ಬಿಜೆಪಿ ಭದ್ರಕೋಟೆಯಾದ ಮಂಗಳೂರಿನಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿದ್ದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮಂಗಳೂರು (ಫೆ.17): ಬಿಜೆಪಿ ಭದ್ರಕೋಟೆಯಾದ ಮಂಗಳೂರಿನಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿದ್ದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ತಮ್ಮ ಭರವಸೆಗಳ ನಡುವೆ ಹೋಲಿಕೆ ಮಾಡಲು ಪ್ರಯತ್ನಿಸಿದ್ದು ಮೋದಿ ಸರ್ಕಾರ ಕಳೆದ 10 ವರ್ಷಗಳಲ್ಲಿ ತಮ್ಮ ಭರವಸೆಗಳನ್ನು ಉಳಿಸಿಕೊಳ್ಳಲು ವಿಫಲರಾಗಿದ್ದರೆ, ನಾವು ಅಧಿಕಾರಕ್ಕೆ ಬಂದ ಎಂಟು ತಿಂಗಳೊಳಗೆ ಎಲ್ಲಾ ಐದು ಭರವಸೆಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಸಂವಿಧಾನದ ತಳಹದಿಗೆ ಧಕ್ಕೆ ತರುವ ಪ್ರಯತ್ನಗಳನ್ನ ತಡೆಯಬೇಕು: ಸಿಎಂ ಸಿದ್ದರಾಮಯ್ಯ
ಅಡ್ಯಾರ್‌ನಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, 'ಸುಳ್ಳುಗಾರ' ಎಂದು ಹೇಳುವ ಮೂಲಕ ಬಿಜೆಪಿ ಮತ್ತು ಮೋದಿ ವಿರುದ್ಧ ಬಿರುಸಿನ ವಾಗ್ದಾಳಿ ನಡೆಸಿದರು. ತೆರಿಗೆ ಹಣ ಹಂಚಿಕೆಯಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ತರಾಟೆಗೆ ತೆಗೆದುಕೊಂಡ ಅವರು, ಸ್ವಾಭಿಮಾನವಿದ್ದರೆ ಬಿಜೆಪಿಯನ್ನು ಸೋಲಿಸಿ ಎಂದು ಜನರ ಕನ್ನಡಾಭಿಮಾನಕ್ಕೆ ಚುಚ್ಚುವ ಪ್ರಯತ್ನ ಮಾಡಿದರು. ಕೇಂದ್ರಕ್ಕೆ ಪಾವತಿಸುವ ಪ್ರತಿ 1 ರೂಪಾಯಿ ತೆರಿಗೆಗೆ ರಾಜ್ಯವು ಕೇವಲ 13 ಪೈಸೆಗಳನ್ನು ಪಡೆಯುತ್ತದೆ ಎಂದು ಹೇಳಿದ ಅವರು, ರಾಜ್ಯದಿಂದ ಚುನಾಯಿತರಾದ ಬಿಜೆಪಿ ಸಂಸದರು ಈ ಬಗ್ಗೆ ಮೌನವಾಗಿದ್ದಾರೆ ಎಂದು ಆರೋಪಿಸಿದರು.
ಕರಾವಳಿ ಕರ್ನಾಟಕದ ಜನತೆ ಬುದ್ದಿವಂತರು. ಇನ್ನು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ, ವಿದೇಶದಲ್ಲಿರುವ ಕಪ್ಪುಹಣ ವಾಪಸ್ ತರುವ, ರೈತರ ಆದಾಯ ದ್ವಿಗುಣಗೊಳಿಸದ ಭರವಸೆ ಈಡೇರಿಸಲು ವಿಫಲರಾಗಿರುವ ಮೋದಿಗೆ ಶಿಕ್ಷೆ ನೀಡಬೇಕು ಎಂದು ಹೇಳಿದರು. ಬಿಜೆಪಿಯನ್ನು ನಂಬಬೇಡಿ ಎಂದು ನಾನು ಕೈಮುಗಿದು ವಿನಂತಿಸುತ್ತೇನೆ. ಕೋಮು ಗಲಾಟೆ ಮತ್ತು ಒಂದು ಧರ್ಮದ ವಿರುದ್ಧ ಇನ್ನೊಂದು ಧರ್ಮವನ್ನು ಎತ್ತಿಕಟ್ಟುವುದನ್ನು ಬಿಟ್ಟರೆ ಅವರು ಏನನ್ನೂ ಮಾಡಿಲ್ಲ ಎಂದು ಆರೋಪಿಸಿದರು.
