ಕರ್ನಾಟಕ ಬಜೆಟ್ 2024: ಕಲಬುರಗಿ ಪಾಲಿಗೆ ಚುರುಮುರಿ ಪ್ರಸಾದ ಸಿಕ್ಕಷ್ಟೇ ಶಿವಾಯನಮಃ!

By Kannadaprabha NewsFirst Published Feb 17, 2024, 10:52 PM IST
Highlights

ಸಿಎಂ ಸಿದ್ದರಾಮಯ್ಯ ಮಂಡಿಸಿರುವ ರಾಜ್ಯ ಸರ್ಕಾರದ 2024-25ನೇ ಸಾಲಿನ ಬಜೆಟ್‌ ಕಲ್ಯಾಣದ ಹೆಬ್ಬಾಗಿಲು ಕಲಬುರಗಿ ಮಟ್ಟಿಗೆ ಹೇಳಿಕೊಳ್ಳುವಂತಹ ಹೊಸ ಕೊಡುಗೆಗಳನ್ನೇನೂ ಹೊತ್ತು ತಂದಿಲ್ಲ. ಹೀಗಾಗಿ ಕಲ್ಯಾಣದ ಹೆಬ್ಬಾಗಿಲು ಕಲಬುರಗಿ ಜನರ ಪಾಲಿಗೆ ಸಿದ್ದು ಚುರಮುರಿ ಪ್ರಸಾದ ರೂಪದಲ್ಲಿ ಅಲ್ಲಲ್ಲಿ ಕೆಲವು ಯೋಜನೆ ಘೋಷಿಸಿ ಕೈತೊಳೆದುಕೊಂಡಿದ್ದಾರೆಂದು ತೊಗರಿ ಕಣಜದ ಜನ ಆಡಿಕೊಳ್ಳುತ್ತಿದ್ದಾರೆ.

ಶೇಷಮೂರ್ತಿ ಅವಧಾನಿ

 ಕಲಬುರಗಿ (ಫೆ.17) ಸಿಎಂ ಸಿದ್ದರಾಮಯ್ಯ ಮಂಡಿಸಿರುವ ರಾಜ್ಯ ಸರ್ಕಾರದ 2024-25ನೇ ಸಾಲಿನ ಬಜೆಟ್‌ ಕಲ್ಯಾಣದ ಹೆಬ್ಬಾಗಿಲು ಕಲಬುರಗಿ ಮಟ್ಟಿಗೆ ಹೇಳಿಕೊಳ್ಳುವಂತಹ ಹೊಸ ಕೊಡುಗೆಗಳನ್ನೇನೂ ಹೊತ್ತು ತಂದಿಲ್ಲ. ಹೀಗಾಗಿ ಕಲ್ಯಾಣದ ಹೆಬ್ಬಾಗಿಲು ಕಲಬುರಗಿ ಜನರ ಪಾಲಿಗೆ ಸಿದ್ದು ಚುರಮುರಿ ಪ್ರಸಾದ ರೂಪದಲ್ಲಿ ಅಲ್ಲಲ್ಲಿ ಕೆಲವು ಯೋಜನೆ ಘೋಷಿಸಿ ಕೈತೊಳೆದುಕೊಂಡಿದ್ದಾರೆಂದು ತೊಗರಿ ಕಣಜದ ಜನ ಆಡಿಕೊಳ್ಳುತ್ತಿದ್ದಾರೆ.

5 ಲಕ್ಷಕ್ಕೂ ಹೆಚ್ಚು ಹೆಕ್ಟರ್‌ನಲ್ಲಿ ತೊಗರಿ ಬೇಸಾಯವಿರೋ ಈ ಜಿಲ್ಲೆಯ ನೆಲದ ರೈತರು, ನೆಟೆ ರೋಗ ನಿರೋಧಕ, ಹೊಸ ತೊಗರಿ ತಳಿ ಅಭಿವೃದ್ಧಿಗೆ ಹಂಬಲಿಸಿ ಈ ಕೆಲಸಕ್ಕೆಂದೇ ತೊಗರಿ ಮಂಡಳಿಗೋ, ಇಲ್ಲಿರೋ ಕೃಷಿ ವಿವಿಗೋ ಹಣ ನೀಡುತ್ತಾರೆಂದು ಇಟ್ಟುಕೊಂಡಿದ್ದ ನಿರೀಕ್ಷೆ ಕೈಬಿಟ್ಟುಹೋಗಿದೆ.

ಬಿಜೆಪಿ ಭದ್ರಕೋಟೆ ಮಂಗಳೂರಿನಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ; ಬಿಜೆಪಿ, ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ!

