
ಬೆಂಗಳೂರು: ರಾಜ್ಯದ ವಾಯುಯಾನ ಸಾರಿಗೆ ಸಂಪರ್ಕ ಗಟ್ಟಿಗೊಳಿಸಲು ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮವು ರಾಜ್ಯದ ಚಿಕ್ಕಮಗಳೂರು, ಹಂಪಿ, ಮಡಿಕೇರಿಯಲ್ಲಿ ಏರ್‌ಸ್ಟ್ರಿಪ್-ಹೆಲಿಪೋರ್ಟ್ ನಿರ್ಮಾಣಕ್ಕೆ ಡಿಪಿಆರ್ ಸಿದ್ಧಪಡಿಸಲು ಮುಂದಾಗಿದೆ.
ರಾಜ್ಯದ ಪ್ರಮುಖ ನಗರಗಳಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಮೂಲಕ ವಾಯುಯಾನ ಸೇವೆ ಉತ್ತಮಗೊಳಿಸಲಾಗುತ್ತಿದೆ. ಆದರೆ ಅರಣ್ಯ ಇಲಾಖೆ ಸಮಸ್ಯೆ ಸೇರಿ ಇನ್ನಿತರ ಕಾರಣಗಳಿಂದ ವಿಮಾನ ನಿಲ್ದಾಣ ನಿರ್ಮಿಸಲು ಸಾಧ್ಯವಾಗದ ಜಿಲ್ಲೆಗಳಲ್ಲಿ ಏರ್‌ಸ್ಟ್ರಿಪ್, ಹೆಲಿಪೋರ್ಟ್ ನಿರ್ಮಾಣಕ್ಕೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಅದರಂತೆ ನಿಗಮವು ಚಿಕ್ಕಮಗಳೂರು, ಹಂಪಿ, ಮಡಿಕೇರಿಯಲ್ಲಿ ಏರ್‌ಸ್ಟ್ರಿಪ್-ಹೆಲಿಪೋರ್ಟ್ ನಿರ್ಮಾಣಕ್ಕೆ ಸಂಬಂಧಿಸಿ ವಿವರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ.
ಆ ಪೈಕಿ ಚಿಕ್ಕಮಗಳೂರಿನಲ್ಲಿ ಗುರುತಿಸಲಾಗಿರುವ 137 ಎಕರೆಯಲ್ಲಿ ಏರ್‌ಸ್ಟ್ರಿಪ್ ಮತ್ತು ಹೆಲಿಪೋರ್ಟ್ ಎರಡನ್ನೂ ನಿರ್ಮಿಸಲಾಗುತ್ತದೆ. ಉಳಿದಂತೆ ಮಡಿಕೇರಿ ಮತ್ತು ಹಂಪಿಯ ಕಮಲಾನಗರದಲ್ಲಿ ಹೆಲಿಪೋರ್ಟ್ ನಿರ್ಮಿಸಲು ಯೋಜಿಸಲಾಗಿದೆ. ಮಡಿಕೇರಿಯಲ್ಲಿ 7.27 ಎಕರೆ ಮತ್ತು ಹಂಪಿಯಲ್ಲಿ 10 ಎಕರೆ ಭೂಮಿ ಮೀಸಲಿರಿಸಲಾಗಿದೆ.
ಈ ಭೂಮಿಯಲ್ಲಿ ಯಾವ ರೀತಿಯಲ್ಲಿ ಯೋಜನೆ ಅನುಷ್ಠಾನಗೊಳಿಸಬಹುದು, ಯೋಜನೆಗೆ ಎಷ್ಟು ವೆಚ್ಚವಾಗಲಿದೆ ಎಂಬುದು ಸೇರಿದಂತೆ ವಿವರ ಯೋಜನಾ ವರದಿ ಸಿದ್ಧಪಡಿಸಲು ನಿಗಮ ಮುಂದಾಗಿದೆ. ಈ ಏರ್‌ಸ್ಟ್ರಿಪ್ ಮತ್ತು ಹೆಲಿಪೋರ್ಟ್ ನಿರ್ಮಾಣದಿಂದಾಗಿ ಸ್ಥಳೀಯ ವಾಣಿಜ್ಯ ಉದ್ಯಮ ಅಭಿವೃದ್ಧಿ, ತುರ್ತು ಪರಿಸ್ಥಿತಿಯಲ್ಲಿ ಸಣ್ಣ ವಿಮಾನ ಅಥವಾ ಹೆಲಿಕಾಪ್ಟರ್ ಬಳಸಲು ಅನುಕೂಲವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