ಮತ್ತೊಂದೆಡೆ, ತಮ್ಮ ಸರ್ಕಾರ ಜಾರಿಗೆ ತಂದಿರುವ ಖಾತರಿ ಯೋಜನೆಗಳು ಜನರಿಗೆ ಮತ್ತು ಆರ್ಥಿಕತೆಗೆ ಸಹಾಯ ಮಾಡಿದೆ. ಪಕ್ಷದ ಕಾರ್ಯಕರ್ತರು ಇದನ್ನು ಪ್ರತಿ ಮನೆಗೂ ಪ್ರಚಾರ ಮಾಡುವಂತೆ ಹೇಳಿದರು. ಖಾತರಿ ಯೋಜನೆಗಳ ಯಶಸ್ಸಿನ ಆಧಾರದ ಮೇಲೆ ರಾಜ್ಯದಲ್ಲಿ 28 ಸ್ಥಾನಗಳಲ್ಲಿ ಪಕ್ಷವು ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಬಹುಪಾಲು ಭರವಸೆಗಳನ್ನು ಈಡೇರಿಸಿದ್ದರೂ, 2018ರಲ್ಲಿ ಕಾಂಗ್ರೆಸ್ ಸೋತಿದ್ದು, ತಮ್ಮ ಸಾಧನೆಗಳನ್ನು ಪ್ರಚಾರ ಮಾಡುವಲ್ಲಿ ವಿಫಲವಾಗಿದ್ದು, ಅದೇ ತಪ್ಪು ಮರುಕಳಿಸಬಾರದು ಎಂದು ಹೇಳಿದರು. ಇದಲ್ಲದೆ, ಮೋದಿ ಅವರು ಗ್ಯಾರಂಟಿ ಪದವನ್ನು ಕದ್ದಿದ್ದಾರೆ ಎಂದು ಆರೋಪಿಸಿದರು. ಗ್ಯಾರಂಟಿಗಳ ವಿರುದ್ಧ ಮಾತನಾಡಿದ ವ್ಯಕ್ತಿ ಈಗ ಮೋದಿ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ. ಯಾಕೆ ಸುಳ್ಳು ಹೇಳ್ತೀರಿ ಎಂದು ಗುಡುಗಿದರು. ಪ್ರಧಾನಿಯವರು ಬಡವರಿಗೆ ತೆರಿಗೆಯನ್ನು ಹೆಚ್ಚಿಸಿದ್ದಾರೆ. ಕಾರ್ಪೊರೇಟ್ ತೆರಿಗೆಯನ್ನು 38 ಪ್ರತಿಶತದಿಂದ 22.5ಕ್ಕೆ ಇಳಿಸಿದ್ದಾರೆ ಎಂದು ಆರೋಪಿಸಿದರು.
ಮಂಗಳೂರಲ್ಲಿ ಸಿಎಂ ಸಿದ್ದರಾಮಯ್ಯಗೆ ಪ್ರತಿಭಟನೆ ಬಿಸಿ; ಕಪ್ಪುಟ ಬಾವುಟ ಪ್ರದರ್ಶಸಿ ಬಿಜೆಪಿ ಆಕ್ರೋಶ
ಗ್ಯಾರಂಟಿಗಳು ಕರ್ನಾಟಕವನ್ನು ದಿವಾಳಿಯಾಗಿಸುತ್ತದೆ ಎಂಬ ಮೋದಿಯವರ ಹೇಳಿಕೆಯನ್ನು ಉಲ್ಲೇಖಿಸಿದ ಸಿಎಂ, ರಾಜ್ಯ ಆರ್ಥಿಕವಾಗಿ ಸದೃಢವಾಗಿದೆ. ಈ ವರ್ಷ 57,000 ಕೋಟಿ ರೂ.ಗಳನ್ನು ಗ್ಯಾರಂಟಿಗಾಗಿ ಮೀಸಲಿಟ್ಟಿದ್ದೇನೆ. ಅವರಿಗೆ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಬಿಜೆಪಿಗರು ರಾಜ್ಯ ಬಜೆಟ್ ಅನ್ನು ವಿರೋಧಿಸಿದರು ಎಂದರು.