
ಬೆಂಗಳೂರು (ಮಾ.20): ನಿನ್ನೆ ಯುಗಾದಿ ಹಬ್ಬ, ಇಂದು ಹೊಸ ತೊಡಕು ಹಿನ್ನೆಲೆ ಸಿಲಿಕಾನ್ ಸಿಟಿಯಲ್ಲಿ ಇಂದು ಬೆಳ್ಳಂಬೆಳಗ್ಗೆಯೇ ಮಟನ್ ಖರೀದಿಸಲು ಮುಗಿಬಿದ್ದಿದ್ದಾರೆ. ನಿನ್ನೆ ಯುಗಾದಿಯ ಸಡಗರ ಮುಗಿಸಿರುವ ಜನರು ಇಂದು ಮಾಂಸದ ಅಡುಗೆಯ ರುಚಿ ಸವಿಯಲು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ಮಾಂಸದ ಅಂಗಡಿಗಳ ಮುಂದೆ ಕ್ಯೂ ನಿಂತು ಮಾಂಸ ಖರೀದಿಸುತ್ತಿರುವುದು ಸಾಮಾನ್ಯವಾಗಿದೆ.
ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ 'ಪಾಪಣ್ಣ ಮಟನ್ ಸ್ಟಾಲ್' ಮುಂದೆ ಜನವೋ ಜನ! ಹೊಸತೊಡುಕಿನ ವಿಶೇಷ ಹಿನ್ನೆಲೆ ಇಂದು ಬೆಳಗಿನ ಜಾವ 4 ಗಂಟೆಗೇ ಮಟನ್ ಸ್ಟಾಲ್ ಓಪನ್ ಆಗಿದ್ದು, ಮಾಂಸಪ್ರಿಯರು ನಸುಕಿನ ಜಾವದಲ್ಲೇ ಎದ್ದು ಬಂದು ಮಟನ್ ಖರೀದಿಗೆ ಮುಗಿಬಿದ್ದಿದ್ದಿರುವ ಹಿನ್ನೆಲೆ ನೂಕುನುಗ್ಗಲು ತಪ್ಪಿಸಲು ಮಾಲೀಕರು ಬರೋಬ್ಬರಿ ನಾಲ್ಕೈದು ಕೌಂಟರ್‌ಗಳನ್ನು ತೆರೆದು ಮಟನ್ ವಿತರಣೆ ಮಾಡುತ್ತಿದ್ದಾರೆ.
ಸಾಮಾನ್ಯವಾಗಿ ಹಬ್ಬದ ದಿನಗಳಲ್ಲಿ ಮಟನ್ ಬೆಲೆ ಗಗನಕ್ಕೇರುವುದು ಮಾಮೂಲಿ. ಆದರೆ, ಪಾಪಣ್ಣ ಮಟನ್ ಸ್ಟಾಲ್‌ನಲ್ಲಿ ಮಾತ್ರ ಹಬ್ಬದ ನೆಪದಲ್ಲಿ ಗ್ರಾಹಕರಿಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡದೇ, ಎಂದಿನಂತೆ ಪ್ರತಿ ಕೆಜಿ ಮಟನ್‌ಗೆ 900 ರೂಪಾಯಿಗೆ ಮಾರಾಟ ಮಾಡುತ್ತಿರುವುದು ವಿಶೇಷ. ಹೆಚ್ಚುವರಿ ಬೆಲೆಗೆ ಮಾರಾಟ ಮಾಡದ ಮಾಲೀಕರ ನಡೆಯಿಂದಾಗಿ ಗ್ರಾಹಕರು ಕೆಜಿಗಟ್ಟಲೇ ಮಟನ್ ಖರೀದಿಸುತ್ತಿದ್ದಾರೆ.
ಹೊಸತೊಡುಕಿನ ಹಿನ್ನೆಲೆಯಲ್ಲಿ ಮಟನ್ ಮಾತ್ರವಲ್ಲದೆ ಚಿಕನ್ ಅಂಗಡಿಗಳ ಮುಂದೆಯೂ ಜನದಟ್ಟಣೆ ಕಂಡುಬರುತ್ತಿದೆ. ಸಂಪ್ರದಾಯದಂತೆ ಯುಗಾದಿ ಹಬ್ಬದ ಮಾರನೇ ದಿನ ಮಾಂಸಾಹಾರ ಸೇವನೆ ಮಾಡುವುದು ರೂಢಿ. ಹೀಗಾಗಿ ನಗರದ ಪ್ರತಿ ಓಣಿಗಳಲ್ಲೂ ಇಂದು ಮುಂಜಾನೆಯಿಂದಲೇ ಬಾಡೂಟದ ಗಮಲು ಹರಡುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