಲ ಪಕ್ಷಿಗೆ ಚುಚ್ಚುಮದ್ದು ನೀಡಲು ಮಾತ್ರ ಸೂಚನೆ ನೀಡಿದ್ದೆ. ರಾತ್ರಿ 11:30ರ ವೇಳೆಗೆ ಮೊಬೈಲ್ ಕರೆ ಬಂದಿತ್ತು, ಸೈಲೆಂಟ್ ಇಟ್ಟಿದ್ದರಿಂದ ಗೊತ್ತಾಗಿಲ್ಲ ಎಂದು ಅವರು ಹೇಳಿದ್ದಾರೆ.

ನೀರಾನೆ ದಾಳಿಯಿಂದ ಲಿವರ್ ಮತ್ತು ಶ್ವಾಸಕೋಶಕ್ಕೆ ತೀವ್ರ ಹಾನಿ:

ಶಿವಮೊಗ್ಗ ಎಸ್‌ಪಿ ನಿಖಿಲ್ ಮಾತನಾಡಿ, ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ದುರ್ಘಟನೆ ನಡೆದಿದೆ, ಪಶುವೈದ್ಯೆ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ನೀರಾನೆ ದಾಳಿ ಮಾಡಿದೆ. ನೀರಾನೆ ದಾಳಿ ಹಿನ್ನೆಲೆ ತೀವ್ರವಾದ ಗಾಯ ಆಗಿತ್ತು. ತಕ್ಷಣವೇ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ, ನೀರಾನೆ ದಾಳಿಯಿಂದ ಲಿವರ್ ಮತ್ತು ಶ್ವಾಸಕೋಶಕ್ಕೆ ಹಾನಿಯಾಗಿದ್ದು, ರಕ್ತಸ್ರಾವದಿಂದ ಸಾವನಪ್ಪಿದ್ದಾರೆ.ಈ ಹಿನ್ನೆಲೆಯಲ್ಲಿ ಯುಡಿಆರ್ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ನಿರ್ಲಕ್ಷದಿಂದ ಸಾವು ಸಂಭವಿಸಿದೆ ಎಂಬುವುದರ ಬಗ್ಗೆ ಈಗಲೇ ಹೇಳಲು ಬರುವುದಿಲ್ಲ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕನ್ನಡದ ಅಬ್ಬರ; ಕಾಸರಗೋಡು ಬಿಜೆಪಿ ಅಭ್ಯರ್ಥಿಯಿಂದ ಕನ್ನಡದಲ್ಲೇ ಪ್ರಚಾರ!
ಕುದುರೆಮುಖ ಉದ್ಯಾನವನದ 25ಕ್ಕೂ ಹೆಚ್ಚು ಕಡೆ ಬೆಂಕಿ: ಹೊತ್ತಿ ಉರಿಯುತ್ತಿರುವ ಅಪರೂಪದ ಶೋಲಾ ಹುಲ್ಲುಗಾವಲು