ಇದಷ್ಟೇ ಅಲ್ಲದೆ ತೊಗರಿ ಕಣಜ ಜನತೆ ತೊಗರಿಗೆ ಲಾಭದಾಯಕ, ಸುಸ್ಥಿರ ಬೆಲೆಯ ಮಾರುಕಟ್ಟೆ ಯೋಜನೆ, ತೊಗರಿ ಪಾರ್ಕ್‌, ಕಲ್ಯಾಣ ಭಾಗದಲ್ಲಿರುವ ರೋಗ ಪೀಡಿತ ತೊಗರಿ ಬೇಳೆ ಉದ್ದಿಮೆಗಳ ನವಚೇತನಕ್ಕೆ ವಿಶೇಷ ಪ್ಯಾಕೇಜ್‌ ಈ ಬಜೆಟ್‌ನಲ್ಲಿ ನಿರೀಕ್ಷಿಸಿದ್ದರಾದರೂ ಇಡೀ ಬಜೆಟ್‌ನಲ್ಲಿ ತೊಗರಿ ಬಗ್ಗೆ ಎಲ್ಲಿಯೂ ಸಿದ್ದರಾಮಯ್ಯ ಪ್ರಸ್ತಾಪಿಸದ್ದನ್ನು ಕಂಡು ಕಂಗಾಲಾಗಿದ್ದಾರೆ, ಇಡೀ ಬಜೆಟ್‌ ತೊಗರಿ ಬೆಳೆಗಾರರು, ಉದ್ದಿಮೆದಾರರ ನಿರೀಕ್ಷೆಯ ಬಲೂನನ್ನೇ ಠುಸ್‌ ಮಾಡಿದೆ.

ತೊಗರಿ ಸೇರಿದಂತಿರುವ ರಾಜ್ಯ ಬೇಳೆಕಾಳು ಅಭಿವೃದ್ಧಿ ಮಂಡಳಿ ಬಲವರ್ಧನೆಯ ನಿರೀಕ್ಷೆಯೂ ಹುಸಿ ಹೋಗಿದೆ. ಭೀಮಾ ಪಲ್ಸ್‌ ಹೆಸರಲ್ಲಿನ ಜಿಐ ಟ್ಯಾಗ್ ಹೊಂದಿರುವ ತೊಗರಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಕಲ್ಪಿಸುವಲ್ಲಿಯೂ ಸಿದ್ದು ಬಜೆಟ್‌ ಪೂರಕವಾಗಿ ಸ್ಪಂದಿಸಿಲ್ಲವೆಂಬುದು ತೊಗರಿ ಕಣಜದಲ್ಲಿ ಬಜೆಟ್‌ಗೆ ಪ್ರತಿಯಾಗಿ ಎಲ್ಲರು ನಿರಾಶೆಯಾಗುವಂತೆ ಮಾಡಿದೆ.

ಕೆಕೆಆರ್‌ಡಿಬಿಗೆ ಹೀಂಗ್‌ ಕೊಟ್ಟು, ಹಂಗೇ ಕಸ್ಗೊಳ್ಳೋ ಪ್ಲಾನ್‌ ಸಿದ್ಧ!: ಈ ಬಜೆಟ್‌ನಲ್ಲಿಯೂ ಕೆಕೆಆರ್‌ಡಿಬಿಗೆ 5 ಸಾವಿರ ಕೋಟಿ ರು. ಅನುದಾನವೇನೋ ಘೋಷಿಸಲಾಗಿದೆ. ಕಳೆದ ಬಾರಿಯೂ ಇಷ್ಟೇ ಮೊತ್ತದ ಅನುದಾನ ಘೋಷಣೆಯಾಗಿದ್ದರೂ ಮಂಜೂರಾಗಿದ್ದು 3 ಸಾವಿರ ಕೋಟಿ ರು. ಮಾತ್ರ. ಈ ಬಾರಿಯೂ ಹೀಗೇ ಆಗೋದೆಂದು ಹೇಳಲಾಗದಿದ್ದರೂ ಸಹ ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ಕೊಡುವ ಮೂಲಕ ಬಜೆಟ್‌ನಲ್ಲಿ ಘೋಷಣೆ ಮಾಡಬೇಕಿದ್ದ ಶಾಲೆ, ಕಾಲೇಜು, ಆಸ್ಪತ್ರೆ ನಿರ್ಮಾಣದಂತಹ ಯೋಜನೆಗಳನ್ನೂ ಕೆಕೆಆರ್‌ಡಿಬಿ ಕೊರಳಿಗೆ ಕಟ್ಟಿದೆ.

