ಮಾಜಿ ಸಚಿವ ಈಶ್ವರಪ್ಪ ವಿರುದ್ಧ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ!

By Kannadaprabha NewsFirst Published Feb 17, 2024, 11:30 PM IST
Highlights

‘ದೇಶ ವಿಭಜನೆಯ ಮಾತನಾಡುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು’ ಎಂದಿದ್ದ ಮಾಜಿ ಸಚಿವ ಈಶ್ವರಪ್ಪ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ. 

ಬೆಂಗಳೂರು (ಫೆ.17): ‘ದೇಶ ವಿಭಜನೆಯ ಮಾತನಾಡುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು’ ಎಂದಿದ್ದ ಮಾಜಿ ಸಚಿವ ಈಶ್ವರಪ್ಪ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ. ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಕೆ.ಎಸ್‌.ಈಶ್ವರಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರ ಪೀಠ ಈ ಆದೇಶ ಮಾಡಿದೆ.

ವಿಚಾರಣೆ ವೇಳೆ ಈಶ್ವರಪ್ಪ ಅವರ ಹೇಳಿಕೆಯನ್ನು ಆಕ್ಷೇಪಿಸಿರುವ ನ್ಯಾಯಮೂರ್ತಿಗಳು, ನಮ್ಮ ರಾಜಕೀಯ ನಾಯಕರು ಏಕೆ ಒಳ್ಳೆಯ ಭಾಷೆ ಬಳಸುತ್ತಿಲ್ಲ? ಮಾತನಾಡುವಾಗ ಉತ್ತಮ ಸಂಸ್ಕೃತಿಯನ್ನೇಕೆ‌ ಪ್ರತಿಬಿಂಬಿಸುವುದಿಲ್ಲ? ಈ ರೀತಿ ಮಾತನಾಡಿ ಏಕೆ ಭಾಷೆಯ ಮೇಲೆ ದೌರ್ಜನ್ಯ ಎಸಗುತ್ತಾರೆ ಎಂದು ಪ್ರಶ್ನಿಸಿದರು.

Latest Videos

ಅಲ್ಲದೆ, ತಾವು ಬಳಸುವ ಭಾಷೆಯ ಬಗ್ಗೆ ರಾಜಕಾರಣಿಗಳು ಎಚ್ಚರ ವಹಿಸಬೇಕು. ಕರ್ನಾಟಕ ವಿವಿಧ ಸಿದ್ಧಾಂತಗಳ ಜನರನ್ನು ಮಡಿಲಲ್ಲಿ ಇಟ್ಟುಕೊಂಡಿರುವ ರಾಜ್ಯ. ತಮ್ಮ ಮಾತುಗಳನ್ನು ಶಾಲಾ ಮಕ್ಕಳು ಸಹ ಗಮನಿಸುತ್ತಿರುತ್ತಾರೆ ಎಂಬ ಅರಿವಿರಬೇಕು ಎಂದು ನ್ಯಾಯಮೂರ್ತಿಗಳು ಸಲಹೆ ನೀಡಿದ್ದಾರೆ.

ಕಾಂಗ್ರೆಸ್‌ ಸರ್ಕಾರದಿಂದ ಬಯಲುಸೀಮೆಗೆ ವಂಚನೆ: ಮಾಜಿ ಸಚಿವ ಡಾ.ಕೆ.ಸುಧಾಕರ್‌

ಪ್ರಕರಣದ ಹಿನ್ನೆಲೆ: ‘ದಕ್ಷಿಣ ಭಾರತವನ್ನು ‍ಪ್ರತ್ಯೇಕ ರಾಷ್ಟ್ರವನ್ನಾಗಿ ಮಾಡುವಂತೆ ಕೇಳಬೇಕಾದೀತು’ ಎಂಬ ಸಂಸದ ಡಿ.ಕೆ.ಸುರೇಶ್‌ ಅವರ ಮಾತಿಗೆ ಪ್ರತಿಕ್ರಿಯಿಸಿದ್ದ ಈಶ್ವರಪ್ಪ, ‘ಸಂಸದ ಡಿ.ಕೆ.ಸುರೇಶ್‌ ಮತ್ತು ಶಾಸಕ ವಿನಯ ಕುಲಕರ್ಣಿ ದೇಶ ವಿಭಜನೆಯ ಮಾತುಗಳನ್ನಾಡಿದ್ದಾರೆ. ಈ ರೀತಿ ಮಾತನಾಡುವ ರಾಷ್ಟ್ರದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು’ ಎಂದು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ದಾವಣಗೆರೆಯ ಬಡಾವಣೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಪೊಲೀಸರು 2ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ಕೋರ್ಟ್‌ಗೆ ವರದಿ ಸಲ್ಲಿಸಿದ್ದರು. ಇದರಿಂದ ಹೈಕೋರ್ಟ್‌ ಮೊರೆ ಹೋಗಿರುವ ಈಶ್ವರಪ್ಪ, ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿದ್ದಾರೆ.

click me!