ಕೆಕೆಆರ್‌ಡಿಬಿಗೆ ₹5 ಸಾವಿರ ಕೋಟಿ ಹೆಚ್ಚುವರಿ ಅನುದಾನ ಘೋಷಿಸೋದು, ಅದೇ ಅನುದಾನದಲ್ಲಿ ರೆಗ್ಯೂಲರ್‌ ಬಜೆಟ್‌ ಯೋಜನೆಗಳಿಗೂ ಕೆಕೆಆರ್‌ಡಿಬಿಯಿಂದಲೇ ಹಣ ಹಂಚಿಕೆ ಮಾಡಲು ಮುಂದಾಗಿರುವ ಸರ್ಕಾರದ ಈ ಬೆಳವಣಿಗೆ ಹಿಂದುಳಿದ ಪ್ರದೇಶಾಭಿವೃದ್ಧಿ ಪರಿಕಲ್ಪನೆಯೊಂದಿಗೆ, ಪ್ರಾದೇಶಿಕ ಅಸಮಾನತೆ ನಿವಾರಣೆಗೆಂದೇ ಹುಟ್ಟಿಕೊಂಡಿರುವ ಕೆಕೆಆರ್‌ಡಿಬಿ ಗುರಿ- ಉದ್ದೇಶಗಳಿಗೆ ಮುಂದಿನ ದಿನಗಳಲ್ಲಿ ಮರ್ಮಾಘಾತ ನೀಡುವ ಅಪಾಯಗಳೇ ಅಧಿಕ.

ಜಿಲ್ಲೆಯವರೇ ಆದ ಪ್ರಿಯಾಂಕ್‌ ಖರ್ಗೆ ಹಾಗೂ ಡಾ. ಶರಣಪ್ರಕಾಶ ಪಾಟೀಲ್‌ ಸಂಪುಟದಲ್ಲಿರೋದರಿಂದ ಸಹಜವಾಗಯೇ ಇವರಿಬ್ಬರೂ ಪ್ರತಿನಿಧಿಸುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಇಲಾಖೆಯಲ್ಲಿ ಕೆಲವು ಗಮನಾರ್ಹ ಯೋಜನೆಗಳು ಕಲಬುರಗಿಗೆ ದಕ್ಕಿರೋದು ಹೊರುಪಡಿಸಿದರೆ ಸಿದ್ದರಾಮಯ್ಯನವರ ಬಜೆಟ್‌ ಭ್ರಮನಿರಸನಗೊಳಿಸಿದೆ ಎಂದು ಕಲಬುರಗಿ ಜನರೇ ಆಡಿಕೊಳ್ಳುತ್ತಿದ್ದಾರೆ.

ಸಿದ್ದು ಬಜೆಟ್‌ನಲ್ಲಿ ಕಲಬುರಗಿಗೆ ದಕ್ಕಿರೋದೇನು?

1) ಕರ್ನಾಟಕ ನೀರಾವರಿ ನಿಗಮದಡಿ ಏತ ನೀರಾವರಿ ಯೋಜನೆಗಳಾದ ಕಲಬುರಗಿಯ ಯಡಳ್ಳಿ ಹಾಗೂ ತೆರ್ನಳ್ಳಿ ಹಳೇ ಏತ ನೀರಾವರಿ ಯೋಜನೆಗಳ ಪುನಶ್ಚೇತನ ಹಾಗೂ ಆಳಂದದಲ್ಲಿ ಪ್ರಸಕ್ತ ಸಾಲಿನಲ್ಲಿ ಹೊಸ ಯೋಜನೆ.

2) ಕಲಬುರಗಿ ನಗರಕ್ಕೆ ಕುಡಿವ ನೀರು ಸರಬರಾಜಿಗಾಗಿ ಬೆಣ್ಣೆತೊರಾ ಜಲಾಶಯಕ್ಕೆ ಭೀಮಾ ಮತ್ತು ಕಾಗಿಣಾ ನದಿಗಳಿಂದ ನೀರು ತುಂಬಿಸುವ ₹365 ಕೋಟಿ ಮೊತ್ತದ ಯೋಜನೆ.

3) ಚಿತ್ತಾಪುರ ತಾಲೂಕಿನ ಕೆರೆ ತುಂಬಿಸುವ ಯೋಜನೆ । ಹೀಮೋ ಫಿಲಿಯಾ, ಥಲಸ್ಸೀಮಿಯಾ ರೋಗಿಗಳಿಗೆ ಸೂಕ್ತ ಚಿಕಿತ್ಸಾ ಸೌಲಭ್ಯಗಳಿಗಾಗಿ ಕಲಬುರಗಿ ಐಸಿಡಿಟಿ ಕೇಂದ್ರ ಬಲವರ್ಧನೆ

4) ಕಲಬುರಗಿಯಲ್ಲಿ 2025-26ರಿಂದ ಸಂಯೋಜಿತ ಮತ್ತು ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ (IPHL) ಸ್ಥಾಪನೆ. ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಉತ್ತಮ ಪ್ರಯೋಗಾಲಯ ಸೇವೆಗಳನ್ನು ನೀಡಲಾಗುವುದು.

5) ಕಲಬುರಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಕ್ಕಳ ಆರೋಗ್ಯ ಘಟಕವನ್ನು ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯ ತಾಂತ್ರಿಕ ನೆರವಿನೊಂದಿಗೆ ಸ್ಥಾಪನೆ.

6) ಕಲಬುರಗಿಯಲ್ಲಿ ಇಂಟಿಗ್ರೇಟೆಡ್ ಟೌನ್‌ಶಿಪ್‌ಗಳ ಅಭಿವೃದ್ಧಿ । ಬಸವಣ್ಣ ಹಾಗೂ ಇತರ ಶರಣರ ವಚನಗಳನ್ನು ವಿಶ್ವಕ್ಕೆ ಪರಿಚಯಿಸುವ ವಚನ ಸಂಗ್ರಹಾಲಯ/ವಚನ ಮಂಟಪ ಕಲಬುರಗಿಯಲ್ಲಿ ಸ್ಥಾಪನೆ.

7) ತತ್ವಪದಕಾರರು ಮತ್ತು ಸೂಫಿಗಳ ಬದುಕು ಮತ್ತು ಸಂದೇಶಗಳ ಅಧ್ಯಯನ ಕೈಗೊಳ್ಳಲು ಕಲಬುರಗಿ ವಿಶ್ವವಿದ್ಯಾಲಯದಲ್ಲಿಅಧ್ಯಯನ ಪೀಠ ಸ್ಥಾಪನೆ.

8) ರಾಷ್ಟ್ರಕೂಟರ ಕಾಲದಲ್ಲಿ ಕರ್ನಾಟಕದ ಮೊಟ್ಟ ಮೊದಲ ವಿಶ್ವವಿದ್ಯಾಲಯವಾಗಿದ್ದ, ಜಿಲ್ಲೆಯ ಚಿತ್ತಾಪೂರ ತಾಲ್ಲೂಕಿನ ನಾಗಾವಿಯಲ್ಲಿರುವ ಅಲ್ಲಿನ ಪ್ರಾಚ್ಯಾವೇಶಗಳ ಸಂಶೋಧನೆ ಮತ್ತು ಸಂರಕ್ಷಣೆಗಾಗಿ ನೆರವು ನೀಡಲು Archaeological Survey of India (ASI)ಗೆ ಶಿಫಾರಸ್ಸು.

9) ಜಿ.ಟಿ.ಟಿ.ಸಿ. ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಕಲಬುರಗಿಯಲ್ಲಿ ಸ್ಥಾಪನೆ

10) ಕಲಬುರಗಿಯ ಕೆ.ಜಿ.ಟಿ.ಟಿ.ಐ.ನಲ್ಲಿ ಸಿ.ಎನ್.ಸಿ (Computer Numerical Control) ಯಂತ್ರವನ್ನು ಕೇಂದ್ರೀಕರಿಸುವ ಮೊದಲ ಶ್ರೇಷ್ಠತಾ ಕೇಂದ್ರವನ್ನು 16 ಕೋಟಿ ರು. ವೆಚ್ಚದಲ್ಲಿ ಸ್ಥಾಪನೆ.

11) ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಲಬುರಗಿ ಜಿಲ್ಲೆಯ 1,000 ಎಕರೆ ಪ್ರದೇಶದಲ್ಲಿ ಪಿ.ಪಿ.ಪಿ. ಮಾದರಿಯಲ್ಲಿ ಮೆಗಾ ಟೆಕ್ಸಟೈಲ್ ಪಾರ್ಕ್‌ ಸ್ಥಾಪನೆ, 1 ಲಕ್ಷ ಜನರಿಗೆ ನೇರ ಉದ್ಯೋಗ ಹಾಗೂ 2 ಲಕ್ಷ ಜನರಿಗೆ ಪರೋಕ್ಷ ಉದ್ಯೋಗ ಸೃಜನೆ. ಈ ಯೋಜನೆ ಮೂಲ ಸೌಕರ್ಯಕ್ಕಾಗಿ 50 ಕೋಟಿ ರು.ಗಳ ಅನುದಾನ. ಕೆಕೆಆರ್‌ಡಿಬಿಗೆ ₹5 ಸಾವಿರ ಕೋಟಿ ಅನುದಾನ ಘೋಷಣೆ

1) ಕಲಬುರಗಿ ಕೇಂದ್ರವಾಗಿರುವ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಗೆ 2024-25ನೇ ಸಾಲಿನಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಲು 5,000 ಕೋಟಿ ರು. ಅನುದಾನ ಘೋಷಣೆ

2) ಡಾ. ಡಿ.ಎಂ. ನಂಜುಂಡಪ್ಪ ವರದಿ ಜಾರಿಯಾದ 22 ವರ್ಷಗಳಲ್ಲಾದ ಬದಲಾವಣೆ, ಪರಿಣಾಮ ಅಧ್ಯನಕ್ಕೆ ಉನ್ನತಾಧಿಕಾರ ಸಮೀತಿ ರಚನೆ, ಈ ಮೂಲಕ ಆರ್ಥಿಕ ಮತ್ತು ಪ್ರಾದೇಶಿಕ ಅಸಮಾನತೆಯ ಆಧಾರದ ಮೇಲೆ ಜಿಲ್ಲೆ ಮತ್ತು ತಾಲೂಕುಗಳ ವರ್ಗೀಕರಿಸಿ ಹೊಸ ಅಭಿವೃದ್ಧಿ ಸೂಚ್ಯಂಕಗಳನ್ನು ತಯಾರಿಸಲು ಕ್ರಮ

3) ಕೆಕೆಆರ್‌ಡಿಬಿ ಸಹಯೋಗದೊಂದಿಗೆ ಸರ್ಕಾರಿ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳನ್ನು ಆರಂಭಿಸಲು ಅಗತ್ಯ ಕ್ರಮ । ಕೆಕೆಆರ್‌ಡಿಬಿಯಿಂದ ಕೊಪ್ಪಳ, ಬೀದರ್, ಯಾದಗಿರಿ, ರಾಯಚೂರು ಮತ್ತು ಕಲಬುರಗಿಯಲ್ಲಿ ವಿಶ್ವವಿದ್ಯಾಲಯಗಳ ಘಟಕ ಕಾಲೇಜನ್ನು ಅವಶ್ಯವಿರುವ ಜಿಲ್ಲಾ/ ತಾಲ್ಲೂಕು ಕೇಂದ್ರಗಳಲ್ಲಿ ಸ್ಥಾಪಿಸಲು ಕ್ರಮ.

4) ಕೆಕೆಆರ್‌ಡಿಬಿಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ 46 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 221 ಕೋಟಿ ರು.ಗಳ ವೆಚ್ಚದಲ್ಲಿ ಸ್ಥಾಪನೆ । ಕೆಕೆಆರ್‌ಡಿಬಿ ಸಹಯೋಗದೊಂದಿಗೆ ಸರ್ಕಾರಿ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭ.

ಸಂವಿಧಾನದ ತಳಹದಿಗೆ ಧಕ್ಕೆ ತರುವ ಪ್ರಯತ್ನಗಳನ್ನ ತಡೆಯಬೇಕು: ಸಿಎಂ ಸಿದ್ದರಾಮಯ್ಯ

ಕಲಬುರಗಿ ಜನರಲ್ಲಿದ್ದ ನಿರೀಕ್ಷೆಗಳು

1) ತೊಗರಿ ಹೊಸತಳಿ ಸಂಶೋಧನೆ, ಮಾರುಕಟ್ಟೆಗಾಗಿ ಬೇಳೆಕಾಳು ಮಂಡಳಿ ಬಲರ್ಧನೆ
2) ಕಲ್ಯಾಣ ಕರ್ನಾಟಕ ಪ್ರತ್ಯೇಕ ಸಚಿವಾಲಯ ಸ್ಥಾಪನೆ । ತೊಗರಿ ಪಾರ್ಕ್ ಯೋಜನೆ

3) ರೋಗಗ್ರಸ್ತ ತೊಗರಿ ಬೇಳೆ ಕಾರ್ಖಾನೆಗಳಿಗೆ ಪ್ಯಾಕೇಜ್‌ ಘೋಷಣೆ
4) ಕಲಬುರಗಿ ನಗರ ಸಂಚಾರ ದಟ್ಟಣೆ ನಿವಾರಣೆಗೆ ಯೋಜನೆ

click me!